ಯಾರ್ಲುಂಗ್ ಟ್ಸಾಂಗ್ಪೋ ಎಂಬ ಹೆಸರಿನಿಂದ ಕರೆಯಲ್ಪಡುವ ಬ್ರಹ್ಮಪುತ್ರ ನದಿ / courtesy: Wikipedia
ನೆರೆಯ ಚೀನಾ ಭೂದಾಹದ ಜತೆಗೆ ಜಲದಾಹದಿಂದ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟುತ್ತಾ ಭಾರತಕ್ಕೆ ಹರಿಯಬೇಕಿದ್ದ ನೀರನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ, ಹಿಮಚ್ಛಾಧಿತ ಪರ್ವತಗಳ ನೆಲೆ, ವಿಶ್ವದ ಮೇಲ್ಛಾವಣಿ ಟೆಬೆಟ್‌ನಿಂದ ಬ್ರಹ್ಮಪುತ್ರನ ಜಾಡನ್ನೇ ತಿರುಗಿಸಿ, ಅದನ್ನು ಯೆಲ್ಲೋ ನದಿಗೆ (yellow river) ಜೋಡಿಸಲು ಯತ್ನಿಸುತ್ತಿದೆ. ಕಮ್ಯುನಿಸ್ಟ್ ಚೀನಾ ಇಷ್ಟು ಹುನ್ನಾರಗಳನ್ನು ನಡೆಸುತ್ತಿದ್ದರೂ ಭಾರತ ಮಾತ್ರ ಆಮೆಗತಿಯ ಹೆಜ್ಜೆಗಳನ್ನಿಡುತ್ತಲೇ ಇದೆ. ಅನೇಕ ದಶಕಗಳ ನದಿ ಜೋಡಣೆ ಎಂಬ ಯೋಜನೆ ಕಾಗದಗಳ ಮೇಲೆ ಇನ್ನೂ ತೆವಳುತ್ತ ರಾಜಕಾರಣಿಗಳಿಗೆ ಭರ್ಜರಿ ಮತಫಸಲು ಕೊಡುತ್ತಲೇ ಇದೆ. ಇವೆಲ್ಲ ಅಂಶಗಳನ್ನಿಟ್ಟುಕೊಂಡು ಕಣ್ತೆರೆಸುವಂಥ ವೈಜ್ಞಾನಿಕ ಬರಹ ಬರೆದಿದ್ದಾರೆ ಹಿರಿಯ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ. ಎತ್ತಿನಹೊಳೆ, ನೇತ್ರಾವತಿ ತಿರುವು, ಕೃಷ್ಣಾ ಹರಿವು ಇನ್ನಿತರೆ ಯೋಜನೆಗಳ ಬಗ್ಗೆ ನೂರೆಂಟು ನಿರೀಕ್ಷೆ ಇಟ್ಟುಕೊಂಡಿರುವ ಬಯಲುಸೀಮೆ ಜನರು ಅತ್ಯಗತ್ಯವಾಗಿ ಓದಲೇಬೇಕಾದ ಮಹತ್ತ್ವದ ಲೇಖನ ಇದು.
ಚೀನಾದ ಯೆಲ್ಲೋ ನದಿ / courtesy: Wikipedia
ಪಂಡಿತ್ ಜವಾಹರಲಾಲ್ ನೆಹರೂ ಅವರು ಅಣೆಕಟ್ಟುಗಳನ್ನು ಆಧುನಿಕ ದೇವಾಲಯಗಳೆಂದು ಕರೆದರು. ಬ್ರಿಟೀಷರ ಕಾಲದ ಬೃಹತ್ ನೀರಾವರಿ ಎಂಜಿನಿಯರ್, ಜನರಲ್ ಅರ್ಥರ್ ಥಾಮಸ್ ಕಾಟನ್ (1803-1899) ಭಾರತದಲ್ಲಿ ನೀರಾವರಿ ಮತ್ತು ಕಾಲುವೆಗಳು ಕಟ್ಟುವುದಕ್ಕೆ ತನ್ನ ಬದುಕನ್ನು ಮುಡಿಪಾಗಿಟ್ಟವರು. ಇವರು 150 ವರ್ಷಗಳ ಹಿಂದೆಯೇ ಭಾರತದಲ್ಲಿ ಪ್ರಪಂಚದ ಅತಿ ದೊಡ್ಡ ನದಿ ಜೋಡಣೆ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಕನಸು ಕಂಡಿದ್ದರು. ಆ ನಂತರ 1970ರಲ್ಲಿ ಕೇಂದ್ರ ನೀರಾವರಿ ಸಚಿವರಾದ ಕೆ.ಎಲ್.ರಾವ್ ಈ ಯೋಜನೆಗೊಂದು ರೂಪ ಕೊಟ್ಟರು. ನಾಗಾರ್ಜುನ ಸಾಗರ ಮತ್ತು ಭಾಕ್ರಾನಂಗಲ್ ಅಣೆಕಟ್ಟುಗಳನ್ನು ರೂಪಿಸಿದ ಇವರು ಭಾರತದ ಪ್ರಖ್ಯಾತ ಎಂಜಿನಿಯರ್.
ದೇಶದ ಈ ಬೃಹತ್ ನದಿಗಳ ಜೋಡಣೆಯ ಯೋಜನೆಯಲ್ಲಿ ಅಣೆಕಟ್ಟೆಗಳು, ಸರೋವರಗಳು, ಕಾಲುವೆಗಳು ಸೇರಿದ್ದು ಮಳೆಗಾಲದ ನೆರೆಯನ್ನು ನಿಯಂತ್ರಣ ಮಾಡುವುದರೊಂದಿಗೆ ಕೃಷಿ, ಕುಡಿಯುವ ನೀರು, ಮೀನುಗಾರಿಕೆ ಕಾಲುವುಗಳ ಮೂಲಕ ದೋಣಿ ಸಂಚಾರವೂ ಸೇರಿದೆ. ಈ ಯೋಜನೆಯಲ್ಲಿ ಉತ್ತರ/ಹಿಮಾಲಯದ 14 ನದಿಗಳ ಜೋಡಣೆ, ಪರ‍್ಯಾಯ ದ್ವೀಪದ 16 ನದಿಗಳ ಜೋಡಣೆ ಮತ್ತು ರಾಜ್ಯಗಳ ಮಧ್ಯೆ 37 ನದಿಗಳ ಜೋಡಣೆಯೂ ಸೇರಿದೆ. ಈ ಯೋಜನೆಯನ್ನು ಭಾರತ ಸರ್ಕಾರದ ಜಲ ಸಂಪನ್ಮೂಲಗಳ ಸಚಿವಾಲಯದ ಕೆಳಗೆ, ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ (NWDA) ಹಮ್ಮಿಕೊಂಡಿದೆ. ಹಿಮಾಲಯಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಭಾರಿ ಕಠಿಣದ ಕೆಲಸವಾಗಿದೆ. ಒಂದೊಂದೇ ನದಿ ಜೋಡಣೆಯನ್ನು ತೆಗೆದುಕೊಂಡಿದ್ದರೆ ಈಗಾಗಲೆ ಕೆಲವು ಭಾಗಗಳಲ್ಲಿ ಇದರ ಫಲವನ್ನು ಪಡೆಯಬಹುದಿತ್ತು. ಈ ಯೋಜನೆಯನ್ನು ವಿರೋಧಿಸುವವರೂ ಇದ್ದಾರೆ. ಅವರು ಹೇಳುವಂತೆ; ಪರಿಸರ ಮಾಲಿನ್ಯ, ನದಿಗಳ ಮಾಲಿನ್ಯ, ಅರಣ್ಯ/ವನ್ಯ ಪ್ರಾಣಿಗಳ ನಾಶ, ಅಗಾಧ ಜನರ ಸ್ಥಳಾಂತರ, ಫಲವತ್ತು ನೆಲ ಮುಳುಗಿಹೋಗುವುದರ ಜೊತೆಗೆ ಕಾಣದ ಇನ್ನೂ ಅನೇಕ ವ್ಯತಿರಿಕ್ತ ಪರಿಣಾಮಗಳು ಎದುರಾಗುತ್ತವೆ ಎನ್ನುವುದು.
ನಮ್ಮ ದೇಶದ ವಾರ್ಷಿಕ ಸರಾಸರಿ ಮಳೆ 4,000 ಬಿಲಿಯನ್ ಘನ ಮೀಟರ್ (ಬಿ.ಘ.ಮೀ.) ಬೀಳುತ್ತಿದ್ದು ಅದರಲ್ಲಿ ಹೆಚ್ಚಾಗಿ ಜೂನ್-ಸೆಪ್ಟೆಂಬರ್ ತಿಂಗಳುಗಳಲ್ಲಿ ಬೀಳುತ್ತದೆ. ದೇಶದ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಹೆಚ್ಚು ಮಳೆ ಬಿದ್ದರೆ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಕಡಿಮೆ ಮಳೆ ಬೀಳುತ್ತದೆ. ಕಳೆದ ಎರಡು ವರ್ಷಗಳಿಂದ ಬಂಗಾಳ ಕೊಲ್ಲಿಯಲ್ಲಿ ‘ಲಾ ನಿನೊ’ ಕಾಣಿಸಿಕೊಂಡ ಕಾರಣ ವಿಪರೀತ ಮಳೆ ಸುರಿಯುತ್ತಿದೆ. 2020ರಲ್ಲಿ ಒಂದೇ ವರ್ಷದಲ್ಲಿ ಈಗಾಗಲೇ 12 ಚಂಡಮಾರುತಗಳು ಬಂದಿವೆ. ಬಂಗಾಳಕೊಲ್ಲಿಯಲ್ಲಿ 75% ಎಂದರೆ ಅರಬ್ಬಿ ಸಮುದ್ರದಲ್ಲಿ 25% ಚಂಡಮಾರುತಗಳು ಸೃಷ್ಟಿಯಾಗಿವೆ ಎನ್ನಬಹುದು.
ಗಂಗಾ-ಬ್ರಹ್ಮಪುತ್ರಾ-ಮೇಘನಾ ನದಿಗಳ ಹೆಚ್ಚು ನೀರನ್ನು ದೇಶದ ಇತರೆ ಪ್ರದೇಶಗಳಿಗೆ ಹರಿಸುವ ಯೋಜನೆ ಇದೆ. ಈ ಯೋಜನೆ ಹಮ್ಮಿಕೊಂಡ ಕಾರಣ ಕಳೆದ 4 ದಶಕಗಳಲ್ಲಿ ಹಲವು ಜಲಾನಯನ ಯೋಜನೆಗಳು ದೇಶದಲ್ಲಿ ತಲೆಯೆತ್ತಿದವು. 1980ರಲ್ಲಿ ಜಲ ಸಂಪನ್ಮೂಲ ವಿಭಾಗ ದೇಶದ ಉತ್ತರ-ದಕ್ಷಿಣ ವಲಯಗಳ ಒಂದು ದೊಡ್ಡ ವರದಿಯನ್ನು ಹೊರತಂದಿತು. ಆದರೆ ಆಗಿನ ಕಾಂಗ್ರೆಸ್ ಸರಕಾರ ಇದನ್ನು ಕೈಬಿಟ್ಟು, 1982ರಲ್ಲಿ NWDA ಮೂಲಕ ಒಂದು ಸಮಿತಿ ಮಾಡಿ ಅದನ್ನು ವಿಸ್ತೃತ ಅಧ್ಯಯನ ಮಾಡುವಂತೆ ಕೋರಿತು. ಈ ಸಮಿತಿ ಜಲಾನಯನಗಳು ಮತ್ತು ಕಾಲುವೆಗಳೊಂದಿಗೆ ನದಿ ಜೋಡಣೆಯ ಬಗ್ಗೆ ಒಂದು ವರದಿ ತಯಾರಿಸಿತು. ಆ ನಂತರ ಕಳೆದ 35 ವರ್ಷಗಳಲ್ಲಿ ಅನೇಕ ಉಪ ವರದಿಗಳು ಬಂದರೂ ಯಾವುದೂ ಕಾರ್ಯರೂಪಕ್ಕೆ ಬರಲಿಲ್ಲ.
1999ರಲ್ಲಿ ಮತ್ತೊಮ್ಮೆ ಎಲ್ಲಾ ವರದಿಗಳನ್ನು ಪರಿಶೀಲನೆಗೆ ಒಳಪಡಿಸಲಾಯಿತು. ಇದರಲ್ಲಿ ಅಂತರನದಿ ಪಾತ್ರಗಳ ನೀರಿನ ವರ್ಗಾವಣೆಯ ಯೋಜನೆಗೆ ವಿರುದ್ಧವಾಗಿ ಯೋಜನೆ ಸಂಪೂರ್ಣವಾಗಿ ಅಂತರಿಕ ಜಲಾನಯನ ಅಭಿವೃದ್ಧಿಗೆ ಬದಲಾಗಿತ್ತು. 2002ರಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಶಕ್ತಿಯ ಅರ್ಜಿಗೆ (PIL) ಸಂಬಂಧಿಸಿದಂತೆ 2012ರಲ್ಲಿ ಸರ್ವೋಚ್ಛ ನ್ಯಾಯಾಲಯ ನದಿ ಜೋಡಣೆ ಯೋಜನೆಯ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಕೇಂದ್ರ-ರಾಜ್ಯ ಸರಕಾರಗಳ ಅಧಿಕಾರಕ್ಕೆ ಬಿಟ್ಟಿದ್ದು ಎಂದು ತೀರ್ಪು ನೀಡಿತು.
150 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನದಿ ಜೋಡಣೆ
ಈ ಯೋಜನೆಯಲ್ಲಿ 150 ದಶಲಕ್ಷ ಎಕರೆ ಅಡಿ (185 ಬಿ.ಘ.ಮೀ) ನೀರನ್ನು ಶೇಕರಿಸಿಡಬಹುದು. ಇದರಿಂದ 35 ದಶಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೃಷಿ, 40,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಮಾಡಬಹುದು. ದೇಶದಲ್ಲಿ ಮಳೆಯಿಂದ 1440 ದಶಲಕ್ಷ ಹೆಕ್ಟೇರ್ ಅಡಿ (1770 ಬಿ.ಘ.ಮೀ) ನೀರು ಹರಿದರೂ ಕೇವಲ 220 ದಶಲಕ್ಷ ಎಕರೆ ನೀರು ಮಾತ್ರ 1979ರಲ್ಲಿ ಉಪಯೋಗಿಸಿಕೊಳ್ಳಲಾಯಿತು. ಇದರಿಂದ ಹಲವಾರು ಪ್ರದೇಶಗಳು ನೆರೆಗೆ ತುತ್ತಾಗುವುದು ನಿರಂತರವಾಗಿ ನಡೆಯುತ್ತಲೇ ಇದೆ. 1979ರವರೆಗೆ ದೇಶದಲ್ಲಿ 600 ಸಣ್ಣ/ದೊಡ್ಡ ಗಾತ್ರದ (171 ಬಿ.ಘ.ಮೀ ನೀರು ನಿಲ್ಲುವ) ಅಣೆಕಟ್ಟೆಗಳನ್ನು ಕಟ್ಟಲಾಗಿದೆ. ಗಂಗಾ-ಬ್ರಹ್ಮಪುತ್ರ-ಮೇಘನಾ ನದಿಗಳಲ್ಲೇ 1,000 ದಶಲಕ್ಷ ಎಕರೆ ಅಡಿ ನೀರು ಹರಿಯುತ್ತದೆ. ಆದರೆ ಕಾವೇರಿ, ಯಮುನಾ, ಸಟ್ಲೆಜ್, ರವಿ ಇನ್ನಿತರೆ ಅಂತಾರಾಜ್ಯ ನದಿ ಜಲಾನಯನ ಪ್ರದೇಶಗಳಲ್ಲಿ ಯಾವಾಗಲೂ ನೀರಿನ ಕೊರತೆ ಕಾಣಿಸಿಕೊಳ್ಳುತ್ತದೆ. ದೇಶದ 99 ಜಿಲ್ಲೆಗಳು ಯಾವಾಗಲೂ ಕ್ಷಾಮದಿಂದ ತತ್ತರಿಸುತ್ತಿದ್ದರೆ ದೇಶದ ಇತರ 40 ದಶಲಕ್ಷ ಹೆಕ್ಟೇರು ನೆಲ ನೆರೆಯ ಹಾವಳಿಗೆ ಸಿಲುಕುಕೊಳ್ಳುವುದು ಪ್ರತಿ ವರ್ಷವೂ ಒಂದು ಪದ್ಧತಿಯಂತೆ ನಡೆಯುತ್ತಿದೆ.
ಇನ್ನು ನೆರೆಯಿಂದ ನಾಶವಾಗುವ ಬೆಳೆಗಳ ವೆಚ್ಚ, ಉದಾಹರಣೆಗೆ 1952ರಲ್ಲಿ 52 ಕೋಟಿ. 1998ರಲ್ಲಿ ಇದು 5,846 ಕೋಟಿಗೆ ಏರಿತು. ಕರ್ನಾಟಕದಲ್ಲಿ 2015ರಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಂದ ಆದ ನಷ್ಟ ಸುಮಾರು 15,636 ಕೋಟಿ. 1913-14ರಲ್ಲಿ ಅಸ್ಸಾಂ, ಒಡಿಸ್ಸಾ, ಜಮ್ಮು/ಕಾಶ್ಮೀರದಲ್ಲಿ ನೆರೆಗಳಿಂದ ನಷ್ಟವಾದ ಒಟ್ಟು ಬೆಲೆ ಸುಮಾರು 19 ಸಾವಿರ ಕೋಟಿ. ಇದರಲ್ಲಿ 62 ಸಾವಿರ ಜನರು ತೊಂದರೆಗೆ ಸಿಲುಕಿಕೊಂಡರು. ಆಗಾಗ ಚಂಡಮಾರುತ, ಸುನಾಮಿ, ಭೂಕಂಪನಗಳು, ಭೂಕುಸಿತಗಳಿಂದಲೂ ಅಪಾರ ಪ್ರಾಣಹಾನಿಯ ಜೊತೆಗೆ ಹೇರಳ ಆಸ್ತಿಪಾಸ್ತಿ ನಷ್ಟವಾಗುತ್ತಿರುತ್ತದೆ. ನಿರಂತರವಾಗಿ ನೆರೆಗೆ ತುತ್ತಾಗುವ ರಾಜ್ಯಗಳೆಂದರೆ ಅಸ್ಸಾಂ, ಬಿಹಾರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ. ಇನ್ನು ರಾಜಸ್ತಾನ, ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಮಳೆಯಿಲ್ಲದೆ ಕ್ಷಾಮಕ್ಕೆ ತುತ್ತಾಗುತ್ತಿರುತ್ತವೆ. ಶೇಕಡ 85%ರಷ್ಟು ಬರಕ್ಕೆ ಈ ರಾಜ್ಯಗಳೇ ತುತ್ತಾಗುತ್ತವೆ.
ಮೇಲಿನ ಕಾರಣಗಳಿಂದ ಸಾವಿರಾರು ರೈತರು ನಿರಂತರವಾಗಿ ಆತ್ಮಹತ್ಯ ಮಾಡಿಕೊಳ್ಳುತ್ತಲೆ ಇರುತ್ತಾರೆ. ಭಾರತದಲ್ಲಿ ಜನಸಂಖ್ಯೆ ನಿರಂತರವಾಗಿ ಬೆಳೆಯುತ್ತಲೆ ಇದ್ದು ಹಳ್ಳಿಗಳು ಬಡವಾಗುತ್ತಲೇ ಹೋಗುತ್ತಿವೆ. ಮಳೆಯಾದಾರಿತ ಕೃಷಿ ಪ್ರಧಾನ ದೇಶದ ಒಟ್ಟಾರೆ ಪರಿಸ್ಥಿತಿ ಗಂಭೀರವಾಗುತ್ತಿದೆ. ಜನರ ಸಾಮಾಜಿಕ ಸ್ಥಿರತೆ ದಿನೇದಿನೆ ಕುಸಿಯುತ್ತಿದ್ದು ಬಡವರು ಇನ್ನಷ್ಟು ಬಡವರಾಗುತ್ತ ಅನಾರೋಗ್ಯದಿಂದ ಬಳಲುತ್ತಿದ್ದು ಸಾಲದ್ದಕ್ಕೆ ನೆರೆ, ಬರ, ಅವರ ಮೇಲೆ ಮುಗಿಬೀಳುತ್ತಿದೆ. ಜೊತೆಗೆ ನಿರುದ್ಯೋಗ ತಾಂಡವವಾಡುತ್ತಿದ್ದು ಬರುವ ದಿನಗಳು ದೇಶಕ್ಕೆ ಒಳ್ಳೆಯ ದಿನಗಳಾಗಿರುವುದಿಲ್ಲ. ಸಾಲದ್ದಕ್ಕೆ ಈಗ ಕೋವಿಡ್ ಜಗತ್ತನ್ನೇ ಮುಕ್ಕಿ ತಿನ್ನುತ್ತಿದ್ದು ಕೃಷಿಕರೇ ತುಂಬಿರುವ ಭಾರತ ಹೈರಾಣವಾಗಿದೆ.
ಪಟನಾ ಬಳಿ ಗಂಗಾ ನದಿ.. / courtesy: Wikipedia
ಈ ಬೃಹತ್ ನದಿ ಜೋಡಣೆಯ ಯೋಜನೆಯಲ್ಲಿ ಮುಖ್ಯವಾಗಿ 4 ಹಂತಗಳನ್ನು ಗುರುತಿಸಲಾಗಿದೆ.
1.ಮಹಾನದಿ-ಗೋದಾವರಿ-ಕೃಷ್ಣ-ಕಾವೇರಿ.
2.ಪಶ್ಚಿಮಕ್ಕೆ ಹರಿಯುವ ನದಿಗಳು (ಮುಂಬಯಿ ಉತ್ತರಕ್ಕೆ), ತಾಪಿಯ ದಕ್ಷಿಣಕ್ಕೆ: ಈ ನದಿಗಳ ನೀರನ್ನು ಮುಂಬಯಿಗೆ ಕುಡಿಯಲು ಮತ್ತು ಮಹಾರಾಷ್ಟ್ರದ ಕೃಷಿಗೆ.
3.ಕೆನ್-ಚಂಬಲ್: ಮಧ್ಯಪ್ರದೇಶ-ಉತ್ತರ ಪ್ರದೇಶಕ್ಕೆ ಕುಡಿಯಲು ಮತ್ತು ಕೃಷಿಗೆ.
4.ಪಶ್ಚಿಮಕ್ಕೆ ಹರಿಯುವ ನದಿಗಳನ್ನು ಕೃಷ್ಣ-ಕಾವೇರಿ ನದಿಗಳಿಗೆ ಜೋಡಣೆ ಮಾಡುವುದು.
ಮೊದಲನೆ ಹಂತ: ಗಂಗಾ-ಬ್ರಹ್ಮಪುತ್ರ-ಮಹಾನದಿಗೆ. ಮಹಾನದಿಯಿಂದ-ಗೋದಾವರಿಗೆ. ಗೋದಾವರಿಯಿಂದ-ಕೃಷ್ಣಾ; ಕೃಷ್ಣಾ-ಪೆನ್ನಾರ್; ಪೆನ್ನಾರ್-ಕಾವೇರಿ ನದಿ ಪಾತ್ರಕ್ಕೆ.
ಎರಡನೆ ಹಂತ: ಪೂರ್ವ ಗಂಗಾ ಮತ್ತು ಉಪನದಿಗಳಿಂದ-ಗಂಗಾ ಪಶ್ಚಿಮ ಉಪನದಿಗಳು ಮತ್ತು ಸಬರ್ಮತಿ ನದಿ ಪಾತ್ರಕ್ಕೆ. ದಕ್ಷಿಣ ಭಾರತದ ಯೋಜನೆಯಲ್ಲಿ 16 ಬೃಹತ್ ಕಾಲುವೆಗಳೊಂದಿಗೆ 4 ಉಪಕಾಲುವೆಗಳು ಇರುತ್ತವೆ. ಮಹಾನದಿಯಿಂದ-ಗೋದಾವರಿ-ಕೃಷ್ಣಾ-ಕಾವೇರಿ-ವೈಗೈ ನದಿ ಪಾತ್ರಕ್ಕೆ.
2. ತಾಪಿ ಮತ್ತು ಮುಂಬಯಿ ಉತ್ತರಕ್ಕೆ.
3. ಕೆನ್-ಬಿಟ್ವಾ ಮತ್ತು ಪರ್ಬತಿ-ಕಾಳಿಶಿಂಧ್-ಚಂಬಲ್ ನದಿ ಪಾತ್ರಕ್ಕೆ.
4.ಪಶ್ಚಿಮದಿಂದ ಪೂರ್ವಕ್ಕೆ ಹರಿಯುವ ನದಿಗಳಿಂದ ಪಶ್ಚಿಮ ಮತ್ತು ದಕ್ಷಿಣ ಭಾರತಕ್ಕೆ.
ಒಂದು ಅಂದಾಜಿನ ಒಟ್ಟು ಯೋಜನೆಯ ವೆಚ್ಚ
ದಕ್ಷಿಣ ಭಾರತ: 23 ಬಿಲಿಯನ್ (ಯುಎಸ್ ಡಾಲರ್) ಅಥವಾ 1,06,000 ಕೋಟಿ ರೂ.
ಹಿಮಾಲಯ/ಉತ್ತರ ಭಾರತ: 41 ಬಿಲಿಯನ್ (ಯುಎಸ್ ಡಾಲರ್) ಅಥವಾ 1,85,000 ಕೋಟಿ ರೂ.
ಜಲವಿದ್ಯುತ್ ಸ್ಥಾವರಗಳ ವೆಚ್ಚ: 59 ಬಿಲಿಯನ್ (ಯುಎಸ್ ಡಾಲರ್) ಅಥವಾ 2,69,000 ಕೋಟಿ ರೂ.
ದಕ್ಷಿಣ ಭಾಗಕ್ಕೆ ಹರಿಯುವ ನೀರಿನ ಪ್ರಮಾಣ: 141 ಘಕಿಮೀ.
ಹಿಮಾಲಯ/ಉತ್ತರ ಭಾಗಕ್ಕೆ ಹರಿಯುವ ನೀರಿನ ಪ್ರಮಾಣ: 33 ಘಕಿಮೀ.
ಜಲವಿದ್ಯುತ್ ಉತ್ಪಾದನೆ: ದಕ್ಷಿಣ ಭಾರತ 34 ಗೀಗಾವ್ಯಾಟ್. ಹಿಮಾಲಯ/ಉತ್ತರಭಾರತ 30 ಗೀಗಾವ್ಯಾಟ್. ಮೇಲಿನದೆಲ್ಲ 2006ರ ಲೆಕ್ಕಾಚಾರ. ಇತ್ತೀಚಿನ ವರ್ಷಗಳ ಲೆಕ್ಕಾಚಾರ ದೊರಕುವುದಿಲ್ಲ. ಕಾರಣ ಲೆಕ್ಕಹಾಕಿದ ವರ್ಷಗಳಲ್ಲಿ ಯೋಜನೆ ಮುಗಿಯುದಿಲ್ಲವಲ್ಲ? (ಮೇಲಿನ ಹಣದ ಲೆಕ್ಕಾಚಾರ ಈಗ ಸಾಕಷ್ಟು ಹೆಚ್ಚಾಗಿದೆ)
ಕ್ರಿ.ಶ.2050ಕ್ಕೆ ಭಾರತದ ಜನಸಂಖ್ಯೆ 150 ಕೋಟಿ ದಾಟಲಿದೆ ಎನ್ನುವ ಲೆಕ್ಕಾಚಾರವಿದೆ. ಇದರಿಂದ ಹೆಚ್ಚು ಆಹಾರ ಧಾನ್ಯಗಳು ಬೆಳೆಯಲು ಅಪಾರ ಪ್ರಮಾಣದ ನೀರು ಬೇಕಾಗುತ್ತದೆ. ನದಿ ಮತ್ತು ಅಂತರ್ಜಲ ನೀರಿನಿಂದ ಕೃಷಿ ಮಾಡಬೇಕಾಗುತ್ತದೆ. 1950ರಲ್ಲಿ 50 ದಶಲಕ್ಷ ಟನ್ ಆಹಾರ ಧಾನ್ಯ ಉತ್ಪತ್ತಿಸುತ್ತಿದ್ದ ಭಾರತ, ಈಗ 200 ದಶಲಕ್ಷ ಟನ್ ಉತ್ಪಾದಿಸುತ್ತಿದೆ. ನೀರಾವರಿ ಪ್ರದೇಶ 22 ದಶಲಕ್ಷ ಹೆಕ್ಟೇರುಗಳಿಂದ 95 ಹೆಕ್ಟೇರುಗಳಿಗೆ ಹೆಚ್ಚಿದೆ. 2050ರಲ್ಲಿ 150 ಕೋಟಿ ಜನರಿಗೆ ಕನಿಷ್ಠ 450 ದಶಲಕ್ಷ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸಬೇಕಾಗುತ್ತದೆ. ಇದಕ್ಕೆ ಇನ್ನು 160 ದಶಲಕ್ಷ ಹೆಕ್ಟೇರು ಭೂಮಿಯನ್ನು ನೀರಾವರಿಗೆ ಅಳವಡಿಸಬೇಕಿದೆ. ಸಾಂಪ್ರದಾಯಿಕ ಮೂಲಗಳಿಂದ 40 ದಶಲಕ್ಷ ಹೆಕ್ಟೇರು ಭೂಮಿಯನ್ನು ತಯಾರು ಮಾಡಬಹುದು. ಒಟ್ಟಿನಲ್ಲಿ ಎರಡೂ ಸೇರಿ 160 ದಶಲಕ್ಷ ಹೆಕ್ಟೇರು ಭೂಮಿಯನ್ನು ಕೃಷಿಗೆ ಅಳವಡಿಸುವ ಯೋಜನೆಯನ್ನು ಈಗಿಂದಲೇ ಮಾಡಬೇಕಿದೆ. ಇಷ್ಟೆಲ್ಲ ನೆಲವನ್ನು ಕೃಷಿಗೆ ಬದಲಿಸಿದರೆ ಅರಣ್ಯ ಕಡಿಮೆಯಾಗುತ್ತದೆ. ಈಗಾಗಲೆ ಅರಣ್ಯಗಳು ನಾಶವಾಗುತ್ತಿದ್ದು ಮುಂದಿನ ಪೀಳಿಗೆಗಳ ಗತಿ ಏನಾಗಬಹುದು? ಭೂಮಿಯ ಮೇಲೆ ಕನಿಷ್ಟ 30% ಅರಣ್ಯಗಳನ್ನು ಉಳಿಸಿಕೊಳ್ಳಲೇಬೇಕಿದೆ. ಅರಣ್ಯ ಕಡಿಮೆಯಾದರೆ ಜನರ ಆರೋಗ್ಯಕ್ಕೆ ಒಳ್ಳೆಯದಲ್ಲ.
ಈ ಯೋಜನೆಯಲ್ಲಿ ಒಟ್ಟು 37 ನದಿಗಳ ಜೋಡಣೆಯಿದ್ದು 3000 ಅಣೆಕಟ್ಟು/ಸರೋವರಗಳಲ್ಲಿ ನೀರು ಶೇಖರಣೆ ಮಾಡುವ ಯೋಜನೆ ಇದೆ. 50-100 ಮೀಟರುಗಳ ಅಗಲ, 6 ಮೀಟರ್ ಆಳದ ಕಾಲುವೆಗಳಲ್ಲಿ ದೋಣಿಗಳ ಮೂಲಕ ಸಾಗಣಿಕೆಯೂ ಇರುತ್ತದೆ. ಈ ಯೋಜನೆಯ ಒಟ್ಟು ಅಂದಾಜು 2002ರಲ್ಲಿ, 5,60,000 ಕೋಟಿ ರೂ. ಒಟ್ಟು 12,500 ಕಿ.ಮೀ. ಉದ್ದದ ಕಾಲುವೆಗಳು, 35 ಗೀಗಾ ವ್ಯಾಟ್‌ಗಳ ಜಲಶಕ್ತಿಯ ಉತ್ಪತ್ತಿ. 35 ದಶಲಕ್ಷ ಹೆಕ್ಟೇರು ಭೂಮಿಯನ್ನು ಕೃಷಿಗೆ ಪರಿವರ್ತಿಸಲಾಗುತ್ತದೆ. ಹಳ್ಳಿ, ಪಟ್ಟಣಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮೀನುಗಾರಿಕೆ ಪಾಲನೆಯೂ ಸೇರಿದೆ. (Mohile, Institute of Engineers, GOI,2003). ಇದರಲ್ಲಿ 3700 ಮೆಗಾವ್ಯಾಟ್ ವಿದ್ಯುತ್ತನ್ನು, ನೀರನ್ನು ಕೆಳಮಟ್ಟದಿಂದ ಮೇಲಕ್ಕೆ ಎತ್ತಲು ಉಪಯೋಗಿಸಲಾಗುತ್ತದೆ. ಈ ವರ್ಷದಿಂದಲೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದರೂ ಕನಿಷ್ಠ 50ರಿಂದ ಗರಿಷ್ಠ 100 ವರ್ಷಗಳಾದರೂ ಹಿಡಿಯಬಹುದು. ಪ್ರಸ್ತುತ ದೇಶದಲ್ಲಿ 19 ದೊಡ್ಡ ನದಿ ಪಾತ್ರಗಳಲ್ಲಿ ಹರಿಯುವ ನೀರಿನಲ್ಲಿ ಕೇವಲ 35 ಭಾಗದಷ್ಟು ಹರಿಯುವ ನೀರನ್ನು ಮಾತ್ರ ಉಪಯೋಗಿಸಿಕೊಳ್ಳಲಾಗುತ್ತಿದೆ.
ಕೇಂದ್ರ ಸರಕಾರದ ಪರಿಸರ ಇಲಾಖೆ 23 ರೀತಿಯ ಸಮಸ್ಯೆ ಮತ್ತು ಮುನ್ನೆಚ್ಚರಿಕೆಗಳನ್ನು ಈ ಯೋಜನೆಯ ಮುಂದಿಟ್ಟಿದೆ. ಅವುಗಳಲ್ಲಿ ಮುಖ್ಯ ಸಮಸ್ಯೆಗಳೆಂದರೆ ಪರಿಸರ ಮಾಲಿನ್ಯ, ಅರಣ್ಯ/ವನ್ಯ ಜೀವಿಗಳ ನಾಶ, ಜೈವಿಕ ವೈವಿದ್ಯತೆಯ ನಾಶ, ಹಿಮಾಲಯದಲ್ಲಿ ಭೂಕಂಪನಗಳ ಎಚ್ಚರಿಕೆ, ಪರ್ಯಾಯ ದ್ವೀಪದಲ್ಲಿರುವ 5,83,000 ಕುಟುಂಬಗಳ ಸ್ಥಳಾಂತರ, 10,5000 ಉದ್ದದ ಕಾಲುವೆಗಳು ಬರುವ ಜಾಗಾದಲ್ಲಿ 5.5 ದಶಲಕ್ಷ ಬುಡಕಟ್ಟು ಜನರು ಮತ್ತು ಗ್ರಾಮಾಂತರ ಜನರ ಸ್ಥಳಾಂತರ (2003) ಇತ್ಯಾದಿ. ದೇಶದಲ್ಲಿ ಈಗಾಗಲೆ ಬಾಕಿ ಇರುವ ಯೋಜನಗಳಿಗೆ 10ನೇ ಪಂಚವಾರ್ಷಿಕ ಯೋಜನೆಗೆ 70,000 ಕೋಟಿ ಹಣ ಬೇಕಿದೆ. ಇನ್ನು 11ನೇ ಪಂಚವಾರ್ಷಿಕ ಯೋಜನೆಗೆ 1,10,000 ಕೋಟಿ ಹಣ ಬೇಕು. ಇದಕ್ಕೆಲ್ಲ ಎಲ್ಲಿಂದ ಹಣ ಬರುತ್ತದೆ ಎನ್ನುವ ಪ್ರಶ್ನೆಗಳೂ ಇವೆ. ಈಗಿನ ಹಣಕಾಸಿನ ಪರಿಸ್ಥಿಯಂತೂ ಗಂಭೀರವಾಗಿದೆ.
150 ವರ್ಷಗಳಿಂದ ಕಾಗದಗಳ ಮೇಲೆಯೇ ಹರಿದಾಡುತ್ತಿರುವ ಈ ಯೋಜನೆ ಹಾಗೆಯೇ ಉಳಿದುಬಿಡುತ್ತದೆಯೇ ಎನ್ನುವ ಪ್ರಶ್ನೆಗೆ ಒಂದು ಸಣ್ಣ ಸಮಾಧಾನ ಸಿಕ್ಕಿದೆ. ಅದೆಂದರೆ 2015-16ರಲ್ಲಿ ಕೆನ್-ಬಿಟ್ವಾ ನದಿಗಳ (ಉತ್ತರ ಮತ್ತು ಮಧ್ಯಪ್ರದೇಶಗಳ) ಜೋಡಣೆಯನ್ನು ದೇಶದ ಮೊದಲ ಪ್ರಾಯೋಗಿಕ ಯೋಜನೆಯಾಗಿ ತೆಗೆದುಕೊಳ್ಳಲಾಗಿದೆ. ಮುಂದಿನ 5 ವರ್ಷಗಳಲ್ಲಿ ಮುಗಿಯುವಂತೆ ಅದಕ್ಕೆ ನರೇಂದ್ರ ಮೋದಿ ಸರಕಾರ ಎಲ್ಲಾ ತಯಾರಿಯನ್ನು ಮಾಡಿಕೊಂಡಿದೆ. ಇದರಿಂದ 1.35 ದಶಲಕ್ಷ ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ನೀರು ದೊರಕಲಿದೆ. 2006ರಲ್ಲಿ ಈ ಯೋಜನೆಯ ಅಂದಾಜು ವೆಚ್ಚ 76 ಬಿಲಿಯನ್ ರೂ. 2008ರಲ್ಲಿ ಇದರ ಅಂದಾಜು 98 ಬಿಲಿಯನ್ ರೂ. ಏರಿತು. ಕೇಂದ್ರ ಸರಕಾರ ಈ ಯೋಜನೆಗೆ 90 ಭಾಗದ ಹಣವನ್ನು ನೀಡಲಿದ್ದು ಉಳಿದ ಹಣವನ್ನು ರಾಜ್ಯ ಸರಕಾರಗಳು ಭರಿಸಬೇಕಿದೆ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳು ಮೊದಲಿಗೆ ಈ ಯೋಜನೆಯ ಲಾಭವನ್ನು ಪಡೆಯಲಿವೆ.
ಅಣೆಕಟ್ಟುಗಳಿಂದ ಕಾಣಿಸಿಕೊಳ್ಳುವ ದುಷ್ಪರಿಣಾಮಗಳು
ಅಣೆಕಟ್ಟುಗಳನ್ನು ಕಟ್ಟುವುದರಿಂದ ನಿಸರ್ಗದಲ್ಲಿ ಅನೇಕ ರೀತಿಯ ತೊಂದರಗಳು ಕಾಣಿಸಿಕೊಳ್ಳುತ್ತವೆ. ಜೈವಿಕ, ರಾಸಾಯನಿಕ ಮತ್ತು ಭೌತಿಕ ವಿಷಯಗಳ ಮೇಲೆ ನೇರವಾಗಿ ಮತ್ತು ನದಿ-ದಡಗಳ ಮೇಲೆ ದುಷ್ಪರಿಣಾಮಗಳು ಬೀರುತ್ತವೆ. ನದಿ ಜಲಾನಯನ ಪ್ರದೇಶಗಳಲ್ಲಿ ಅಗಾಧವಾದ ಸಂಚಯನ (ಹೂಳು) ಸಂಗ್ರಹಗೊಳ್ಳುತ್ತದೆ. ಇದರಿಂದ ಕೆಳಗಿನ ನದಿ ಪಾತ್ರಗಳಲ್ಲಿ ಉತ್ಪಾದಕ ನದಿಮುಖಜ, ಫಲವತ್ತಾದ ಪ್ರವಾಹಗಳು ಮತ್ತು ಕರಾವಳಿ ಗದ್ದೆಗಳ ನಿರ್ವಹಣೆಗೆ ತೊಂದರೆಯಾಗುತ್ತದೆ. ನದಿಯ ಕೆಳಹಂತದಲ್ಲಿ ನೀರಿಲ್ಲದೆ, ಪರಿಸರ ಹಾಳಾಗುತ್ತದೆ. ಅಲ್ಲಿನ ಜನರು ಗುಳೆ ಎದ್ದುಹೋಗಬೇಕಾಗುತ್ತದೆ. ಪ್ರಾಣಿ-ಪಕ್ಷಿಗಳು ಕೂಡ ವಲಸೆ ಹೋಗಬೇಕಾಗುತ್ತದೆ. ಎತ್ತರ ಅಣೆಕಟ್ಟುಗಳಿಂದ ಮತ್ಸ್ಯ ಚಲನೆ ಹರಿಯುವುದು ನಿಂತುಹೋಗುತ್ತದೆ.
ಒಟ್ಟಿನಲ್ಲಿ ಪರಿಸರ ಸಂಪೂರ್ಣವಾಗಿ ಹದಗೆಡುತ್ತದೆ. ನದಿಯ ಉದ್ದಕ್ಕೂ ಅಂತರ್ಜಲ ಮಟ್ಟ ಆಳಕ್ಕೆ ತಲುಪುದರೊಂದಿಗೆ ಜನರು-ಪ್ರಾಣಿಗಳು ಮತ್ತು ಸಸ್ಯಸಂಪತ್ತು ತನ್ನ ಇರುವಿಕೆಯನ್ನು ಕಳೆದುಕೊಳ್ಳುತ್ತದೆ. ಇನ್ನೊಂದು ಮುಖ್ಯ ಅಂಶವೆಂದರೆ ಸರಾಗವಾಗಿ ಹರಿಯುವ ನದಿಗಳು ಕೊನೆಗೆ ನಿಂತೇಹೋಗುತ್ತವೆ. ಜಲಾಶಯಗಳಲ್ಲಿ ತಾಪಮಾನ ಕಡಿಮೆಯಾಗಿ, ರಾಸಾಯನಿಕ ಸಂಯೋಜನೆಗಳು, ಆಮ್ಲಜಕದ ಮಟ್ಟ ಏರುಪೇರಾಗುತ್ತದೆ. ಇದರಿಂದ ಆ ನದಿಯ ಜಾಡಿನಲ್ಲಿ ಎಂದಿನಂತೆ ಜಲಚರಗಳು ಮಾಯವಾಗಿ, ಸಸ್ಯಸಂಪತ್ತು ಬೆಳೆಯದೆ ನಿಂತುಹೋಗುತ್ತದೆ.
ಜಲಾಶಯಗಳ ಸುತ್ತಲೂ ನೈಸರ್ಗಿಕ ಜೈವಿಕ ಪ್ರಕ್ರಿಯೆಗಳು ಬದಲಾಗುತ್ತವೆ. ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದ ವಿಷಯಗಳೆಂದರೆ, ಉಷ್ಣವಲಯಗಳಲ್ಲಿ ಹಸಿರುಮನೆ ಅನಿಲಗಳನ್ನು ಹೊರಸೂಸುವುದು ಕಂಡುಬಂದಿದೆ. ಅವು ವಾತಾವರಣದಲ್ಲಿ ಸಿಕ್ಕಿಕೊಂಡು ಬಿಸಿಯನ್ನು ಏರಿಸುತ್ತವೆ. ಉದಾ: ಇಂಗಾಲ ಡೈಆಕ್ಸೈಡ್, ನೈಟ್ರಸ್‌ಆಕ್ಸೈಡ್, ಮೇಥೇನ್, ಫ್ಲೋರೀನಿಕರಿಸಿದ ಅನಿಲಗಳು ಇತ್ಯಾದಿ. ಕಾಂಗೋ ನದಿಯ ಸಂಶೋಧನೆಯಲ್ಲಿ ಸಂಚಯನ ಮತ್ತು ಪೌಷ್ಟಿಕ ಹರವಿನಿಂದ ದೂರದ ಅಟ್ಲಾಂಟಿಕ್ ಸಾಗರದಲ್ಲಿ ಇಂಗಾಲ ಡೈಆಕ್ಸೈಡ್ ಸೇಕರಣೆಯಾಗುತ್ತಿದೆ. ಹಾಗೆಯೇ ಸಾಗರ ಪ್ರಾಣಿಗಳು ಅಲ್ಲಿ ತೊಂದರೆಗೆ ಒಳಗಾಗಿವೆ. ಹೆಚ್ಚಾದ ಜನಸಂಖ್ಯೆಯಿಂದ ವಿದ್ಯುತ್, ಕೃಷಿ ಮತ್ತು ಕುಡಿಯುವ ನೀರಿನ ಅಭಾವದಿಂದ ಅಣೆಕಟ್ಟುಗಳ ಗಾತ್ರ ದೊಡ್ಡದಾಗುತ್ತ ಮೇಲಿನ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಜಲಾಶಯಗಳ ಆಳದಲ್ಲಿ ನೀರಿನ ತಾಪಮಾನ ಕಡಿಮೆ ಇರುತ್ತದೆ. ಆಮ್ಲಜನಕವೂ ಕಡಿಮೆ ಇದ್ದು, ಇಂತಹ ತಂಪು ನೀರು ಅಣೆಕಟ್ಟುಗಳಿಂದ ದಿಢೀರನೆ ಹೊರಕ್ಕೆ ಬಿಟ್ಟಾಗ ಕೆಳಗಿನ ನದಿಪಾತ್ರ ಪರಿಸರಕ್ಕೆ ಮತ್ತು ಮತ್ಸ್ಯ ಸಂತಾನಕ್ಕೆ ಹಾನಿ ಉಂಟಾಗುತ್ತದೆ. ಮಾನವ ನಿರ್ಮಿತ ಜಲಾಶಯಗಳು ಜನರಿಗೆ ಎಷ್ಟು ಉಪಕಾರಿಯೋ ಅಷ್ಟೇ ಅಪಾಯಕಾರಿಯೂ ಕೂಡ. ಜಲಾಶಯಗಳು ರೋಗಾಣುಗಳ ತಾಣಗಳಾಗಿ ಮಾರ್ಪಡುತ್ತಿವೆ. ಈಗ ಎಲ್ಲೆಲ್ಲೂ ಕಟ್ಟುತ್ತಿರುವ ಅಗಾಧವಾದ ಜಲಾಶಯಗಳು ಮುಂದಿನ ದಿನಗಳಲ್ಲಿ ಭೂಕಂಪನಗಳು ಮತ್ತು ಎಂಜಿನಿಯರಿಂಗ್ ದೋಷಗಳಿಂದ ಓಡೆದುಹೋದರೆ ಭಾರಿ ದುರಂತಗಳು ಸಂಭವಿಸುತ್ತವೆ. ಚೀನಾದಲ್ಲಾದ ಬಾಂಕಿಯೋ ಅಣೆಕಟ್ಟು ದುರಂತದಿಂದ 1977ರಲ್ಲಿ 1.70 ಲಕ್ಷ ಜನರು ಸತ್ತರು. 1967ರಲ್ಲಿ ಕೋಯ್ನಾ ಅಣೆಕಟ್ಟು ಹತ್ತಿರ ಭೂಕಂಪನ ಸಂಭವಿಸಿದ್ದರಿಂದ 180 ಜನರು ಸತ್ತು 1500 ಜನ ಗಾಯಗೊಂಡರು. ಇಲ್ಲಿ ಅಣೆಕಟ್ಟು ಕಟ್ಟಿದ್ದರಿಂದ ಒಂದೇ ಕಡೆ ಹೆಚ್ಚು ನೀರು ಸಂಗ್ರವಾಗಿ ಇಲ್ಲಿ ಭೂಕಂಪನ ಸಂಭವಿಸಿತು ಎನ್ನಲಾಗಿದೆ.
ಅಮೆರಿಕ ತೆರವುಗೊಳಿಸಿದ ಗ್ಲಿನೆಸ್‌ಕಾನ್‌ಯಾನ್ ಡ್ಯಾಂ. / courtesy: Wikipedia
ಅಮೆರಿಕಾದಲ್ಲಿ ಇದುವರೆಗೂ 1,000 ಅಣೆಕಟ್ಟುಗಳನ್ನು ಹೊಡೆದು ಹಾಕಲಾಗಿದೆ. ಅದರಲ್ಲಿ ಇತ್ತೀಚೆಗೆ ಹೊಡೆದುಹಾಕಿದ ಒಲಂಪಿಕ್ ನ್ಯಾಷನಲ್ ಪಾರ್ಕ್ನಲ್ಲಿದ್ದ ದೊಡ್ಡ ಜಲಾಶಯವು ಒಂದು. ಇದಕ್ಕೆ ಕಾರಣ ಜಲಾಶಯಗಳಲ್ಲಿ ನೀರಿನ ಗುಣಮಟ್ಟ ಹಾಳಾಗಿ, ಆಮ್ಲಜನಕ ಕಡಿಮೆಯಾಗಿ, ಕೆಟ್ಟ ಪಾಚಿ ಬೆಳೆದು ನಿಂತಿತ್ತು. ಇದರ ಜೊತೆಗೆ ಜಲಾಶಯಗಳಲ್ಲಿ ಅಗಾಧ ಹೂಳು ಶೇಕರಣೆಯಾಗಿ ಕಡಿಮೆ ನೀರು ನಿಲ್ಲುವುದರಿಂದ ಜಲವಿದ್ಯುತ್ ಉತ್ಪಾದನೆ ಕೂಡ ಕಡಿಮೆಯಾಗಿತ್ತು. ಈಗ ಅಮೆರಿಕ ಸಾಕಷ್ಟು ನದಿಗಳನ್ನು ಪುನುಶ್ಚೇತನಗೊಳಿಸಲು ಯೋಚಿಸುತ್ತಿದೆ. ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಮತ್ತು ಭಾರತದಂತಹ ದೇಶಗಳು ಅಣೆಕಟ್ಟುಗಳನ್ನು ಕಟ್ಟಿದರೂ ಕಷ್ಟ, ಕಟ್ಟದೇ ಇದ್ದರೂ ಕಷ್ಟ. ಭಾರತದಲ್ಲಿ ಜಲಾಶಯಗಳಿಂದ ಹರಿಸುವ ನೀರಿನಲ್ಲಿ ಭತ್ತ, ಕಬ್ಬು ಇನ್ನಿತರ ಬೆಳೆಗಳನ್ನು ಬೆಳೆದು ಅದಕ್ಕೆ ಹೇರಳ ಗೊಬ್ಬರಗಳನ್ನು ಸೇರಿಸಲಾಗುತ್ತದೆ. ನೆಲವೆಲ್ಲ ಸತ್ವ ಕಳೆದುಕೊಂಡು ಕೆಲವೇ ವರ್ಷಗಳಲ್ಲಿ ಅಲ್ಲಿ ಸೌಡ/ಉಪ್ಪುನೆಲ ಸೃಷ್ಟಿಯಾಗಿ ಏನೂ ಬೆಳೆಯಲಾರದೆ ರೈತರು ಅಲ್ಲಿಂದ ಗುಳೆ ಹೋಗುತ್ತಾರೆ. ಅವರು ಮಾಡಿದ ಪಾಪಕ್ಕೆ ಅವರೇ ಬೆಲೆ ತೆರಬೇಕಾಗುತ್ತದೆ. ಆದರೂ ಸರಕಾರಗಳಾಗಲಿ, ಜನರಾಗಲಿ ಪಾಠ ಕಲಿತಂತೆ ತೋರುವುದಿಲ್ಲ. ಈಗ ದೇಶದಾದ್ಯಂತ ಕುಡಿಯುವ ನೀರಿಗಾಗಿಯೇ ಹಾಹಾಕಾರ ಕಾಣಿಸಿಕೊಂಡಿದೆ.