ಅಮ್ಮನವರ ದರ್ಶನಕ್ಕೆ ಮಳೆ ಅಡ್ಡಿ ಆಗಲಿಲ್ಲ. ಹಾದಿಯುದ್ದಕ್ಕೂ ಬೆಳಗುತ್ತಿದ್ದ ದೀಪಗಳಿಗೆ ಸುರಿಯುತ್ತಿದ್ದ ಸೋನೆ ಮತ್ತಷ್ಟು ಹೊಳಪು ತುಂಬಿತೇ ವಿನಾ ಆ ಬೆಳಕು ಆರುವಂತೆ ಮಾಡಲಿಲ್ಲ. ಕಾರ್ತೀಕ ದೀಪೋತ್ಸವದ ಪ್ರಯುಕ್ತ ಗುಡಿಬಂಡೆಯ ಶ್ರೀ ಸತಿ ನಾಗಭೈರವಿ ಗುಂಡಾಲಚ್ಚಮ್ಮ ದೇಗುಲದಲ್ಲಿ ಸೋಮವಾರ ಸಂಜೆ ಕಂಡು ಬಂದ ದೃಶ್ಯಗಳಿವು.
ಗುಡಿಬಂಡೆ: ಇತಿಹಾಸ ಪ್ರಸಿದ್ಧ ಕೋಟೆನಾಡು ಗುಡಿಬಂಡೆಯ ಕುನ್ನಮ್ಮನಗರದಲ್ಲಿ ನೆಲೆಸಿರುವ ಶ್ರೀ ಸತಿ ನಾಗಭೈರವಿ ಗುಂಡಾಲಚ್ಚಮ್ಮ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು. ಪ್ರತಿವರ್ಷ ಈ ಮಾಸದಲ್ಲಿ ವಿಶೇಷ ಪೂಜೆ, ಕಾರ್ಯಕ್ರಮಗಳು ದೇವಳದಲ್ಲಿ ನೆರವೇರುತ್ತವೆ.
ಅಮ್ಮನವರಿಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಮಳೆ ನಡುವೆಯೂ ಅಸಂಖ್ಯಾತ ಭಕ್ತರು ದೇಗುಲಕ್ಕೆ ಬಂದು ಅಮ್ಮನವರ ದರ್ಶನ ಪಡೆದರು. ಮುಖ್ಯವಾಗಿ, ಮಹಿಳೆಯರು ಮತ್ತು ಮಕ್ಕಳು ದೀಪಗಳನ್ನು ಬೆಳಗಿಸಿ ತಮ್ಮ ಹರಕೆಗಳನ್ನು ಪೂರೈಸಿದರು. ದೇವಾಲಯದ ಹಾದಿಯುದ್ದಕ್ಕೂ ದೀಪಾಲಂಕಾರ ಮಾಡಲಾಗಿತ್ತಲ್ಲದೆ, ಅಲ್ಲಿನ ದೃಶ್ಯಗಳನ್ನು ಭಕ್ತರು ಕಣ್ತುಂಬಿಕೊಂಡಿದ್ದರು. ಮಾತ್ರವಲ್ಲದೆ, ಸೋನೆ ಮಳೆಯ ನಡುವೆಯೂ ದೀಪಗಳು ವಿರಾಜಮಾನವಾಗಿ ಬೆಳಗುತ್ತಿದ್ದ ಪರಿಯನ್ನು ಕಂಡು ಭಕ್ತರು ಚಕಿತರಾದರು. ಅರ್ಚಕರಾದ ಶ್ರೀನಿವಾಸ್ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಿದ್ದರು.
ಶ್ರೀ ಸತಿ ನಾಗಭೈರವಿ ಗುಂಡಾಲಚ್ಚಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುನ್ನ ಮತ್ತು ಅಮ್ಮನವರು.
ಕಾರ್ತೀಕ ದೀಪೋತ್ಸವದ ಒಂದು ನೋಟ.
ದೇಗುಲದ ವಿಶೇಷತೆ
ಸುಮಾರು ಮೂರು ಶತಮಾನಗಳಷ್ಟು ಪುರಾತನವಾದ ಈ ದೇಗುಲವನ್ನು ಐದು ವರ್ಷಗಳ ಹಿಂದೆ ಯೋಧ ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ಜೀರ್ಣೋದ್ಧಾರ ಮಾಡಲಾಗಿತ್ತು. ಅಂದಿನಿಂದಲೂ ಇಲ್ಲಿ ಪ್ರತಿ ಶುಕ್ರವಾರ ವಿಶೇಷ ಪೂಜೆ ಇರುತ್ತದಲ್ಲದೆ, ಪ್ರತಿ ವರ್ಷದ ಕಾರ್ತೀಕ ಮಾಸದಲ್ಲಿ ನಿತ್ಯವೂ ವಿಶೇಷ ಪೂಜೆ, ಅಲಂಕಾರ ಇರುತ್ತದೆ.
ಅಮ್ಮನವರು ನಮ್ಮ ಮನೆಯ ದೇವತೆ. ಸುಮಾರು 300 ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಈ ದೇಗುಲವನ್ನು ಕಟ್ಟಿಸಿದ್ದರು. ಆರು ತಲೆಮಾರುಗಳ ಹಿಂದೆ ನಮ್ಮ ಹಿರಿಯರೊಬ್ಬರಿಗೆ ಅಮ್ಮನವರು ಸ್ವಪ್ನದಲ್ಲಿ ಬಂದು ನನಗೊಂದು ಗುಡಿ ಕಟ್ಟಿಕೊಡು ಎಂದು ಅಪ್ಪಣೆ ಮಾಡಿದ್ದರಂತೆ. ಅದರಂತೆ ಅವರು ಗುಡಿ ನಿರ್ಮಿಸಿ, ಅಮ್ಮನವರನ್ನು ಪ್ರತಿಷ್ಠಾಪಿಸಿ ಪೂಜೆ, ವೈವೇದ್ಯ ಸಲ್ಲಿಸಿ ಹರಕೆ ಸಲ್ಲಿಸುತ್ತಿದ್ದರಂತೆ. ಭೂಮಿಯಲ್ಲಿ ಏನೇ ಬೆಳೆದರೂ ಮೊದಲು ಅಮ್ಮನವರಿಗೇ ನೈವೇಧ್ಯ ಮಾಡುವುದು ನಡೆದುಕೊಂಡು ಬಂದಿತ್ತಂತೆ. ಕಾಲಕ್ರಮೇಣ ದೇವಾಲಯ ಶಿಥಿಲವಾಗುತ್ತಾ ಬಂದಿದೆ. ನಾವೆಲ್ಲ ನೋಡುವ ಹೊತ್ತಿಗೆ ಅದು ಸಂಪೂರ್ಣವಾಗಿ ಪಾಳುಬಿದ್ದ ಹಾಗಿತ್ತು ಎಂದು ಹೇಳುತ್ತಾರೆ ಲಕ್ಷ್ಮೀನಾರಾಯಣ.
ನನಗೂ 2008ರ ಸುಮಾರಿನಲ್ಲಿ ನಮ್ಮ ಹಿರಿಯರಿಗೆ ಬಂದ ಹಾಗೆ ಸ್ವಪ್ನ ಬರುವುದು, ಅಮ್ಮನವರು ಏನೋ ಹೇಳಿದಂತೆ ಆಗುವುದು ನಡೆದಿತ್ತು. ಅಂಥ ಅನುಭವ ಆದಾಗ ರೋಮಾಂಚನವಾಗುತ್ತಿತ್ತು. ನನಗೇನೂ ಅರ್ಥವಾಗುತ್ತಿರಲಿಲ್ಲ. ಒಮ್ಮೆ ನಾನೇ ಅಮ್ಮನವರಲ್ಲಿ ಬೇಡಿಕೊಂಡೆ. ಬಳಿಕ ಎಲ್ಲವೂ ಸುಸೂತ್ರವಾಗಿ ನಡೆಯಿತು. ಜೀರ್ಣೋದ್ಧಾರ ಮಾಡಲು ನಾವೆಲ್ಲ ಅಲ್ಲಿ ಹಾರೆ, ಗುದ್ದಲಿಯಿಂದ ಅಗೆಯುತ್ತಿದ್ದರೆ ಬರೀ ಬೂದಿ, ಇದ್ದಿಲು ಸಿಗುತ್ತಿತ್ತು. ನಮ್ಮ ಹಿರಿಯರು ಅವುಗಳ ಮೇಲೆಯೇ ಗುಡಿ ಕಟ್ಟಿದ್ದರು ಎನಿಸುತ್ತದೆ. ಜತೆಗೆ, ಕೆಲಸ ನಡೆಯುವ ಸಂದರ್ಭದಲ್ಲಿ ಆಗಾಗ ಶ್ವೇತ ನಾಗರ ಕಾಣಿಸಿಕೊಳ್ಳುತ್ತಲೇ ಇತ್ತು. ಅದರಲ್ಲೂ ನಾಗರ ಪಂಚಮಿ ಹಬ್ಬದ ದಿನದಂದು ಆ ನಾಗರ ದೇಗುಲಗೊಳಕ್ಕೇ ಬಂದು ಮೂಲ ವಿಗ್ರಹದ ಮೇಲೆ ಬಹಳ ಹೊತ್ತು ಇದ್ದು ಹೋಗುವುದನ್ನು ಅನೇಕರು ನೋಡಿದ್ದಾರೆ ಎಂದು ವಿವರಿಸುತ್ತಾರೆ ಲಕ್ಷ್ಮೀನಾರಾಯಣ.