Lead photo: CKPhotography ಸಿಕೆಪಿ@ckphotographi
ಬೆಂಗಳೂರು: ದೇಶಾದ್ಯಂತ ಒಂದೆಡೆ ಭಾರತ್ ಬಂದ್ ನಡೆದಿತ್ತು. ಇನ್ನೊಂಡೆದೆ ರಾಜಧಾನಿ ದೆಹಲಿಯ ಸುತ್ತಮುತ್ತ ಕಳೆದ ಹ್ನನೆರಡು ದಿನಗಳಿಂದ ಶುರುವಾಗಿರುವ ಪ್ರತಿಭಟನೆ ಇನ್ನೂ ಮುಂದುವರಿದಿದೆ. ರಾಜ್ಯದಲ್ಲೂ ಇದೇ ದಿನ ರೈತರು ಬೀದಿಗಿಳಿದಿದ್ದರು. ಇದೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳದೇ ಸರಕಾರ ವಿಧಾನಪರಿಷತ್ತಿನಲ್ಲಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಪಾಸ್ ಮಾಡಿಕೊಂಡಿದೆ.
1974ರಲ್ಲಿ ದೇವರಾಜು ಅರಸು ಅವರ ಕಾಲದಲ್ಲಿ ಜಾರಿಗೆ ಬಂದಿದ್ದ ಕರ್ನಾಟಕ ಭೂ ಸುಧಾರಣೆ ಕಾಯ್ದೆಯು, ಈ ಮೂಲಕ ಇತಿಹಾಸದ ಪುಟಗಳಲ್ಲಿ ಸೇರಿಬಿಟ್ಟಿತು. ಹಿಂದಿನ ವಿಧಾನಮಂಡಲ ಅಧಿವೇಶನದಲ್ಲಿ ಈ ತಿದ್ದುಪಡಿ ಮಸೂದೆಗೆ ವಿಧಾನಪರಿಷತ್ತಿನಲ್ಲಿ ಒಪ್ಪಿಗೆ ಸಿಕ್ಕಿರಲಿಲ್ಲ. ವಿಧಾನಸಭೆಯಲ್ಲಿ ಅಂಗೀಕಾರವಾಗಿತ್ತು.
ಈ ಕಾರಣಕ್ಕಾಗಿ ಡಿಸೆಂಬರ್ 7ರಂದು ಸೋಮವಾರ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮತ್ತೊಮ್ಮೆ ಮಸೂದೆಯನ್ನು ಮಂಡಿಸಿ ಪಾಸ್ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಸಚಿವರು ಮಸೂದೆಯನ್ನು ಮಂಡಿಸುತ್ತಿದ್ದಂತೆ ಕಾಂಗ್ರೆಸ್, ಆ ಮಸೂದೆಯ ಬಗ್ಗೆ ವ್ಯಾಪಕ ಚರ್ಚೆ ಆಗಬೇಕು ಎಂದು ಒತ್ತಾಯ ಮಾಡಿತು. ಜೆಡಿಎಸ್ ಕೂಡ ಈ ಮಾತಿಗೆ ದನಿಗೂಡಿಸಿತು. ಚರ್ಚೆ ನಡೆದ ನಂತರ ಮಂಗಳವಾರ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಪರವಾಗಿ 37 ಮತ ಬಿದ್ದರೆ, ವಿರುದ್ಧವಾಗಿ 21 ಮತಗಳು ಬಿದ್ದವು. 16 ಮತಗಳ ಅಂತರದೊಂದಿಗೆ ವಿಧೇಯಕ ಪಾಸ್ ಆಯಿತು. ವಿಚಿತ್ರವೆಂದರೆ, ಮಸೂದೆಯ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡಿದ್ದ ಜೆಡಿಎಸ್ ಸದಸ್ಯರು ಮಸೂದೆಯ ಪರವಾಗಿ ಮತ ಹಾಕಿದರು. ಅಲ್ಲಿಗೆ ಮಣ್ಣಿನಮಕ್ಕಳ ಪಕ್ಷವೂ ಭೂಮಿಯನ್ನು ಮಾರಲು ಹಾಗೂ ಖರೀದಿಸಲು ದೇವರಾಜ ಅರಸು ಹಾಕಿದ್ದ ಮಿತಿಯನ್ನು ಕಿತ್ತೆಸೆಯಲು ಕೈಜೋಡಿಸಿದೆ.
ಆದರೆ, ಕಾಂಗ್ರೆಸ್ ಮಾತ್ರ ಮಸೂದೆ ವಿರುದ್ಧವೇ ಮತ ಹಾಕಿತಲ್ಲದೇ, ರೈತ ವಿರೋಧಿ ಮಸೂದೆಗೆ ಅಂಗೀಕಾರ ನೀಡಬಾರದು ಎಂದು ಒತ್ತಾಯ ಮಾಡಿತು. ಆದರೆ, ಕೋವಿಡ್ ಸಂಕಷ್ಟ ಸಮಯದಲ್ಲೇ ಮಸೂದೆಯನ್ನು ತರಾತುರಿಯಾಗಿ ಮಂಡಿಸಿದ್ದ ಸರಕಾರ, ಕೊನೆಗೂ ಯಶಸ್ಸು ಸಾಧಿಸಿದೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..