ಬೆಂಗಳೂರು: ವಿಧಾನಮಂಡಲದ ಹೊರಗೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ಮಾತನಾಡುತ್ತಲೇ, ಸದನದೊಳಗೆ ಆ ಮಸೂದೆಗೆ ಬೆಂಬಲ ನೀಡಿದ ಜೆಡಿಎಸ್ ಬಗ್ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ, ಆ ಮಸೂದೆ ಬೆಂಬಲ ನೀಡಿದ್ದು ಸರಿಯಾದ ನಿರ್ಧಾರ ಎಂದು ಆ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಟ್ವಿಟ್ಟರಿನಲ್ಲಿ ಮಸೂದೆಗೆ ಬೆಂಬಲ ನೀಡಿದ ಬಗ್ಗೆ ಸರಣಿ ಟ್ವೀಟಗಳನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಡುತ್ತಿದ್ದರೂ, ಪ್ರತಿಭಟನೆ ಹಾದಿ ಹಿಡಿದಿರುವ ರೈತರ ಆಕ್ರೋಶ ಕಟ್ಟೆಯೊಡೆದಿದೆ. ಮಣ್ಣಿನ ಮಗ ಎಂದು ಕರೆಸಿಕೊಳ್ಳುವ ಎಚ್.ಡಿ.ದೇವೇಗೌಡರ ಪಕ್ಷ ಜೆಡಿಎಸ್ ಮಣ್ಣಿನ ಮಕ್ಕಳಿಗೆ ಮೋಸ ಮಾಡಿದೆ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಜಾಲತಾಣಗಳಲ್ಲಿ ಹಾಗೂ ಎದುರಿಗೆ ಸಿಕ್ಕಸಿಕ್ಕ ಮಾಧ್ಯಮಗಳ ಮೈಕ್‌ಗಳ ಮುಂದೆಯೂ, ʼನಾನು ರೈತರ ಸಾಲ ಮನ್ನಾ ಮಾಡಿದಾಗ ಯಾವ ರೈತ ಮುಖಂಡನೂ ನನ್ನ ಪರವಾಗಿ ಮಾತನಾಡಲಿಲ್ಲ. ಈಗ ಎಲ್ಲರೂ ಟೀಕೆ ಮಾಡೋರೆʼ ಎಂದು ಅಲವತ್ತುಕೊಂಡರು.
ಒಂದೆಡೆ ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರಲಾಗುತ್ತಿದೆ ಎಂದು ನರೇಂದ್ರ ಮೋದಿ ಸರಕಾರ ಹೇಳುತ್ತಿದ್ದರೆ, ಇನ್ನೊಂದೆಡೆ ರೈತರ ಭೂಮಿಯನ್ನು ಕಿತ್ತುಕೊಳ್ಳುವ ಸರಕಾರದ ನಡೆಯನ್ನು ರೈತರು ಇದೀಗ ಹಳ್ಳಿಹಳ್ಳಿಯಲ್ಲೂ ಪ್ರಶ್ನಿಸುತ್ತಿದ್ದಾರೆ. ಮುಖ್ಯವಾಗಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತೀ ಹತ್ತಿರದಲ್ಲಿರುವ ಕೋಲಾರ, ಚಿಕ್ಕಬಳ್ಳಾಪುರ ರೈತರು ಈ ಕಾಯ್ದೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಮಾತ್ರವಲ್ಲದೆ, ಜೆಡಿಎಸ್ ನಮಗೆ ದ್ರೋಹ ಬಗೆದಿದೆ ಎಂದು ಕಿಡಿಕಾರಿದರು.
ಇನ್ನೊಂದೆಡೆ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಕುಮಾರಸ್ವಾಮಿ ಅವರದ್ದು ಪುಟಗೋಸಿ ರಾಜಕಾರಣʼ ಎಂದು ಟೀಕಿಸಿದ್ದಾರೆ. ಕೋಲಾರದಲ್ಲಿ ಈ ಟೀಕೆಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ ಕುಮಾರಸ್ವಾಮಿ.
ಕುಮಾರಸ್ವಾಮಿ ಮಾಡಿರುವ ಎಲ್ಲ ಟ್ವೀಟ್‌ಗಳು ಹೀಗಿವೆ:
ನನ್ನನ್ನು ಟೀಕೆ ಮಾಡುತ್ತಿರುವ ಮನಸ್ಸುಗಳು ಒಮ್ಮೆ ನನ್ನ ರೈತಪರ ನಿಲುವುಗಳನ್ನು ಪರಾಮರ್ಶೆ ಮಾಡಲಿ, ಈವರೆಗಿನ ನನ್ನ ರೈತಪರ ಕಾರ್ಯಕ್ರಮಗಳನ್ನು ಅವಲೋಕಿಸಲಿ. ರೈತ ಕುಟುಂಬದಿಂದ ಬಂದ, ಮಣ್ಣಿನಿಂದ ಮೇಲೆದ್ದ ದೇವೇಗೌಡರ ಹಾದಿಯಲ್ಲಿ ನಡೆಯುತ್ತಿರುವ ನಾನು ಮತ್ತು ಜೆಡಿಎಸ್ ಈ ಮಣ್ಣಿಗೆ, ಮಣ್ಣಿನಮಕ್ಕಳಿಗೆ ಎಂದೂ ದ್ರೋಹ ಮಾಡುವುದಿಲ್ಲ.
ಮಿತಿಗಳು, ಭಿನ್ನಮತಗಳ ನಡುವೆಯೂ ರೈತರ 25 ಸಾವಿರ ಕೋಟಿಗೂ ಮಿಗಿಲಾದ ಸಾಲ ಮನ್ನಾ ಮಾಡಿದ್ದು ಇದೇ ಕುಮಾರಸ್ವಾಮಿಯೇ ಹೊರತು ಬೇರಾರೂ ಅಲ್ಲ. ಆಗ ನನ್ನನ್ನು ಯಾರೊಬ್ಬರೂ ಬೆನ್ನುತಟ್ಟಲಿಲ್ಲ, ರೈತರಿಗೆ ನೀಡಿದ ವಚನ ಪಾಲಿಸಿ, ಅಧಿಕಾರದಿಂದ ಹೊರ ನಡೆದಾಗ ನನ್ನ ಬೆಂಬಲಕ್ಕೆ ಯಾರೂ ಬರಲಿಲ್ಲ. ಈಗ ಸುಧಾರಣೆ ಕ್ರಮಗಳನ್ನು ಸಾಧಿಸಿದಾಗಲೂ ನಾನು ಏಕಾಂಗಿ.
ಭೂಸುಧಾರಣ ಕಾಯ್ದೆಯಲ್ಲಿ ನಿಜವಾದ ಸುಧಾರಣಾ ಕ್ರಮಗಳನ್ನು ಸಾಧಿಸಿದ್ದು ಜೆಡಿಎಸ್. ಆದರೂ ವಿಮರ್ಶೆ ಇಲ್ಲದೇ ಏಕಾಏಕಿ ಜೆಡಿಎಸ್ ಪಕ್ಷವನ್ನು ದೂರಲಾಗುತ್ತಿದೆ. ಜೆಡಿಎಸ್‌ನ ಮೇಲೆ ದಾಳಿ ಮಾಡುತ್ತಿರುವ ಕೆಲ ರೈತ ಮುಖಂಡರು ಒಂದು ಬಾರಿ ಪರಾಮರ್ಶೆ ಮಾಡಲಿ. ಜೆಡಿಎಸ್ ರೈತ ವಿರೋಧಿ ನಿಲುವು ತಳೆಯಲು ಎಂದಾದರೂ ಸಾಧ್ಯವೇ ಎಂದು ಪ್ರಶ್ನೆ ಮಾಡಿಕೊಳ್ಳಲಿ.
ವಿರೋಧಕ್ಕೆ ಮಾತ್ರ ವಿರೋಧ ಪಕ್ಷವಲ್ಲ. ತನ್ನ ಜವಾಬ್ದಾರಿಗಳನ್ನು ಅದು ರಚನಾತ್ಮಕವಾಗಿ ನಿರ್ವಹಿಸಬೇಕು. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಜೆಡಿಎಸ್ ರೈತರ ಹಿತ ಕಾಯುತ್ತ ಆ ಕೆಲಸ ಮಾಡಿದೆ. ಕಾಯ್ದೆ ವಿಚಾರವಾಗಿ ನ್ಯಾಯ ಕಾಂಗ್ರೆಸ್ ಕಡೆಯೂ ಇರಲಿಲ್ಲ, ಬಿಜೆಪಿ ಕಡೆಯೂ ಇರಲಿಲ್ಲ. ಕಾಯ್ದೆ ಸಮತೋಲನಗೊಳ್ಳುವಂತೆ ಜೆಡಿಎಸ್ ಮಾಡಿದೆ.
79(ಎ, ಬಿ) ಕಲಂಗೆ ಇತಿಶ್ರೀ ಹಾಡಿರುವುದು ನಮ್ಮ ಕೃಷಿ ವ್ಯಾಪ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಯುವಕರನ್ನು ಕೃಷಿಯತ್ತ ಆಕರ್ಷಿಸಲು ಸಹಾಯಕವಾಗುತ್ತದೆ. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಬಯಸುವವರಿಗೆ ಹಾದಿ ಸುಗಮವಾಗುತ್ತದೆ. ಸಾಂಪ್ರದಾಯಕ ಕೃಷಿಯ ಜಾಗಕ್ಕೆ ವೈಜ್ಞಾನಿಕ ಕೃಷಿ ಬರಲು ಅನುಕೂಲವಾಗುತ್ತದೆ. ಇದನ್ನು ಎಲ್ಲರೂ ಗಮನಿಸಬೇಕು.
ಕಾಂಗ್ರೆಸ್ ಮತ್ತು ಸಿದ್ದರಾಮಯ್ಯಗೆ ಟಾಂಗ್
ನಿಮ್ಮ ತಾಳಕ್ಕೆ ಕುಣಿಯಲು ಜೆಡಿಎಸ್ ಗುಲಾಮಿ ಸಂಸ್ಕೃತಿಯ ಪಕ್ಷವಲ್ಲ. ರಾಜ್ಯದ ಇಂದಿನ ರಾಜಕಾರಣದ ಅಯೋಮಯ ಸ್ಥಿತಿಗೆ ನಿಮ್ಮ ದ್ವಂದ್ವ ಹಾಗೂ ಇಬ್ಬಂದಿತನದ ನಿಲುವೇ ಕಾರಣ. ಇನ್ನು ಫೈವ್ʼಸ್ಟಾರ್ ಸಂಸ್ಕೃತಿ ಬಗ್ಗೆ ರಾಗ ಎಳೆದಿದ್ದಿರಿ? ಫೈವ್ʼಸ್ಟಾರ್ ಹಾಗೂ ಗುಡಿಸಲಿನಿಂದಲೂ ಅಧಿಕಾರ ನಡೆಸಿದ್ದೇನೆ. ಜನತೆಗೆ ನನ್ನಷ್ಟು ಸುಲಭವಾಗಿ ದಕ್ಕುವ ರಾಜಕಾರಣಿ ಮತ್ತೊಬ್ಬರಿಲ್ಲ ಎಂಬುವುದನ್ನು ನೆನಪಿಸಲು ಬಯಸುತ್ತೇನೆ.
ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ವೇಳೆ ಜೆಡಿಎಸ್‌ನ ಜಾತ್ಯತೀತತೆ ಬಹಿರಂಗವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್-ಸಿದ್ದರಾಮಯ್ಯರ ದೃಷ್ಟಿಯಲ್ಲಿ ಜಾತ್ಯತೀತತೆ ಅಂದರೆ ಏನು? ಇದನ್ನು ಈ ವೇಳೆಯಲ್ಲಿ ತಿಳಿಯ ಬಯಸುತ್ತೇನೆ. ಕಾಂಗ್ರೆಸ್ಸಿನ ಅಪವ್ಯಾಖ್ಯಾನದಿಂದಲೇ ಇಂದು ಜಾತ್ಯತೀತೆಯನ್ನು ಅನುಮಾನಿಸಲಾಗುತ್ತಿದೆ.
ಜೆಡಿಎಸ್ʼನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಹೈಕಮಾಂಡ್ ಎಂದು ಹೇಳಿದ್ದಾರೆ ಸಿದ್ದರಾಮಯ್ಯ. ಅಂದರೆ ಹೈಕಮಾಂಡ್‌ನ ನಿರ್ಣಯ ತಮಗೆ ಇಷ್ಟವಿರಲಿಲ್ಲ ಎಂಬುವುದು ಸಿದ್ದರಾಮಯ್ಯ ಅವರ ಮಾತಿನಲ್ಲಿ ಧ್ವನಿಸುತ್ತಿರುವ ಅರ್ಥ. ಹೀಗಾಗಿಯೇ ಸಿದ್ದರಾಮಯ್ಯ ಸರಕಾರ ಕೆಡವಿದರು. ಅದರ ಅಪವಾದ ಬೇರೆಯವರಿಗೆ ಬಳಿದರು.
ಜಾತ್ಯತೀತ ನಿಲುವಿನ ಬಗ್ಗೆ, ದೇವೇಗೌಡರ ಬದ್ದತೆ ಬಗ್ಗೆ ನಾವು ನಿಮ್ಮಿಂದ ಉಪದೇಶ ಕೇಳಬೇಕಿಲ್ಲ. ದೇವೇಗೌಡರ ಬದ್ಧತೆಯನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡಿದ ಕಾಂಗ್ರೆಸ್ ಇವತ್ತು ಜೆಡಿಎಸ್‌ನ ನಿಲುವನ್ನು ಪ್ರಶ್ನಿಸುವ ಯಾವ ನೈತಿಕತೆ ಉಳಿಸಿಕೊಂಡಿದೆ.
ಬಿ.ಸಿ.ಪಾಟೀಲ್‌ಗೂ ಬಿಸಿ
ಕೃಷಿ ಸಚಿವರೇ ರೈತ ಸಮುದಾಯದ ವಿರುದ್ಧ ಎಲುಬಿಲ್ಲದ ನಾಲಿಗೆ ಹರಿ ಬಿಟ್ಟಿರುವುದು ಖಂಡನೀಯ. ರೈತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ಆಗ್ರಹಿಸುತ್ತೇನೆ.
ರೈತ ರಾಜಕಾರಣಿಗಳಂತೆ ಅಧಿಕಾರಕ್ಕಾಗಿ ಬಣ್ಣ ಬದಲಿಸುವ ಗೋಸುಂಬೆ ವ್ಯಕ್ತಿತ್ವದವನಲ್ಲ. ನೆಲವನ್ನೇ ನಂಬಿ ಬದುಕುವ ಕಡು ಕಷ್ಟಜೀವಿ. ಇಂತಹ ರೈತ ಸಮುದಾಯಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ರಟ್ಟೆಗೆ ಬಲ ತುಂಬುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕೇ ಹೊರತು, ಹೇಡಿ ಎಂಬ ಪಟ್ಟ ಕಟ್ಟಿ ಹೊಣೆಗೇಡಿತನ ಪ್ರದರ್ಶಿಸಬಾರದು.
ಹೆಂಡತಿ, ಮಕ್ಕಳು, ನೆಂಟರು, ಊರಿನವರ ಮುಂದೆ ಮರ್ಯಾದೆ ಹೋಯಿತಲ್ಲ ಎಂದು ಸಾವಿಗೆ ಶರಣಾಗುತ್ತಾನೆ. ಹೇಡಿತನದ ಪಟ್ಟ ಕಟ್ಟಿಕೊಳ್ಳಲು ಅಲ್ಲ. ಕೃಷಿ ಸಚಿವರ ಹೇಳಿಕೆ ರೈತ ಸಮುದಾಯಕ್ಕೆ ಮಾಡಿದ ಅಪಮಾನ.
ಬಿಜೆಪಿ ಗ್ರಾಮ ಸ್ವರಾಜ್ಯಕ್ಕೆ ಮೆಚ್ಚುಗೆ
ಗ್ರಾಮ ಪಂಚಾಯ್ತಿ ಚುನಾವಣೆಗಾಗಿ ಬಿಜೆಪಿ ‘ಗ್ರಾಮ ಸ್ವರಾಜ್ಯ’ ಸಮಾವೇಶಗಳನ್ನು ನಡೆಸುತ್ತಿದೆ. ಗಾಂಧೀಜಿ ಪರಿಕಲ್ಪನೆಗೆ ಬಿಜೆಪಿ ಮನ್ನಣೆ ಕೊಟ್ಟಿದ್ದು ಸಂತೋಷದಾಯಕ. ಸಂಘಟನೆ ಉದ್ದೇಶದ ಈ ಸಮಾವೇಶಗಳು ಗ್ರಾಮಗಳನ್ನು ವಿಶ್ವಾಸಕ್ಕೆ ಪಡೆಯುಲು, ಸಮಸ್ಯೆಗಳನ್ನು ಪರಿಹರಿಸಲು ಬಳಕೆಯಾಗಲಿ. ಈ ಮೂಲಕ ಗ್ರಾಮ ಸ್ವರಾಜ್ಯದ ನಿಜ ಉದ್ದೇಶ ಸಾಕಾರವಾಗಲಿ.
‘ಗ್ರಾಮ ಸ್ವರಾಜ್ಯ’ ಸಮಾವೇಶಗಳು ಕೇವಲ ಪಕ್ಷ ಸಂಘಟನೆಗಷ್ಟೇ ಸೀಮಿತವಾದರೆ ಅದು ಸ್ವಾರ್ಥವಾಗುತ್ತದೆ. ಗ್ರಾಮಗಳನ್ನು ಸಶಕ್ತಗೊಳಿಸಲು ಈ ಕಾರ್ಯಕ್ರಮವನ್ನು ಬಿಜೆಪಿ ಬಳಸಿಕೊಂಡಿದ್ದೇ ಆದರೆ, ಗ್ರಾಮ ಸ್ವರಾಜ್ಯದ ಹೆಸರಿಗೆ ಅರ್ಥ ಸಿಗುತ್ತದೆ. ಹಳ್ಳಿ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂಬುದು ನನ್ನ ಅನಿಸಿಕೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಲಿ.
ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಗ್ರಾಮ ಸ್ವರಾಜ್ಯ ಕಾರ್ಯಕ್ರಮಗಳು ನೆರೆ ಪೀಡಿತ ಗ್ರಾಮಗಳನ್ನು ಕೇಂದ್ರೀಕರಿಸುವುದು ಅಗತ್ಯ. ಬಿಜೆಪಿ ನಾಯಕರು ಆ ಗ್ರಾಮಗಳಿಗೆ ಭೇಟಿ ನೀಡಲಿ. ಅಲ್ಲಿನ ಸಮಸ್ಯೆಗಳು, ಮನೆಗಳನ್ನು ಕಳೆದುಕೊಂಡ ನಿರಾಶ್ರಿತರ ಪರದಾಟ, ದುಃಖ ದುಮ್ಮಾನಗಳನ್ನು ಕಣ್ಣಾರೆ ಕಂಡು ಅವರಿಗೆ ಪರಿಹಾರ ಒದಗಿಸಬೇಕೆಂದು ಬಯಸುತ್ತೇನೆ.
ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ
ಬಿಡಿಎಸ್ ಮತ್ತು ಕುಮಾರಸ್ವಾಮಿ ನಡೆಯನ್ನು ರೈತ ಮುಖಂಡ ಕೋಡೊಹಳ್ಳಿ ಚಂದ್ರಶೇಖರ್ ಕಟುವಾಗಿ ಟೀಕಿಸಿದ್ದಾರೆ. ಬುಧವಾರ ಈ ಬಗ್ಗೆ ಮಾತನಾಡಿದ ಅವರು, ಮಂಗಳವಾರ ಮಧ್ಯಾಹ್ನದವರೆಗೂ ಕೇಂದ್ರ ಸರಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿದ್ದ ಜೆಡಿಎಸ್, ಬಳಿಕ ಇದ್ದಕ್ಕಿದ್ದಂತೆ ವರಸೆಯನ್ನು ಬದಲಿಸಿತು. ಮುಖ್ಯಮಂತ್ರಿ ಯಡಿಯೂರಪ್ಪ ಜತೆ ನಿಮ್ಮ ಡೀಲ್ ಎಷ್ಟು ಮೊತ್ತಕ್ಕೆ ಆಗಿದೆ? ಎಷ್ಟು ಜನರನ್ನು ಮಾರಾಟಕ್ಕೆ ಇಟ್ಟಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.