ಬೆಂಗಳೂರು: ಗೋವು ಹತ್ಯೆ ನಿಷೇಧ ಮಸೂದೆಯನ್ನು ಏಕಪಕ್ಷೀಯವಾಗಿ ಮಂಡಿಸಿ ಅಂಗೀಕಾರ ಮಾಡಿಕೊಂಡ ಸರಕಾರದ ನಡವಳಿಕೆಯನ್ನು ಖಂಡಿಸಿ ಗುರುವಾರ ವಿಧಾನಂಡಲ ಕಲಾಪವನ್ನು ಬಹಿಷ್ಕಾರ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.
ಕಲಾಪದ ನಂತರ ಸುದ್ದಿಗಾರರ ಜತೆ ಮಾತನಾಡಿದ ಪ್ರತಿಪಕ್ಷ ಸಿದ್ದರಾಮಯ್ಯ, ಬಿಜೆಪಿ ಸಂಸದೀಯ ಸಂಪ್ರದಾಯವನ್ನು ನಾಶ ಮಾಡಿದೆ. ಪ್ರತಿಪಕ್ಷಗಳ ಜತೆ ಚರ್ಚೆ ಮಾಡದೇ ಈ ಮಸೂದೆಯನ್ನು ನಿಗೂಢವಾಗಿ ಮಂಡಿಸಲಾಗಿದೆ. ಕಲಾಪ ಸಲಹಾ ಸಮಿತಿ ಸಭೆಯಲ್ಲಿಯೂ ತಿಳಿಸದೇ ಮಂಡಿಸಲಾಗಿದೆ. ಅಷ್ಟೇ ಅಲ್ಲ, ಸ್ಪೀಕರ್ ಅವರೂ ವಿಧೇಯಕ ಮಂಡನೆಯ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.
ಈ ವಿಧೇಯಕ ಅತ್ಯಂತ ಸೂಕ್ಷ್ಮವಾದದ್ದು. ಗೋವಿಗೂ ಅರ್ಥ ವ್ಯವಸ್ಥೆಗೂ ಸಂಬಂಧವಿದೆ. ಅರ್ಥ ವ್ಯವಸ್ಥೆಯನ್ನು ನಾಶ ಮಾಡುವಂಥ ಮಸೂದೆ ಇದು. ಸಂಸದೀಯ ವ್ಯವಸ್ಥೆಯನ್ನು, ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಕೃತ್ಯವನ್ನು ಸರಕಾರ ಮಾಡಿದೆ. ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಿರುವವರ ಜತೆ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಗುರುವಾರ ಸದನದ ಕಲಾಪವನ್ನು ಬಹಿಷ್ಕಾರ ಮಾಡುತ್ತದೆ ಎಂದು ಸಿದ್ದು ಹೇಳಿದರು.
ನೀತಿ ಸಂಹಿತೆ ಉಲ್ಲಂಘನೆ
ಗೋವು ಹತ್ಯೆ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದಿರುವುದು ಗ್ರಾಮ ಪಂಚಾಯಿತಿ ಚುನಾವಣೆ ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಅವರು ಸಂಘ ಪರಿವಾರ ಮತ್ತು ಆರೆಸ್ಸೆಸ್ ವಿರುದ್ಧವೂ ಹರಿಹಾಯ್ದರು.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..