ಸಂದರ್ಶನ
ಕೆನಡಾ ಕಂದನಿಗೆ ಕನ್ನಡ ಪಾಠ ಹೇಳುವ ಕನ್ನಡಮ್ಮನ ಜತೆಗೊಂದು ಸಂವಾದ
- ಕರ್ನಾಟಕದಲ್ಲಿಯೇ ಕನ್ನಡ ಕಷ್ಟದಲ್ಲಿದೆ ಎನ್ನುವ ಮಾತು ಇವತ್ತಿನದ್ದಲ್ಲ. ಇನ್ನು ಹೊರ ರಾಜ್ಯ, ಹೊರ ದೇಶದಲ್ಲಿ ನಮ್ಮ ಭಾಷೆಯ ಕಥೆ ಏನು? ಎಂದು ಪ್ರಶ್ನಿಸುವವರಿಗೆ ಸಂಭ್ರಮದ ಸುದ್ದಿಯೊಂದು ದೂರದ ಕೆನಡಾದಿಂದ ಬಂದಿದೆ. ಉದ್ಯೋಗ ನಿಮಿತ್ತ ಆ ದೇಶದಲ್ಲೇ ನೆಲೆಸಿರುವ ಮಹಿಳೆಯೊಬ್ಬರು ತಮ್ಮ ಕಂದನಿಗೆ ನಿತ್ಯವೂ ಕನ್ನಡ ಪಾಠವನ್ನು ತಪಸ್ಸಿನಂತೆ ಮಾಡುತ್ತಿದ್ದಾರೆ. ಅವರ ಹೆಸರು ಕಾವ್ಯಶ್ರೀ ನಾಗರಾಜ್. ಚಿಕ್ಕಬಳ್ಳಾಪುರದ ನಂದಿಬೆಟ್ಟದವರು. ಅವರು ಕೆನಡಾದಿಂದಲೇ ಸಿಕೆನ್ಯೂಸ್ ನೌ ಜತೆ ಮಾತನಾಡಿದ್ದಾರೆ.
ಕೆನಡಾದಲ್ಲಿರುವ ಅಮ್ಮನಿಗೆ ತಮ್ಮ ವೃತ್ತಿಯನ್ನು, ಕುಟುಂಬವನ್ನು ಸರಿದೂಗಿಸಿಕೊಂಡು ಹೋಗುವುದರ ಜತೆಗೆ, ಕಂದನನ್ನು ಸಲುಹಿಕೊಂಡು ಕನ್ನಡ ಕಲಿಸಿಸುವುದು ಕಷ್ಟವಾ ಅಥವಾ ಸುಲಭವಾ?
ಕನ್ನಡ ಕಲಿಸುವುದು ಕಷ್ಟ ಅಲ್ಲವೇ ಅಲ್ಲ. ನಮ್ಮ ಮಾತೃಭಾಷೆ ಕನ್ನಡ. ಮಗವಿಗೆ ನಮ್ಮ ಭಾಷೆಯನ್ನು ಕಲಿಸುವುದು ಕಷ್ಟವೆಂದರೆ, ಬೇರೆ ಭಾಷೆಗಳನ್ನು ಕಲಿಸುವುದಾದರೂ ಹೇಗೆ? ಎಷ್ಟೇ ಕೆಲಸ, ಒತ್ತಡವಿದ್ದರೂ ಕಂದನಿಗೆ ಕನ್ನಡ ಕಲಿಸುವ ಸಂಭ್ರಮ ಬಹಳ ದೊಡ್ಡದು.
ಕೆನಡಾದ ಯಾವ ನಗರದಲ್ಲಿ ನೀವು ನೆಲೆಸಿದ್ದೀರಿ? ನಿಮ್ಮ ಕಂದನಿಗೆ ಕೆನಡಾದ ನಿಮ್ಮ ಮನೆಯಲ್ಲಿ ಕನ್ನಡದ ವಾತಾವರಣ ಇದೆಯಾ? ನೀವು ಮತ್ತು ನಿಮ್ಮ ಪತಿ ಮನೆಯಲ್ಲಿ ಕನ್ನಡವನ್ನೇ ಮಾತನಾಡುತ್ತೀರಾ?
ನಾವು ಕೆನಡಾದ ಹ್ಯಾಲಿಪಾಕ್ಸ್ ನಗರದಲ್ಲಿ ವಾಸಿಸುತ್ತಿದ್ದೇವೆ. ಮನೆಯಲ್ಲಿ ನಮ್ಮ ಭಾಷೆ ಅಪ್ಪಟ ಕನ್ನಡ. ನಿತ್ಯದ ಮಾತು, ಚರ್ಚೆ ಹಾಡು-ಪಾಡು ಎಲ್ಲವೂ ಕನ್ನಡವೇ. ಖುಷಿಯ ಸಂಗತಿ ಏನೆಂದರೆ, ನಮ್ಮ ಮನೆಯ ಸುತ್ತಮುತ್ತ ಹಲವಾರು ಕನ್ನಡ ಕುಟುಂಬಗಳಿವೆ. ನನ್ನ ಮಗ ಶೌರ್ಯನಿಗೆ ಕನ್ನಡ ಮಾತನಾಡುವ ಗೆಳೆಯರೂ ಇದ್ದಾರೆ.
ನಿಮ್ಮ ಪತಿ ಅವರದ್ದೇ ಕೆಲಸದಲ್ಲಿರುತ್ತಾರೆ. ನಿಮಗೆ ಮನೆ ಜವಾಬ್ದಾರಿ ಜತೆಗೆ ನೃತ್ಯಶಾಲೆಯ ಹೊಣೆಯೂ ಇದೆ. ಕಂದನಿಗೆ ಕನ್ನಡ ಕಲಿಸಲು ದಿನಕ್ಕೆ ಎಷ್ಟು ಸಮಯ ಮೀಸಲಿಡುತ್ತೀರಿ? ನಿಮಗೆ ಸಮಯ ಸಿಗುತ್ತಾ?
ಖಂಡಿತವಾಗಿಯೂ ನಮಗೆ ಸಮಯವೇ ಇರುವುದಿಲ್ಲ ಅಥವಾ ಸಿಗುವುದಿಲ್ಲ ಎನ್ನಬಹದುದ. ನನ್ನ ಪತಿ ಶ್ರವಣ್ ಅವರಿಗೆ ನಿತ್ಯವೂ ಆಫೀಸ್ ಕೆಲಸ, ಮೀಟಿಂಗ್ ಅಂತ ತುಂಬಾ ಬಿಝಿ ಇರುತ್ತಾರೆ. ಪ್ರತಿದಿನವೂ ನಾನು ಒಂದು ಗಂಟೆ ನೃತ್ಯಾಭ್ಯಾಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಇದು ತಪ್ಪುವುದಿಲ್ಲ. ಬಳಿಕ, ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಕರ್ನಾಟಕದ ವಿವಿಧ ಊರುಗಳಲ್ಲಿ ಇರುವ ನನ್ನ ಶಿಷ್ಯೆಯರಿಗೆ ಆನ್‌ಲೈನ್ ಮೂಲಕ ನೃತ್ಯಪಾಠ ಹೇಳಿಕೊಡುತ್ತೇನೆ. ಅದಾದ ಮೇಲೆ ಮನೆ ಕೆಲಸ, ಅಡುಗೆ ಇತ್ಯಾದಿ ಮುಗಿಸಿಕೊಂಡು ಸಂಜೆ ಮನೆಯಲ್ಲಿಯೇ ಹ್ಯಾಲಿಫಾಕ್ಸ್‌ನಲ್ಲಿರುವ ನನ್ನ ವಿದ್ಯಾರ್ಥಿಗಳಿಗೆ ನೃತ್ಯಪಾಠ ಹೇಳಿಕೊಡುತ್ತೇನೆ. ಇದೆಲ್ಲ ಆದ ಮೇಲೆ ಕೊನೆಯಪಕ್ಷ ಒಂದು ಗಂಟೆಯನ್ನಾದರೂ ಮಗನಿಗೆ ಕನ್ನಡದ ಪಾಠ ಹೇಳಲು ಮೀಸಲಿಡುತ್ತೇನೆ. ಕಂದನಿಗೆ ಕನ್ನಡ ಹೇಳಿಕೊಡುವುದು ಎಂದರೆ ನನಗೆ ಎಲ್ಲಿಲ್ಲದ ಸಂಭ್ರಮ. ನಾನು ಬಾಲ್ಯದಲ್ಲಿ ಅಪ್ಪ-ಅಮ್ಮನಿಂದ ಕನ್ನಡ ಕಲಿತ ಸಡಗರ ನೆನಪಾಗುತ್ತದೆ. ನನಗೆ ತಿಳಿದ ಮಟ್ಟಿಗೆ ತಾಯಿ ಭಾಷೆ, ಅಂದರೆ; ಮಾತೃಭಾಷೆಯನ್ನು ನಮ್ಮ ಕಂದನಿಗೆ ಕಲಿಸುವುದು ಎಂದರೆ ಮತ್ತೊಮ್ಮೆ ಅಮ್ಮನ ಮಡಿಲಿನಲ್ಲಿ ಆಡಿದಂತೆ ಹಾಗೂ ಇನ್ನೊಮ್ಮೆ ಬಾಲ್ಯ ಬಂದು ಅಪ್ಪನ ಬೆರಳಿಡಿದು ಮತ್ತೆ ಹೆಜ್ಜೆ ಹಾಕಿದಂತೆ. ಆ ಬಾಲ್ಯದ ನೆನಪುಗಳು ಮತ್ತೆ ಮತ್ತೆ ನನ್ನಲ್ಲಿ ಮೂಡುತ್ತಿವೆ.
ನಿಮ್ಮ ಕಂದನಿಗೆ ಕನ್ನಡ ಕಲಿಸಲು ನೀವು ಪಡುತ್ತಿರುವ ಪಡಿಪಾಟಲೆಷ್ಟು? ನಿಮಗೆ ಅದೆಷ್ಟು ಸಂತೋಷ ನೀಡಿದೆ? ನಿಮ್ಮ ಕೆನಡಾ ಕನ್ನಡ ಸಂಭ್ರಮವನ್ನು ವಿವರಿಸುವಿರಾ?
ಪಡಿಪಾಟಲು ಅಂಥದೇನೂ ಅಲ್ಲ. ಅದೊಂದು ಸಂಭ್ರಮ. ನಾನೇ ಮತ್ತೊಮ್ಮೆ ಕನ್ನಡ ಕಲಿತಷ್ಟು ಸಂತೋಷವಾಗುತ್ತದೆ. ಮಗನ ಜತೆ ಮಗುವಾಗಿ ಕನ್ನಡ ಕಲಿಯುತ್ತಿದ್ದೇನೆಯೋ ಎಂದು ಅನಿಸುತ್ತದೆ. ಎಷ್ಟೋ ಮಕ್ಕಳು ಬೆಳಗ್ಗೆಯಿಂದ ರಾತ್ರಿವರೆಗೂ ಮೊಬೈಲ್, ಟೀವಿ ನೋಡುತ್ತಲೇ ಪುಸ್ತಕದ ಕಡೆ ಆಸಕ್ತಿ ತೋರುವುದೇ ಇಲ್ಲ. ಇನ್ನು ಅವರ ತಂದೆ ತಾಯಿಯೋ ಯುಟ್ಯೂಬ್ ನೋಡುವುದೋ ಅಥವಾ ಇನ್ನಾವುದೋ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಇದೆಲ್ಲ ನೋಡುತ್ತಿದ್ದ ನನಗಾಗಲಿ, ನನ್ನ ಪತಿಗಾಗಲಿ ಅದೆಲ್ಲ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ನಮ್ಮ ಮಗುವಿಗೆ ಟೀವಿ, ಮೊಬೈಲ್ ಅಡಿಕ್ಟ್ ಮಾಡಬಾರದು ಎಂದು ದೃಢ ನಿಶ್ಚಯ ಮಾಡಿದೆವು. ನನ್ನ ಮಗ ಶೌರ್ಯನಿಗೆ ಆರು ತಿಂಗಳು ತುಂಬಿದಾಗ ನಾವು ಕೆನಡಾಕ್ಕೆ ಬಂದೆವು. ಏಳು ತಿಂಗಳಿಗೆ ಬಿದ್ದಾಗ ಅವನು ಅಪ್ಪ-ಅಮ್ಮ ಎನ್ನಲು ಶುರು ಮಾಡಿದ. ಕನ್ನಡ ಪಾಠ ಶುರು ಮಾಡಲು ಇದೇ ಸರಿಯಾದ ಸಮಯ ಎಂದು ನಮ್ಮಿಬ್ಬರಿಗೆ ಅನಿಸಿತು. ಹೀಗೆ ಪ್ರತಿದಿನವೂ ಪುಸ್ತಕ, ಜೆತೆಗೆ ಅಟಿಕೆಯಂಥ ಕೆಲ ಪರಿಕರಗಳನ್ನು ಇಟ್ಟುಕೊಂಡು ಪಾಠ ಮಾಡಲು ಶುರು ಮಾಡಿದೆ. ಕೆನಡಾಕ್ಕೆ ಬಂದಾಗ ಕನ್ನಡ ಪುಸ್ತಕಗಳನ್ನು ತರುವುದು ಮರೆತಿದ್ದೆವು. ಕೆನಡಾದಲ್ಲೆಲ್ಲೂ ಕನ್ನಡ ಪುಸ್ತಕಗಳು ಸಿಗುವುದೇ ಇಲ್ಲ. ಕೊನೆಗೆ ಸ್ನೇಹಿತರೊಬ್ಬರ ಮೂಲಕ ಕರ್ನಾಟಕದಿಂದ ಮಗನಿಗೆ ಬೇಕಾದ ಕನ್ನಡ ಪುಸ್ತಕಗಳನ್ನು ತರಿಸಿಕೊಂಡೆವು. ಆ ಪುಸ್ತಕಗಳೆಂದರೆ ಅವನಿಗೂ ಅಚ್ಚುಮೆಚ್ಚು. ನಮಗೂ ಅವನ ಕನ್ನಡ ಕಲಿಕೆ, ಕನ್ನಡ ಮಾತುಗಳು ಬಹಳ ಸಂಭ್ರಮ ಉಂಟು ಮಾಡುತ್ತವೆ.
ಬಹಳಷ್ಟು ಅಮ್ಮಂದಿರಿಗೆ ತಮ್ಮ ಮಕ್ಕಳು ಮೊದಲು ಇಂಗ್ಲಿಷ್ ಕಲಿಯಲಿ, ಕನ್ನಡ ಹೇಗೋ ಬರುತ್ತದೆ ಎಂಬ ಭಾವನೆ ಇರುತ್ತದೆ. ಹಾಗಿದ್ದರೆ, ನಿಮ್ಮ ಮಟ್ಟಿಗೆ ಕನ್ನಡಕ್ಕೆಷ್ಟು ಮಹತ್ವ ಕೊಡಬೇಕು. ಹಾಗೆಯೇ ಇಂಗ್ಲಿಷ್‌ಗೆಷ್ಟು ಪ್ರಾಮುಖ್ಯತೆ ಕೊಡಬೇಕು?
ಮಕ್ಕಳಿಗೆ ಹಾಗೂ ತಂದೆ-ತಾಯಂದಿರಿಗೆ ಪರಸ್ಪರ ಒಬ್ಬರಿಗೊಬ್ಬರು ಸಂಪೂರ್ಣವಾಗಿ ಸಿಗುವುದೇ ಮೊದಲ ಮೂರು ವರ್ಷ ಮಾತ್ರ. ಆ ಮೂರು ವರ್ಷ ಕಳೆದ ಮೇಲೆ ಮಕ್ಕಳು ಶಾಲೆಗೆ ಹೋಗುತ್ತಾರೆ. ಶಾಲೆಗೆ ಹೋದ ನಂತರ ಹೇಗೂ ಮಕ್ಕಳು ಇಂಗ್ಲಿಷ್ ಕಲಿಯುತ್ತಾರೆ. ಆದ್ದರಿಂದ ನಮ್ಮ ಕನ್ನಡವನ್ನು ಮೊದಲ ಮೂರು ವರ್ಷಗಳಲ್ಲಿ ಕಲಿಸಲು ಯತ್ನಿಸಬೇಕು. ತಾಯಿಯ ಮೂಲಕವೇ ತಾಯಿಭಾಷೆ ಪ್ರತೀ ಮಗುವಿಗೆ ಹೋಗಬೇಕು. ಆಗ ಮಾತ್ರ ನಮ್ಮ ಭಾಷೆ ಉಳಿಯುತ್ತದೆ. ಇದಲ್ಲದೆ, ಮನೆಯಲ್ಲಿರುವ ಅಜ್ಜ-ಅಜ್ಜಿ, ಸಂಬಂಧಿಕರು, ಗುರು ಹಿರಿಯರು ಕನ್ನಡದಲ್ಲೇ ಮಾತನಾಡಿಸಿದಾಗ ಮಕ್ಕಳೂ ಕನ್ನಡದಲ್ಲೇ ಮಾತನಾಡಲು ಯತ್ನಿಸುತ್ತಾರೆ. ಒಂದು ವೇಳೆ ಮಾತೃಭಾಷೆಯಲ್ಲಿ ಮಕ್ಕಳಿಗೆ ಸರಿಯಾಗಿ ಸ್ಪಂದಿಸದಿದ್ದರೆ ಆ ಮಕ್ಕಳು ಸರಿಯಾಗಿ ಬೆಳೆಯಲಾರರು. ಆ ಬಾಂಧವ್ಯವೂ ಹಾಗೆಯೇ ಕಳೆದುಹೋಗುತ್ತದೆ. ಆದ್ದರಿಂದ ಕನ್ನಡ ಕಲಿಸಲೇಬೇಕು. ಇನ್ನು ಪ್ರತೀ ದಿನವೂ ಚಿಕ್ಕಬಳ್ಳಾಪುರದ ನಂದಿಯಲ್ಲಿರುವ ನನ್ನ ತಂದೆ-ತಾಯಿ ಜತೆ ಶೌರ್ಯ ಕನ್ನಡದಲ್ಲಿಯೇ ಮಾತನಾಡುತ್ತಾನೆ. ಅದು ಅವನ ಅಜ್ಜ-ಅಜ್ಜಿಗೆ ಬಹಳ ಇಷ್ಟವಾಗುತ್ತದೆ. ದೂರದ ಕೆನಡಾದಲ್ಲಿರುವ ಮೊಮ್ಮಗ ಕನ್ನಡದಲ್ಲಿ ಮಾತನಾಡುವುದು ಅವರಿಗೂ ಸಂಭ್ರಮದ ಸಂಗತಿ.
ಕೆನಡಾ ಕಂದನ ಕನ್ನಡ ಕಲಿಕೆ ಹೊತ್ತಿನಲ್ಲಿ ಆಟಪಾಠ..
ಕೆನಡಾದಲ್ಲಿ ನಿತ್ಯವೂ ನಿಮ್ಮ ಲೈಫಿನಲ್ಲಿ ಕನ್ನಡ ಹೇಗಿರುತ್ತದೆ? ಅಲ್ಲೂ ಕನ್ನಡ ಕಲಿಸುವ ವ್ಯವಸ್ಥೆ, ಮನೆಶಾಲೆ ಇತ್ಯಾದಿ ಏನಾದರೂ ಇದೆಯಾ?
ಇಲ್ಲಿ ಕನ್ನಡ ಕಲಿಸುವ ಯಾವ ವ್ಯವಸ್ಥೆಯೂ ಇಲ್ಲ. ಆದರೆ, ಕನ್ನಡಿಗರು ಇದ್ದಾರೆ. ಮನೆಯೇ ಮೊದಲ ಶಾಲೆ, ತಾಯಿಯೇ ಮೊದಲ ಗುರು ಎಂಬ ನಮ್ಮ ಪರಂಪರಾಗತ ನಂಬಿಕೆಯಂತೆ ನಮ್ಮ ಮಗುವಿಗೆ ಮನೆಯಲ್ಲೇ ಕನ್ನಡದ ಆಭ್ಯಾಸ ಮಾಡಿಸುತ್ತಿದ್ದೇವೆ. ಇದರಲ್ಲಿ ನನ್ನ ಪತಿ ಶ್ರವಣ್ ಅವರ ಪಾತ್ರ ಬಹಳ ದೊಡ್ಡದು. ವೃತ್ತಿಯಲ್ಲಿ ಐಟಿ ಉದ್ಯಮಿಯಾದ ಅವರು ನನ್ನ ನೃತ್ಯಕ್ಕೆ ಹಾಗೂ ಮಗನಿಗೂ ತುಂಬಾ ಪ್ರೋತ್ಸಾಹ, ಬೆಂಬಲ ನೀಡುತ್ತಾರೆ. ಈಗ ನನ್ನ ಮಗನಿಗೆ ವರ್ಷದ ಮೇಲೆ ಹನ್ನೊಂದು ತಿಂಗಳು ವಯಸ್ಸು. ದಿನದಿಂದ ದಿನಕ್ಕೆ ಅವನ ಕನ್ನಡವೂ ಬೆಳೆಯುತ್ತಿದೆ.
photos: kavyashree nagaraj
***
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
ಕಾವ್ಯಶ್ರೀ ನಾಗರಾಜ್ ಯಾರು?
- ಇವರು ಅಂತಾರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ನೃತ್ಯ ಕಲಾವಿದೆ. ಸಾಕಷ್ಟು ಹೆಸರು ಮಾಡಿದ್ದಾರೆ. ಸದ್ಯಕ್ಕೆ ತಮ್ಮ ಪತಿ ಶ್ರವಣ್ ಜತೆ ಕೆನಡಾದ ಹ್ಯಾಲಿಫಾಕ್ಸ್ ನಗರದಲ್ಲಿ ನೆಲೆಸಿದ್ದಾರೆ. ಜಗತ್ಪ್ರಸಿದ್ಧ ನಂದಿ ಗಿರಿಧಾಮದಲ್ಲಿರುವ ಶ್ರೀ ಯೋಗ ನಂದೀಶ್ವರ ದೇಗುಲದ ಪ್ರಧಾನ ಅರ್ಚಕ, ನಾಡಿನ ಹೆಸರಾಂತ ನಾರು-ಬೇರು ಕಲಾವಿದ ಟಿ.ಎನ್.ನಾಗರಾಜ್-ಭಾಗ್ಯಲಕ್ಷ್ಮೀ ದಂಪತಿಯ ಪುತ್ರಿ. ತಮ್ಮ ನೃತ್ಯಸಂಸ್ಥೆ ʼಕಾವ್ಯಶ್ರೀ ಆರ್ಟ್ ಫೌಂಡೇಷನ್ʼ ಮೂಲಕ ಕರ್ನಾಟಕದ 60 ಮಕ್ಕಳಿಗೆ ಅನ್‌ಲೈನ್ ಮೂಲಕ ಹಾಗೂ ಕೆನಡಾದ ತಮ್ಮ ನೃತ್ಯ ಶಾಲೆಯಲ್ಲಿ 20 ವಿದ್ಯಾರ್ಥಿಗಳಿಗೆ ನೃತ್ಯಪಾಠ ಮಾಡುತ್ತಿದ್ದಾರೆ.