ಬೆಂಗಳೂರು: ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶಲ್ಲಿರುವ ತೈವಾನ್ ಮೂಲದ ವಿಸ್ಟ್ರಾನ್ ಕಾರ್ಖಾನೆಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಿಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗೆ ಐಟಿ, ಬಿಟಿ ಮತ್ತು ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೂಚನೆ ನೀಡಿದ್ದಾರೆ.

ಡಾ.ಸಿ.ಎನ್. ಅಶ್ವತ್ಥನಾರಾಯಣ
ಈ ಬಗ್ಗೆ ಟ್ವೀಟ್ ಮಾಡಿ ತಿಳಿಸಿರುವ ಅವರು, “ಕಾರ್ಖಾನೆಯಲ್ಲಿ ನಡೆದ ಘಟನೆ ಖಂಡನೀಯ. ಕೋಲಾರದ ಪೊಲೀಸ್ ವರಿಷ್ಠಾಧಿಕಾರಿ ಅವರಲ್ಲಿ ಈ ಘಟನೆಯ ಬಗ್ಗೆ ಚರ್ಚಿಸಿ, ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ. ಜತೆಗೆ, ಐಟಿ-ಬಿಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್ ಅವರೊಂದಿಗೆ ಕೂಡಾ ಈ ಬಗ್ಗೆ ಚರ್ಚಿಸಿದ್ದೇನೆ. ಪರಿಸ್ಥಿತಿಯನ್ನು ಸುಧಾರಿಸಲು ನಮ್ಮ ಸರಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಶೀಘ್ರದಲ್ಲೇ ಸಮಸ್ಯೆಯನ್ನು ಪರಿಹರಿಸಲಿದೆ. ನೌಕರರ ಬೇಡಿಕೆಗಳು-ಅಹವಾಲುಗಳಿಗೆ ಸೂಕ್ತವಾಗಿ ಸ್ಪಂದಿಸಿ, ಅವರ ಹಕ್ಕುಗಳನ್ನು ರಕ್ಷಿಸಲಾಗುವುದು. ಬಾಕಿ ಉಳಿದ ವೇತನವನ್ನು ಪಾವತಿ ಮಾಡಲಾಗುವುದು.” ಎಂದು ಹೇಳಿದ್ದಾರೆ.
ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣದಲ್ಲಿದ್ದು, ಆದಷ್ಟು ಬೇಗ ಬಿಕ್ಕಟ್ಟು ಬಗೆಹರಿಯುತ್ತದೆ. ಈ ಬಗ್ಗೆ ಸಂಬಂಧಪಟ್ಟ ಎಲರ ಜತೆ ಮಾತನಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂಥ ಘಟನೆ ನಡೆಯಬಾರದಿತ್ತು. ದುರದೃಷ್ಟಕರ ಘಟನೆ. ಯಾರೂ ಇಂಥ ಘಟನೆಯನ್ನು ಒಪ್ಪಲು ಸಾಧ್ಯವಿಲ್ಲ ಹಾಗೂ ಸಹಿಸುವ ಪ್ರಶ್ನೆಯೂ ಇಲ್ಲ. ಆ ಕಾರ್ಖಾನೆಯ ವಿರುದ್ಧ ದಾಳಿ ನಡೆಸಿ ಅದರ ಆಸ್ತಿ ನಷ್ಟಕ್ಕೆ ಕಾರಣವಾಗಿರುವ ಕಾರ್ಮಿಕರೇ ಇರಲಿ, ಇನ್ನು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಜತೆಗೆ, ಇಡೀ ಘಟನೆಗೆ ಕಾರಣವೇನು? ಕಾರ್ಮಿಕರು ಯಾಕೆ ಆಕ್ರೋಶಕ್ಕೆ ಒಳಗಾದರು? ಬೆಳಗ್ಗೆ ಪಾಳಿ ಬದಲಾವಣೆ ಹೊತ್ತಿನಲ್ಲಿ ಸೃಷ್ಟಿಯಾದ ಪರಿಸ್ಥಿತಿ ಏನು? ಯಾರಾದರೂ ಪ್ರಚೋದನೆ ಮಾಡಿದ್ದರಾ ಎಂಬಿತ್ಯಾದಿ ಸಂಗತಿಗಳ ಬಗ್ಗೆಯೂ ವಿಚಾರಣೆ ಮತ್ತು ತನಿಖೆ ನಡೆಯುತ್ತಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಕಾರ್ಮಿಕರಿಗೆ ವೇತನ ನೀಡಿಲ್ಲ ಅಥವಾ ವೇತನ ಕಡಿತ ಮಾಡಿ ನೀಡಲಾಗುತ್ತಿತ್ತು ಎಂಬ ಅಂಶಗಳ ಬಗ್ಗೆಯೂ ವಿಚಾರಣೆ ನಡೆಸಲಾಗುವುದು. ಕಾರ್ಮಿಕರಿಗೆ ಅಂಥ ಸಮಸ್ಯೆ ಇದ್ದರೆ ಕಾರ್ಮಿಕ ಆಯುಕ್ತರಿಗೆ ದೂರು ನೀಡಬಹುದಿತ್ತು ಅಥವಾ ಜಿಲ್ಲಾಧಿಕಾರಿಗೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವ ಇಂಥ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಸುಮಾರು ಎಂಟು ಸಾವಿರ ಜನ ಕೆಲಸ ಮಾಡುವ ವಿಸ್ಟ್ರಾನ್ ಕಂಪನಿಯಲ್ಲಿ ಬೆಳಗ್ಗೆ ೫.೩೦ ಗಂಟೆ ಹೊತ್ತಿನಲ್ಲಿ ಪಾಳಿ ಬದಲಾವಣೆ ಸಮಯದಲ್ಲಿ ಗಲಾಟೆ ನಡೆದಿದೆ. ಕಾರ್ಮಿಕರು ಕಾರ್ಖಾನೆಗೆ ಹಾನಿ ಉಂಟು ಮಾಡಿ, ಕಟ್ಟಡಕ್ಕೆ ಬೆಂಕಿ ಹಚ್ಚಿದ್ದರು. ವಾಹನಗಳನ್ನು ಸುಟ್ಟು ಹಾಕಿದ್ದರು. ಇದರಿಂದ ಕೈಗಾರಿಕಾ ಪ್ರದೇಶದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿತ್ತು.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
















