ಬೆಂಗಳೂರು: ನಾಡಿಗೆ, ಜಗತ್ತಿಗೆ ತಮ್ಮ ಸತ್ಸಂಗ ಮತ್ತು ಪ್ರವಚನಗಳ ಮೂಲಕವೇ ಬೆಳಕನ್ನು ತೋರುತ್ತಿದ್ದ ಡಾ. ಬನ್ನಂಜೆ ಗೋವಿಂದಾಚಾರ್ಯರು ಇನ್ನಿಲ್ಲ.
ವಿದ್ವಾಂಸ, ವಾಗ್ಮಿಯೂ ಆಗಿದ್ದ ಆಚಾರ್ಯರು ಇನ್ನಿಲ್ಲ ಎಂಬ ಸುದ್ದಿ ಅವರ ಅನುಯಾಯಿಗಳು, ಶಿಷ್ಯಕೋಟಿಯಲ್ಲಿ ಅಗಾಧ ಶೋಕವನ್ನು ಉಂಟು ಮಾಡಿದೆ. ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದ ಅವರು ಅಧ್ಯಾತ್ಮ ಚಿಂತನೆಗಳ ಪ್ರಖರ ವಾಗ್ಮಿ ಆಗಿದ್ದರಲ್ಲದೆ, ತಮ್ಮ ಸತ್ಸಂಗಗಳ ಮೂಲಕ ಲಕ್ಷಾಂತರ ಜನರನ್ನು ಸನ್ಮಾರ್ಗದತ್ತ ಹೊರಳಿಸುವಲ್ಲಿ ಯಶಸ್ವಿಯಾಗಿದ್ದವರು.
ಬನ್ನಂಜೆ ಅವರು ಭಾನುವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿರುವ ತಮ್ಮ ಮನೆಯಲ್ಲಿಯೇ ನಿಧನರಾಗಿದ್ದಾರೆ. ಅವರಿಗೆ 84 ವರ್ಷವಾಗಿತ್ತು. ನಾಲ್ವರು ಪುತ್ರಿಯರನ್ನು, ಅಪಾರ ಶಿಷ್ಯಕೋಟಿಯನ್ನು ಅವರು ಅಗಲಿದ್ದಾರೆ.
ʼಇರವು ಸಂಪತ್ತಲ್ಲ, ಇರವಿನ ಅರಿವು ಸಂಪತ್ತುʼ ಎಂದು ಜನತೆಗೆ ಬೋಧಿಸಿದ್ದ ಬನ್ನಂಜೆ ಅವರು, ತಾನು ಯಾರು? ಯಾತಕ್ಕಾಗಿ ಈ ಭೂಮಿಗೆ ಬಂದದ್ದು ಎಂಬ ಅರಿವು ಸದಾ ಇರಬೇಕು. ಅಂಥ ಅರಿವಿನ ಲೋಕದಲ್ಲಿ ನಾವೆಲ್ಲರೂ ಇರುವಂತಾಗಬೇಕು ಎಂದು ಎಂದು ಸದಾ ಹೇಳುತ್ತಿದ್ದರು.
ಮಾಧ್ವ ತತ್ತ್ವವನ್ನು ಅತ್ಯಂತ ಸರಳವಾಗಿ ಜನಸಾಮಾನ್ಯರಿಗೂ ದಾಟಿಸುತ್ತಿದ್ದ ಬನ್ನಂಜೆ, ಕ್ಲಿಷ್ಟ ಜಿಜ್ಞಾಸೆಗಳನ್ನು ನಿರಾಯಾಸವಾಗಿ ಬಿಡಿಸಿ ಹೇಳುತ್ತಿದ್ದರು. ದೈವ, ನಂಬಿಕೆ, ಆಚರಣೆ, ನಂಬಿಕೆ ಇತ್ಯಾದಿಗಳ ಬಗ್ಗೆ ಜನರಲ್ಲಿ ಮೂಡುತ್ತಿದ್ದ ನೂರಾರು ಬಗ್ಗೆ ಪ್ರಶ್ನಾವಳಿಗಳನ್ನು ಅವರು ಬಿಡಿಸಿ ಹೇಳಿ ಸುಲಭವಾಗಿ ಅರ್ಥ ಮಾಡಿಸುತ್ತಿದ್ದರು.
ಉಡುಪಿಯವರು, ಜಗತ್ತಿಗೆ ಸಂದವರು
ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ 1936ರಲ್ಲಿ ಜನಿಸಿದ್ದ ಬನ್ನಂಜೆ ಅವರು, ಮಾಧ್ವ ತತ್ತ್ವಸಾರದ ಅಪರೂಪದ ಮಾಣಿಕ್ಯ. ಅಪಾರ ಪಾಂಡಿತ್ಯ ಅವರದ್ದಾಗಿತ್ತು. ಕನ್ನಡ, ಸಂಸ್ಕೃತ ಸೇರಿ ಹಲವು ಭಾಷೆಗಳಲ್ಲಿ ಅವರಿಗೆ ಸಾಗರದಷ್ಟು ಜ್ಞಾನವಿತ್ತು ಎಂದು ಹೇಳುತ್ತಾರೆ ಅವರನ್ನು ನಿಕಟವಾಗಿ ಬಲ್ಲವರು. ವೇದ, ಉಪನಿಷತ್, ಶಟ ರುದ್ರಿಯಾ, ಬ್ರಹ್ಮಸೂತ್ರ ಭಾಷ್ಯ, ಗೀತಭಾಷ್ಯ ಮುಂತಾದವುಗಳನ್ನು ಆಳವಾಗಿ ಅಧ್ಯಯನ ಮಾಡಿಕೊಂಡಿದ್ದರು. ಹೀಗಾಗಿಯೇ ಅವರ ಸತ್ಸಂಗಗಳೆಂದರೆ ಜನರಿಗೆ ಬಹಳಷ್ಟು ಇಷ್ಟವಾಗುತ್ತಿದ್ದವು. ತಮಗೆ ಗೊತ್ತಿಲ್ಲದ ಅದೆಷ್ಟೋ ವಿಷಯಗಳು ಆಚಾರ್ಯರಿಂದ ತಿಳಿಯುತ್ತವೆ ಎಂದು ನಂಬಿದ್ದರು. ಜನರ ಈ ನಂಬಿಕೆ ಎಂದೂ ಹುಸಿಯಾಗಿರಲಿಲ್ಲ. ರಾಜ್ಜ, ದೇಶ ಮತ್ತು ಜಗನಾದ್ಯಂತ ಅವರ ಮಾತುಗಳು ಬೆಳಕು ಚೆಲ್ಲಿದ್ದವು.
ಜ್ಞಾನದ ಶಿಖರ, ವಿಚಾರ ಪ್ರಖರ
ಅಧ್ಯಯನ, ಬರವಣಿಗೆ ಹಾಗೂ ವಿಚಾರ ಮಂಡನೆ, ಬನ್ನಂಜೆ ಅವರ ಸಾಧನೆಗಳು. ಅವರ ವಿಚಾರಗಳು ಅದೆಷ್ಟು ಪ್ರಖರವೋ ಅವರ ಬರವಣಿಗೆಗಳು ಕೂಡ ಅಷ್ಟೇ ಮೌಲಿಯುತವಾಗಿವೆ. ರಾಮಾಯಣ ಮತ್ತು ಮಹಾಭಾರತದ ಪ್ರತಿ ಮಜಲಿನ ಬಗ್ಗೆಯೂ ಅವರು ಸರಿಗಟ್ಟಲಾಗದ ಜ್ಞಾನಕೋಶವಾಗಿದ್ದರು. ಜತೆಗೆ; ವೇದ ಭಾಷ್ಯ, ಉಪನಿಷತ್ ಭಾಷ್ಯ, ಮಹಾಭಾರತ, ಪುರಾಣ ಇತ್ಯಾದಿಗಳ ಕುರಿತಂತೆ ಅಪಾರ ಅಧ್ಯಯನ ಮಾಡಿದ್ದರು. ʼಸಂಸ್ಕೃತ ವ್ಯಾಖ್ಯಾಯನʼವು ಬನ್ನಂಜೆ ಅವರು ಸೃಷ್ಟಿಸಿದ ನಾಲ್ಕು ಸಾವಿರ ಪುಟಗಳಿಗೂ ಮಿಕ್ಕ ಪರಮಶ್ರೇಷ್ಠ ಬರಹ, ಹಾಗೆಯೇ, 150ಕ್ಕೂ ಕೃತಿಗಳನ್ನು ಅವರು ರಚನೆ ಮಾಡಿದ್ದಾರೆ.
ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಪೈಕಿ, ಬಾಣಭಟ್ಟನ ಕಾದಂಬರಿ,
ಕಾಳೀದಾಸನ ಶಾಕುಂತಲಾ, ಶೂದ್ರಕನ ʼಮೃಚ್ಛಕಟಿಕʼ ಮುಖ್ಯವಾದವು.