ಬೆಂಗಳೂರು: 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವಂಥ ಅಂಶಗಳಿರುವ ಪಠ್ಯವನ್ನು ಕೂಡಲೇ ತೆಗೆದು ಹಾಕುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್.ಸುರೇಶ್ ಕುಮಾರ್ ಸಾರ್ವಜನಿಕ ಶಿಕ್ಷಣ ಇಲಾಖೆ ಅಯುಕ್ತರಿಗೆ ಸೂಚನೆ ನೀಡಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ರೂಪುಗೊಂಡಿರುವ, ಸದ್ಯಕ್ಕೆ ಮಕ್ಕಳು ವ್ಯಾಸಂಗ ಮಾಡುತ್ತಿರುವ 6ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ ಪಾಠ-7ರಲ್ಲಿರುವ ಅಂಶಗಳನ್ನು ಇದೀಗ ತೆಗೆದುಹಾಕುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.
ಈ ಪಠ್ಯಭಾಗವು ಬ್ರಾಹ್ಮಣರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ರಾಜ್ಯ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ದೂರಿತ್ತು. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಮನವಿ ಸಲ್ಲಿಸಿತ್ತು. ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಪಠ್ಯವನ್ನು ತೆಗೆದು ಹಾಕುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ ಎಂದು ಗುರುವಾರ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಪಾಠ 7ರ ಪಠ್ಯದಲ್ಲಿದ್ದ ಭಾಗದ ಸಾರ
ಹೊಸ ಧರ್ಮಗಳು ಏಕೆ ಉದಯಿಸಿದುವು?
ಉತ್ತರ ವೇದಗಳ ಕಾಲದಲ್ಲಿ ವೈದಿಕ ಆಚರಣೆಗಳಾದ ಯಾಗ, ಯಜ್ಞಗಳ ಹೆಸರಿನಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. ಇದರಿಂದ ಆಹಾರದ ಉತ್ಪಾದನೆಯು ಕುಂಠಿತವಾಯಿತು. ಅಷ್ಟು ಮಾತ್ರವಲ್ಲ ಯಾಗ, ಯಜ್ಞಗಳಲ್ಲಿ ಆಹಾರಧಾನ್ಯ, ಹಾಲು, ತುಪ್ಪಗಳನ್ನು ʼಹವಿಸ್ಸುʼ ಎಂದು ದಹಿಸಲಾಗುತ್ತಿತ್ತು. ಪರಿಣಾಮವಾಗಿ ಆಹಾರದ ಅಭಾವ ಕೂಡ ಸೃಷ್ಟಿಯಾಯಿತು. ಇನ್ನೊಂದು ಕಡೆ ವೈದಿಕ ಆಚರಣೆಗಳಾದ ಯಾಗ, ಯಜ್ಞ ಮೊದಲಾದ ಆಚರಣೆಗಳಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿತ್ತು. ಈ ದುಬಾರಿ ಆಚರಣೆಗಳು ಜನ ಸಾಮಾನ್ಯರಿಗೆ ಸಾಧ್ಯವಿರಲಿಲ್ಲ. ಈ ಆಚರಣೆಗಳನ್ನು ಸಂಸ್ಕೃತ ಮಂತ್ರಗಳ ಮೂಲಕ ನಡೆಸಲಾಗುತ್ತಿತ್ತು. ಸಂಸ್ಕೃತ ಪುರೋಹಿತ ಭಾಷೆಯಾದ್ದರಿಂದ ಅದು ಜನ ಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಜನ ಸಾಮಾನ್ಯರ ಭಾಷೆಯಲ್ಲಿಯೇ ಸರಳಮಾರ್ಗಗಳ ಮೂಲಕ ಮುಕ್ತಿ ತೋರುವ ಹೊಸ ಧರ್ಮಗಳನ್ನು ಜನರು ಅಪೇಕ್ಷಿಸುತ್ತಿದ್ದರು. ಮತ್ತೊಂದು ಕಡೆ ಉತ್ತರ ವೇದಗಳ ಕಾಲದಲ್ಲಿ ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆ ಆರಂಭವಾಯಿತು. ಇದು ಸಮಾಜದಲ್ಲಿ ತಾರತಮ್ಯಕ್ಕೂ ಎಡೆಮಾಡಿತು. ಸಮಾಜದಲ್ಲಿ ಬ್ರಾಹ್ಮಣರೆಂದು ಕರೆಯಲ್ಪಡುತ್ತಿದ್ದ ಪುರೋಹಿತ ವರ್ಗವು ಹಲವು ಸವಲತ್ತುಗಳನ್ನು ಹೊಂದಿತ್ತು. ಇದೇ ಕಾಲದಲ್ಲಿ ಕ್ಷತ್ರಿಯರು ಕೂಡ ಪ್ರಾಬಲ್ಯಕ್ಕೆ ಬರಲಾರಂಭಿಸಿದರು. ಪರಿಣಾಮವಾಗಿ ನಂತರದ ಕಾಲದಲ್ಲಿ ಹಲವು ಗಣರಾಜ್ಯಗಳು ಉದಯಿಸಿದವು. ಈ ಗಣರಾಜ್ಯಗಳ ಕ್ಷತ್ರಿಯರು ಬಹು ಸವಲತ್ತನ್ನು ಹೊಂದಿದ್ದ ಬ್ರಾಹ್ಮಣರಿಗೆ ಪ್ರತಿಯಾಗಿ ಹೊಸ ಧರ್ಮಗಳ ಉದಯಕ್ಕೆ ಕಾರಣರಾದರು. ಇವೆಲ್ಲವುಗಳ ಪರಿಣಾಮವಾಗಿ 2600 ವರ್ಷಗಳ ಹಿಂದೆ ಗಂಗಾ ಬಯಲಿನಲ್ಲಿ ಸುಮಾರು 62 ಹೊಸ ಧರ್ಮಗಳು ಉದಯಿಸಿದವು. ಅವುಗಳಲ್ಲಿ ಜೈನಧರ್ಮ ಮತ್ತು ಬೌದ್ಧ ಧರ್ಮಗಳು ಪ್ರಮುಖವಾದವು. ಭೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧ ಹಾಗೂ ಜೈನ ಧರ್ಮದ ಪ್ರಮುಖ ತೀರ್ಥಂಕರ ವರ್ಧಮಾನ ಮಹಾವೀರ. ಈ ಇಬ್ಬರೂ ಕೂಡ ಗಣರಾಜ್ಯಗಳ ಕುಲಗಳಿಗೆ ಸೇರಿದ ಕ್ಷತ್ರಿಯರು.
*ಈ ಮೇಲಿನ ಪಠ್ಯಸಾರಕ್ಕೆ ಬ್ರಾಹ್ಮಣರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 1ರಿಂದ 10ನೇ ತರಗತಿಗಳ ಸಮಾಜ ವಿಜ್ಞಾನದ ಪಠ್ಯದಲ್ಲಿ ಇಂಥ ಆಕ್ಷೇಪಾರ್ಹ ಅಂಶಗಳಿದ್ದರೆ ಅವುಗಳನ್ನು ತೆಗೆಯಬೇಕೆಂದು ಒತ್ತಾಯ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅಧ್ಯಯನ ಮಾಡಲು ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಈ ಸಮಿತಿಯಲ್ಲಿ ಶಿಕ್ಷಕರು ಮತ್ತು ವಿಷಯ ತಜ್ಞರಿದ್ದು 15 ದಿನಗಳಲ್ಲಿ ವರದಿ ನೀಡುವಂತೆ ಕೋರಲಾಗಿದೆ. ಈ ವರದಿ ಬಂದ ಬಳಿಕ ಯಾವುದೇ ಪಠ್ಯದಲ್ಲಿ ಆಕ್ಷೇಪಾರ್ಹ ಅಂಶಗಳಿದ್ದರೆ ಅದರ ಪರಾಮರ್ಶೆಗೆ ತಜ್ಞರ ಸಮಿತಿಯನ್ನೂ ನೇಮಕ ಮಾಡಲಾಗುವುದು ಎಂದಿದ್ದಾರೆ ಅವರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಪಠ್ಯವನ್ನು ಪರಿಷ್ಕರಣೆ ಮಾಡಲಾಗಿಲ್ಲ. ಹಳೆಯ ಪಠ್ಯ ತೆಗೆಯುವುದಾಗಲಿ ಅಥವಾ ಹೊಸ ಪಠ್ಯವನ್ನು ಸೇರಿಸುವುದಾಗಲಿ ಮಾಡಿಲ್ಲ. ಇನ್ನು ಹಳೆಯ ಪಠ್ಯದಲ್ಲಿ ಯಾರ ಭಾವನೆಗಳಿಗಾದರೂ ನೋವಾಗುವಂಥ ಅಂಶಗಳಿದ್ದರೆ ಗಮನ ಹರಿಸಲಾಗುವುದು ಎಂದು ಅವರು ಸುರೇಶ ಕುಮಾರ್ ಹೇಳಿದ್ದಾರೆ.
- ಮೇಲಿನ ಹೋಮದ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗಿದೆ. / courtesy: Wikipedia