- ಕಾರ್ಯಕರ್ತರಾಗಿ ಜನರ ನಡುವೆ ಇರಬೇಕಿದ್ದ ಕಮ್ಯುನಿಸ್ಟರು ಅಧಿಕಾರದ ರುಚಿಗೆ ಬಿದ್ದು ಹೇಗೆ ಪತನವಾದರೋ ಅದೇ ದಾರಿಯಲ್ಲಿ ಬಿಜೆಪಿಗರೂ ನಿಂತಿದ್ದಾರಾ? ಭಾರತೀಯ ಕಾರ್ಮಿಕ ಸಂಘದ ನಾಯಕ ಹಾಗೂ ಸ್ವದೇಶೀ ಜಾಗರಣ್ ಮಂಚ್, ಭಾರತೀಯ ಮಜ್ದೂರ್ ಸಂಘ್, ಭಾರತೀಯ ಕಿಸಾನ್ ಸಂಘ್‌ಗಳ ಸಂಸ್ಥಾಪಕ ದತ್ತೋಪಂತ ಠೇಂಗಡಿ ಹೇಳಿದ್ದ ಕಿವಿಮಾತುಗಳನ್ನು ಕಮಲಪಡೆ ಕಾರ್ಯಕರ್ತರು ಮರೆತಿದ್ದಾರಾ? ಹಾಗಾದರೆ, ದತ್ತೋಪಂತರು ಹೇಳಿದ್ದೇನು? ಇವತ್ತಿನ ಬಿಜೆಪಿಗೆ ಅವರ ಮಾತುಗಳು ಏಕೆ ಮುಖ್ಯ? ಅರ್ಥಪೂರ್ಣವಾಗಿ ಬರೆದಿದ್ದಾರೆ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅವರು.
ಕೇರಳದ ಕಮ್ಯುನಿಸ್ಟ್ ಸರ್ಕಾರದ ಆಡಳಿತಾವಧಿ ಮುಂದಿನ ವರ್ಷ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿ, ಲೇಖಕ ಮತ್ತು ರಾಜಕೀಯ ವಿಶ್ಲೇಷಕರೂ ಆಗಿರುವ ಎನ್.ಎಸ್.ಮಾಧವನ್ ಹಂಚಿಕೊಂಡಿರುವ ಕೆಲ ಅನಿಸಿಕೆಗಳು ಕಮ್ಯುನಿಸ್ಟ್ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳುವಂತಿದೆ. ಜನಪರ ಕಲ್ಯಾಣ, ವರ್ಗರಹಿತ ಸಮಾಜ ನಿರ್ಮಿಸಬೇಕೆಂಬ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಕಮ್ಯುನಿಸ್ಟ್ ಸರ್ಕಾರ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ದುರಾಡಳಿತ, ಹಿಂಸಾಚಾರ, ಅವ್ಯವಹಾರ ನಡೆಸುವ ಮೂಲಕ ಸಂಪೂರ್ಣ ಜನವಿರೋಧಿಯಾಗಿ ಮಾರ್ಪಟ್ಟಿರುವುದನ್ನು ಅವರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಭ್ರಷ್ಟಾಚಾರ ಆರೋಪಗಳು ಉಳಿದ ಪಕ್ಷಗಳ ಸರ್ಕಾರಗಳ ಪತನಕ್ಕೆ ಕಾರಣವಾದಂತೆ ಕೇರಳದ ಎಲ್‌ಡಿಎಫ್ ಸರ್ಕಾರವನ್ನೂ ಆಹುತಿ ತೆಗೆದುಕೊಳ್ಳಲಿದೆ ಎಂದಿದ್ದಾರೆ ಮಾಧವನ್.
ಮಾರ್ಕ್ಸ್‌ನ ಮೂಲವಾದ, ಒಬ್ಬ ಕಮ್ಯುನಿಸ್ಟ್ ಆದವನ ಇಡೀ ಕುಟುಂಬವೇ ಪಕ್ಷದ ಒಳಗಡೆ ಇರಬೇಕೆಂಬುದು. ಕೇರಳದ ಯಾವೊಬ್ಬ ಕಮ್ಯುನಿಸ್ಟ್ ನಾಯಕನೂ ಈ ರೀತಿ ಪಾಲಿಸುತ್ತಿಲ್ಲ. ತಮ್ಮ ಕುಟುಂಬ ಸದಸ್ಯರನ್ನು ಪಕ್ಷದಿಂದ ಹೊರಗೆ ಸುಖದ ಸುಪ್ಪತ್ತಿಗೆಯಲ್ಲಿ ಇರಿಸಿ ಸಲಹುತ್ತಿದ್ದಾರೆ. ಖುದ್ದು ಈಗಿನ ಕಮ್ಯುನಿಸ್ಟ್ ನಾಯಕರು ಕೂಡ ಐಷಾರಾಮಿ ಮಧ್ಯಮ ವರ್ಗದ ಜೀವನ ಶೈಲಿಗೆ ಮೊರೆ ಹೋಗಿದ್ದಾರೆ. ತಮ್ಮ ಮಕ್ಕಳು ಹೊರಗಡೆ ಒಳ್ಳೆಯ ಉದ್ಯೋಗ ಕಂಡುಕೊಳ್ಳಲಿ ಎಂದು ಬಯಸುತ್ತಿದ್ದಾರೆ. ಇದರಿಂದ ಮೂಲ ಸಿದ್ಧಾಂತವೇ ಬೂದಿಯಾಗಿದೆ ಎಂದು ಮಾಧವನ್ ವಿಶ್ಲೇಷಿಸಿದ್ದಾರೆ. ಇಂತಹ ಬೆಳವಣಿಗೆಗಳಿಂದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈಗ ಏಕಾಂಗಿಯಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಕಮ್ಯೂನಿಸ್ಟ್ ಪಕ್ಷ ತುಳಿದ ಅಡ್ಡಹಾದಿಯ ದುಷ್ಪರಿಣಾಮಗಳ ಕುರಿತು ಇಂತಹುದೇ ಅಭಿಪ್ರಾಯಗಳನ್ನು ಆ ಪಕ್ಷದ ಹಿರಿಯ ನಾಯಕ ಕಾಮ್ರೇಡ್ ಎ.ಕೆ. ಗೋಪಾಲನ್ ಬಹಳ ಹಿಂದೆಯೇ ತಮ್ಮ ಆತ್ಮಚರಿತ್ರೆಯಲ್ಲಿ ವ್ಯಕ್ತಪಡಿಸಿದ್ದರು. ʼನಾನು ಒಂದು ವಿಶೇಷ ಪರಿವರ್ತನೆ ಮಾಡುವ ಉದ್ದೇಶದಿಂದ ಲೋಕಸಭೆಗೆ ಪ್ರವೇಶಿಸಿದ್ದೆ. ಆದರೆ ಸಂಸತ್ ಪ್ರವೇಶಿಸಿದ ನಂತರ ನನಗಾದ ಅನುಭವವೇ ಬೇರೆ. ಸಂಸತ್ ಪ್ರವೇಶದ ಮುನ್ನ ನಮ್ಮ ನಾಯಕರು ಕಾರ್ಮಿಕರನ್ನು, ರೈತರನ್ನು ಭೇಟಿಯಾಗಿ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದರು. ಕಾರ್ಮಿಕರ ಮನೆಗಳಲ್ಲಿ ಊಟ, ಕೊಳೆಗೇರಿಗಳಲ್ಲಿ ನಿದ್ರೆ ಮಾಡುತ್ತಿದ್ದೆವು. ದಿಲ್ಲಿಗೆ ತಲುಪಿದ ನಂತರ ಅಲ್ಲಿ ಒಳ್ಳೆಯ ಮನೆ, ಸವಲತ್ತು ಲಭಿಸಿತು. ಮಂತ್ರಿಗಳಿಂದ ಔತಣ, ಪ್ರಧಾನಿ, ರಾಷ್ಟ್ರಪತಿಗಳ ಭೇಟಿ ಮೊದಲಾದ ʼಚಟʼ ಅಂಟಿಕೊಂಡಿತು. ಸಂಸತ್ ಸದಸ್ಯರಿಗೆ ಕಾರ್ಯಕರ್ತರಾಗಿ ದಿಲ್ಲಿಯಲ್ಲಿ ನೆಲೆಸುವುದೇ ಉತ್ತಮ ಎನಿಸತೊಡಗಿತು. ನಿಧಾನವಾಗಿ ಕಾರ್ಯಕರ್ತರ ಬಳಿ ಹೋಗುವುದು, ಕೊಳೆಗೇರಿಯಲ್ಲಿ ಉಳಿಯುವುದನ್ನು ಎಷ್ಟು ತಪ್ಪಿಸಲು ಸಾಧ್ಯವೋ ಅಷ್ಟು ಒಳ್ಳೆಯದು ಎಂಬ ಯೋಚನೆ ಬಂತು. ಅವರ ಮನೋಭಾವದಲ್ಲಿ ಬದಲಾವಣೆ ಆಯಿತು. ಸಂಸದೀಯ ಪದ್ಧತಿಗೆ ಬಂದು ಅದನ್ನು ಪಕ್ಷಹಿತಕ್ಕಾಗಿ ಉಪಯೋಗಿಸಲು ವಿಫಲವಾದರು. ಅಷ್ಟೇ ಅಲ್ಲ, ವೈಯಕ್ತಿಕವಾಗಿಯೂ ಅವರೆಲ್ಲ ಭ್ರಷ್ಟರಾದರು.ʼ
ಕಟ್ಟರ್ ಕಮ್ಯುನಿಸ್ಟ್ ನೇತಾರ ಕಾಮ್ರೇಡ್ ಎ.ಕೆ.ಗೋಪಾಲನ್ ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸಿರುವ ಸತ್ಯ ಸಂಗತಿಗಳಿವು. ಅಧಿಕಾರ, ರಾಜಕೀಯ ಸವಲತ್ತುಗಳು ಹೀಗೆ ವ್ಯಕ್ತಿಯ ದಾರಿಯನ್ನು ಬದಲಿಸುತ್ತವೆ, ಆತ ಹಿಡಿದ ಗುರಿಯನ್ನು ಹೇಗೆ ಹಳ್ಳ ಹತ್ತಿಸುತ್ತವೆ ಎಂಬುದಕ್ಕೆ ಕಾಮ್ರೇಡ್ ಗೋಪಾಲನ್ ಅವರ ಅನುಭವಗಳೇ ಸಾಕ್ಷಿಯಾಗಿರುವಾಗ ಇನ್ನು ಉಳಿದ ಕಮ್ಯುನಿಸ್ಟ್ ಮುಖಂಡರು ಪದ್ಮಪತ್ರದಂತೆ ಇರಲು ಸಾಧ್ಯವೇ?
ಎ.ಕೆ. ಗೋಪಾಲನ್
ವರ್ಗರಹಿತ ಸಮಾಜ ಸೃಷ್ಟಿ, ಸಾಮಾಜಿಕ ಕ್ರಾಂತಿ ಮಾಡಲೆಂದು ಹೊರಟ ಕಮ್ಯುನಿಸ್ಟ್ ಪಕ್ಷ ಇಂದು ಜಗತ್ತಿನಲ್ಲಿ ಹೇಳಹೆಸರಿಲ್ಲದಂತಾಗಿದೆ. ಭಾರತದಲ್ಲಿ ಕೇರಳದಲ್ಲಿ ಮಾತ್ರ ಕೊಂಚ ಉಸಿರು ಹಿಡಿದಿಟ್ಟುಕೊಂಡಿದೆ. ಅದು ನಿಜವಾದ ಉಸಿರಲ್ಲ. ಕೃತಕ ಉಸಿರಾಟ, ಅಷ್ಟೆ. ಹೀಗಾಗಲು ಕಾರಣ-ಮೂಲ ಸಿದ್ಧಾಂತ, ಧ್ಯೇಯಗಳನ್ನು ಮರೆತಿದ್ದು. ಅಧಿಕಾರದ ಅಮಲನ್ನು ತಲೆಗೇರಿಸಿಕೊಂಡಿದ್ದು. ಆದರ್ಶ, ಪ್ರಾಮಾಣಿಕತೆಗಳಿಗೆ ಸಮಾಧಿ ತೋಡಿದ್ದು. ಒಂದು ಕಾಲದಲ್ಲಿ (50-60ರ ದಶಕದಲ್ಲಿ) ಇಡೀ ದೇಶವೇ ಕಮ್ಯುನಿಸ್ಟ್ ಪ್ರಭಾವದ ದಟ್ಟ ನೆರಳಿನಡಿ ಸಿಲುಕಿದಂತಿತ್ತು. ವಿಧಾನಸಭೆ, ಲೋಕಸಭೆ, ರಾಜ್ಯಸಭೆ, ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ದೇಶದ ಆಯಕಟ್ಟಿನ ಪ್ರಮುಖ ಹುದ್ದೆಗಳು ಇತ್ಯಾದಿ ಎಲ್ಲವೂ ಆ ಪಕ್ಷದ ಭದ್ರವಾದ ಕಪಿಮುಷ್ಟಿಯಲ್ಲಿತ್ತು. ಆದರೀಗ ಕಮ್ಯುನಿಸ್ಟ್ ಕೋಟೆಗಳು ಛಿದ್ರಛಿದ್ರವಾಗಿವೆ. ಕಾರ್ಮಿಕ ಸಂಘಟನೆಗಳಲ್ಲಿ ಹಿಡಿತ ತಪ್ಪಿದೆ. ಕೋಡಿಹಳ್ಳಿ ಚಂದ್ರಶೇಖರ್‌ರಂತಹ ಕಾರ್ಮಿಕರ ಹಿತದ ಗಂಧಗಾಳಿ ಗೊತ್ತಿಲ್ಲದ ಮುಖಂಡ ಕಾರ್ಮಿಕರ ನೇತಾರನೆಂದು ಬಿಂಬಿಸಿಕೊಳ್ಳಬೇಕಾದ ಸ್ಥಿತಿಯನ್ನು ಕಮ್ಯುನಿಸ್ಟ್ ಕಾರ್ಮಿಕ ಸಂಘಟನೆಗಳು ತಂದಿಟ್ಟುಕೊಂಡಿವೆ.
ಎಡಪಂಥೀಯರೆನಿಸಿದ ಕಮ್ಯುನಿಸ್ಟರಿಗೆ ಆದ ಈ ದುರ್ಗತಿಯೇ ಬಲಪಂಥೀಯರೆನಿಸಿದ ಬಿಜೆಪಿ, ಸಂಘಪರಿವಾರದ ಸಂಘಟನೆಗಳಿಗೂ ಆಗಬಹುದೆಂಬ ಅಪಾಯವನ್ನು ಸಂಘದ ಹಿರಿಯ ಪ್ರಚಾರಕ, ಚಿಂತಕ, ಭಾರತೀಯ ಮಜ್ದೂರ್ ಸಂಘದ ಸ್ಥಾಪಕರಾಗಿದ್ದ ದತ್ತೋಪಂತ ಠೇಂಗಡಿಯವರು ಬಹಳ ಹಿಂದೆಯೇ ಮನಗಂಡಿದ್ದರು. ತಮ್ಮ ಭಾಷಣ, ಬರಹ, ಬೈಠಕ್‌ಗಳಲ್ಲಿ ಸಮಯ, ಸಂದರ್ಭ ಒದಗಿದಾಗಲೆಲ್ಲ ಈ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದರು. ಬಾಪೂ ಕೆಂದೂರ್ಕರ್ ಠೇಂಗಡಿಯವರ ವಿಚಾರಗಳನ್ನು ಸಂಗ್ರಹಿಸಿ ಪ್ರಕಟಿಸಿದ ʼಸಂಕೇತ ರೇಖಾʼ (ಕನ್ನಡದಲ್ಲಿ: ಕಾರ್ಯಕರ್ತ) ಎಂಬ ಕೃತಿಯಲ್ಲಿ ಸಂಘಟನೆಯ ಕಾರ್ಯಕರ್ತ ಹಾದಿ ತಪ್ಪುವ ಅಪಾಯಗಳ ಕುರಿತು ಮಾರ್ಮಿಕ ವಿಶ್ಲೇಷಣೆ ಇದೆ. ಠೇಂಗಡಿಯವರ ವಿಚಾರದ ಒಂದೆರಡು ತುಣುಕುಗಳು ಹೀಗಿವೆ:
“ಸೌಲಭ್ಯಗಳ ಸಮೃದ್ಧಿಯಿಂದ ಹಿಂದಿನಂತೆ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಕುಂಠಿತವಾಗುತ್ತದೆ. ಅದರಿಂದ ಕಾರ್ಯಕರ್ತ ದಾರಿ ತಪ್ಪುತ್ತಾನೆ. ಹಿಂದಿನಂತೆ ಇರುವುದು ಅವನಿಗೆ ಸಾಧ್ಯವಾಗದು. ಓರ್ವ ಕಾರ್ಯಕರ್ತ ಬೈಠಕ್‌ಗೆ ಬರದಿರುವ ಕಾರಣ ಕೇಳಿದಾಗ ನನ್ನ ಬಳಿ ಸ್ಕೂಟರ್ ಇಲ್ಲ, ಹಾಗಾಗಿ ಬರಲಿಲ್ಲ ಎಂದು ಹೇಳಿದ್ದ. ವಾಹನವಿಲ್ಲದಿದ್ದಾಗ ಆತ ನಿಶ್ಚಿತ ಸಮಯಕ್ಕೆ ತಪ್ಪದೆ ಬೈಠಕ್‌ಗೆ ಬರುತ್ತಿದ್ದ. ಆದರೆ ಸ್ಕೂಟರ್ ಅಭ್ಯಾಸ ಅವನಲ್ಲಿ ಅನಿವಾರ್ಯತೆ ಉಂಟುಮಾಡಿತು. ಸ್ಕೂಟರ್ ಇಲ್ಲದೆ ಹೇಗೆ ಬರಲಿ ಎಂದು ಆತ ಈಗ ಯೋಚಿಸುತ್ತಾನೆ! ಆದ್ದರಿಂದ ಕಾರ್ಯಕರ್ತರು ಒಳ್ಳೆಯ ವಸ್ತ್ರ ದೊರೆತಲ್ಲಿ ಉಡಬಹುದು. ಆಹಾರ ದೊರೆತಲ್ಲಿ ತಿನ್ನಬಹುದು. ಆದರೆ ಇದು ಅನಿವಾರ್ಯ ಎಂದು ಭಾವಿಸಬಾರದು. ಒಳ್ಳೆಯ ವಸ್ತ್ರ ಧರಿಸದೇ ಹೋದಲ್ಲಿ ನಮ್ಮ ಗೌರವ ಕಡಿಮೆಯಾಗದು. ಏಕೆಂದರೆ ಉಡುಗೆ ನಮ್ಮ ಗೌರವ ನಿರ್ಧರಿಸುವುದಿಲ್ಲ.”
ಯಾವುದೇ ಸಂಘಟನೆಯನ್ನು ನಾಶಗೊಳಿಸಬೇಕಾದರೆ ಆ ಸಂಸ್ಥೆಯಲ್ಲಿ Comfort loving cadres (ಸೌಲಭ್ಯ ಬಯಸುವವರು) ಮತ್ತು Status conscious leaders (ಪ್ರತಿಷ್ಠೆ ಮೆರೆಸುವ ನಾಯಕರು)- ಇವೆರಡಿದ್ದರೆ ಸಾಕು. ಯಾವುದೇ ಸಂಸ್ಥೆಗೆ ನೀವು ಉತ್ತಮ ಸೌಲಭ್ಯ ಮತ್ತು ಆರ್ಥಿಕ ನೆರವು ನೀಡಿದಲ್ಲಿ ನಿಧಾನವಾಗಿ ಆ ಸಂಸ್ಥೆಯ ಒಳ್ಳೆಯ ಕಾರ್ಯಕರ್ತರು ಐಷಾರಾಮಿಗಳಾಗುತ್ತಾರೆ. ನಾಯಕರಲ್ಲಿ ಸ್ವಯಂಪ್ರತಿಷ್ಠೆಯ ಭಾವನೆ ಮೂಡುತ್ತದೆ. ಕ್ರಮೇಣ ಕೆಲವೇ ಸಮಯದಲ್ಲಿ ಅಂತಹ ಸಂಘಟನೆ ನಾಶವಾಗುತ್ತದೆ. Establishment without a sense of having been established ಅಂದರೆ ಉತ್ತಮ ವ್ಯವಸ್ಥೆ ಇದ್ದರೂ ಅದರಲ್ಲಿ ಆಸಕ್ತಿ ತಾಳಬಾರದು. ಅದಕ್ಕೆ ಅಧೀನವಾಗಿಯೂ ಇರಬಾರದು.
ಬಲಪಂಥೀಯ ಸಂಘಟನೆಗಳು ದೇಶದಾದ್ಯಂತ ಆಲದ ಮರದಂತೆ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಅವುಗಳ ಬೆಳವಣಿಗೆ ಕುಂಠಿತವಾಗದಿರಬೇಕಾದರೆ ದತ್ತೋಪಂತರು ಬಹಳ ಹಿಂದೆಯೇ ಹೇಳಿದ ಎಚ್ಚರದ ಈ ನುಡಿಗಳನ್ನು ತಪ್ಪದೆ ಪಾಲಿಸಬೇಕಾಗಿದೆ. ಅಧಿಕಾರದ ಅಮಲಿನಲ್ಲಿ, ಸಾಧನ ಸವಲತ್ತುಗಳ ಗುಂಗಿನಲ್ಲಿ ಮೂಲ ಧ್ಯೇಯೋದ್ದೇಶ, ತತ್ವ, ಸಿದ್ದಾಂತಗಳನ್ನು ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂದು ಎಡಪಂಥೀಯರಿಗಾದ ದುರ್ಗತಿಯೇ ಮುಂದೆ ಬಲಪಂಥೀಯರಿಗೂ ಆಗುವ ಸಂಭಾವ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ದತ್ತೋಪಂತ ಠೇಂಗಡಿಯವರ ಜನ್ಮಶತಾಬ್ದಿಯ ಈ ವರ್ಷದಲ್ಲಿ ಸಂಭ್ರಮಾಚರಣೆಗಿಂತ ಆ ಹಿರಿಯ ದ್ರಷ್ಟಾರರ ಚಿಂತನೆಗಳನ್ನು ಕಾರ್ಯಕರ್ತರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಯತ್ನಿಸಿದರೆ ಅದೇ ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧೆ, ಗೌರವ.
******
ದು.ಗು. ಲಕ್ಷ್ಮಣ
ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.
- ಈ ಲೇಖನವನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..