ಮೈಸೂರು: ನೈಟ್ ಕರ್ಪ್ಯೂ ವಿಚಾರದಲ್ಲಿ ಮರು ವಿಮರ್ಶೆ ಮಾಡಬೇಕಿದೆ. ಈ ವಿಚಾರದಲ್ಲಿ ಸರಕಾರಕ್ಕೆ ಸ್ಪಷ್ಟತೆ ಇದ್ದಂತೆ ಕಾಣುತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನೈಟ್ ಕರ್ಪ್ಯೂ ಬಗ್ಗೆ ಸರಕಾರದ ಪರವಾಗಿ ನಾನು ಸರಿ ಇದೆ ಎಂದು ಹೇಳಬಹುದು. ಆದರೆ ನಾಡಿನ ಜನರು ಇದನ್ನು ಜೋಕ್ ರೀತಿ ತೆಗೆದುಕೊಂಡಿದ್ದಾರೆ.
ಹೊಸ ವರ್ಷದ ಆಚರಣೆ ದಿನ ಜನ ಸೇರುತ್ತಾರೆ ಎನ್ನುವುದಾದರೆ ಡಿಸೆಂಬರ್ 30, 31ರಂದು ನೈಟ್ ಕರ್ಪ್ಯೂ ಜಾರಿ ಮಾಡಿದರೆ ಉತ್ತಮ. ಈಗಲೇ ಏಕೆ? ಎಂದು ಪ್ತಶ್ನಿಸಿದರು.
ನೈಟ್ ಕರ್ಪ್ಯೂನಿಂದ ಯಾವುದೇ ಪ್ರಯೋಜನವಿಲ್ಲ. ಕೆಲ ಮಹತ್ವದ ನಿರ್ಧಾರಗಳನ್ನು ಯೋಚನೆ ಮಾಡಿ ತೆಗೆದುಕೊಳ್ಳಬೇಕು. ನಗೆಪಾಟಲಿಗೆ ಈಡಾಗಬಾರದು ಎಂದು ವಿಶ್ವನಾಥ್ ಮಾರ್ಮಿಕವಾಗಿ ಹೇಳಿದರು.
ರಾಜ್ಯದಲ್ಲಿ ಶಾಲೆಗಳು ಪುನಾರಂಭದ ವಿಚಾರವಾಗಿ ಮಾತನಾಡಿದ ವಿಶ್ವನಾಥ್, ಸದ್ಯ ಕೊರೊನಾ ಎರಡನೇ ಅಲೆ ಜೋರಾಗಿದೆ. ಜೀವದ ಜೊತೆ ಚೆಲ್ಲಾಟ ಸರಿಯಲ್ಲ. ಮಕ್ಕಳು ಮನೆಯ ಆಸ್ತಿ. ಒಂದನೇ ತಾರೀಖಿನಿಂದ ಶಾಲೆ ಬೇಡ. ಸಂಕ್ರಾಂತಿ ಆದ ಮೇಲೆ ಶಾಲೆ ಆರಂಭಿಸಿ. ಯಾರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಹೀಗಾಗಿ ಜನವರಿ 1ರಿಂದ ಶಾಲೆ ಆರಂಭ ಬೇಡ ಎಂದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸ್ಪಷ್ಟತೆ ಇಲ್ಲ. ಅವರಿಗೆ ಏನಾಗುತ್ತಿದೆ? ಏನು ಮಾಡುತ್ತಿದ್ದೇನೆ ಎಂಬುದರ ಅರಿವಿಲ್ಲ. ಅವರು ಹೇಳಿದ್ದು ಯಾವುದೂ ಆಗಿಲ್ಲ. ಆದೇಶ ಮಾಡುತ್ತಾರೆ. ಆಮೇಲೆ ಅದನ್ನು ವಾಪಸ್ ಪಡೆಯುತ್ತಾರೆ. ಅವರಿಗೆ ಅದೇ ಒಂದು ರೀತಿಯ ಸಿಂಡ್ರೋಮ್ ಆಗಿಬಿಟ್ಟಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಹೇಳಿದ್ದು ತಪ್ಪು
ಕೊಡವರು ಗೋವಿನ ಮಾಂಸ ತಿನ್ನುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ. ಕೊಡವರು ಹಸುವನ್ನು ಪೂಜೆ ಮಾಡುತ್ತಾರೆ. ಇದು ಕೊಡವರಿಗೆ ಸಿದ್ದರಾಮಯ್ಯ ಮಾಡಿದ ಅವಮಾನ. ಅವರು ಕೊಡವರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಇಂತಹ ಹೇಳಿಕೆಗಳಲ್ಲಿ ಕಾಂಗ್ರೆಸ್ ಮುಗಿಸುವ ಹುನ್ನಾರ ಇದೆ. ಅವರು ಕೊಡುತ್ತಿರುವ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಾನಿಯಾಗುತ್ತಿದೆ. ಆ ಪಕ್ಷದ ನಾಯಕರು ಈ ಬಗ್ಗೆ ಗಮನ ಹರಿಸಬೇಕು ಎಂದರು ವಿಶ್ವನಾಥ್.