Lead photo: CKPhotography ಸಿಕೆಪಿ@ckphotographi
ಬೆಂಗಳೂರು: ರಾತ್ರಿ ಕರ್ಫ್ಯೂವನ್ನು ರಾಜ್ಯ ಸರಕಾರ ಕೊನೆಗೂ ಹಿಂಪಡೆದಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬ್ರಿಟನ್‌ನಲ್ಲಿ ರೂಪಾಂತರಗೊಂಡ ಕೋವಿಡ್ ವೈರಾಣು ಪತ್ತೆಯಾದ ಹಿನ್ನೆಲೆಯಲ್ಲಿ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಜ್ಞರ ಸಲಹೆ ಮೇರೆಗೆ ರಾತ್ರಿ ಕರ್ಫ್ಯೂ ಜಾರಿಗೆ ತರಲು ರಾಜ್ಯ ಸರಕಾರ ನಿರ್ಧಾರ ಮಾಡಿತ್ತು. ಆದರೆ, ರಾತ್ರಿ ಕರ್ಫ್ಯೂ ಬಗ್ಗೆ ಸರಕಾರ ಹೊರಡಿಸಿದ ನಿಯಮಾವಳಿ ಬಗ್ಗೆ ಜನರಿಂದ ತೀವ್ರ ಟೀಕೆ ವ್ಯಕ್ತವಾದ ಕಾರಣಕ್ಕೆ ವಾಪಸ್ ನಿರ್ಧಾರ ಕೈಗೊಳ್ಳಲಾಗಿದೆ.
ರಾತ್ರಿ ಕರ್ಫ್ಯೂ ಅಗತ್ಯವಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಮಂತ್ರಿ ಆ ಬಗ್ಗೆ ಮರುಪರಿಶೀಲನೆ ನಡೆಸಿದರು. ಜತೆಗೆ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಇನ್ನೂ ಕೆಲ ಸಂಪುಟ ಸಹೋದ್ಯೋಗಿಗಳು, ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದು ಅಂತಿಮವಾಗಿ ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಸಿಎಂ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಅನಗತ್ಯವಾಗಿ ಸಂಚರಿಸದಂತೆ ಹಾಗೂ ಸರಕಾರ ವಿಧಿಸಿದ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈ ವೈರಾಣು ಹರಡುವಿಕೆ ತಡೆಯಲು ಸಿಎಂ ಮನವಿ ಮಾಡಿದ್ದಾರೆ.
ರೂಪಾಂತರ ಹೊಂದಿದ ವೈರಸ್ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಸರಕಾರ ಎರಡು ದಿನಗಳ ಹಿಂದೆ ಇದೇ ಡಿಸೆಂಬರ್ 24ರಿಂದ ಜನವರಿ 1ರವರೆಗೆ ರಾತ್ರಿ 11ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿ ಮಾಡಿತ್ತು. ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಅಸಲಿ ಕಾರಣಗಳೇನು?
ನಿಜಕ್ಕಾದರೆ ರಾತ್ರಿ ಕರ್ಫ್ಯೂ ವಾಪಸ್ ಪಡೆಯಲು ಕಾರಣಗಳೇ ಬೇರೆ ಎಂದು ಗೊತ್ತಾಗಿದೆ. ಒಂದು; ಪ್ರಮುಖವಾಗಿ ಲಿಕ್ಕರ್ ಮತ್ತು ಕ್ಯಾಬ್ ಲಾಬಿ. ಈಗಾಗಲೇ ಕೋವಿಡ್ ಲಾಕ್‌ಡೌನ್‌ನಿಂದ ನಷ್ಟ ಅನುಭವಿಸಿದ್ದ ಇವೆರಡೂ ವಲಯಗಳಿಂದ ಕ್ರಿಸ್ಮಸ್ ಮತ್ತು ಹೊಸ ವರ್ಷದ ಹೊತ್ತಿನಲ್ಲಿ ರಾತ್ರಿ ಕರ್ಫ್ಯೂ ಹೇರಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಸರಕಾರದ ಮೇಲೆ ಈ ಕಡೆಯಿಂದ ತೀವ್ರ ಒತ್ತಡವೂ ಬಂದಿತ್ತು ಎಂದು ಮೂಲಗಳು ತಿಳಿಸಿವೆ.
ಕಳೆದ ಮಾರ್ಚ್‌ನಿಂದ ಆಗಿರುವ ನಷ್ಟವನ್ನು ವರ್ಷಾಂತ್ಯದಲ್ಲಿ ರಿಕವರಿ ಮಾಡಿಕೊಳ್ಳಲೇಬೇಕು ಎಂಬ ಹಠ ಲಿಕ್ಕರ್ ವಲಯದ್ದು. ಕ್ಯಾಬ್ ಮಾಲೀಕರು ಕೂಡ ಇದೇ ರೀತಿ ಆಲೋಚನೆ ಮಾಡುತ್ತಿದ್ದಾರೆ. ಇವರಂತೂ ಸಂಪೂರ್ಣ ಹೈರಾಣ ಆಗಿದ್ದರು. ಸರಕಾರಕ್ಕೆ ಆದಾಯ ಬರುತ್ತದೆ ಎಂಬ ಮಾತು ಪಕ್ಕಕ್ಕಿಟ್ಟು ನೋಡಿದರೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇವೆರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜನರ ಹಿತದ ಬಗ್ಗೆಯೂ ಸರಕಾರ ಆಲೋಚನೆ ಮಾಡಿದೆ. ಈಗ 9 ದಿನ ನೈಟ್ ಕರ್ಫ್ಯೂ ವಿಧಿಸಿದರೆ ಅಬಕಾರಿ ಆದಾಯದಲ್ಲಿ ಶೇ.50ರಷ್ಟು ಖೋತಾ ಆಗಲಿದೆ ಎಂದು ಸಚಿವ ನಾಗೇಶ್ ಹೇಳಿದ್ದರು.
ಮತ್ತೊಂದೆಡೆ; ನಾಳೆ, ಅಂದರೆ; ಶುಕ್ರವಾರ ವೈಕುಂಠ ಏಕಾದಶಿ. ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರ ನಂಬಿಕೆಯಾದ ಈ ದಿನದಂದು ನೈಟ್ ಕರ್ಫ್ಯೂ ಕಾರಣದಿಂದ ತೊಂದರೆ ಆಗುತ್ತದೆ ಎಂಬ ಕಾರಣವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಬೆಳಗ್ಗೆ ಐದು ಗಂಟೆಯಿಂದ ರಾತ್ರಿ ಹನ್ನೆರಡರವರೆಗೂ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿ ಭಗವಂತನ ದರ್ಶನ ಪಡೆಯಲಿದ್ದಾರೆ. ಬೆಂಗಳೂರಿನ ಇಸ್ಕಾನ್ ಸೇರಿದಂತೆ ರಾಜ್ಯಾದ್ಯಂತ ಇರುವ ಶ್ರೀ ವೆಂಕಟೇಶ್ವರ, ಶ್ರೀ ಕೃಷ್ಣ, ಶ್ರೀ ಪಾಂಡುರಂಗ ದೇಶವಾಲಯಗಳು ಸೇರಿ ಎಲ್ಲ ವಿಷ್ಣು ಆಲಯಗಳಲ್ಲಿ ವಿಶೇಷವಿರುತ್ತದೆ. ಪ್ರಮುಖ ಕ್ಷೇತ್ರಗಳಾದ ಉಡುಪಿ ಕೃಷ್ಣ ದೇಗುಲ, ಮೇಲುಕೋಟೆ ಚೆಲುವನಾರಾಯಣ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇಗುಲ, ವೈಯ್ಯಾಲಿಕಾವೆಲ್‌ನ ಟಿಟಿಡಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲ, ಬೇಲೂರಿನ ಶ್ರೀ ಚೆನ್ನಕೇಶವ ಸ್ವಾಮಿ ಆಲಯ, ಗದುಗಿನ ಶ್ರೀ ವೀರನಾರಾಯಣ ದೇಗುಲ, ಚಿಕ್ಕಬಳ್ಳಾಪುರದ ರಂಗಸ್ಥಳ, ಬಾಗೇಪಲ್ಲಿ ಗಡಿದಂ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇಗುಲ, ಮಾಲೂರು ತಾಲ್ಲೂಕಿ ಚಿಕ್ಕತಿರುಪತಿ, ಬಂಗಾರಪೇಟೆ ತಾಲ್ಲೂಕಿನ ಬಂಗಾರು ತಿರುಪತಿ ದೇಗುಲಗಳಲ್ಲಿ ವಿಶೇಷ ಪೂಜೆ, ದರ್ಶನ ಇರುತ್ತದೆ.
ಕ್ರಿಸ್ಮಸ್ ಆಚರಣೆಗೆ ಮುಕ್ತ ಅವಕಾಶ ನೀಡುವ ಸರಕಾರ ವೈಕುಂಠ ಏಕಾದಶಿಗೆ ಮಾತ್ರ ರಾತ್ರಿ ಕರ್ಫ್ಯೂ ಹೆಸರಿನಲ್ಲಿ ಅಡ್ಡಿ ಮಾಡುತ್ತಿದೆ ಎಂಬ ಕೂಗು ಎದ್ದಿತ್ತು. ಮುಖ್ಯಮಂತ್ರಿಗಳು ಇವೆಲ್ಲ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಂಡಿದ್ದಾರೆಂದು ಉನ್ನತ ಮೂಲಗಳು ಸಿಕೆನ್ಯೂಸ್ ನೌಗೆ ತಿಳಿಸಿವೆ.