ಸ್ಮರಣೆ
ಇಂದು (ಡಿಸೆಂಬರ್ 25) ದೇಶದ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ 96ನೇ ಜನ್ಮದಿನ. ಅವರ ನೆನಪಿನಲ್ಲಿ ಇದು ಗುಡ್ ಗವರ್ನೆನ್ಸ್ ಡೇ ಕೂಡ ಆಗಿದೆ. ಬಿಜೆಪಿ ಎಂದ ಮೇಲೆ ವಾಜಪೇಯಿಯವರ ಜೊತೆಯೇ ನೆನಪಾಗುವ ಇನ್ನೊಂದು ಹೆಸರೆಂದರೆ ಅದು ಎಲ್.ಕೆ.ಆಡ್ವಾಣಿಯವರದು. ಬಿಜೆಪಿಯನ್ನು ಕಟ್ಟುವಲ್ಲಿ ಇವರಿಬ್ಬರ ಪರಿಶ್ರಮವನ್ನು ಕುರಿತ ಕಥನವನ್ನು ವಿವರಿಸುವ ಗಮನಾರ್ಹ ಕೃತಿಯೆಂದರೆ ಜುಗಲ್‌ಬಂದಿ: ಬಿಜೆಪಿ ಬಿಫೋರ್ ಮೋದಿ. ವಿನಯ್ ಸೀತಾಪತಿ ಅವರ ಈ ಇಂಗ್ಲಿಷ್ ಕೃತಿಯ ಒಂದು ಅಧ್ಯಾಯದ ಸಾರಸಂಗ್ರಹವನ್ನು ಸಿಕೆನ್ಯೂಸ್‌ನೌ.ಕಾಂ ಓದುಗರಿಗಾಗಿ ಇಲ್ಲಿ ಕೊಡಲಾಗಿದೆ. ನಮ್ಮ ವೆಬ್‌ತಾಣಕ್ಕಾಗಿ ಇದನ್ನು ಖ್ಯಾತ ಅನುವಾದಕ ಬಿ.ಎಸ್.ಜಯಪ್ರಕಾಶ ನಾರಾಯಣ ಕನ್ನಡೀಕರಿಸಿದ್ದಾರೆ.
ವಿನಯ್ ಸೀತಾಪತಿ / photo from Vinay Sitapati facebook page, ಜುಗಲ್‌ಬಂದಿ: ಬಿಜೆಪಿ ಬಿಫೋರ್ ಮೋದಿ /courtesy: penguin
ಸಂಸತ್‌ನ ಸೆಂಟ್ರಲ್ ಹಾಲ್ ಎಂದರೆ, ಸಾಮಾನ್ಯ ದಿನಗಳಲ್ಲಿ ಸಂಸದರೆಲ್ಲರೂ ಪಕ್ಷಭೇದವನ್ನು ಮರೆತು ಸೇರುವ ಸ್ಥಳ. ಹೆಚ್ಚಿನ ಮಾಜಿ ಸಂಸದರ ಜೊತೆ ಗೆ ಪತ್ರಕರ್ತರು ಕೂಡ ಇಲ್ಲಿ ಕಾಣಿಸಿಕೊಳ್ಳುತ್ತಾರೆ. ರಾಜಕೀಯ ಪಡಸಾಲೆಗಳಲ್ಲಿ ಹರಿದಾಡುವ ಗಾಳಿಸುದ್ದಿಗಳನ್ನು ಇವರೆಲ್ಲರೂ ಇಲ್ಲಿ ಲೋಕಾಭಿರಾಮವಾಗಿ ಹಂಚಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಸೆಂಟ್ರಲ್ ಹಾಲ್ ಎಂದರೆ ಅದು ಸಂಸತ್ತಿನ ʼಮೂಡ್ʼ ಅನ್ನು ತಿಳಿಸುವ ತಾಣ.
ಅದು 1957ನೇ ಇಸವಿ. ಇದಕ್ಕೆ ಐದಾರು ವರ್ಷ ಮೊದಲು ಶಾಮಪ್ರಸಾದ್ ಮುಖರ್ಜಿಯವರು ನೆಹರು ಸಂಪುಟದಿಂದ ಹೊರಬಂದು, ಕಾಂಗ್ರೆಸ್ಸಿಗೆ ವಿರುದ್ಧವಾಗಿ ಭಾರತೀಯ ಜನಸಂಘವನ್ನು ಹುಟ್ಟುಹಾಕಿದರಷ್ಟೆ. ಆದರೆ, ಮುಖರ್ಜಿಯವರು ಆ ಪಕ್ಷವನ್ನು ಮುನ್ನಡೆಸುತ್ತಿದ್ದಾಗಲೇ ಅಕಾಲಿಕವಾಗಿ ನಿಧನರಾದರು. ಇದಾದ ಮೇಲೆ, ದೀನ್‌ದಯಾಳ್ ಉಪಾಧ್ಯಾಯರು ಪಕ್ಷಕ್ಕೆ ಹೆಗಲು ಕೊಟ್ಟರು. ದುರದೃಷ್ಟದ ಸಂಗತಿಯೆಂದರೆ, ಅವರು ಕೂಡ ಮೊಘಲ್‌ಸರಾಯ್‌ನ ರೈಲ್ವೆ ಹಳಿಗಳ ಪಕ್ಕದಲ್ಲಿ ನಿಗೂಢವಾಗಿ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದರು. ಇದಾದ ಬಳಿಕ, ಪಕ್ಷವನ್ನು ಸಮರ್ಥವಾಗಿ ಕಟ್ಟುವ ಗುರುತರವಾದ ಹೊಣೆಗಾರಿಕೆಯನ್ನು ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಆಡ್ವಾಣಿ ಹೊರಬೇಕಾಯಿತು. ಇವರಿಬ್ಬರ ಪೈಕಿ ಆಡ್ವಾಣಿಯವರು ಪಕ್ಷದ ಕಚೇರಿಯಲ್ಲಿ ಶ್ರಮಿಸತೊಡಗಿದರೆ, ಲೋಕಾಭಿರಾಮದ ಸ್ವಭಾವದ ವಾಜಪೇಯಿಯವರು ಸೆಂಟ್ರಲ್ ಹಾಲ್‌ನಲ್ಲಿ ಹೆಚ್ಚಾಗಿ ಕಾಲ ಕಳೆಯತೊಡಗಿದರು.
ಆರೆಸ್ಸೆಸ್‌ಗೆ ಅದು ಇಷ್ಟವಿರಲಿಲ್ಲ, ಏಕೆ?
ಅಂತೂ ಇಂತೂ ವಾಜಪೇಯಿ-ಆಡ್ವಾಣಿ ಜೋಡಿಯ ಪರಿಶ್ರಮದಿಂದ 1999ರಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ ಬಂತು. ಸಹಜವಾಗಿಯೇ ʼಎಲ್ಲರೂ ಒಪ್ಪುವಂತಹ ವರ್ಚಸ್ಸನ್ನು ಹೊಂದಿದ್ದʼ ವಾಜಪೇಯಿಯವರು ಪ್ರಧಾನಿಯಾದರು. ಅಷ್ಟು ಹೊತ್ತಿಗಾಗಲೇ ದೇಶದ ರಾಜಕೀಯ ಆಖಾಡದಲ್ಲಿ ನೆಹರು ಮತ್ತು ಇಂದಿರಾ ಗಾಂಧಿಯವರ ʼಚರಿಷ್ಮಾʼ ಮಸುಕಾಗಿ, 1991ರಿಂದ 1996ರವರೆಗೆ ದೇಶವನ್ನು ಸಮರ್ಥವಾಗಿ ಆಳಿದ ಪಿ.ವಿ.ನರಸಿಂಹರಾವ್ ಅವರು ಮೂಡಿಸಿದ ಛಾಪು ಢಾಳಾಗಿ ಕಾಣುತ್ತಿತ್ತು. ಅದರಲ್ಲೂ ಮುಖ್ಯವಾಗಿ ಪಿವಿಎನ್ ಅವರು ಆರ್ಥಿಕತೆ, ವಿದೇಶಾಂಗ ನೀತಿ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವ ಕ್ಷೇತ್ರಗಳಲ್ಲಿ ಅಗಾಧ ಬದಲಾವಣೆಗಳನ್ನು ತಂದಿದ್ದರು. ಪ್ರಧಾನಿಯಾದ ವಾಜಪೇಯಿ ಇದನ್ನು ಬಹುಬೇಗನೆ ಗ್ರಹಿಸಿದರು. ಅಂದರೆ, ಪಿವಿಎನ್ ಜಾರಿಗೆ ತಂದ ಹಲವು ಚಾರಿತ್ರಿಕ ಉಪಕ್ರಮಗಳು ವಾಸ್ತವಿಕ ದೃಷ್ಟಿಕೋನವನ್ನು ಆಧರಿಸಿದ್ದವು. ಅಲ್ಲದೆ, 1990ರಲ್ಲಿ ಸೋವಿಯತ್ ಒಕ್ಕೂಟ ಛಿದ್ರವಾದ ನಂತರ ಇಡೀ ಜಗತ್ತಿನಲ್ಲಿ ಅಮೆರಿಕವು ಗಳಿಸಿಕೊಂಡ ಪ್ರಾಬಲ್ಯವನ್ನು ಅವರು ಕಂಡುಕೊಂಡು, ಅದಕ್ಕೆ ತಕ್ಕಂತೆ ಭಾರತದ ನೀತಿಗಳನ್ನು ರೂಪಿಸಿದ್ದರು. ಹೀಗಾಗಿ, ವಾಜಪೇಯಿ ಕೂಡ ಇದೇ ಹಾದಿಯಲ್ಲಿ ನಡೆಯುವುದು ಅನಿವಾರ್ಯವಾಗಿತ್ತು.
ಆದರೆ, ಬಿಜೆಪಿಯನ್ನು ನಿಯಂತ್ರಿಸುತ್ತಿದ್ದ ಆರೆಸ್ಸೆಸ್‌ಗೆ ಇದು ಇಷ್ಟವಿರಲಿಲ್ಲ. ಹೀಗಾಗಿ ವಾಜಪೇಯಿಯವರಿಗೆ ಸಂಸತ್ತಿನೊಳಗಡೆ ಪ್ರತಿಪಕ್ಷಗಳ ಸಾಲಿನಿಂದ ಯಾವುದೇ ವಿರೋಧ ಕಂಡುಬರದೆ ಇದ್ದರೂ ನಾಗ್ಪುರದಲ್ಲಿರುವ ʼಹೆಡಗೇವಾರ್ ಭವನʼದಿಂದ ಅಪಸ್ವರ ಕೇಳಿಬರತೊಡಗಿತು. ಆಗ ಆರೆಸ್ಸೆಸ್‌ನ ಚುಕ್ಕಾಣಿ ಹಿಡಿದಿದ್ದ (ಕರ್ನಾಟಕ ಮೂಲದ) ಕೆ.ಎಸ್.ಸುದರ್ಶನ್ ಅವರಂತೂ ʼಬಿಜೆಪಿ ಸರಕಾರವು ಹಿಂದೂ ಸಂಸ್ಕೃತಿಯನ್ನು ಜಾರಿಗೆ ತರಲು ಗಮನ ಹರಿಸಬೇಕುʼ ಎನ್ನುವ ಜೊತೆಗೆ, ದೇಶವನ್ನೇ ಅಲುಗಾಡಿಸುತ್ತಿದ್ದ ಜಾಗತೀಕರಣದ ದುಷ್ಪಪರಿಣಾಮಗಳ ಬಗ್ಗೆ ಆಗಾಗ್ಗೆ ಗುಡುಗುತ್ತಲೇ ಇದ್ದರು. ಆಗ ಬಿಜೆಪಿ ಪಾಳೆಯದಲ್ಲಿ ಸ್ವದೇಶಿ ಚಿಂತನೆಯ ವಕ್ತಾರರಂತಿದ್ದ ಗೋವಿಂದಾಚಾರ್ಯರು ಕೂಡ ʼಮಾರುಕಟ್ಟೆಯೇ ಎಲ್ಲವನ್ನೂ ತೀರ್ಮಾನಿಸುವುದನ್ನು ನಾವು ಒಪ್ಪುವುದಿಲ್ಲ. ಮಹಾತ್ಮ ಗಾಂಧೀಜಿಯವರು ಮುಸ್ಲಿಮರ ಮನೋಭಾವನ್ನು ಸರಿಯಾಗಿ ಗ್ರಹಿಸುವಲ್ಲಿ ವಿಫಲರಾಗಿದ್ದರಷ್ಟೆ. ಆದರೆ ಅವರ ಆರ್ಥಿಕ ಚಿಂತನೆಗಳೊಂದಿಗೆ ನಮ್ಮ ಸಂಪೂರ್ಣ ಸಹಮತವಿದೆʼ ಎನ್ನುತ್ತಿದ್ದರು.
ಆದರೆ, ವಾಜಪೇಯಿಯವರು ಒಬ್ಬ ಪ್ರಧಾನಿಯಾಗಿ ಪ್ರತಿಯೊಂದರಲ್ಲೂ ಆರೆಸ್ಸೆಸ್ ಹೇಳಿದಂತೆ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅದರಲ್ಲೂ 1999ರಿಂದ 2004ರ ನಡುವಿನ ಅವಧಿಯಲ್ಲಿ ಅವರ ಸರಕಾರವು ಆರ್ಥಿಕ ಕ್ಷೇತ್ರ ಮತ್ತು ವಿದೇಶಾಂಗ ನೀತಿಗಳಲ್ಲಿ ಆರೆಸ್ಸೆಸ್ ಒಪ್ಪದೆ ಇದ್ದಂತಹ ಹಲವು ಹೆಜ್ಜೆಗಳನ್ನು ಇಟ್ಟಿತು. ಆಶ್ಚರ್ಯವೆಂದರೆ, ಈ ವಿಚಾರಗಳಲ್ಲಿ ವಾಜಪೇಯಿಯವರು ತಮ್ಮ ದೀರ್ಘಕಾಲದ ಗೆಳೆಯರಾದ ಎಲ್.ಕೆ.ಆಡ್ವಾಣಿಯವರನ್ನು ಕೂಡ ನೆಚ್ಚಿಕೊಂಡಿರಲಿಲ್ಲ! ಈ ವಿಚಾರಗಳಲ್ಲಿ ಆಡ್ವಾಣಿಯವರಿಗೆ ತಾಂತ್ರಿಕ ಪರಿಣತಿಯಾಗಲಿ, ಸೈದ್ಧಾಂತಿಕ ಪರಿಣತಿಯಾಗಲಿ ಇಲ್ಲವೆನ್ನುವುದು ಅವರ ಈ ನಿಲುವಿಗೆ ಕಾರಣವಾಗಿತ್ತು.
ಕ್ಲಿಂಟನ್ ಬಂದ ಸನ್ನಿವೇಶ
ವಾಜಪೇಯಿಯವರು ಓರ್ವ ಪ್ರಧಾನಿಯಾಗಿ ತಾನು ಯಾವ ದಾರಿಯಲ್ಲಿ ಸಾಗಲಿದ್ದೇನೆ ಎನ್ನುವುದನ್ನು 2000ನೇ ಇಸವಿಯ ಮಾರ್ಚ್ ತಿಂಗಳಲ್ಲಿ ತೋರಿಸಿದರು. ಏಕೆಂದರೆ, ಅಮೆರಿಕದ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಮಾರ್ಚ್ 19ರಂದು ಐದು ದಿನಗಳ ಭಾರತ ಭೇಟಿಗೆಂದು ದೆಹಲಿಗೆ ಬಂದಿಳಿದರು. ಇಲ್ಲೊಂದು ಕುತೂಹಲಕರ ಸಂಗತಿ ಇದೆ. ಅದೇನೆಂದರೆ, ಅಮೆರಿಕದ ಅಧ್ಯಕ್ಷರೊಬ್ಬರು ಹೀಗೆ ಹಿಂದೆ ಭಾರತಕ್ಕೆ ಭೇಟಿ ಕೊಟ್ಟಿದ್ದೆಂದರೆ 1978ರಷ್ಟು ಹಿಂದೆ. ಕಾಕತಾಳೀಯವೆಂದರೆ, ವಾಜಪೇಯಿಯವರು ಆಗ ಜನತಾ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದರು. ಈಗ ಬಂದಿಳಿದಿದ್ದ ಬಿಲ್ ಕ್ಲಿಂಟನ್ ಅವರ ಕಣ್ಣಿದ್ದುದು ಭಾರತದ ಮಾರುಕಟ್ಟೆಯ ಮೇಲಷ್ಟೆ. ಇದನ್ನೇನೂ ಅವರು ಮುಚ್ಚಿಡಲಿಲ್ಲ. ಅವರು ನೇರವಾಗಿಯೇ, ʼಈಗ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹತ್ತು ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದೆ,ʼ ಎಂದರು. ಈ ಭೇಟಿಯಲ್ಲಿ ಅವರು ಹೈದರಾಬಾದ್‌ಗೂ ತೆರಳಿ, ಭಾರತದ ಸಾಫ್ಟ್‌ವೇರ್ ವಲಯದ ಶಕ್ತಿಯನ್ನು ಅಂದಾಜು ಮಾಡಿಕೊಂಡರು.
ಏತನ್ಮಧ್ಯೆ, ಅತ್ಯಂತ ವೇಗದಲ್ಲಿ ಬೆಳೆಯುತ್ತಿದ್ದ ಚೀನಾದ ಆರ್ಥಿಕತೆಯು ಅಮೆರಿಕಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿತ್ತು. ಇದನ್ನು ಗಮನಿಸುತ್ತಿದ್ದ ಅಮೆರಿಕವು ಚೀನಾವನ್ನು ನಿಯಂತ್ರಿಸಬೇಕೆಂದರೆ ತಾನು ಭಾರತವನ್ನು ಒಲಿಸಿಕೊಳ್ಳಬೇಕು ಎನ್ನುವ ತೀರ್ಮಾನಕ್ಕೆ ಬಂದಿತ್ತು. ವಾಜಪೇಯಿ ಕೂಡ ಅಮೆರಿಕದ ಈ ಭಾರತದ ಪರ ತುಡಿತದಲ್ಲಿ ದೇಶದ ಹಿತಾಸಕ್ತಿ ಅಡಗಿದೆ ಎನ್ನುವುದನ್ನು ಕಂಡುಕೊಂಡರು. ಸೋವಿಯತ್ ಒಕ್ಕೂಟದ ಪತನದ ನಂತರ ಏಕಧ್ರುವೀಯವಾಗಿರುವ ಜಗತ್ತಿನಲ್ಲಿ ಅಮೆರಿಕದೊಂದಿಗೆ ಹೆಜ್ಜೆ ಇಡುವುದು ದೇಶದ ದೃಷ್ಟಿಯಿಂದ ವಿಹಿತ ಎನ್ನುವುದನ್ನು ಅವರು ಮನಗಂಡಿದ್ದರು. ಒಟ್ಟಿನಲ್ಲಿ, ಈ ವಿಚಾರದಲ್ಲಿ ಅವರು ನರಸಿಂಹರಾವ್ ಅವರನ್ನು ಅನುಸರಿಸಿದರು.
ಬಂಡವಾಳ ಹಿಂದೆಗೆತ ಮತ್ತು ಅರುಣ್ ಶೌರಿ
ಕ್ಲಿಂಟನ್ ಹೀಗೆ ಸ್ಪಷ್ಟವಾದ ಆರ್ಥಿಕ ಉದ್ದೇಶಗಳೊಂದಿಗೆ ಭಾರತಕ್ಕೆ ಬಂದು ಹೋಗಿ, ಮೂರು ತಿಂಗಳಾಗಿದ್ದವು. ಆಗ ವಾಜಪೇಯಿಯವರು ಅರುಣ್ ಶೌರಿಯವರನ್ನು ತಮ್ಮ ಮಂತ್ರಿಮಂಡಲಕ್ಕೆ ಸೇರಿಸಿಕೊಂಡು, ಹೊಸದಾಗಿ ರಚಿಸಿದ್ದ ಬಂಡವಾಳ ಹಿಂದೆಗೆತ ಖಾತೆಯನ್ನು ಅವರಿಗೆ ಕೊಟ್ಟರು. ಅಂದಹಾಗೆ, ಇದೇ ಶೌರಿಯವರು 1998ರಲ್ಲಿ ಪಕ್ಷದ ವತಿಯಿಂದ ರಾಜ್ಯಸಭೆಯನ್ನು ಪ್ರವೇಶಿಸುವಂತೆ ವಾಜಪೇಯಿ ನೋಡಿಕೊಂಡಿದ್ದರು. ಅಂದಹಾಗೆ, ಅರುಣ್ ಶೌರಿಯವರು ಓರ್ವ ಸ್ವೋಪಜ್ಞ ಚಿಂತಕ (ಒರಿಜಿನಲ್ ಥಿಂಕರ್). ಮೂಲತಃ ಅರ್ಥಶಾಸ್ತ್ರದ ವಿದ್ಯಾರ್ಥಿಯಾದ ಅವರು, ಆ ವಿಷಯದಲ್ಲಿ ಪಿಎಚ್.ಡಿ ಪಡೆದಿದ್ದರಲ್ಲದೆ ಒಂದಿಷ್ಟು ವರ್ಷಗಳ ಕಾಲ ವಿಶ್ವಬ್ಯಾಂಕ್‌ನಲ್ಲೂ ಕೆಲಸ ಮಾಡಿದ್ದರು. ಅವರು ಪತ್ರಿಕೋದ್ಯಮಕ್ಕೆ ಧುಮುಕಿದ್ದು ಆಮೇಲಷ್ಟೆ. ಒಳ್ಳೆಯ ವಿದ್ವಾಂಸರಾದ ಅರುಣ್ ಶೌರಿಯವರ ಹತ್ತಾರು ಪುಸ್ತಕಗಳಲ್ಲಿ ಸಮಾಜವಾದ, ಮಾರ್ಕ್ಸ್‌ವಾದ ಮತ್ತು ನ್ಯಾಯಾಂಗದ ಅತಿಯಾದ ಸಕ್ರಿಯತೆಯ ವಿರುದ್ಧದ ವಿಚಾರಧಾರೆಗಳಿರುವುದನ್ನು ಆಸಕ್ತರು ಗಮನಿಸಬಹುದು. ಅದರಲ್ಲೂ ಆರೆಸ್ಸೆಸ್‌ನಲ್ಲಿ ಗುರುತಿಸಿಕೊಂಡವರು ಶೌರಿಯವರ ಕೃತಿಗಳನ್ನು ಓದುವುದು ಅಗತ್ಯವಾಗಿತ್ತು.
ಅರುಣ್ ಶೌರಿ, ಯಶವಂತ್ ಸಿನ್ಹಾ
ನೆಹರು ಅವರ ಕಾಲದಲ್ಲಿ ಸರಕಾರವು ಏರ್‌ಲೈನ್ಸ್‌ನಿಂದ ಹಿಡಿದು ಟೆಲಿಕಾಂವರೆಗೆ ಪ್ರತಿಯೊಂದು ಉದ್ಯಮವನ್ನೂ ತಾನೇ ನಡೆಸುತ್ತಿತ್ತು. 1947ರಿಂದ 1991ರ ಅವಧಿಯಲ್ಲಿ ಸ್ವತಃ ಸರಕಾರವೇ ಈ ಉದ್ದಿಮೆಗಳಲ್ಲಿ 2 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಬಂಡವಾಳವನ್ನು ತೊಡಗಿಸಿತ್ತು. 1991ರ ನಂತರ ಇವುಗಳಿಗೆ ಪುನಃ 61,968 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿತ್ತು. ದುರಂತವೆಂದರೆ, ಇದಕ್ಕೆ ಪ್ರತಿಯಾಗಿ ಸರಕಾರದ ಬೊಕ್ಕಸಕ್ಕೆ ಬಂದಿದ್ದು ಬರೀ 9,971 ಕೋಟಿ ರೂಪಾಯಿಗಳಷ್ಟೆ! ಒಟ್ಟಿನಲ್ಲಿ ಆ ದಿನಗಳಲ್ಲಿ ದೇಶದ ತೆರಿಗೆದಾರನನ್ನು ಲೂಟಿ ಮಾಡಲಾಗುತ್ತಿತ್ತು.
ಯಾವ ಬೆಲೆ ತೆತ್ತಾದರೂ ಈ ಕೆಟ್ಟ ಪ್ರವೃತ್ತಿಯನ್ನು ಬದಲಿಸಬೇಕೆಂದು ವಾಜಪೇಯಿ ಸರಕಾರ ತೀರ್ಮಾನಿಸಿತು. ಇದರ ಮೊದಲ ಹೆಜ್ಜೆಯಾಗಿ ಅದು, ಸರಕಾರಿ ಸ್ವಾಮ್ಯದ 27 ಉದ್ದಿಮೆಗಳಲ್ಲಿದ್ದ ತನ್ನ ಪಾಲಿನ ಷೇರು ಬಂಡವಾಳವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಯಿತು. ಹೀಗೆ ಮಾಡಿದರೆ, ಸರಕಾರದ ಖಜಾನೆಗೆ 63,500 ಕೋಟಿ ರೂ. ಆದಾಯ ಹರಿದು ಬರುತ್ತದೆನ್ನುವ ಲೆಕ್ಕಾಚಾರವನ್ನೂ ಅದು ಹಾಕಿತು. ಐವತ್ತು ಅಧಿಕಾರಿಗಳನ್ನು ತಮ್ಮ ಸುತ್ತ ಕೂರಿಸಿಕೊಂಡ ಅರುಣ್ ಶೌರಿಯವರು ಏರ್ ಇಂಡಿಯಾ, ಮಾರುತಿ ಕಾರ್ ಕಂಪನಿ, ಮುಂಬಯಿಯಲ್ಲಿದ್ದ ಸೆಂಟಾರ್ ಹೋಟೆಲ್ ಮುಂತಾದ ಸಂಸ್ಥೆಗಳಲ್ಲಿನ ಸರಕಾರಿ ಬಂಡವಾಳವನ್ನು ಹಿಂದೆಗೆದುಕೊಳ್ಳುವ ಪ್ರಕ್ರಿಯೆಯನ್ನು ಆಖೈರುಗೊಳಿಸಿದರು. ಹಿಂದಿನ ಐದು ಸರಕಾರಗಳಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದ ಮಾಂಟೆಕ್ ಸಿಂಗ್ ಅಹ್ಲುವಾಲಿಯ ಇದನ್ನೆಲ್ಲ ಗಮನಿಸುತ್ತಿದ್ದರು. ಕೊನೆಗೊಂದು ದಿನ ಅವರು, ʼವಾಜಪೇಯಿಯವರು ತುಂಬಾ ಧೈರ್ಯವಾಗಿ ಖಾಸಗೀಕರಣವನ್ನು ಕೈಗೊಂಡರು. ಹಿಂದಿನ ಸರಕಾರಗಳು ಈ ವಿಚಾರದಲ್ಲಿ ಹಿಂದೇಟು ಹಾಕುತ್ತಿದ್ದವು. ಷೇರುವಿಕ್ರಯ ಖಾತೆಯನ್ನು ನಿಭಾಯಿಸುತ್ತಿರುವ ಅರುಣ್ ಶೌರಿಯವರು ನಿಜವಾದ ಸಾಧನೆ ಮಾಡುವ ಗುರಿಯನ್ನು ಹೊಂದಿದ್ದಾರೆ,ʼ ಎಂದು ಪ್ರಶಂಸಿಸಿದರು.
ಆದರೆ, ಶೌರಿಯವರ ಈ ಉತ್ಸಾಹವು ವಾಜಪೇಯಿಯವರ ಮಂತ್ರಿಮಂಡಲವನ್ನು ಇತ್ತಂಡಗಳನ್ನಾಗಿ ಮಾಡಿತು. ಏಕೆಂದರೆ, ಅವರ ಹಿರಿಯ ಸಹೋದ್ಯೋಗಿಗಳಾದ ಜಾರ್ಜ್ ಫರ್ನಾಂಡಿಸ್, ರಾಮ್ ನಾಯಕ್, ಮುರಳಿ ಮನೋಹರ ಜೋಷಿ ಮುಂತಾದವರು ಈ ಷೇರುವಿಕ್ರಯವನ್ನು ವಿರೋಧಿಸತೊಡಗಿದರು. ವಿಚಿತ್ರವೆಂದರೆ, 1991ರಲ್ಲಿ ನರಸಿಂಹರಾವ್ ಅವರ ಆರ್ಥಿಕ ಉದಾರೀಕರಣವನ್ನು ಪಕ್ಷದ ನಿಲುವನ್ನೂ ಮೀರಿ ಬೆಂಬಲಿಸಿದ್ದ ಆಡ್ವಾಣಿ, ಈಗ ಅದೇ ಪ್ರಕ್ರಿಯೆಯನ್ನು ಬೆಂಬಲಿಸದೆ ದೂರವುಳಿದರು! ಏಕೆಂದರೆ, ಇಷ್ಟು ಹೊತ್ತಿಗಾಗಲೇ ಅವರು ಆರೆಸ್ಸೆಸ್‌ನ ಅಂಗಶಾಖೆಯಾದ ʼಸ್ವದೇಶಿ ಜಾಗರಣ್ ಮಂಚ್ʼನ ಎಸ್.ಗುರುಮೂರ್ತಿಯವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು.
ವಾಜಪೇಯಿ ಮಾತ್ರ ಈ ವಿರೋಧದಿಂದ ವಿಚಲಿತರಾಗಲಿಲ್ಲ. ಬದಲಿಗೆ ಅವರು ಸರಕಾರಿ ಸ್ವಾಮ್ಯದಲ್ಲಿದ್ದ ಹನ್ನೆರಡು ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿದರು. ಇದರಿಂದ ಬೊಕ್ಕಸಕ್ಕೆ 29,990 ಕೋಟಿ ರೂ. ಆದಾಯ ಹರಿದು ಬಂತು. ಆದರೆ, ವಾಜಪೇಯಿಯವರು ಇದೇ ಉತ್ಸಾಹದಲ್ಲಿ ಒಳ್ಳೆಯ ಲಾಭವನ್ನು ತಂದುಕೊಡುತ್ತಿದ್ದ ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂಗಳಲ್ಲಿದ್ದ ಸರಕಾರಿ ಬಂಡವಾಳವನ್ನು ಹಿಂತೆಗೆದುಕೊಳ್ಳಲು ಮುನ್ನುಗ್ಗಿದ್ದಾಗ ಅವರ ʼಷೇರು ವಿಕ್ರಯದ ಓಟʼಕ್ಕೆ ಕಡಿವಾಣ ಬಿತ್ತು. ಅವರ ಈ ನಿರ್ಧಾರವನ್ನು ಪ್ರತಿಪಕ್ಷಗಳೂ ಒಪ್ಪಲಿಲ್ಲ; ಅವರ ಸಚಿವ ಸಂಪುಟದ ಮಿತ್ರರೂ ಒಪ್ಪಲಿಲ್ಲ. ಮೂರು ವರ್ಷಗಳ ಕಾಲ ಈ ಷೇರುವಿಕ್ರಯವನ್ನು ಕ್ಷಿಪ್ರಗತಿಯಲ್ಲಿ ನಡೆಸಿದ ವಾಜಪೇಯಿ ಸಂಸತ್ತಿನ ನಾಡಿಮಿಡಿತವನ್ನು ಗ್ರಹಿಸಿದರು. ಅಲ್ಲದೆ, ಈ ಪ್ರಕ್ರಿಯೆಯನ್ನು ನಿಧಾನಗೊಳಿಸುವಂತೆ ತಮ್ಮ ನೆಚ್ಚಿನ ಅರುಣ್ ಶೌರಿಯವರಿಗೆ ಸೂಚಿಸಿದರು.
ಸುದರ್ಶನ್‌ರನ್ನು ಸರ್ವಜ್ಞ ಎಂದಿದ್ದರು!
ವಾಜಪೇಯಿಯವರು ನರಸಿಂಹರಾವ್ ಅವರಿಗಿಂತ ತೀವ್ರಗತಿಯಲ್ಲಿ ಖಾಸಗೀಕರಣವನ್ನು ಮಾಡತೊಡಗಿದ್ದರಿಂದ ಆರೆಸ್ಸೆಸ್ ಮುನಿಸಿಕೊಂಡಿತು. ಅರುಣ್ ಶೌರಿ ಕೂಡ ಈ ವಿಷಯದಲ್ಲಿ ಸಂಘದ ಕೋಪಕ್ಕೆ ತುತ್ತಾದರು. ಏಕೆಂದರೆ, ಆಗ ಆರೆಸ್ಸೆಸ್‌ನ ಸರಸಂಘ ಚಾಲಕರಾಗಿದ್ದ ಕೆ.ಎಸ್.ಸುದರ್ಶನ್, ಸರಕಾರದ ಆರ್ಥಿಕ ನೀತಿಗಳ ಬಗ್ಗೆ ತೀವ್ರ ನಿಗಾ ಇಟ್ಟಿದ್ದರು. ವಾಜಪೇಯಿಯವರು ಸಂಘದ ನಿರೀಕ್ಷೆಗೆ ತಕ್ಕಂತೆ ಆರ್ಥಿಕ ಉಪಕ್ರಮಗಳನ್ನು ಕೈಗೊಳ್ಳದೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆಂದು ಸಿಟ್ಟಿಗೆದ್ದ ಅವರು ಕೊನೆಗೆ, ʼಈ ಸರಕಾರದ ಆರ್ಥಿಕ ನೀತಿಗಳು ಕಾರ್ಮಿಕವಿರೋಧಿ, ರೈತವಿರೋಧಿ ಮತ್ತು ಬಡವರ ವಿರೋಧಿಗಳಾಗಿವೆ,ʼ ಎಂದು ಹರಿಹಾಯ್ದರು.
ಇದರಿಂದ ವಾಜಪೇಯಿ ಸ್ವಲ್ಪ ವಿಚಲಿತರಾದರು. ಏಕೆಂದರೆ, ತಮ್ಮ ವಿರುದ್ಧ ಒಂದೇ ಸಮನೆ ವಾಗ್ದಾಳಿ ಮಾಡುತ್ತಿದ್ದ ಸುದರ್ಶನ್ ಅವರನ್ನು ಸಮಾಧಾನಪಡಿಸಲು ಸೂಚಿಸಿ ಅವರು ಅರುಣ್ ಶೌರಿ ಮತ್ತು ತಮ್ಮ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರನ್ನು ಕಳಿಸಿದರು. ಆ ಸಂದರ್ಭದಲ್ಲಿ ಸುದರ್ಶನ್ ಅವರು, ʼನಿಮ್ಮ ವಿದೇಶಿ ವಿನಿಮಯವೇಕೆ ಡಾಲರ್ ರೂಪದಲ್ಲಿದೆ? ಅದೇಕೆ ರೂಪಾಯಿಯಲ್ಲಿ ಇರಬಾರದು? ನೀವೆಲ್ಲ ಸ್ವಾಭಿಮಾನವಿಲ್ಲದ ಜನ ಎನ್ನುವುದನ್ನು ಇದು ತೋರಿಸುತ್ತದೆ,ʼ ಎಂದು ವಾಗ್ದಾಳಿ ನಡೆಸಿದರು. ಇನ್ನೊಂದು ಸಂದರ್ಭದಲ್ಲಿ ಕೆಲವು ಸಂಪುಟ ಸಹೋದ್ಯೋಗಿಗಳು ಸರಕಾರವು ಪೇಟೆಂಟ್ ಕಾಯ್ದೆಗೆ ತರಲು ಉದ್ದೇಶಿಸಿದ್ದ ತಿದ್ದುಪಡಿಯ ಬಗ್ಗೆ ವಿವರಿಸಲು ಸುದರ್ಶನ್ ಅವರನ್ನು ಭೇಟಿ ಮಾಡಲೆಂದು ವಾಜಪೇಯಿಯವರ ಅನುಮತಿ ಕೇಳಿದರು. ಆಗ ವಾಜಪೇಯಿಯವರು, ʼಅರೆ, ಅವರನ್ನು ಭೇಟಿ ಮಾಡಲು ನೀವೇಕೆ ಹೋಗುತ್ತಿದ್ದೀರಿ? ಆ ಮನುಷ್ಯ ಒಬ್ಬ ಸರ್ವಜ್ಞ. ಅವರಿಗೆ ಸರ್ವಸ್ವವೂ ಗೊತ್ತು. ಅವರೇನೂ ನಿಮ್ಮ ಮಾತನ್ನು ಕೇಳಿಸಿಕೊಳ್ಳುವುದಿಲ್ಲ,ʼ ಎಂದು ವ್ಯಂಗ್ಯವಾಡಿದರು.
ಆರ್ಥಿಕ ನೀತಿಗಳಿಗೆ ಸಂಬಂಧಿಸಿದಂತೆ ವಾಜಪೇಯಿಯವರನ್ನು ಆಡ್ವಾಣಿಯವರ ಮೂಲಕ ನಿಯಂತ್ರಿಸಬೇಕೆನ್ನುವುದು ಆರೆಸ್ಸೆಸ್‌ನ ಆಸೆಯಾಗಿತ್ತು. ಆದರೆ, ಆರೆಸ್ಸೆಸ್ ಪ್ರತಿಪಾದಿಸುತ್ತಿದ್ದ ಸ್ವದೇಶಿ ಆರ್ಥಿಕ ವ್ಯವಸ್ಥೆಯ ತತ್ತ್ವದ ಬಗ್ಗೆ ಅವರಿಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಇದೇನೇ ಇರಲಿ, ಆರ್ಥಿಕ ಉಪಕ್ರಮಗಳ ವಿಚಾರದಲ್ಲಿ ವಾಜಪೇಯಿಯವರು ಸದಾ ಆರೆಸ್ಸೆಸ್‌ನ ತಾಳಕ್ಕೆ ತಕ್ಕಂತೆ ಕುಣಿಯದೆ, ಸ್ವತಂತ್ರವಾಗಿ ಹೆಜ್ಜೆ ಇಡುತ್ತಿದ್ದರು. ಒಂದು ಹಂತದಲ್ಲಂತೂ ಆರೆಸ್ಸೆಸ್‌ನ ಕಾರ್ಮಿಕ ಮುಖಂಡರಾಗಿದ್ದ ದತ್ತೋಪಂತ ಠೇಂಗಡಿ ಕೂಡ, ʼವಾಜಪೇಯಿ ಸರಕಾರದ ಆರ್ಥಿಕ ನೀತಿ ರಾಷ್ಟ್ರವಿರೋಧಿಯಾಗಿದೆ,ʼ ಎಂದು ಟೀಕಿಸಿದರು. ಈ ಹಂತದಲ್ಲಿ ಸುದರ್ಶನ್ ಅವರನ್ನು ಭೇಟಿ ಮಾಡಿದ ವಾಜಪೇಯಿ, ತಮ್ಮ ವಿರುದ್ಧ ಮಾಡುತ್ತಿರುವ ಟೀಕೆಗಳಿಗೆ ವಿವರಣೆಯನ್ನು ಬಯಸಿದರು! ಆದರೆ, ಸುದರ್ಶನ್ ಅವರು ಅಂತಹ ವಿವರಣೆಯನ್ನು ಕೊಡಲು ನಿರಾಕರಿಸಿದರು.
ಸುವರ್ಣ ಚತುಷ್ಪಥ ಮತ್ತು ಷಟ್ಪಥ
ಒಂದು ವಿಚಾರದಲ್ಲಿ ಆರೆಸ್ಸೆಸ್, ವಾಜಪೇಯಿಯವರನ್ನು ಮೆಚ್ಚಿಕೊಂಡಿತು. ಅದ್ಯಾವುದೆಂದರೆ, ದೆಹಲಿ-ಕಲ್ಕತ್ತಾ-ಬಾಂಬೆ-ಚೆನ್ನೈಗಳನ್ನು ಬೆಸೆಯುತ್ತಿದ್ದ ಸುವರ್ಣ ಚತುಷ್ಪಥ ಮತ್ತು ಷಟ್ಪಥ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ! ಈ ಯೋಜನೆಯಡಿ ವಾಜಪೇಯಿಯವರು ತಮ್ಮ ಸರಕಾರದ ಅವಧಿಯಲ್ಲಿ 24ಸಾವಿರ ಕಿಲೋಮೀಟರ್‌ಗೂ ಹೆಚ್ಚು ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಸಾಕಾರಗೊಳಿಸಿದರು. ಈ ವಿಷಯದಲ್ಲಿ ಆರೆಸ್ಸೆಸ್‌ನ ಎರಡನೇ ಅತಿದೊಡ್ಡ ಮುಖಂಡರಾಗಿದ್ದ ಕರ್ನಾಟಕದ ಹೊ.ವೆ.ಶೇಷಾದ್ರಿಯವರು ಸರಕಾರಕ್ಕೆ ನಿರ್ಣಾಯಕ ಸಹಕಾರ ನೀಡಿದರು. ಅಂದರೆ, ಈ ಸುವರ್ಣ ಚತುಷ್ಪಥ ಮತ್ತು ಷಟ್ಪಥ ಹೆದ್ದಾರಿಗಳು ಎಲ್ಲೆಲ್ಲಿ ಹಾದು ಹೋಗಬೇಕು ಎನ್ನುವುದನ್ನು ಸರಕಾರಕ್ಕೆ ಹೇಳುತ್ತಿದ್ದ ಅವರು, ಇದಕ್ಕೆ ಸಂಬಂಧಿಸಿದಂತೆ ಸರಕಾರದ ನೀತಿಯು ರೂಪು ಪಡೆಯುವುದರಲ್ಲೂ ಮಹತ್ತ್ವದ ಪಾತ್ರ ವಹಿಸಿದರು.
ಹಾಗೆಯೇ, ಟೆಲಿಕಾಂ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ವಾಜಪೇಯಿಯವರ ಸರಕಾರ ಕೈಗೊಂಡ ಕ್ರಮಗಳನ್ನೂ ಆರೆಸ್ಸೆಸ್ ವಿರೋಧಿಸಲಿಲ್ಲ. ಏಕೆಂದರೆ, ಟೆಲಿಕಾಂ ಕ್ಷೇತ್ರದ ಖಾಸಗೀಕರಣವು ಭಾರತೀಯರನ್ನು ಪರಸ್ಪರ ಬೆಸೆಯಲು ಅನುಕೂಲವಾಗಲಿದೆ ಎನ್ನುವುದು ಅದರ ವಾದವಾಗಿತ್ತು. ಸ್ವತಃ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರೇ ʼವಾಜಪೇಯಿಯವರು 1999ರಲ್ಲಿ ಜಾರಿಗೆ ತಂದ ನೂತನ ಟೆಲಿಕಾಂ ನೀತಿಯು ಒಂದು ದಿಟ್ಟ ಕ್ರಮವಾಗಿದೆ. ಅವರು ತಂದ ಕ್ರಮಗಳಿಂದಾಗಿ ಟೆಲಿಕಾಂ ವಲಯ ಉಳಿದುಕೊಂಡಿತು,ʼ ಎಂದು ಉದ್ಗರಿಸಿದ್ದುಂಟು. ಅವರ ಈ ಮಾತಿನಲ್ಲಿ ಸತ್ಯವಿದೆ. ಏಕೆಂದರೆ, ಭಾರತದಲ್ಲಿ 1995ರಲ್ಲಿ ಮೊಬೈಲ್ ಫೋನ್‌ಗಳ ಬಳಕೆ ಶುರುವಾಯಿತಷ್ಟೆ. ಇದಾದಮೇಲೆ ನಾಲ್ಕು ವರ್ಷಗಳಲ್ಲಿ (1999ರವರೆಗೆ) ಈ ಕ್ಷೇತ್ರವು ಕೇವಲ 10 ಲಕ್ಷ ಗ್ರಾಹಕರನ್ನಷ್ಟೇ ಹೊಂದಿತ್ತು. ಆದರೆ, ವಾಜಪೇಯಿ ಸರಕಾರವು ತಂದ ನೂತನ ಟೆಲಿಕಾಂ ನೀತಿಯ ಫಲವಾಗಿ ನಂತರದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿನ ಮೊಬೈಲ್ ಬಳಕೆದಾರರ ಸಂಖ್ಯೆಯು 1.30 ಕೋಟಿಗಳಿಗೇರಿತು.
ಪರಮ ಚಾಣಾಕ್ಷ
ವಾಜಪೇಯಿಯವರಲ್ಲಿ ಒಂದು ದೊಡ್ಡ ಗುಣವಿತ್ತು. ಅದೇನೆಂದರೆ, ತಮ್ಮ ನಂಬಿಕಸ್ಥರನ್ನು ಅವರು ಎಂದೂ ನಡುನೀರಿನಲ್ಲಿ ಕೈ ಬಿಡುತ್ತಿರಲಿಲ್ಲ. ಆ ದಿನಗಳಲ್ಲಿ ಆರೆಸ್ಸೆಸ್ ಮತ್ತು ಕೆಲವು ದೊಡ್ಡದೊಡ್ಡ ಉದ್ದಿಮೆಗಳಿಗೆ ಹಣಕಾಸು ಸಚಿವ ಯಶವಂತ ಸಿನ್ಹಾ ಅವರನ್ನು ಕಂಡರೂ ಆಗುತ್ತಿರಲಿಲ್ಲ. ಅಂದರೆ, ಸಿನ್ಹಾ ಕೂಡ ಶೌರಿಯವರಂತೆಯೇ ಸಂಘದ ಅವಕೃಪೆಗೆ ತುತ್ತಾಗಿದ್ದರು. ಅಲ್ಲದೆ, ಅವರನ್ನು ಹಣಕಾಸು ಖಾತೆಯಿಂದ ಕಿತ್ತು ಹಾಕಬೇಕೆಂಬ ಬೇಡಿಕೆಯು 2002ನೇ ಇಸವಿಯಲ್ಲಿ ತಾರಕಕ್ಕೇರಿತು. ಆಗ ವಾಜಪೇಯಿ ಒಂದು ಉಪಾಯ ಮಾಡಿದರು. ಆರೆಸ್ಸೆಸ್ ಮತ್ತು ಕೆಲವು ಔದ್ಯಮಿಕ ಸಂಸ್ಥೆಗಳು ಒತ್ತಾಯಕ್ಕೆ ಮಣಿದಂತೆ ತೋರಿಸಿಕೊಂಡ ಅವರು, ಸಿನ್ಹಾ ಅವರನ್ನು ವಿದೇಶಾಂಗ ಸಚಿವರನ್ನಾಗಿ ಮಾಡಿ, ಅದುವರೆಗೂ ಆ ಖಾತೆಯಲ್ಲಿದ್ದ ಹಿರಿಯ ನಾಯಕ ಮತ್ತು ಉದಾರೀಕರಣದ ಕಟ್ಟಾ ಬೆಂಬಲಿಗರಾಗಿದ್ದ ಜಸ್ವಂತ್ ಸಿನ್ಹಾ ಅವರನ್ನು ಹಣಕಾಸು ಸಚಿವಾಲಯಕ್ಕೆ ತಂದು ಕೂರಿಸಿದರು! ಈ ಮೂಲಕ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದರು. ಅಂದರೆ, ಆರೆಸ್ಸೆಸ್‌ನ ಬೇಡಿಕೆಯನ್ನೂ ಈಡೇರಿಸಿದರು; ಹಾಗೆಯೇ, ಉದಾರೀಕರಣವು ಎಂದಿನಂತೆ ನಡೆಯುವಂತೆಯೂ ನೋಡಿಕೊಂಡರು. ಒಟ್ಟಿನಲ್ಲಿ ಅವರಿಗೆ ಯಾವಾಗ ತಜ್ಞರ ಮಾತಿಗೆ ಬೆಲೆ ಕೊಡಬೇಕು ಎನ್ನುವುದೂ ಗೊತ್ತಿತ್ತು; ಹಾಗೆಯೇ ಯಾವಾಗ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕೆನ್ನುವುದೂ ತಿಳಿದಿತ್ತು! ಇಲ್ಲದಿದ್ದರೆ, ಆರೆಸ್ಸೆಸ್ ಜೊತೆ ಅವರಿಗೆ ಏಗಲು ಆಗುತ್ತಿರಲಿಲ್ಲ.
ವಿದೇಶಾಂಗ ನೀತಿಯ ವಿಚಾರದಲ್ಲೂ ಅಷ್ಟೆ, ವಾಜಪೇಯಿಯವರು ಅಮೆರಿಕ, ರಷ್ಯಾ, ಇರಾನ್ ಮತ್ತು ಚೀನಾದ ಜೊತೆ ಹಿಂದಿನ ಬಾಂಧವ್ಯವನ್ನು ಯಥಾರೀತಿಯಲ್ಲಿ ಮುಂದುವರಿಸಿಕೊಂಡು ಬಂದರು. ಆದರೆ, 2003ರಲ್ಲಿ ಇಸ್ರೇಲಿನ ಪ್ರಧಾನಿ ಏರಿಯಲ್ ಶೆರೋನ್ ಅವರನ್ನು ಭಾರತಕ್ಕೆ ಬರುವಂತೆ ಅವರು ನೋಡಿಕೊಂಡರು. ಈ ಮೂಲಕ ಅವರು ವಿದೇಶಾಂಗ ನೀತಿಯಲ್ಲಿ ಚಾರಿತ್ರಿಕ ಹೆಜ್ಜೆಯನ್ನಿಟ್ಟರು. ಆದರೆ, ಪ್ರತ್ಯೇಕ ಪ್ಯಾಲೆಸ್ತೀನ್‌ಗಾಗಿ ಹೋರಾಟ ನಡೆಸುತ್ತಿದ್ದ ಪ್ಯಾಲೆಸ್ತೀನ್ ಲಿಬರೇಷನ್ ಆರ್ಗನೈಸೇಷನ್‌ನ (ಪಿಎಲ್‌ಒ) ನಾಯಕ ಯಾಸರ್ ಅರಾಫತ್ ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯನ್ನು ಶೆರೋನ್ ಇಟ್ಟಾಗ, ವಾಜಪೇಯಿಯವರು ಹಾಗೆ ಮಾಡಲು ನಿರಾಕರಿಸಿದರು. ಇರಾಕ್ ಮೇಲೆ ಸಮರ ಸಾರಿದ್ದ ಅಮೆರಿಕದ ನೆರವಿಗೆ ಭಾರತೀಯ ಪಡೆಗಳನ್ನು ಕಳಿಸಬೇಕೋ, ಬೇಡವೋ ಎನ್ನುವ ವಿಚಾರದಲ್ಲಿ ಕೂಡ ವಾಜಪೇಯಿ ಇಂಥದ್ದೇ ಚಾಣಾಕ್ಷ ಹೆಜ್ಜೆಯನ್ನಿಟ್ಟರು. ಈ ವಿಚಾರದಲ್ಲಿ ಅವರು ಸಂಸತ್ತಿನ ಭಾವನೆಗೆ ಬೆಲೆ ಕೊಟ್ಟು, ಅಮೆರಿಕಕ್ಕೆ ಸೇನಾ ನೆರವನ್ನು ನಿರಾಕರಿಸಿದರು. ಆದರೆ ಇದನ್ನು ಅಮೆರಿಕಕ್ಕೆ ಹೇಗೆ ತಿಳಿಸಬೇಕೋ ಹಾಗೆ ತಿಳಿಸಿದರು.
ಆರ್ಥಿಕ ವಿಚಾರವೇ ಇರಲಿ, ವಿದೇಶಾಂಗ ನೀತಿಯೇ ಇರಲಿ, ಸರಕಾರವು ಇಡುವ ಹೆಜ್ಜೆಯು ಸಂಸದರಿಗೆ ಹಿಡಿಸುವಂತಿರಬೇಕು ಎನ್ನುವುದು ವಾಜಪೇಯಿಯವರ ತತ್ತ್ವವಾಗಿತ್ತು. ಹೀಗಾಗಿಯೇ ಅದು ಅಮೆರಿಕ, ಷೇರು ವಿಕ್ರಯ, ಹೆದ್ದಾರಿ ಅಭಿವೃದ್ಧಿ ಮತ್ತು ಟೆಲಿಕಾಂಗೆ ಸಂಬಂಧಿಸಿದ ವಿಚಾರಗಳಲ್ಲಿ ಅತ್ಯಂತ ಧೈರ್ಯದ ಹೆಜ್ಜೆಗಳನ್ನಿಡಲು ಸಾಧ್ಯವಾಯಿತು. ಈ ಮೂಲಕ ಅವರು ಪ್ರವಾಹದ ವಿರುದ್ಧ ಈಜಿದರು. ಅದರಲ್ಲೂ ತಮ್ಮ ಆರ್ಥಿಕ ಉಪಕ್ರಮಗಳಿಗೆ ಆರೆಸ್ಸೆಸ್ ತೋರಿಸುತ್ತಿದ್ದ ತೀವ್ರ ವಿರೋಧವನ್ನು ಮೀರಿ ಅವರು, ಉದಾರೀಕರಣ ಮತ್ತು ಖಾಸಗೀಕರಣವನ್ನು ಮುಂದುವರಿಸಿದರು. ಅವರ ಆ ಉಪಕ್ರಮಗಳಲ್ಲಿ ದೇಶದ ಹಿತ ಅಡಗಿತ್ತೆನ್ನುವುದು ಸುಳ್ಳಲ್ಲ.
ಬಿ.ಎಸ್. ಜಯಪ್ರಕಾಶ ನಾರಾಯಣ
- ಕನ್ನಡ ಸಾಹಿತ್ಯ ಲೋಕದಲ್ಲಿ ‘ಜೇಪಿ’ ಎಂದೇ ಖ್ಯಾತಿ. ಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಖಂಡಿತಾ ಒಬ್ಬರು, ಪತ್ರಕರ್ತರು ಕೂಡ. ಅನ್ಯಭಾಷೆಗಳ ಕೆಲ ಅತ್ಯುತ್ತಮ ಕೃತಿಗಳನ್ನು ಹೆಕ್ಕಿ ಅವುಗಳನ್ನು ಕನ್ನಡೀಕರಿಸಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮೀ ಅವರ ‘ಸುಸ್ವರಲಕ್ಷ್ಮೀ ಸುಬ್ಬುಲಕ್ಷ್ಮೀ’, ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಆತ್ಮಕಥೆ ‘ನಾನು ಮಲಾಲ’, ಸ್ಯಾಮ್ ಪಿತ್ರೋಡ ಅವರ ಆತ್ಮಕಥೆ ‘ಭಾರತದ ಬೆಸುಗೆ’, ವಿಜಯ ಮಲ್ಯ ಕುರಿತ ‘ಸೊಗಸುಗಾರನ ಏಳುಬೀಳು’, ಓಂ ಸ್ವಾಮಿ ಅವರ ಆತ್ಮಕಥೆ ‘ಸಾಫ್ಟ್’ವೇರ್’ನಿಂದ ಸಾಕ್ಷಾತ್ಕಾರದೆಡೆಗೆ’, ಕಾಶ್ಮೀರಿ ಪಂಡಿತರ ಕರುಣಾಜನಕ ಕಥೆ ಹೇಳುವ ‘ಕದಡಿದ ಕಣಿವೆ’, ಸೇರಿದಂತೆ ಹತ್ತಾರು ಮಹತ್ತ್ವದ ಕೃತಿಗಳನ್ನು ಅನುವಾದಿಸಿದ್ದಾರೆ. ಈಗ ಓಶೋ ಅವರು ಶಿಕ್ಷಣದ ಕುರಿತು ಮಾಡಿರುವ ಅಪರೂಪದ ಭಾಷಣಗಳುಳ್ಳ ‘ಶಿಕ್ಷಣ ಕ್ರಾಂತಿಗೆ ಆಹ್ವಾನ’ ಕೃತಿ ಕೆಲ ದಿನಗಳ ಹಿಂದೆ ಓದುಗರ ಕೈ ಸೇರಿದೆ. ಸಂಜಯ ಬರೂ ಅವರ ‘1991: ಹೌ ಪಿ.ವಿ.ನರಸಿಂಹರಾವ್ ಮೇಡ್ ಹಿಸ್ಟರಿʼ ಕೃತಿಯು ಕನ್ನಡದಲ್ಲಿ ’ʼಪಿವಿಎನ್: ಪರ್ವಕಾಲದ ಪುರುಷೋತ್ತಮʼ ಎಂಬ ಹೆಸರಿನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ವೀರ ಸಾವರ್ಕರ್ ಅವರನ್ನು ಕುರಿತ ʼಸಾವರ್ಕರ್-ಹಿಂದುತ್ವದ ಜನಕನ ನಿಜಕತೆʼ ಕೃತಿಯು ಲೋಕಾರ್ಪಣೆಯಾಗಿದೆ. ಸದ್ಯಕ್ಕೆ, ಇವರು ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರನ್ನು ಕುರಿತ ಬೃಹತ್ ಗ್ರಂಥವನ್ನು ಅನುವಾದಿಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಎರಡು ಸಲ ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಜೇಪಿಗೆ ಸಂದಿವೆ.