ಬೆಂಗಳೂರು: ತಮ್ಮ ಮತ್ತು ಸಹೋದರನ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ರಾತ್ರಿ ಕರ್ಫ್ಯೂ ವಿಚಾರ ಮುಖ್ಯಮಂತ್ರಿ ಯಡಿಯೂರಪ್ಪನವರದಲ್ಲ. ಸುಧಾಕರ್ ಅವರದು. ಸಾಮಾನ್ಯ ಪರಿಜ್ಞಾನ ಇರುವ ಯಾರೊಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಗಲಲ್ಲಿ ಸೋಂಕು ಬರಲ್ಲ, ರಾತ್ರಿ ವೇಳೆ ಸೋಂಕು ಬರುತ್ತದೆಯೇ? ಪರಿಜ್ಞಾನ ಇರುವವರು ಯಾರೂ ಇಂತಹ ನಿರ್ಧಾರಕ್ಕೆ ಬರುವುದಿಲ್ಲ ಎಂದರು.
ಇಡೀ ವರ್ಷ ಜನ ನರಳಿದ್ದಾರೆ. ಇವರು ಯಾರ ಅಭಿಪ್ರಾಯವನ್ನೂ ಪಡೆಯದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದು ಯಾಕೆ? ಇವರಿಗೆ ಯಾರಾದರೂ ತಜ್ಞರು ರಾತ್ರಿ ವೇಳೆ ಕರ್ಫ್ಯೂ ಮಾಡಿದರೆ ಸೋಂಕು ಬರುವುದಿಲ್ಲ ಎಂದು ಸಲಹೆ ನೀಡಿದ್ದಾರಾ? ಆ ರೀತಿ ಯಾರಾದರೂ ಕೊಟ್ಟಿದ್ದರೆ ಅವರ ಫೋಟೋ ಇದ್ದರೆ ಕೊಡಿ. ಫೋಟೋನ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಎಂದು ಡಿಕೆಶಿ ವ್ಯಂಗ್ಯವಾಡಿದರು.
ಇದು ಸಾಮಾನ್ಯ ಜ್ಞಾನದ ವಿಚಾರ. ಇದರಲ್ಲಿ ಯಾವುದೇ ವಿಜ್ಞಾನ ಅಡಗಿಲ್ಲ. ರಸ್ತೆ, ಮಾರುಕಟ್ಟೆ ಸೇರಿದಂತೆ ಹಗಲೆಲ್ಲಾ ಜನ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಎಲ್ಲೆಲ್ಲಿ ಯಾವ ರೀತಿ ನಿಯಂತ್ರಣ ಮಾಡಬೇಕೋ ಆ ರೀತಿ ಕ್ರಮ ಕೈಗೊಳ್ಳಬೇಕು. ಈ ಸರಕಾರ ಬಂದ ಮೇಲೆ ಎಷ್ಟು ನಿರ್ಧಾರಗಳಲ್ಲಿ ಯೂ ಟರ್ನ್ ಹೊಡೆದಿದೆ ಎಂದು ಲೆಕ್ಕ ಹಾಕಿಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯದಿಂದ ಈ ಮಾಹಾಮಾರಿ ತೊಲಗಿ, ಜನರಿಗೆ ನೆಮ್ಮದಿ ಶಾಂತಿ ಸಿಗಲಿ ಎಂದು ನಾನು ವೈಕುಂಠ ಏಕಾದಶಿ ದಿನ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿಕೆಶಿ ತಿಳಿಸಿದರು.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ