ಮೈಸೂರು: ಆರ್‌ಎಸ್‌ಎಸ್ ಅಂದರೆ ಮೈಲಿಗೆ ಏಕೆ? ಎಂದು ಕೇಳುವ ಮೂಲಕ ಎಂಎಲ್ಸಿ ಎಚ್. ವಿಶ್ವನಾಥ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸುವ ಕುರಿತು ಆರ್‌ಎಸ್‌ಎಸ್ ಕುಮ್ಮಕ್ಕು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡಿದ್ದಾರಾ? ಆರ್‌ಎಸ್‌ಎಸ್ ಅಂದರೆ ಮಡಿವಂತಿಕೆ ಏಕೆ? ಆರ್‌ಎಸ್‌ಎಸ್, ಯುವ ಕಾಂಗ್ರೆಸ್, ಯುವ ಜನತಾದಳ, ಯುವ ಮೋರ್ಚಾಗಳಿವೆ. ಎಲ್ಲರ ಬೆಂಬಲ ನಮಗೆ ಬೇಕಾಗಿದೆ. ಬರೀ ಆರ್‌ಎಸ್‌ಎಸ್ ಬಗ್ಗೆ ಏಕೆ ಹೇಳಬೇಕು ಎಂದು ಸಿದ್ದರಾಮಯ್ಯಗೆ ವಿಶ್ವನಾಥ್ ತಿರುಗೇಟು ನೀಡಿದರು.
ಸಮುದಾಯವನ್ನು ಎಸ್‍ಟಿಗೆ ಸೇರಿಸುವ ವಿಚಾರದಲ್ಲಿ ಎಲ್ಲಾ ಸಂಘಟನೆ ಪಕ್ಷಗಳ ಬೆಂಬಲ ಕೇಳಿದ್ದೇವೆ. ಅದರಲ್ಲಿ ಆರ್‌ಎಸ್‌ಎಸ್ ಸಹಾ ಇದೆ. ಅದರಲ್ಲಿ ಸಮಸ್ಯೆ ಏನು? ಎಂದು ಅವರು ಪ್ರಶ್ನಿಸಿದರು.
ಕುರುಬ ಸಮುದಾಯ ಎಸ್‍ಟಿಗೆ ಸೇರಿಸುವ ಹೋರಾಟಕ್ಕೆ ಸಿದ್ದರಾಮಯ್ಯ ವಿರೋಧ ಇಲ್ಲ. ಇದು ಸಿದ್ದರಾಮಯ್ಯ, ಈಶ್ವರಪ್ಪ, ವಿಶ್ವನಾಥ್ ಪ್ರಶ್ನೆ ಅಲ್ಲ. ಇದು ಸಮುದಾಯದ ಪ್ರಶ್ನೆ. ಕುರುಬ ಸಮುದಾಯ ಎಸ್‍ಟಿಗೆ ಸೇರಿಸುವ ಹೋರಾಟಕ್ಕೆ ಹೀಗಾಗಲೇ ಸಿದ್ದರಾಮಯ್ಯ ಅವರನ್ನು ಕರೆದಿದ್ದೇನೆ. ಅವರು ನಮ್ಮ ಜೊತೆಗೆ ಇದ್ದಾರೆ ಎಂದರು ಅವರು.
ನಿರಂಜನಾನಂದಪುರ ಸ್ವಾಮಿಗಳ ಮೂಲಕ ನಾನು ಹಾಗೂ ಸೋಮಶೇಖರ್ ವರದಿ ಸರಕಾರಕ್ಕೆ ಕೊಟ್ಟಿದ್ದೇವೆ. ಕೇಂದ್ರ ಸರಕಾರ ಕೂಡ ಕುರುಬ ಸಮುದಾಯದ ಸಂಪ್ರದಾಯ ಮನಗಂಡು ಎಸ್‍ಟಿ ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು. ಮೇಲ್ವರ್ಗದ ಜನ ಕೂಡ ನಮಗೆ ಸಹಕಾರ ನೀಡುವ ಮೂಲಕ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
29ಕ್ಕೆ ಮೈಸೂರಿನಲ್ಲಿ ಕುರುಬ ನಾಯಕರ ಸಭೆ ಏರ್ಪಡಿಸಲಾಗಿದೆ. ಅಲ್ಲಿ ಹೋರಾಟದ ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
Lead photo: Nandan Mysore