ಚಿಕ್ಕಬಳ್ಳಾಪುರ: ನಗರಸಭೆ ಆಡಳಿತವನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಬಿಜೆಪಿ ಸಂಘಟನೆಗೆ ಮುನ್ನುಡಿ ಬರೆದಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಪಂಚಾಯಿತಿ ಚುನಾವಣೆಯಲ್ಲೂ ಕಮಾಲ್ ಮಾಡಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ 29 ಗ್ರಾಮ ಪಂಚಾಯಿತಿಗಳಲ್ಲಿ ಕೇಸರಿ ಬಾವುಟ ಹಾರಿದೆ.
ಒಟ್ಟು ಇಪ್ಪತ್ತೊಂಬತ್ತು ಗ್ರಾಮ ಪಂಚಾಯಿತಿಗಳ ಪೈಕಿ ಎಲ್ಲಾ ಇಪ್ಪತ್ತೊಂಬತ್ತು ಪಂಚಾಯಿತಿಗಳಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದು ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ತೀವ್ರ ಮುಖಭಂಗ ಅನುಭವಿಸಿವೆ. ವಿಧಾನಸಭೆ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪಂಚಾಯಿತಿ ಸ್ಥಾನಗಳನ್ನು ಗೆದ್ದಿದ್ದು ಇತಿಹಾಸ ನಿರ್ಮಿಸಿದೆ. ಆ ಮೂಲಕ ಕೆಳಹಂತದಲ್ಲೂ ನೆಲೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿ ವಿಧಾನಸಭೆ ಚುನಾವಣೆಯ ಮರು ಚುನಾವಣೆಯಲ್ಲಿ ದೊಡ್ಡ ಬಹುಮತದೊಂದಿಗೆ ಗೆದ್ದು ಬಿಜೆಪಿ ಬಾವುಟ ಹಾರಿಸಿದ್ದ ಸಚಿವ ಸುಧಾಕರ್ ಅವರು ನಂತರ ಗಂಭೀರವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ ಇತರೆ ಪಕ್ಷಗಳ ಸದಸ್ಯರನ್ನು ತಮ್ಮಪಕ್ಷಕ್ಕೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿ ನಗರಸಭೆಯಲ್ಲಿ ಬಿಜೆಪಿ ಬಾವುಟ ಹಾರಿಸಿದ್ದರು.
ಒಂದು ಕಾಲದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಭದ್ರನೆಲೆಯಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರ ಇದೀಗ ಕೇಸರಿಮಯ ಆದಂತಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಗೂ ಮೊದಲು ಸಚಿವ ಸುಧಾಕರ್ ಅವರು ನಡೆಸಿದ ಪೂರ್ವಭಾವಿ ಸಭೆಗಳಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ತಮ್ಮ ಅಪಾರ ಸಂಖ್ಯೆ ಹಿಂಬಾಲಕರೊಂದಿಗೆ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
ಒಂದೆಡೆ ಸಂಘಟನೆ ಬಲಪಡಿಸುವ ಜತೆಗೆ ಪಂಚಾಯಿತಿವಾರು ಬಿರುಸಿನ ಪ್ರವಾಸ ಕೈಗೊಂಡ ಸಚಿವ ಸುಧಾಕರ್ ಹಳ್ಳಿ ಹಳ್ಳಿಗೆ ಭೇಟಿ ನೀಡಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಮುಂದೆ ಕೈಗೊಳ್ಳಲಿರುವ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಪಕ್ಷ ಬೆಂಬಲಿಸಿರುವ ಅಭ್ಯರ್ಥಿಗಳಿಗೆ ಮತ ನೀಡಿ ಪಂಚಾಯಿತಿಯಲ್ಲಿ ಅಧಿಕಾರ ತಂದುಕೊಟ್ಟರೆ ತಮ್ಮ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ ಎಂದು ಭಾಷಣ ಮಾಡಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು. ಮತ್ತೊಂದೆಡೆ ಪ್ರತಿಪಕ್ಷಗಳಿಂದ ಪ್ರಚಾರದಲ್ಲಿ ಹೇಳಿಕೊಳ್ಳುವಂತಹ ಪೈಪೋಟಿ ಕಂಡು ಬರಲಿಲ್ಲ. ಅಂತಿಮವಾಗಿ ಬುಧವಾರ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯದ ನಗೆ ಬೀರುವ ಮೂಲಕ ಚಿಕ್ಕಬಳ್ಳಾಪುರ ಕ್ಷೇತ್ರ ಕೇಸರಿಮಯವಾಗಿದೆ.
ಇದು ಕಾರ್ಯಕರ್ತರ ಗೆಲುವು
ಫಲಿತಾಂಶದ ಬಳಿಕ ಪ್ರತಿಕ್ರಿಯೆ ನೀಡಿರುವ ಸಚಿವ ಸುಧಾಕರ್ ಅವರು, ʼಈ ಗೆಲುವನ್ನು ಪಕ್ಷಕ್ಕಾಗಿ ದುಡಿದಿರುವ ಪ್ರತಿಯೊಬ್ಬ ಕಾರ್ಯಕರ್ತನಿಗೂ ಅರ್ಪಿಸುತ್ತೇನೆ. ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಮತದಾರರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಅವರು ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಆಗದಂತೆ ಕರ್ತವ್ಯ ನಿರ್ವಹಿಸುವ ಹೊಣೆಗಾರಿಕೆ ಪಕ್ಷದಿಂದ ಬೆಂಬಲ ಪಡೆದು ಗೆಲುವು ಸಾಧಿಸಿರುವ ಪಂಚಾಯಿತಿ ಸದಸ್ಯರ ಮೇಲಿದೆ. ಅವರೆಲ್ಲರ ವಿಶ್ವಾಸದೊಂದಿಗೆ ರಾಜ್ಯಕ್ಕೆ ಮಾದರಿ ಕ್ಷೇತ್ರವಾಗಿಸುವ ಗುರಿ ಇಟ್ಟುಕೊಳ್ಳಲಾಗಿದೆʼ ಎಂದು ತಿಳಿಸಿದ್ದಾರೆ.
ಮೊದಲ ಸಲ ಸ್ಪರ್ಧಿಸಿದ್ದರೂ ಪಕ್ಷಕ್ಕೆ ಅಭೂತಪೂರ್ವ ಗೆಲುವು ತಂದುಕೊಟ್ಟಿರುವ ಮತದಾರರ ಋಣ ದೊಡ್ಡದಿದೆ. ಅವರು ಇಟ್ಟಿರುವ ನಂಬಿಕೆ ಹುಸಿಯಾಗದಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವುದಾಗಿಯೂ ಸಚಿವ ಸುಧಾಕರ್ ಭರವಸೆ ನೀಡಿದ್ದಾರೆ.