ಶೂನ್ಯದಿಂದ ಮೂರಂಕಿ ದಾಟಿದ ಸಂಖ್ಯಾಬಲ, ಡಿಸಿಎಂ ಉಸ್ತುವಾರಿ, ಗ್ರಾಮಗಳಲ್ಲಿ ಬೇರುಬಿಟ್ಟ ಬಿಜೆಪಿ, ಜಿಲ್ಲೆಯಲ್ಲಿ 234ಕ್ಕೂ ಹೆಚ್ಚು ಕಡೆ ಹಾರಿದ ಕೇಸರಿ ಬಾವುಟ
ಬೆಂಗಳೂರು: ಇದೇ ಮೊದಲ ಬಾರಿಗೆ ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಹೊಸ ಇತಿಹಾಸ ಬರೆದಿದೆ. ಶೂನ್ಯಕ್ಕೆ ಸೀಮಿತವಾಗಿದ್ದ ಆ ಪಕ್ಷದ ಗ್ರಾಮ ಪಂಚಾಯಿತಿ ಸಂಖ್ಯಾಬಲ ಈಗ ಮೂರಂಕಿ ದಾಟಿದ್ದು, ಈವರೆಗೆ ಜಿಲ್ಲೆಯಲ್ಲಿ ಪಾರುಪತ್ಯ ಹೊಂದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಬುಡವನ್ನು ಅಲ್ಲಾಡಿಸಿಬಿಟ್ಟಿದೆ.
ಬೆಂಗಳೂರು ನಗರಕ್ಕೆ ಅತಿ ಸನಿಹದಲ್ಲೇ ಇರುವ ಜಿಲ್ಲೆಯಲ್ಲಿ ಈವರೆಗೂ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ್ದೇ ಅಧಿಪತ್ಯವಾಗಿತ್ತು. ಎರಡೂ ಪಕ್ಷಗಳಲ್ಲಿ ಬಲಾಢ್ಯ ನಾಯಕರಿದ್ದರೂ ಛಲದಿಂದ ಮುಂದಡಿ ಇಟ್ಟ ಬಿಜೆಪಿ, ಎಲ್ಲರ ನಿರೀಕ್ಷೆಗೂ ಮೀರಿ ಜಯಭೇರಿ ಬಾರಿಸಿದೆ ಹಾಗೂ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ 234ಕ್ಕೂ ಹೆಚ್ಚು ಕಡೆ ಕಮಲ ಅರಳಿದೆ.
ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ನೇತೃತ್ವದ ಕಾಂಗ್ರೆಸ್ ಮತ್ತು ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದ ಜೆಡಿಎಸ್.. ಇವೆರಡೂ ಶಕ್ತಿಗಳನ್ನು ಪಕ್ಕಾ ಕಾರ್ಯತಂತ್ರದ ಮೂಲಕ ಹಿಮ್ಮೆಟ್ಟಿಸಿದವರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ. ಕರಾರುವಕ್ಕಾದ ಪ್ಲ್ಯಾನ್, ನಿರಂತರವಾಗಿ ಕಾರ್ಯಕರ್ತರ ಸಂಪರ್ಕ, ಎಡೆಬಿಡದ ಸಂಚಾರ, ಮುಖಂಡರೊಂದಿಗೆ ನಾಲ್ಕೂ ತಾಲ್ಲೂಕುಗಳಲ್ಲೂ ಬಿರುಸಿನ ಪ್ರಚಾರ, ಇಷ್ಟರ ಜತೆಗೆ; ಸರಳತೆ- ಸಜ್ಜನಿಕೆಯಿಂದ ಹಳ್ಳಿಹಳ್ಳಿಗೂ ತೆರಳಿ, ಹೊಲ- ತೋಟವೆನ್ನದೆ ಓಡಾಟ ನಡೆಸಿದ ಡಿಸಿಎಂ ಪಕ್ಷಕ್ಕೆ ಭರ್ಜರಿ ಫಸಲು ತೆಗೆದುಕೊಟ್ಟಿದ್ದಾರೆ.
ಎಲ್ಲೆಲ್ಲಿ ಗೆಲುವು? ಎಷ್ಟು ಸ್ಥಾನ?
ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಒಟ್ಟು 234 ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ. ಈ ಸಂಖ್ಯೆಯಲ್ಲಿ ಮತ್ತೂ ಹೆಚ್ಚಳವಾಗುವುದು ನಿಶ್ಚಿತವಾಗಿದೆ. ಡಿ.ಕೆ.ಶಿವಕುಮಾರ್ ಅವರ ಭದ್ರಕೋಟೆ ಕನಕಪುರದಲ್ಲಿಯೇ ಬಿಜೆಪಿ 52 ಗ್ರಾ.ಪಂ. ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಂಡಿದೆ. ಈ ಮೂಲಕ ಕನಕಪುರದ ಬಂಡೆ ಸ್ಪಷ್ಟವಾಗಿ ಬಿರುಕು ಬಿಟ್ಟಂತೆ ಆಗಿದೆ. ವಿಶೇಷವೆಂದರೆ ಆ ತಾಲ್ಲೂಕಿನ ಎಲ್ಲ ಪಂಚಾಯಿತಿಗಳ ಅನೇಕ ಗ್ರಾಮಗಳಲ್ಲಿ ಕೇಸರಿ ಬಾವುಟ ಹಾರಿದ್ದು ಜೆಡಿಎಸ್‌ಗಿಂತ (45) ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಬಹುಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಪರಮಾಪ್ತರಾಗಿದ್ದ ಅನೇಕ ಅಭ್ಯರ್ಥಿಗಳಿಗೆ ಕಮಲಪಾಳಯ ಸೋಲಿನ ರುಚಿ ತೋರಿಸಿದೆ. ಈ ಪೈಕಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ್ ಅವರು ತಮ್ಮ ಸ್ವಗ್ರಾಮ ಚಿಕ್ಕೊಂಡಳ್ಳಿಯಲ್ಲಿ ಮತ್ತು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್ ಅವರೂ ತಮ್ಮ ಹುಟ್ಟೂರು ಕುರುಬಳ್ಳಿದೊಡ್ಡಿ ಗ್ರಾಮದಲ್ಲಿ ಹೀನಾಯವಾಗಿ ಸೋತಿದ್ದಾರೆ.
ಮಾಗಡಿ ತಾಲ್ಲೂಕಿನಲ್ಲಿ ಬಿಜೆಪಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ದಾಖಲಿಸಿದೆ. ಈ ತಾಲ್ಲೂಕಿನಲ್ಲಿ ದಿನವಿಡೀ ಪ್ರಚಾರ ನಡೆಸಿದ್ದ ಉಪ ಮುಖ್ಯಮಂತ್ರಿ, ಮುಖಂಡರೆಲ್ಲರನ್ನೂ ಒಟ್ಟು ಮಾಡಿಕೊಂಡು ಗ್ರಾಮ ಗ್ರಾಮಕ್ಕೂ ಭೇಟಿ ನೀಡಿದ್ದರು. ಬಿಜೆಪಿಯ ಗೆಲುವು ಜೆಡಿಎಸ್-ಕಾಂಗ್ರೆಸ್‌ಗೆ ಅನೇಕ ತೀವ್ರ ಆಘಾತ ಉಂಟು ಮಾಡಿದ್ದರೆ, ಕಮಲ ಪಾಳಯದ ಕಾರ್ಯಕರ್ತರಲ್ಲಿ ಜೋಶ್ ಹೆಚ್ಚಿಸಿದೆ.
ರಾಮನಗರ ತಾಲ್ಲೂಕಿನಲ್ಲಿ 22 ಗ್ರಾಮ ಪಂಚಾಯಿತಿ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿ ಏರ್ಪಟ್ಟಿದ್ದರೂ ತನ್ನ ಭದ್ರಕೋಟೆಯಾಗಿದ್ದ ಗ್ರಾಮಗಳಲ್ಲಿ ಕಾಂಗ್ರೆಸ್ ಸೋತು ಹೋಗಿದೆ. ಹಾಗೆಯೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅತ್ಯಂತ ಕಡಿಮೆ, ಅಂದರೆ; ಕೂದಲೆಳೆ ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ನೆಲೆಯೇ ಇಲ್ಲದ ಗ್ರಾಮಗಳಲ್ಲಿ ಕೇಸರಿ ಭಾವುಟಗಳು ರಾರಾಜಿಸುತ್ತಿವೆ. ಕೈ ಶಕ್ತಿ ಕುಂದಿರುವುದು ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ.
ಉಳಿದಂತೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಬಿಜೆಪಿ ಧೂಳೆಬ್ಬಿಸಿದೆ. ಅಲ್ಲಿ ಕಮಲದ ಅಬ್ಬರಕ್ಕೆ ಕಾಂಗ್ರೆಸ್ ಚಿತ್ ಆಗಿದೆ. 142ಕ್ಕೂ ಹೆಚ್ಚು ಪಂಚಾಯಿತಿ ಸ್ಥಾನಗಳಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ್ದರೆ, ಕಾಂಗ್ರೆಸ್ 82 ಕಡೆ ಮಾತ್ರ ಗೆದ್ದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ತಾಲ್ಲೂಕಿನಲ್ಲಿ ಬಿಜೆಪಿ ಸಂಖ್ಯಾಬಲ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಜಿಜೆಪಿಯ ಅಚ್ಚರಿಯ ಓಟಕ್ಕೆ ಜೆಡಿಎಸ್ ಪಾಳಯದಲ್ಲಿ ಕಂಪನ ಉಂಟಾಗಿದೆ.
ಪಕ್ಷವೂ ಹಿಂದೆಂದಿಗಿಂತಲೂ ಶಕ್ತಿಶಾಲಿಯಾಗಿ ಹೊರಹೊಮ್ಮಿದೆ. ಗ್ರಾಮ ಗ್ರಾಮದಲ್ಲೂ ಕೇಸರಿ ಬಾವುಟ ಹಾರಿರುವುದರಿಂದ ಮುಂದಿನ ಚುನಾವಣೆಗಳಿಗೆ ಈ ಫಲಿತಾಂಶ ಮುನ್ನುಡಿ ಬರೆಯಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ, ಜನಪರ ಆಡಳಿತ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸುಧಾರಣಾ ಕಾರ್ಯಕ್ರಮಗಳಿಂದ ಈ ಫಲಿತಾಂಶ ಸಾಧ್ಯವಾಗಿದೆ.
ಡಾ.ಅಶ್ವತ್ಥನಾರಾಯಣ
ಬಿಜೆಪಿಗೆ ಪ್ಲಸ್ ಆಗಿದ್ದೇಕೆ?
ರಾಜ್ಯದ ಆಡಳಿತಾರೂಢ ಪಕ್ಷ ಬಿಜೆಪಿ ಅನೇಕ ರೀತಿಯಲ್ಲಿ ಗೆಲುವಿಗೆ ಅರ್ಹ ಎಂದು ಹೇಳಬಹುದು. ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಗ್ರಾಮ ಸ್ವರಾಜ್ಯ ಸಮಾವೇಶಗಳು ಪರಿಣಾಮ ಉತ್ತಮ ಬೀರಿವೆ. ಮುಖ್ಯವಾಗಿ ಜಿಲ್ಲಾ ಉಸ್ತುವಾರಿಯೂ ಆಗಿರುವ ಅಶ್ವತ್ಥನಾರಾಯಣ ಅವರು ಗ್ರಾ.ಪಂ ಚುನಾವಣೆ ದಿನಾಂಕ ಪ್ರಕಟವಾದ ದಿನದಿಂದ ಬೆಂಗಳೂರಿಗಿಂತ ರಾಮನಗರದಲ್ಲಿ ಇದ್ದಿದ್ದೇ ಹೆಚ್ಚು. ನಾಲ್ಕೂ ತಾಲ್ಲೂಕುಗಳಲ್ಲಿ ಸಂಚಾರ ಮಾಡಿದ ಅವರು ಬಹುತೇಕ ಎಲ್ಲ ಕಾರ್ಯಕರ್ತರ ಸಂಪರ್ಕಕ್ಕೂ ಸಿಕ್ಕಿದ್ದರು. ಹೀಗಾಗಿ ತಳಮಟ್ಟದಲ್ಲಿ ಕಮಲ ಬೇರೂರಲು ಕಾರಣವಾಯಿತು. ಜತೆಗೆ, ಜಿಲ್ಲೆಯ ಬಿಜೆಪಿ ಮುಖಂಡರೆಲ್ಲರೂ ಡಿಸಿಎಂ ಹಾದಿಯಲ್ಲಿ ಹಗಳಿರುಳು ಹೆಜ್ಜೆ ಹಾಕಿದರು. ಪರಿಣಾಮವಾಗಿ ಗ್ರಾಮಗಳಲ್ಲಿ ಕಮಲ ಅರಳಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಶೂನ್ಯದಿಂದ ಮೂರಂಕಿ ದಾಟುವಷ್ಟು ಸಾಧನೆ ಮಾಡಿರುವುದು ಹಳೆಯ ದೋಸ್ತಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆ. ಕೆಲವೆಡೆ ಜೆಡಿಎಸ್ ನೆಲೆಯನ್ನು ಬಿಜೆಪಿ ತೆಕ್ಕೆಗೆ ಬಂದಿದ್ದರೆ, ಕನಕಪುರದಂಥ ತಾಲ್ಲೂಕಿನಲ್ಲಿ ಕಮಲ ಕಮಾಲ್ ಮಾಡಿದೆ. ಈ ಕಾರಣಕ್ಕೆ ಜಿಲ್ಲೆಯ ಅನಭಿಷಕ್ತ ದೊರೆಗಳಂತೆ ಇದ್ದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಚಿಂತೆಗೀಡಾಗಿದ್ದಾರೆಂದು ಗೊತ್ತಾಗಿದೆ.