ಬೆಂಗಳೂರು: ಖ್ಯಾತ ಕಲಾವಿದರಾದ ಪ ಸ ಕುಮಾರ್, ನೀಲಿಮಾ ಶೇಕ್ ಸೇರಿದಂತೆ ಐವರು ಪ್ರಖ್ಯಾತ ಕಲಾವಿದರಿಗೆ ಚಿತ್ರಕಲಾ ಪರಿಷತ್ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗಳನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರದಾನ ಮಾಡಿದರು.
ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರ 18ನೇ ವರ್ಷದ ಚಿತ್ರಸಂತೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಡಿಸಿಎಂ, ನೀಲಿಮಾ ಶೇಕ್ ಅವರಿಗೆ ಪ್ರೊ.ಎಂ.ಎಸ್.ನಂಜುಂಡರಾವ್ ಪ್ರಶಸ್ತಿ, ಪ ಸ ಕುಮಾರ್ ಅವರಿಗೆ ಡಿ.ದೇವರಾಜ ಅರಸು ಪ್ರಶಸ್ತಿ, ವಿಜಯ ಬಾಗೋಡಿ ಅವರಿಗೆ ವೈ.ಸುಬ್ರಹ್ಮಣ್ಯ ರಾಜು ಪ್ರಶಸ್ತಿ, ಆರ್. ರಾಜು ಅವರಿಗೆ ಎಂ.ಆರ್ಯಮೂರ್ತಿ ಪ್ರಶಸ್ತಿ ಹಾಗೂ ಕಲಾ ಇತಿಹಾಸಕಾರರಾದ ಚೂಡಾಮಣಿ ನಂದಗೋಪಾಲ್ ಅವರಿಗೆ ಎಚ್.ಕೆ.ಕೇಜ್ರಿವಾಲ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಶ್ವತ್ಥನಾರಾಯಣ ಅವರು, ಬೆಂಗಳೂರು ಮಾತ್ರವಲ್ಲ ರಾಜ್ಯದಲ್ಲಿಯೇ ಚಿತ್ರಕಲಾ ಪರಿಷತ್ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಚಿತ್ರಸಂತೆಗೆ ನೀಡಲಾಗುತ್ತಿರುವ ಆರ್ಥಿಕ ನೆರವನ್ನು ಮುಂದುವರಿಸಲಾಗುವುದು ಹಾಗೂ ಉಳಿದಂತೆ ಅಗತ್ಯವಾದ ಆರ್ಥಿಕ ಸಹಕಾರವನ್ನೂ ನೀಡಲಾಗುವುದು ಎಂದರು.
ಚಿತ್ರಕಲೆಯು ಅತ್ಯಂತ ಪ್ರಭಾವಶಾಲಿ ಅಧ್ಯಯನ ಮಾಧ್ಯಮವಾಗಿದೆ. ರಾಜ್ಯದಲ್ಲಿ ಅನೇಕ ಕಲಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕಲಾ ತರಬೇತಿ ನೀಡುತ್ತಿವೆ. ನೂತನವಾಗಿ ಜಾರಿಗೆ ಬರುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಲಾ ಪ್ರಕಾರಗಳ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದರು ಡಿಸಿಎಂ ನುಡಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಚಿತ್ರಕಲಾ ಪರಿಷತ್ ಟ್ರಸ್ಟ್ ಅಧ್ಯಕ್ಷ ಎಸ್.ಎಂ.ಕೃಷ್ಣ, ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಚಿತ್ರಕಲಾ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಎಸ್.ಅಪ್ಪಾಜಯ್ಯ, ಪ್ರಾಂಶುಪಾಲ ಪ್ರೊ.ತೇಜೇಂದ್ರ ಸಿಂಗ್ ಬಾವ್ನಿ ಮುಂತಾದವರು ಉಪಸ್ಥಿತರಿದ್ದರು.