ಬೆಂಗಳೂರು: ಕನ್ನಡ ಅತ್ಯುತ್ತಮ ನಟರಲ್ಲಿ ಒಬ್ಬರಾಗಿದ್ದ ಹಾಗೂ ವರನಟ ಡಾ.ರಾಜಕುಮಾರ್ ಅವರ ಜತೆ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶನಿ ಮಹಾದೇವಪ್ಪ (88 ವರ್ಷ) ಅವರು ನಿಧನರಾಗಿದಾರೆ.
ಕನ್ನಡ ಚಿತ್ರರಂಗ ಕಂಡ ಅಪರೂಪದ ನಟರಲ್ಲಿ ಒಪ್ಪರಾಗಿದ್ದ ಶನಿ ಮಹಾದೇವಪ್ಪ, ಕನ್ನಡದ ಸುಮಾರು 550ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಅವರು ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಅವರು ಕೊನೆಯುಸಿರೆಳೆದಿದ್ದಾರೆಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಶನಿ ಮಹದೇವಪ್ಪ ಅವರ ಅಂತ್ಯಕ್ರಿಯೆ ಸೋಮವಾರ ನಗರದ ಸುಮನಹಳ್ಳಿ ಚಿತಾಗಾರದಲ್ಲಿ ನಡೆಯಲಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಬೆಳಕವಾಡಿ ಶನಿ ಮಹಾದೇವಪ್ಪರ ಹುಟ್ಟೂರು. ಅವರ ತಂದೆ ಕೆಂಚಪ್ಪ ಹಳ್ಳಿಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ತಂದೆ ನಟಿಸುತ್ತಿದ್ದ ನಾಟಕಗಳನ್ನು ನೋಡುತ್ತಾ ಬೆಳೆದ ಅವರು ರಂಗಭೂಮಿಯತ್ತ ಆಕರ್ಷಿತರಾದರು. ‘ರಾಜಾ ವಿಕ್ರಮ’ ನಾಟಕದೊಂದಿಗೆ ಬಣ್ಣ ಹಚ್ಚಿದ ಅವರಿಗೆ ‘ಶನೀಶ್ವರ ಮಹಾತ್ಮೆ’ಯ ಶನಿದೇವನ ಪಾತ್ರ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು.ಈ ಯಶಸ್ಸಿನೊಂದಿಗೆ ‘ಮಹದೇವಪ್ಪ’ ಮುಂದೆ ‘ಶನಿ ಮಹಾದೇವಪ್ಪ’ ಎಂದೇ ಹೆಸರಾದರು. ಕನ್ನಡ ಥಿಯೇಟರ್ಸ್ ಮತ್ತು ಗುಬ್ಬಿ ಕಂಪನಿಯ ‘ಬಡವನ ಬಾಳು’, ‘ಅತ್ತೆ ಸೊಸೆ’, ‘ಬಿಡುಗಡೆ’, ‘ಸತ್ಯವಿಜಯ’, ‘ಚಂದ್ರಹಾಸ’ ನಾಟಕಗಳಲ್ಲಿ ನಾಯಕನಾಗಿ ಅಭಿನಯಿಸಿದರು.
‘ಧರ್ಮಸ್ಥಳ ಮಹಾತ್ಮೆ’ (1962) ಚಿತ್ರದ ಬ್ರಹ್ಮನ ಪಾತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಶನಿ ಮಹಾದೇವಪ್ಪ ಮುಂದೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಾ ಬಂದರು. ‘ಭಕ್ತ ಕುಂಬಾರ’ ಚಿತ್ರದಲ್ಲಿ ಜ್ಞಾನೇಶ್ವರನಾಗಿ, ‘ಮೂರೂವರೆ ವಜ್ರಗಳು’ ಚಿತ್ರದಲ್ಲಿ ಶಕುನಿಯಾಗಿ, ‘ಕವಿರತ್ನ ಕಾಳಿದಾಸ’ ಚಿತ್ರದಲ್ಲಿ ಡಿಂಡಿಮ ಕವಿಯಾಗಿ… ಹೀಗೆ ಹತ್ತಾರು ಪಾತ್ರಗಳಲ್ಲಿ ಶನಿ ಮಹಾದೇವಪ್ಪ ಸಿನಿಪ್ರೇಮಿಗಳಿಗೆ ನೆನಪಾಗುತ್ತಾರೆ. ವರನಟ ರಾಜಕುಮಾರ್ ಅವರಿಗೆ ಆಪ್ತರಾಗಿದ್ದ ಅವರು ರಾಜ್ ಅಭಿನಯದ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶನಿ ಮಹಾದೇವಪ್ಪ ಇಂದು ಇಹಲೋಕ ತ್ಯಜಿಸಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಶನಿ ಮಹಾದೇವಪ್ಪ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಜತೆಗೆ, ಜಾಲತಾಣಗಳ ಮೂಲಕ ಕನ್ನಡ ಸಿನಿ ಪ್ರಿಯರು ಕೂಡ ಅಗಲಿದ ಹಿರಿಯ ನಟನಿಗೆ ನಮನ ಸಲ್ಲಿದ್ದಾರೆ.