ಚಿಕ್ಕಬಳ್ಳಾಪುರ: ಜಿಲ್ಲೆಯ ದೇಸಿ ಪ್ರತಿಭೆ, ಮಹತ್ತ್ವದ ಕಲೆಯಾದ ಕೀಲು ಕುದುರೆಯಂಥ ಜಾನಪದ ಕಲಾ ಪ್ರಕಾರಕ್ಕೆ ಎಣೆ ಇಲ್ಲದ ಸೇವೆ ಮಾಡಿದ ಕೀಲುಕುದುರೆ ನಾರಾಯಣಪ್ಪ ಅವರಿಗೆ 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಅರಸಿ ಬಂದಿದೆ. ಈ ಪ್ರಶಸ್ತಿ ಜಿಲ್ಲೆಗೆ ಹೊಸ ವರ್ಷದಲ್ಲೊಂದು ಗರಿಯನ್ನು ಮೂಡಿಸಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿ ಎಸ್.ಗೊಲ್ಲಹಳ್ಳಿ ಗ್ರಾಮದ ನಾಗಪ್ಪ ಅವರ ಪುತ್ರ ನಾರಾಯಣಪ್ಪ. ಅವರ ದ್ವಿತೀಯ ಪುತ್ರ. 4ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿಕೊಂಡು ಆಮೇಲೆ ವ್ಯವಸಾಯದಲ್ಲಿ ತೊಡಗಿಕೊಂಡಿದ್ದವರು. 15ನೇ ವಯಸ್ಸಿನಿಂದ ಕೃಷಿ ಜತೆಗೆ ಗ್ರಾಮೀಣ ಕಲೆಯಾದ ಕೀಲು ಕುದುರೆ ಕಲೆಯನ್ನು ತಂದೆಯಿಂದ ಕಲಿತುಕೊಂಡರು.
- ನಾರಾಯಣಪ್ಪ ಅವರ ಕೀಲುಕುದುರೆ ಕಲಾ ತಂಡ.
ಅಂದಿನಿಂದ ರಾಜ್ಯದ ವಿವಿಧ ಜಿಲ್ಲೆ, ವಿವಿಧ ರಾಜ್ಯಗಳಲ್ಲಿ ಜಾತ್ರೆ, ದೇವರ ಉತ್ಸವ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆ, ಕರಗ ಮಹೋತ್ಸವಗಳು ಸೇರಿದಂತೆ ಅನೇಕ ಸಂಭ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ನಂತರದ ದಿನಗಳಲ್ಲಿ ಕೀಲುಕುದುರೆ ಜತೆಗೆ ಗಾರುಡಿ ಗೊಂಬೆ, ಚಿಲಿಪಿಲಿ ಗೊಂಬೆ, ನವಿಲು ನೃತ್ಯ, ಕರಗ ನೃತ್ಯ, ಕರಡಿ ವೇಷ, ಹುಲಿವೇಷ, ಮರಗಾಲು ಕುಣಿತ, ಹಸುವಿನ ನೃತ್ಯದ ಕಲೆಯನ್ನು ಕಲಿತರು.
ಇದೇ ವೇಳೆ ತಮ್ಮ ಹಳ್ಳಿಯಲ್ಲೇ ಒಂದು ತಂಡವನ್ನು ರಚಿಸಿಕೊಂಡರಲ್ಲದೆ, ಹಳ್ಳಿ ಮತ್ತು ಪಟ್ಟಣ, ನಗರ ಪ್ರದೇಶಗಳ ಜನರಿಗೂ ಈ ಅಪರೂಪದ ಕಲೆಯನ್ನು ಪರಿಚಯಿಸುತ್ತಾ ತಂಡವನ್ನು ಮತ್ತಷ್ಟು ಬಲಪಡಿಸಿದರು. ಈ ತಂಡದ ಜತೆ ದೇಶಾದ್ಯಂತ ಸುತ್ತಿದ ನಾರಾಯಣಪ್ಪ, ವಿವಿಧ ರಾಜ್ಯಗಳಲ್ಲಿ ತಮ್ಮ ಕಲೆಗಳನ್ನು ಪ್ರದರ್ಶನ ಮಾಡಿದ್ದಾರೆ.
ಜತೆಗೆ, ರಾಜ್ಯದ ಬೆಳಗಾವಿ, ವಿಜಯಪುರ, ಕೋಲಾರ, ತುಮಕೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಹಾಗೂ ಗೋವಾ, ಆಂಧ್ರ ಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಅವರು ಕೀಲು ಕುದುರೆ ಕಲೆಯ ಪ್ರದರ್ಶನ ನೀಡಿದ್ದಾರೆ.
ಈಗಾಗಲೇ ನಾರಾಯಣಪ್ಪ ಅವರಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ಜಿಲ್ಲಾ ಮಟ್ಟದ 2018ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ವಿವಿಧ ಸಂಘ ಸಂಸ್ಥೆಗಳವರು ಸಹ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಮ್ಮೇಳನಗಳಲ್ಲಿಯೂ ಭಾಗವಹಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೀಲು ಕುದುರೆ ಪ್ರದರ್ಶನ ನೀಡಿದ್ದಾರೆ.
ವಿದ್ಯೆ ಅಲ್ಪ, ಅನುಭವ ಅಗಾಧ
ನಾರಾಯಣಪ್ಪ ಅವರು ಓದಿದ್ದು ನಾಲ್ಕನೇ ಕ್ಲಾಸು ಮಾತ್ರ, ಆದರೆ ಜಾನಪದ ಕ್ಷೇತ್ರದಲ್ಲಿ ಅವರ ಅನುಭವ-ಸಾಧನೆ ಸಾಗರದಷ್ಟು. ಕಿರಿಯ ಕಲಾವಿದರಿಗೆ, ಆಸಕ್ತರಿಗೆ ತರಬೇತಿ ನೀಡುತ್ತಿದ್ದಾರೆ. ನಮ್ಮ ಗ್ರಾಮೀಣ ಕಲೆ ಸಂಸ್ಕೃತಿಯನ್ನು ಉಳಿಸಬೇಕು ಎನ್ನುವ ದೃಷ್ಷಿಯಿಂದ ಶ್ರೀ ಬಂಡೆಮ್ಮ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಸಂಘವನ್ನು ರಚಿಸಿ, ಆ ಮೂಲಕ ಯುವಕ, ಯುವತಿಯರ ತಂಡಗಳನ್ನು ರಚಿಸಿ ಅವರೆಲ್ಲರಿಗೂ ತರಬೇತಿ ನೀಡಿ ಗ್ರಾಮೀಣ ಕೀಲು ಕುದುರೆ ಕಲೆಯನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ವಿಶೇಷವೆಂದರೆ ಜಾನಪದ ಕಲೆಗಳಿಗೆ ಬಳಸುವ ಎಲ್ಲಾ ಪರಿಕರಗಳನ್ನು ಸ್ವಯಂ ನಾರಾಯಣಪ್ಪ ಅವರೇ ತಯಾರಿಸಿಕೊಳ್ಳುತ್ತಾರೆ. ಇದೆಲ್ಲವನ್ನು ಆಸಕ್ತ ಯುವಜನರಿಗೂ ಕಲಿಸುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ಇವರು ಪ್ರೀತಿಪಾತ್ರ ಗೊಂಬೆ ನಾರಾಯಣಪ್ಪ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..