ಬೆಂಗಳೂರು: ಅಂತು ಸತತ ಸೋಲುಗಳಿಂದ ಕಂಗಟೆಟ್ಟಿರುವ ರಾಜ್ಯ ಕಾಂಗ್ರೆಸ್ ಪಕ್ಷ ಕೊನೆಗೂ ಮೈಕೊಡವಿ ಮೇಲೇಳುವಂತೆ ಕಾಣುತ್ತಿದೆ.
ಈ ಹಿನ್ನೆಲೆಯಲ್ಲಿ 2021 ವರ್ಷವನ್ನು ಹೋರಾಟದ ವರ್ಷ, ಪಕ್ಷ ಸಂಘಟನೆ ವರ್ಷ ಅಂತ ಘೋಷಣೆ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಕಾರ್ಯಕರ್ತರ ಧ್ವನಿ ನಾಯಕರ ಧ್ವನಿಯಾಗಬೇಕು. ಈ ನಿಟ್ಟಿನಲ್ಲಿ ಮಂಗಳವಾರ ಮಂಗಳೂರಿನಲ್ಲಿ ಮೈಸೂರು ವಿಭಾಗದ ಜಿಲ್ಲೆಗಳ ಪಕ್ಷ ನಾಯಕರು, ಬ್ಲಾಕ್ ಅಧ್ಯಕ್ಷರನ್ನು ಚರ್ಚೆಗೆ ಕರೆದಿದ್ದೇನೆ. ಇದು ಪಕ್ಷದ ಆಂತರಿಕ ಸಭೆ, ಸಾರ್ವಜನಿಕ ಸಭೆಯಲ್ಲ ಎಂದರು.
ಜನವರಿ 8ರಂದು ಬೆಂಗಳೂರಿನಲ್ಲಿ, ಹುಬ್ಬಳ್ಳಿಯಲ್ಲಿ ಬೆಳಗಾವಿ ವಿಭಾಗದ ಸಭೆ ಜನವರಿ 11ನೇ ತಾರೀಖು ಸಭೆ ಇದೆ. ಜವವರಿ 18ರಂದು ಕಲಬುರಗಿಯಲ್ಲಿ ಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಪಕ್ಷದಲ್ಲಿ ನಾಯಕರು ಬೆಳೆಯಬೇಕು ಎಂಬುದು ರಾಹುಲ್ ಗಾಂಧಿ ಅವರ ಚಿಂತನೆ. ವಿದ್ಯಾರ್ಥಿ ಚುನಾವಣೆ ನಿಷೇಧದ ನಂತರ, ನಾಯಕತ್ವ ಬೆಳೆಯುವುದಕ್ಕೆ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ತಾಲೂಕು, ಜಿಲ್ಲಾ ಹಾಗೂ ರಾಜ್ಯಗಳ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಆಂದೋಲನ ಪ್ರಕ್ರಿಯೆ ಜಾರಿಗೆ ತಂದಿದ್ದಾರೆ. ಕರ್ನಾಟಕದಲ್ಲೂ ಕೂಡ ಅದು ನಡೆಯುತ್ತದೆ ಎಂದು ಡಿಕೆಶಿ ಹೇಳಿದರು.
ಗಂಗಾಜಲದಂತೆ ಪವಿತ್ರರಾದರಾ?
ಎಲ್ಲ ಆರೋಪವೂ ರಾಜಕೀಯ ಪ್ರೇರಿತ. ನನ್ನ ಮೇಲೂ ಆರೋಪಗಳಿಲ್ಲವೇ? ಅವೆಲ್ಲವೂ ರಾಜಕೀಯ ಪ್ರೇರಿತ. ನಾನು ಯಾರೊಬ್ಬರ ಬಳಿಯೂ ಲಂಚ ಪಡೆಯಲಿಲ್ಲ, ನನ್ನ ಮೇಲೆ ಎಷ್ಟು ಪ್ರಕರಣ ದಾಖಲಿಸಿದ್ದಾರೆ? ಮಾಧ್ಯಮದವರು ನನ್ನ ಮೇಲೆ ಏನೆಲ್ಲಾ ವರದಿ ಮಾಡಿದ್ದೀರಿ? ಬಿಜೆಪಿ ನಾಯಕರ ಮೇಲೆ ಯಾವ ಯಾವ ಆರೋಪ ಇದೆ. ಅವರ ಮೇಲೆ ಯಾವುದೇ ಇ.ಡಿ. ಪ್ರಕರಣ ದಾಖಲಾಗಿಲ್ಲ. ಈಗ ಬೇರೆಯವರ ಮೇಲೆ ಪ್ರಕರಣಗಳು ಇಲ್ಲವೇ? ಇಲ್ಲಿ ಆರೋಪಿಯಾಗಿದ್ದವರು ಅಲ್ಲಿಗೆ ಹೋದ ತಕ್ಷಣ ಗಂಗಾಜಲದಂತೆ ಪವಿತ್ರರಾದರಾ? ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು ನನ್ನ ಮೇಲೆ ಯಾವ ದಾಳಿ ಮಾಡಿದ್ದಾರೆ? ಎಂಥದ್ದೂ ಇಲ್ಲ. ಕೆಲವು ಸಂದರ್ಭಗಳಲ್ಲಿ ಅವರು ನನ್ನನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಅದಕ್ಕೆ ನಾನ್ಯಾಕೆ ಬೇಸರ ಮಾಡಿಕೊಳ್ಳಬೇಕು? ಎಂದು ಡಿಕೆಶಿ ಹೇಳಿದರು.
ಸಿ.ಎಂ.ಇಬ್ರಾಹಿಂ ಅವರು ನಮ್ಮ ಪಕ್ಷದ ಹಿರಿಯ ನಾಯಕರು, ಮೇಲಾಗಿ ಶಾಸಕರು. ಅವರಿಗೆ ಕೆಲವು ಅಸಮಾಧಾನ ಇರಬಹುದು. ಅದನ್ನು ಪಕ್ಷ ಸರಿಪಡಿಸಲಿದೆ. ಯಾರು ಕೂಡ ಜೆಡಿಎಸ್ʼಗೆ ಹೋಗುವುದಿಲ್ಲ. ನೀವ್ಯಾಕೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೀರಿ? ಎಂದು ಮಾಧ್ಯಮ ಪ್ರತಿನಿಧಿಗಳನ್ನೇ ಶಿವಕುಮಾರ್ ಪ್ರಶ್ನಿಸಿದರು.