- ಎಂ.ಕೃಷ್ಣಪ್ಪ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ: ಮೀಟರ್ ದಂಧೆಕೋರರ ಕಾಟಕ್ಕೆ ತಾಳಲಾರದೆ ಯುವ ಅರ್ಚಕರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂದಿ ಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ತಾನ್ ಪೇಟೆ ಗ್ರಾಮದಲ್ಲಿ ನಡೆದಿದೆ.
ನಂದಿ ಗ್ರಾಮದ ಅರ್ಚಕ ಕೆ.ವಿ.ರಾಘವೇಂದ್ರ (30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಒಂದಲ್ಲ ಅಂತ ಮೂರು ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡುವುದರ ಮೂಲಕ ಗ್ರಾಮದಲ್ಲಿ ಎಲ್ಲರಿಗೂ ಚಿರಪರಿಚಿತರೂ ಆತ್ಮೀಯರೂ ಆಗಿದ್ದ ಯುವ ಅರ್ಚಕ ರಾಘವೇಂದ್ರ ಅವರು ಕೈ ಸಾಲವಾಗಿ ನಾಲ್ಕೈದು ಜನರ ಬಳಿ ಸಾಲವಾಗಿ ಸುಮಾರು 8 ಲಕ್ಷ ರೂ.ವರೆಗೂ ಸಾಲ ಮಾಡಿದ್ದರು ಎನ್ನಲಾಗಿದೆ.
ಇದಕ್ಕೆ ಗ್ಯಾರಂಟಿಯಾಗಿ ಖಾಲಿ ಚಕ್ʼಗಳನ್ನು ಪಡೆದಿದ್ದ ಮೀಟರ್ ಬಡ್ಡಿ ದಂಧೆಕೋರರು ಕೋಟಿ ರೂ.ಗಳವರೆಗೂ ಸಾಲ ನೀಡಬೇಕೆಂದು ಬೆದರಿಕೆ ಹಾಕಿ ಕೆಲ ದಿನಗಳಿಂದ ಸಾಲ ನೀಡುವಂತೆ ಪೀಡಿಸುತ್ತಲೇ ಇದ್ದರೆಂದು ಮಾಹಿತಿ ಸಿಕ್ಕಿದೆ. ದಿನೇದಿನೆ ಹೆಚ್ಚಿದ ಸಾಲಗಾರರ ಕಿರುಕುಳ ತಾಳಲಾಗದೆ ಮನೆಯಲ್ಲೆ ನೇಣು ಬಿಗಿದುಕೊಂಡು ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನತದೃಷ್ಟ ರಾಘವೇಂದ್ರ ಅವರು ಸುಲ್ತಾನ್ ಪೇಟೆಯ ಗ್ರಾಮದ ಸಪ್ಪಲಮ್ಮ ದೇವಸ್ಥಾನ, ನಂದಿ ಗ್ರಾಮದ ಮಾರಮ್ಮ ದೇಗುಲ, ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಜತೆಗೆ, ಅಕ್ಷತಾ ಕೋ-ಆಪರೇಟಿವ್ ಸಂಘದಲ್ಲಿ ಪಿಗ್ಮಿ ಎಜೆಂಟ್ ಆಗಿಯೂ ಕೆಲಸ ಮಾಡುತಿದ್ದರು.
ಡೆತ್ ನೋಟ್ ಬರೆದಿದ್ದರು
ನಂದಿ ಗ್ರಾಮದ ಜೆ.ಸಿ.ಬಿ ಮಂಜುನಾಥ್, ಗುರುಮೂರ್ತಿ, ಅಜಯೇಂದ್ರ ಬಾಬು, ಪ್ರಾಧ್ಯಾಪಕ ರಾಮಚಂದ್ರಪ್ಪ, ಎನ್.ಎಂ.ಮುನಿರಾಜು, ಎನ್.ಎಲ್ ನರೇಂದ್ರ ಬಾಬು ಅವರ ಬಳಿ ಕೈ ಸಾಲ ಮಾಡಿ ಸಂಘಕ್ಕೆ ತನ್ಮೂಲಕ ಹಣ ಕಟ್ಟಿದ್ದವರಿಗೆ ಸಾಲ ಮಾಡಿದ ಹಣದಲ್ಲಿಯೇ ಹಣ ನೀಡಿ ಕೈ ತೊಳೆದುಕೊಂಡಿದ್ದೆ ಎಂಬುದಾಗಿ ಅವರು ಸಾಯುವ ಮುನ್ನ ಮಾಡಿರುವ ವೀಡಿಯೊ ಪೊಸ್ಟ್‌ನಲ್ಲಿ ತಿಳಿಸಿದ್ದಾರೆ. ನಂತರ ಕೈ ಸಾಲ ನೀಡಿದ್ದವರು ಇತ್ತಿಚಿಗೆ ಮೀಟರ್ ಬಡ್ಡಿ ವಿಧಿಸಿ ಅಷ್ಟು ಹಣ ಕೊಡಿ, ಇಷ್ಟು ಹಣ ಕೊಡಿ ಎಂದು ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದ ಕಾರಣ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ರಾಘವೇಂದ್ರ ಡೆತ್ ನೋಟ್ ಬರೆದಿಟ್ಟಿದ್ದಾರೆ.
ವಿಡಿಯೊದಲ್ಲಿ ತನ್ನ ಹೇಳಿಕೆಯನ್ನು ವಿವರವಾಗಿ ದಾಖಲಿಸಿ ರಾಘವೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಿಂದ ಮೃತರ ಮನೆಯಲ್ಲಿ ಎಲ್ಲರೂ ದಿಗ್ಭ್ರಮೆಗೊಂಡಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರ ಕುಟುಂಬದವರು ನೀಡಿದ ದೂರಿನ ಮೇರೆಗೆ ನಂದಿ ಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.