ಮೈಸೂರು: ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಇಲ್ಲಿನ ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸಾಗಣೆಗೆ ಬಳಸಿದ ಒಂದು ಕಾರು ಮತ್ತು ಎರಡು ಎಮ್ಮೆ ಕರು ಮತ್ತು ಒಂದು ಹಸುವಿನ ಕರುವನ್ನು ವಶಪಡಿಸಿಕೊಳ್ಳಲಾಗಿದೆ. ಕೇರಳದ ಕಣ್ಣೂರು ಜಿಲ್ಲೆಯ ಶಿವಪುರಂನ ಸಮೀರ್ (34) ಬಂಧಿತ ಆರೋಪಿ.
ಪೊಲೀಸರು ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಶುಕ್ರವಾರ ಗಸ್ತು ಮಾಡುತ್ತಿದ್ದ ವೇಳೆ ಇರ್ವಿನ್ ರಸ್ತೆಯಲ್ಲಿ ಅಕ್ರಮವಾಗಿ ಗೋವು ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯ ಆಧರಿಸಿ ಕಾರ್ಯಾಚರಣೆ ನಡೆಸಿದ್ದರು.
ಇರ್ವಿನ್ ರಸ್ತೆಯ ಪೋಸ್ಟ್ ಆಫೀಸ್ ಬಳಿ ನಿಂತಿದ್ದ ಕಾರು ಒಂದನ್ನು ಪರಿಶೀಲಿಸಿದಾಗ ಆ ಕಾರಿನಲ್ಲಿ ಅಕ್ರಮವಾಗಿ ಎರಡು ಎಮ್ಮೆ ಕರು ಮತ್ತು ಒಂದು ಹಸುವಿನ ಕರು ಇರುವುದು ಪತ್ತೆಯಾಗಿದೆ. ಕೂಡಲೇ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ವರದಿಯಾಗಿರುವ ಪ್ರಕರಣ ಇದಾಗಿದ್ದು, ಒಂದು ವೇಳೆ ಆರೋಪಿ ಅಕ್ರಮವಾಗಿ ಸಾಗಾಣಿಕೆ ಮಾಡಿದ್ದು ಸಾಬೀತಾದರೆ 3ರಿಂದ 5 ವರ್ಷದವರೆಗೆ ಜೈಲು ಶಿಕ್ಷೆ ಆಗಲಿದೆ.