ಹೆಚ್.ಡಿ.ಕುಮಾರಸ್ವಾಮಿ ಆರೋಪದಿಂದ ಕಾಂಗ್ರೆಸ್ ನಲ್ಲಿ ತಳಮಳ
ಬೆಂಗಳೂರು: ರಾಜ್ಯದ ಈಗಿನ ಮುಖ್ಯಮಂತ್ರಿಯೇ ನೈಸ್ ಕಂಪನಿಯನ್ನು ಖರೀದಿ (ಟೇಕ್ ಓವರ್) ಮಾಡಲು ಹೊರಟಿರುವ ವ್ಯಕ್ತಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪೋಟಕ ಸಂಗತಿಯನ್ನು ಬಹಿರಂಗಪಡಿಸಿದ ಬೆನ್ನಲ್ಲಿಯೇ ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ತಳಮಳ ಸೃಷ್ಟಿಯಾಗಿದೆ.
ಈಗಾಗಲೇ ಬಿಡದಿ ಟೌನ್ ಶಿಪ್ ವಿಷಯದಲ್ಲಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಹೆಸರು ತಳುಕು ಹಾಕಿರುಕೊಂಡಿರುವ ಕಾರಣಕ್ಕೆ ತೀವ್ರ ಮುಜುಗರಕ್ಕೆ ತುತ್ತಾಗಿರುವ ಕಾಂಗ್ರೆಸ್, ಇದೀಗ ನೈಸ್ ಯೋಜನೆ ವಿಷಯದಲ್ಲಿಯೂ ಭಾರೀ ಇರಿಸುಮುರಿಸುಗೆ ಒಳಗಾಗಿದೆ ಎಂದು ದೆಹಲಿ ಮೂಲಗಳು ತಿಳಿಸಿವೆ.
ಡಿಕೆಶಿ ಸಿಎಂ ಆಗಿರುವುದು ಕೈ ಹೈಕಮಾಂಡ್ ಜೇಬು ಭರ್ತಿ ಮಾಡಲು ಎಂದು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಕ್ಕೆ ಪುಷ್ಟಿ ನೀಡುವಂತೆ ಎಲ್ಲಾ ಬೆಳವಣಿಗೆಗಳು ನಡೆಯುತ್ತಿವೆ. ಅದಕ್ಕೆ ಪೂರಕವಾಗಿ ಒಂದಿಬ್ಬರು ಒಕ್ಕಲಿಗ ಸಚಿವರು, ಶಾಸಕರು ಬಿಟ್ಟರೆ ನೈಸ್ ಮತ್ತು ಬಿಡದಿ ಟೌನ್ ಶಿಪ್ ವಿಷಯದಲ್ಲಿ ಮುಖ್ಯಮಂತ್ರಿ ಪರವಾಗಿ ದನಿಯೆತ್ತುವ ಜನವೇ ಇಲ್ಲವಾಗಿದೆ. ಈ ವಿಷಯವೂ ಹೈಕಮಾಂಡ್ ಅಂಗಳ ಮುಟ್ಟಿದೆ.
ಮೇಲಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಕೂಡ ಅಧಿಕಾರ ವಹಿಸಿಕೊಂಡ ಮೇಲೆ ಒಮ್ಮೆಯೂ ಈ ಯೋಜನೆಗಳ ವಿಷಯದಲ್ಲಿ ಮುಖ್ಯಮಂತ್ರಿ ಬೆಂಬಲಕ್ಕೆ ನಿಂತು ಕನಿಷ್ಠ ಒಂದು ಹೇಳಿಕೆಯನ್ನೂ ಕೊಟ್ಟಿಲ್ಲ. ಇವೆಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಸಿಎಂ ಪಾಳೆಯ ತೀವ್ರ ಚಿಂತೆಗೆ ತುತ್ತಾಗಿದೆ.

ಕುಮಾರಸ್ವಾಮಿ ಆರೋಪವೇನು?
ನನಗಿರುವ ಮಾಹಿತಿ ಪ್ರಕಾರ ಬೇನಾಮಿ ಕಂಪನಿಗಳ ಮೂಲಕ ಈ ಮುಖ್ಯಮಂತ್ರಿಯೇ ನೈಸ್ ಕಂಪನಿಯನ್ನು ಖರೀದಿ ಮಾಡಲು ಹೊರಟಿದ್ದಾರೆ. ರೈತರಿಗೊಂದು ಕಾನೂನು, ಮುಖ್ಯಮಂತ್ರಿಗೆ ಇನ್ನೊಂದು ಕಾನೂನು ಇದೆಯಾ ಈ ರಾಜ್ಯದಲ್ಲಿ? ಬಿಎಂಐಸಿ ಯೋಜನೆ ಹೆಸರಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಹೊಡೆಲು ಸಂಚು ರೂಪಿಸಿದ್ದಾರೆ. ನಾನಿಲ್ಲಿ ಕೂತು ಸಂತೆಭಾಷಣ ಮಾಡುತ್ತಿಲ್ಲ. ಮುಂದಿನ ವಾರ ದಾಖಲೆ ಸಮೇತ ಹೇಳುತ್ತೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದ್ದರು.
ಈ ಮುಖ್ಯಮಂತ್ರಿಯೇ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಭೂ ಲೂಟಿಯ ಮಹಾನಾಯಕ ಎಂದು ಅವರು ಗಂಭೀರ ಆರೋಪ ಮಾಡಿದ್ದರು.
ವಿಧಾನಸೌಧದ 3ನೇ ಮಾಡಿಯಲ್ಲಿ ಕೂತು ಈ ಮುಖ್ಯಮಂತ್ರಿ ನೇರ ವ್ಯವಹಾರಕ್ಕೆ ಇಳಿದಿದ್ದಾರೆ. ನೈಸ್ ಕಂಪನಿಯನ್ನು ಯಾರು ಟೇಕ್ ಓವರ್ ಮಾಡುತ್ತಿದ್ದಾರೆ ಎಂಬುದನ್ನು ತಾಕತ್ತಿದ್ದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನತೆಯ ಮುಂದೆ ಹೇಳಲಿ. ಯೋಜನೆಯನ್ನು ಯಾರು ಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ? ಬೇನಾಮಿ ಕಂಪನಿಗಳ ಮೂಲಕ ಯಾರು ಯಾರು ಈ ವ್ಯವಹಾರಕ್ಕೆ ಇಳಿದಿದ್ದಾರೆ ಎಂಬ ಮಾಹಿತಿ ನನಗಿದೆ. ಈ ಮುಖ್ಯಮಂತ್ರಿ ಎದೆ ಮುಟ್ಟಿಕೊಂಡು ಮಾತನಾಡಲಿ. ಈ ಬಗ್ಗೆ ರಾಜ್ಯದ ಜನತೆಯ ಮುಂದೆ ಸತ್ಯವನ್ನು ಬಾಯಿ ಬಿಡಲಿ ಎಂದು ಸವಾಲು ಹಾಕಿದ್ದರು.
ನೈಸ್ ಯೋಜನೆ ಇಡೀ ದೇಶದಲ್ಲಿಯೇ ಅತೀ ದೊಡ್ಡ ಭೂ ಹಗರಣ. ಇದು ಸ್ಕ್ಯಾಮ್ ಫಾರ್ ಸ್ಕಿಮ್ ಎನ್ನುವ ರೀತಿಯಲ್ಲಿದೆ. ಈ ಅಕ್ರಮದ ವಿರುದ್ಧ ಇಡೀ ರಾಜ್ಯವೇ ತಿರುಗಿ ಬೀಳಬೇಕಿದೆ. ಯುವಕರು, ವಿದ್ಯಾರ್ಥಿಗಳು ಇದನ್ನು ಪ್ರಶ್ನೆ ಮಾಡಬೇಕಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಕರೆ ನೀಡಿದ್ದರು.
ಈ ಮುಖ್ಯಮಂತ್ರಿಗೂ ನೈಸ್ ಯೋಜನೆಗೂ ಇರುವ ಸಂಬಂಧವೇನು? ನೈಸ್ ಜೊತೆ ಸಿಎಂ ಒಡಂಬಡಿಕೆ ಏನು? ಈ ಕಂಪನಿಯ ಮಾಲೀಕರ ಜೊತೆ ಈ ವ್ಯಕ್ತಿಗೆ ಇರುವ ಸಂಬಂಧಗಳು ಮತ್ತು ವ್ಯವಹಾರಗಳು ಏನು? ಧೈರ್ಯವಿದ್ದರೆ ಜನರ ಮುಂದೆ ಈ ಬಗ್ಗೆ ಮಾತನಾಡಲಿ. ನಾನು ಸತ್ಯ ಹೇಳುವುದಕ್ಕೆ ಅಂಜುವುದಿಲ್ಲ ಎಂದಿದ್ದರು ಅವರು. ನೈಸ್ ರಸ್ತೆ ಅಕ್ರಮದ ಬಗ್ಗೆ ರಾಜ್ಯ ಸರಕಾರ ಮೌನಕ್ಕೆ ಶರಣಾಗಿದೆ. ಯೋಜನಾ ಚೌಕಟ್ಟು ಒಪ್ಪಂದ ಸಂಪೂರ್ಣವಾಗಿ ಉಲ್ಲಂಘನೆ ಆಗಿದೆ. ಈ ಸರ್ಕಾರ ನೈಸ್ ಕಂಪನಿ ಜತೆ ನೇರವಾಗಿ ಕುಮ್ಮಕ್ಕಾಗಿದೆ ಎಂದು ಅವರು ದೂರಿದ್ದರು.
ರೈತರ ಭೂಸ್ವಾಧೀನವಾಗಿ 20 ವರ್ಷಗಳೇ ಆಗಿದೆ. ರೈತರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಆದರೆ, ರೈತರಿಂದ ಕಿತ್ತುಕೊಂಡ ಭೂಮಿಯನ್ನು ಮನಸೋಇಚ್ಛೆ ಮಾರಾಟ ಮಾಡಿಕೊಂಡಿದೆ. ಅಲ್ಲದೆ ಒಪ್ಪಂದದಂತೆ 111 ಕಿ.ಮೀ. ರಸ್ತೆಯನ್ನು ನೈಸ್ ನಿರ್ಮಾಣ ಮಾಡಬೇಕಿತ್ತು. ಆದರೆ ಕೇವಲ 5 ಕಿಲೋಮೀಟರ್ ರಸ್ತೆಯನ್ನಷ್ಟೇ ನಿರ್ಮಿಸಿದೆ. ಹೀಗೆ ಯೋಜನಾ ಚೌಕಟ್ಟು ಒಪ್ಪಂದದ ಎಲ್ಲ ಅಂಶಗಳನ್ನು ಸಾರಾಸಗಟ್ಟಾಗಿ ಉಲ್ಲಂಘನೆ ಮಾಡಿದ ಮೇಲೆಯೂ ಅನೇಕ ವರ್ಷಗಳಿಂದ ನೈಸ್ ಕಂಪನಿ ತನ್ನ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಂದ ಅಕ್ರಮವಾಗಿ ಹಣ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಇಷ್ಟೆಲ್ಲಾ ಅಕ್ರಮಗಳನ್ನು ಎಸಿಗಿರುವ ಕಾರಣದಿಂದಲೇ ರಾಜ ಹೈಕೋರ್ಟ್ ನೈಸ್ ಯೋಜನೆಯ ಬಗ್ಗೆ ಕಠಿಣವಾದ ಶಬ್ದಗಳ ಮೂಲಕ ತನ್ನ ಅಭಿಪ್ರಾಯವನ್ನು ದಾಖಲಿಸಿದೆ. ನ್ಯಾಯಾಲಯದ ಅಭಿಪ್ರಾಯವನ್ನು ಈಗಾಗಲೇ ಗಣನೆಗೆ ತೆಗೆದುಕೊಂಡು ಸರ್ಕಾರ ನೈಸ್ ವಿರುದ್ಧ ಕ್ರಮ ಜರುಗಿಸಬೇಕಿತ್ತು. ದುರಂತವೆಂದರೆ ರಾಜ್ಯದ ಮುಖ್ಯಮಂತ್ರಿಯೇ ನೇರವಾಗಿ ನೈಸ್ ಕಂಪನಿ ಜೊತೆ ಶಾಮೀಲಾಗಿದ್ದಾರೆ ಎಂದಿದ್ದರು ಅವರು.
ಸಾರ್ವಜನಿಕವಾಗಿ ಇಷ್ಟೆಲ್ಲ ವಿರೋಧ ಮತ್ತು ಆಕ್ರೋಶ ವ್ಯಕ್ತವಾಗುತ್ತಿದ್ದರು ನೈಸ್ ರಸ್ತೆಗಳಲ್ಲಿ ಟೋಲ್ ಸಂಗ್ರಹ ನಿಲ್ಲುತ್ತಿಲ್ಲ. ಟೋಲ್ ಸಂಗ್ರಹಕ್ಕೆ ಈ ಸರ್ಕಾರವೇ ಒತ್ತಾಸೆಯಾಗಿ ನಿಂತಿದೆ. ಅಲ್ಲಿ ಸುಲಿಗೆ ಮಾಡುವ ಹಣವನ್ನು ಇವರೆಲ್ಲರೂ ಹಂಚಿಕೊಳ್ಳುತ್ತಿದ್ದಾರೆ. ಬಡವಾನ ಸವಾರರ ರಕ್ತವನ್ನು ಹೀರುವ ಕೆಲಸ ನಡೆಯುತ್ತಿದೆ. ರಾಜ್ಯದ ಯುವಜನರು ಈ ಅಕ್ರಮವನ್ನು ನೋಡುತ್ತಾ ಸುಮ್ಮನೆ ಕುಳಿತುಕೊಳ್ಳಬಾರದು ಎಂದು ಅವರು ಗುಡುಗಿದ್ದರು.
ನನಗೆ ತಿಳಿದ ಮಟ್ಟಿಗೆ ರಾಷ್ಟ್ರದ ಇತಿಹಾಸದಲ್ಲಿಯೇ ಬೃಹತ್ತಾದ ಭೂಹಾಗರಣ ನೈಸ್ ಅಕ್ರಮವಾಗಿದೆ. ನ್ಯಾಯಾಲವೂ ಕೂಡ ಇದೊಂದು ಹಗರಣದಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. ಆಡಳಿತ ನಡೆಸುವ ರಾಜಕಾರಣಿಗಳೇ ಶಾಮೀಳಾಗಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ನ್ಯಾಯಾಲಯಗಳಿಗೆ ತಪ್ಪು ಮಾಹಿತಿಗಳನ್ನು ಕೊಟ್ಟು ಸರ್ಕಾರಕ್ಕೆ ಛೀಮಾರಿ ಹಾಕಿಸುವ ದುಷ್ಕೃತ್ಯ ನಡೆದಿದೆ. ಸ್ಕೀಂ ಫಾರ್ ಸ್ಕ್ಯಾಮ್ ಯೋಜನೆ ಇದು. ಇದೆಲ್ಲವನ್ನು ನೋಡಿಕೊಂಡು ನಾವು ಮೌನಕ್ಕೆ ಶರಣಾಗಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದರು.
ಟೋಲ್ ಸಂಗ್ರಹ ಮಾಡುತ್ತಿರುವುದೇ ಮಹಾನ್ ಅಕ್ರಮ ಎಂದಿದ್ದ ಸಚಿವ ಕುಮಾರಸ್ವಾಮಿ ಅವರು; ಇದರ ಬಗ್ಗೆ ತನಿಖೆ ಮಾಡಿದರೆ ಬಹುದೊಡ್ಡ ಅಕ್ರಮ ಬೈಲಿಗೆ ಬರುತ್ತದೆ. ಸಂಘಟಿತವಾಗಿ ಸರ್ಕಾರವನ್ನು ಶಾಮೀಲು ಮಾಡಿಸಿಕೊಂಡು ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಅಕ್ರಮ ವಯಸ್ಸಿದ್ದರೆ ಎಂತಹ ಕುಖ್ಯಾತ ಹಗರಣ ಸೃಷ್ಟಿಯಾಗುತ್ತದೆ ಎಂಬುದಕ್ಕೆ ನೈಸ್ ಹಗರಣ ಜಲಂತ ಸಾಕ್ಷಿ ಎಂದು ಸಚಿವರು ಒತ್ತಿ ಹೇಳಿದ್ದರು.

















