- ಕೃಷ್ಣಪ್ಪ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ: ಕೋವಿಡ್ ಎರಡನೇ ಅಲೆ ಭೀತಿ ನಡುವೆಯೂ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ವಿವಿಧ ಸಭೆಗಳು, ಕಾರ್ಯಕ್ರಮಗಳಲ್ಲಿ ದೈಹಿಕ ಅಂತರ, ಮಾಸ್ಕ್ ಧರಿಸುವುದನ್ನು ಗಾಳಿಗೆ ತೂರಲಾಗಿದ್ದು, ಇದೇ ದೃಶ್ಯ ನಗರಸಭೆಯ ಪ್ರಥಮ ಸಾಮಾನ್ಯ ಸಭೆಯಲ್ಲೂ ಕಂಡು ಬಂದಿತು.
ನಗರಸಭೆಯ ಅಧ್ಯಕ್ಷ ಆನಂದರೆಡ್ಡಿ (ಬಾಬು) ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಯಿತಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಮ್ಮುಖದಲ್ಲಿ ನಗರಸಭೆಯ ಕೆಲ ಸದಸ್ಯರು ಕೊನೆಪಕ್ಷ ಮಾಸ್ಕ್ ಧರಿಸದೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಈ ಚುನಾಯಿತ ಪ್ರತಿನಿಧಿಗಳು ಜನರಿಗೆ ನೀಡಿದ ಸಂದೇಶವಾದರೂ ಏನು ಎಂಬ ಪ್ರಶ್ನೆ ಎದ್ದಿದೆ.
ಒಂದೆಡೆ ಆರೋಗ್ಯ ಸಚಿವರು ಜಿಲ್ಲೆಯು ಸೇರಿದಂತೆ ರಾಜ್ಯಾದ್ಯಂತ ವೈರಸ್ ನಿವಾರಣೆಗೆ ಇನ್ನಿಲ್ಲದ ಶ್ರಮ ಹಾಕುತ್ತಿದ್ದರೆ, ಅವರ ಸ್ವಕ್ಷೇತ್ರ ಚಿಕ್ಕಬಳ್ಳಾಪುರದ ನಗರಸಭೆಯ ಸಭೆಯಲ್ಲಿ ಸದಸ್ಯರು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದು ಎಲ್ಲರ ಹುಬ್ಬೇರಿಸಿದೆ.
ತಿನ್ನುವುದು ಬದನೇಕಾಯಿ, ಹೇಳುವುದು ನೀತಿ ಪಾಠ ಎಂಬ ಹಿರಿಯರ ಗಾದೆಯಂತೆ ನಾಗರಿಕರಿಗೆ ಕೊರೊನ ನಿಯಂತ್ರಣ ಬಗ್ಗೆ ಜನ ಜಾಗೃತಿ ಮೂಡಿಸಬೇಕಾದ ಕೆಲ ಸದಸ್ಯರು ಅವರೇ ಮಾಸ್ಕ್ ಹಾಕದೇ ಸಭೆಯಲ್ಲಿ ಭಾಗಿಯಾಗಿದ್ದು ಸರಿಯಲ್ಲ. ಈ ಸಂಗತಿಯನ್ನು ಸಚಿವರು ಗಮನಕ್ಕೆ ಬಾರದಿರುವುದು ಬೇಸರದ ಸಂಗತಿ ಎನ್ನುತ್ತಾರೆ ಚಿಕ್ಕಬಳ್ಳಾಪುರದ ನಿವಾಸಿ ಜಿ.ಎನ್.ಚಂದ್ರಶೇಖರ್.
ಮೌನವಾಗಿದ್ದರು ಮಹಿಳೆಯರು
ಇದೇ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಗಮನ ಸೆಳೆದ ಮತ್ತೊಂದು ಸಂಗತಿ ಎಂದರೆ, ಮಹಿಳಾ ಮೀಸಲು ಸೌಲಭ್ಯ ಪಡೆದು ಚುನಾಯಿತರಾದ ಓರ್ವ ಮಹಿಳಾ ಸದಸ್ಯೆಯೊಬ್ಬರನ್ನು ಹೊರತುಪಡಿಸಿ ಪುರುಷ ಸದಸ್ಯರಷ್ಟೇ ಸರಿಸಮರಾದ ಮಹಿಳಾ ಸದಸ್ಯರೂ ಯಾವ ವಿಷಯದ ಬಗ್ಗೆ ತುಟಿಬಿಚ್ಚದೆ ಮೌನವಾಗಿದ್ದರು. ಈ ಪೈಕಿ ಕೆಲ ಸದಸ್ಯೆಯರ ಪತಿರಾಯರು ನಗರಸಭೆ ಪ್ರಾಂಗಣದಚಲ್ಲಿ ಠಳಾಯಿಸಿದ್ದು ಕಂಡುಬಂದಿತು..
ನಗರದಲ್ಲಿ ಮಹಿಳೆಯರಿಗೇ ಸಂಬಂಧಿಸಿದ ಪ್ರತ್ಯೇಕ ಶೌಚಾಲಯ, ನೌರ್ಮಲ್ಯ ಕೊರತೆ ಸೇರಿ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಒಳಗೊಂಡಂತೆ ಅವರವರ ವಾರ್ಡುಗಳಲ್ಲಿ ಜನಸಾಮಾನ್ಯರ ಸಮಸ್ಯೆ ಹೇರಳವಾಗಿದ್ದರೂ ಯಾವೊಬ್ಬ ಸದಸ್ಯರೂ ಪ್ರಥಮ ಸಭೆಯಲ್ಲೇ ತುಟಿ ಬಿಚ್ಚದೆ ಮೌನವಾಗಿದ್ದರು.
ಪ್ರತಿಪಕ್ಷದ ಸದಸ್ಯರೊಬ್ಬರು ನಗರದಲ್ಲಿ ಪ್ರಮುಖ ರಸ್ತೆಗಳ ಅಗಲೀಕರಣದ ವಿಷಯವನ್ನು ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಸುಧಾಕರ್ ಅವರು; ನಗರ ವ್ಯಾಪ್ತಿಯ ರಸ್ತೆಗಳ ಅಗಲೀಕರಣಕ್ಕೆ ಕೈ ಹಾಕಿದರೆ ಜೇನು ಗೂಡಿಗೆ ಕಲ್ಲು ಹೊಡೆದಂತೆ ಎಂದರಲ್ಲದೆ ನಗರದ ವರ್ತಕರಿಗೆ ಸಚಿವರು ಪರೋಕ್ಷ ವರ ನೀಡಿದರೇ ಎಂಬ ಮಾತು ಸಭೆಯಲ್ಲೇ ಕೇಳಿಬಂತು.
ನಗರಸಭೆಗೆ ತುಂಬಾ ನಿರೀಕ್ಷೆ ಇಟ್ಟುಕೊಂಡು ಜನರು ಸದಸ್ಯರನ್ನು ಆಯ್ಕೆ ಮಾಡಿರುತ್ತಾರೆ. ಆದರೆ ಆ ಸದಸ್ಯರು ಪ್ರಥಮ ಸಾಮಾನ್ಯ ಸಭೆಯಲ್ಲಿ ಮಾಡಿದ್ದೇನು? ಅಲ್ಲಿ ಅಲಂಕಾರಕ್ಕೆ ಕೂರಲು ಅವರನ್ನು ಆಯ್ಕೆ ಮಾಡಲಾಗಿದೆಯೇ? ಮಾಸ್ಕ್ ಧರಿಸಬೇಕು, ದೈಹಿಕ ಅಂತರ ಪಾಲಿಸಬೇಕು ಎಂಬ ಸಾಮಾನ್ಯ ಸಂಗತಿಯತ್ತಲೂ ಇವರು ಗಮನ ಕೊಡದಿದ್ದರೆ, ನಗರದ ಅಭಿವೃದ್ಧಿ ಇವರಿಂದ ಸಾಧ್ಯವಾಗುತ್ತದೆಯೇ?
-ಮಂಜುನಾಥ ರೆಡ್ಡಿ, ಚಿಕ್ಕಬಳ್ಳಾಪುರ