ಮೈಸೂರು: ನಗರದ ಪೊಲೀಸರು ತಮಿಳುನಾಡಿನ ನಾಲ್ವರು ಅಂತಾರಾಜ್ಯ ಗಂಧದ ಮರಗಳ್ಳರನ್ನು ಬಂಧಿಸಿದ್ದಾರೆ.
ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ತಾಳವಾಡಿ ತಾಲೂಕಿನ ಸೊಸೈಪುರಂ ಗ್ರಾಮದ ಭೂಪತಿ (24), ಫ್ರಾನ್ಸಿಸ್ (26), ತಮಿಳುನಾಡು ರಾಜ್ಯ ತಿರುಪುರ ಜಿಲ್ಲೆಯ ಅವಿನಾಶಿ ತಾಲೂಕಿನ ಸೆಂದಿಲ್ ಕುಮಾರ್ (38) ಹಾಗೂ ಈರೋಡ್ ಜಿಲ್ಲೆಯ ತಾಳವಾಡಿಯ ಪ್ರವೀಣ್ ಕುಮಾರ್ (20) ಬಂಧಿತ ಗಂಧದ ಮರಗಳ್ಳರು.
ಇನ್ನೊಬ್ಬ ಪ್ರಮುಖ ಆರೋಪಿ ಈರೋಡ್ ಮೂಲದ ರಾಹಿಲ್ ಎಂಬುವವನು ಮೈಸೂರಿನ ನಜರಬಾದ್ ಪ್ರದೇಶದಲ್ಲಿ ಮದುವೆಯಾಗಿದ್ದಾನೆ. ಆಗಾಗ ಪತ್ನಿ ಮನೆಗೆ ಬರುತ್ತಿದ್ದ. ನಗರದ ವಿವಿಧೆಡೆ ಕಾಣುತ್ತಿದ್ದ ಶ್ರೀಗಂಧದ ಕೆತ್ತನೆಗಳು, ಶಿಲ್ಪಗಳು ಅವನ ಕಣ್ಕುಕ್ಕಿದ್ದವು. ಈ ಹಿನ್ನೆಲೆಯಲ್ಲಿ ಪದೇಪದೆ ಹೆಂಡತಿ ಮನೆಗೆ ಬರುತ್ತಿದ್ದ, ಎಲ್ಲೆಲ್ಲಿ ಗಂಧದ ಮರಗಳಿವೆ ಎಂಬುದನ್ನು ಪತ್ತೆ ಮಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯಕ್ಕೆ ರಾಹಿಲ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮೈಸೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಗಂಧದ ಮರಗಳ ಕಳ್ಳತನ ಪ್ರಕರಣಗಳ ಪತ್ತೆಗಾಗಿ ನಗರದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸೂಚನೆ ಮೇರೆಗೆ ಡಿಸಿಪಿ ಎಂ.ಎಸ್.ಗೀತಪ್ರಸನ್ನ ನೇತೃತ್ವದಲ್ಲಿ ನಜರ್ ಬಾದ್ ಪೊಲೀಸ್ ಠಾಣಾ ಉಪನಿರೀಕ್ಷಕ ಸಿದ್ದೇಶ್ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ವಿಶೇಷ ತಂಡವು ಜ. 8ರಂದು ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ.ಬಡಾವಣೆಯ ಮುಖ್ಯ ರಸ್ತೆಯಲ್ಲಿರುವ ಪಾರ್ಕ್ ಬಳಿ ತಮಿಳುನಾಡು ಮೂಲದ ನಾಲ್ವರು ಅಂತಾರಾಜ್ಯ ಮರಗಳ್ಳರನ್ನು ಗಂಧದ ಮರದ ತುಂಡುಗಳ ಸಮೇತ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಆರೋಪಿಗಳು ಮೈಸೂರು ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಗಂಧದ ಮರ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.
ಬಂಧಿತರಿಂದ 5,50,000ರೂ. ಮೌಲ್ಯದ 46 ಕೆ.ಜಿ ಗಂಧದ ಮರದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಾರನ್ನು ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರ ಬಂಧನದಿಂದ ನಜರ್ ಬಾದ್ ಠಾಣೆಯ 2, ಜಯಲಕ್ಷ್ಮಿಪುರಂ 1, ಅಶೋಕಪುರಂ 2, ಕೃಷ್ಣರಾಜ ಠಾಣೆ 3, ಲಕ್ಷ್ಮಿಪುರಂ 1, ನರಸಿಂಹರಾಜ ಠಾಣೆ 1 ಸೇರಿದಂತೆ ಒಟ್ಟು 10 ಗಂಧದ ಮರ ಕಳವು ಪ್ರಕರಣಗಳು ಪತ್ತೆಯಾಗಿದೆ.
ಮೈಸೂರು ನಗರ ಡಿಸಿಪಿ ಎಂ.ಎಸ್.ಗೀತಪ್ರಸನ್ನ ನೇತೃತ್ವದಲ್ಲಿ ದೇವರಾಜ ವಿಭಾಗದ ಎಸಿಪಿ ಮುನಿಯಪ್ಪ, ನಜರ್ ಬಾದ್ ಠಾಣೆ ಇನ್ಸಪೆಕ್ಟರ್ ಶ್ರೀಕಾಂತ್ ಮಾರ್ಗದರ್ಶನದಲ್ಲಿ ವಿಶೇಷ ತಂಡದ ಸಿದ್ದೇಶ್, ಸಿಬ್ಬಂದಿಗಳಾದ ಪ್ರಕಾಶ್ ಬಿ.ವಿ, ಮಧುಕೇಶ್, ಚೇತನ್ ಪಿ. ಸಂದೇಶ್ ಕುಮಾರ್, ಕಿರಣ್ ರಾಥೋಡ್, ಚೇತನ್, ತಾಂತ್ರಿಕ ಕೋಶದ ಪೊಲೀಸ್ ನಿರೀಕ್ಷಕರಾದ ಲೋಲಾಕ್ಷಿ ಮತ್ತು ಸಿಸಿಬಿ ಪೊಲೀಸ್ ನಿರೀಕ್ಷಕ ಜಗದೀಶ್ ಸಿಬ್ಬಂದಿಗಳಾದ ಸಿ.ಎಂ.ಮಂಜು, ಕುಮಾರ್ ಗಂಧದ ಮರ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.