- Lead photo: ಟಿ.ವಿ.ಮೋಹನ್‌ದಾಸ್ ಪೈ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ ರಾಜ್ಯಪಾಲ ವಜೂಭಾಯ್ ವಾಲ ಅವರು. ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ.ರಾಮಚಂದ್ರ ಗೌಡ ಇದ್ದಾರೆ.
ನನ್ನ ಶಿಕ್ಷಣಕ್ಕೆ ಹಣ ಹೊಂದಿಸಲು ನನ್ನ ತಾಯಿ ಮೂವತ್ತು ವರ್ಷ ಬಸ್ ಹಿಡಿಯದೇ ನಡೆದೇ ಹೋಗುತ್ತಿದ್ದರೆಂದು ಆ ದಿನಗಳನ್ನು ಸ್ಮರಿಸಿದ ಪೈ
ಬೆಂಗಳೂರು: ಐದು ಸಾವಿರ ವರ್ಷಕ್ಕೂ ಪುರಾತನವಾದ ನಾಗರಿಕತೆ ಹೊಂದಿರುವ ಭಾರತ ಅನೇಕ ರೀತಿಯಲ್ಲಿ ಕಷ್ಟ-ನಷ್ಟಗಳನ್ನು ಅನುಭವಿಸಿದೆ. 200 ವರ್ಷಗಳ ಬ್ರಿಟೀಷ್ ಆಡಳಿತದಲ್ಲಿ ಅಪಾರ ಸಂಪತ್ತನ್ನು ಕಳೆದುಕೊಂಡಿತು. 45 ಟ್ರಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ ಸಂಪತ್ತನ್ನು ಬ್ರಿಟೀಷರು ಇಲ್ಲಿಂದ ಹೊತ್ತುಕೊಂಡು ಹೋದರು!!
ಈ ವಿಷಯವನ್ನು ಬಹಿಗಂಗಪಡಿಸಿದವರು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸಂಸ್ಥೆಯ ಅಧ್ಯಕ್ಷ ಟಿ.ವಿ.ಮೋಹನ್‌ದಾಸ್ ಪೈ. ಸೋಮವಾರದಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜೂಭಾಯ್ ವಾಲ ಅವರಿಂದ ಸ್ವೀಕರಿಸಿದ ನಂತರ ಮುಖ್ಯ ಭಾಷಣ ಮಾಡಿದ ಅವರು, ಬ್ರಿಟೀಷ್ ಭಾರತ ಮತ್ತು ತಮ್ಮದೇ ಕೊಂಕಣಿ ಇತಿಹಾಸದತ್ತ ಬೆಳಕು ಚೆಲ್ಲಿದರು. ಅವರು ಹೇಳಿದ ಮಾತುಗಳು ಹೀಗಿವೆ;
ಕೊಲಂಬಿಯಾ ವಿಶ್ವವಿದ್ಯಾಲಯದ ಇತಿಹಾಸಕಾರರೊಬ್ಬರು ಬರೆದಿರುವ ಕೃತಿಯಲ್ಲಿ ಬ್ರಿಟೀಷರು ಭಾರತದಿಂದ ಹೊತ್ತುಕೊಂಡು ಹೋದ ಸಂಪತ್ತಿನ ಬಗ್ಗೆ ದಾಖಲಿಸಲಾಗಿದೆ. 1820ರಲ್ಲಿ ಭಾರತ ಅತ್ಯಂತ ಶ್ರೀಮಂತ ದೇಶವಾಗಿತ್ತು. ಆದರೆ, 1947ರ ಹೊತ್ತಿಗೆ ಜಗತ್ತಿನಲ್ಲಿಯೇ ಅತ್ಯಂತ ಬಡದೇಶವಾಗಿ ರೂಪಾಂತರವಾಗಿತ್ತು.
ನಮ್ಮ ದೇಶ ಜಗತ್ತಿಗೇ ಗುರುಸ್ಥಾನದಲ್ಲಿತ್ತು. ಪ್ರಕೃತಿಯೊಂದಿಗೆ ಜೀವಿಸುವ ಬಗೆ, ಪ್ರಕೃತಿಯನ್ನೇ ಆರಾಧಿಸುವ ನಮ್ಮ ಸಂಸ್ಕೃತಿ-ನಂಬಿಕೆ ಹಾಗೂ ಸಹಿಷ್ಣುತೆಯಿಂದ ಬದುಕುವುದು ಹೇಗೆ? ಎಂಬುದನ್ನು ಜಗತ್ತಿಗೆ ಮೊತ್ತ ಮೊದಲು ತೋರಿಸಿಕೊಟ್ಟ ಏಕೈಕ ದೇಶ ನಮ್ಮದು. ಅಷ್ಟೇ ಅಲ್ಲ, ಜ್ಞಾನಕ್ಕೆ ಅಗ್ರಪೀಠ ಹಾಕಿ ಆರಾಧಿಸಿದ ದೇಶವೂ ನಮ್ಮದೇ. ಐತಿಹಾಸಿಕವಾಗಿ ನೋಡುವುದಾದರೆ, ನಮ್ಮ ವ್ಯವಸ್ಥೆಯಲ್ಲಿ ರಾಜನಷ್ಟೇ ರಾಜಗುರುವಿಗೂ ಪ್ರಾಧಾನ್ಯತೆ ಇರುತ್ತಿತ್ತು. ರಾಜನ ಸನಿಹದಲ್ಲೇ ರಾಜಗುರುವಿನ ಆಸನ ಇರುತ್ತಿತ್ತು. ಜ್ಞಾನಕ್ಕೆ ನಮ್ಮಲ್ಲಿ ಕೊಡುತ್ತಿದ್ದ ಗೌರವ ಆ ರೀತಿಯಲ್ಲಿತ್ತು. ಜ್ಞಾನಿಗೂ ಮತ್ತು ಸೈನಿಕನಿಗೂ ಅತ್ಯುನ್ನತ ಗೌರವ ಕೊಡಲಾಗುತ್ತಿತ್ತು. ಜಗತ್ತಿನ ಎಲ್ಲ ವ್ಯವಸ್ಥೆಗಳಲ್ಲಿ ಯೋಧನಿಗೆ ಅಗ್ರಮನ್ನಣೆ ನೀಡುತ್ತಿದ್ದ ಹೊತ್ತಿನಲ್ಲಿ ನಮ್ಮ ನೆಲದಲ್ಲಿ ಜ್ಞಾನಿಗೆ ಅಗ್ರಮಾನ್ಯತೆ ನೀಡಲಾಗುತ್ತಿತ್ತು.
ನಮ್ಮ ಧರ್ಮಭೂಮಿ ಗೋವಾ
ನಮ್ಮ ಕರ್ಮಭೂಮಿ ಕರ್ನಾಟಕ. ನಮ್ಮ ಧರ್ಮಭೂಮಿ ಗೋವಾ. ನಾನು ಕರ್ನಾಟಕದ ನಿವಾಸಿ, ನನ್ನ ಮನೆ ಇಲ್ಲಿದೆ. ನಾವು ಕೊಂಕಣಿಗಳು. ನಮಗೆ ಮಾತೃಭೂಮಿ ಎಂಬುದಿಲ್ಲ. ಸರಸ್ವತಿ ನದಿಯ ದಂಡೆ ನಮ್ಮ ನೆಲೆಯಾಗಿತ್ತು. ಆ ನದಿ ಬತ್ತಿಹೋದ ಮೇಲೆ ನಮ್ಮ ಪೂರ್ವಜರು ಗೋವಾಗೆ ಬಂದರು. ಅಲ್ಲಿಗೆ ಪೋರ್ಚುಗೀಸರು ಬಂದಾಗ ನಾವು ಮತ್ತೆ ದಕ್ಷಿಣಕ್ಕೆ ಬಂದು ನೆಲೆ ನಿಂತರು. ಅತಿ ಚಿಕ್ಕದಾದ ಅಲ್ಪಸಂಖ್ಯಾತ ಸಮುದಾಯ ನಮ್ಮದು. ಕೇವಲ ೨೫ ಲಕ್ಷ ಜನರಿರುವ ಗುಂಪು. ಆವತ್ತು ನಮ್ಮ ಪೂರ್ವಜರಿಗೆ ನೆಲೆಕೊಟ್ಟ ಈ ರಾಜ್ಯಕ್ಕೆ ನಾವು ಚಿರಋಣಿಯಾಗಿದ್ದೇವೆ. ಕಷ್ಟದಲ್ಲಿ ಬಂದಾಗ ಈ ನೆಲ ನಮ್ಮನ್ನು ಕಾಪಾಡಿತು.
ನಮ್ಮ ದೇಶ ಜ್ಞಾನಮಯವಾಗಿದೆ
ಹಿಂದಿನಿಂದ ಮಾತ್ರವಲ್ಲ, ಈಗಲೂ ಜ್ಞಾನದ ಸಂಪತ್ತಿನಿಂದ ಕೂಡಿದೆ. ಇಡೀ ಯುರೋಪ್ ಜ್ಞಾನ ಬೆಳಕಿಲ್ಲದೆ ಕತ್ತಲ ಯುಗದಲ್ಲಿದ್ದಾಗ ನಮ್ಮಲ್ಲಿ ತಕ್ಷಶಿಲ, ನಳಂದದಂಥ ಅತಿಶ್ರೇಷ್ಠ ವಿಶ್ವವಿದ್ಯಾಲಯಗಳು ಇದ್ದರು. 350 ವರ್ಷಗಳಿಗೂ ಹಿಂದೆ; ಅಂದರೆ ಕ್ರಿಸ್ತನಿಗೂ ಮೊದಲೇ ನಮ್ಮ ದೇಶ ಜ್ಞಾನ ಸಂಪತ್ತಿನಿಂದ ಕಂಗೊಳಿಸುತ್ತಿತ್ತು. ಪ್ರಸ್ತುತ ದೇಶದಲ್ಲಿ 975 ವಿಶ್ವವಿದ್ಯಾಲಯಗಳು, 51,000 ಕಾಲೇಜುಗಳು ನಮ್ಮಲ್ಲಿವೆ. ಪ್ರತಿ ವರ್ಷ ಕೋಟ್ಯಂತರ ಮಂದಿ ಪದವೀಧರರು ಕಲಿತು ಹೊರಬರುತ್ತಿದ್ದಾರೆ.
ಸಂಶೋಧನೆಗೆ ಹೆಚ್ಚು ಒತ್ತು ಬೇಕೆಂದ ಪೈ
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಮೋಹನ್‌ದಾಸ್ ಪೈ; ಶೈಕ್ಷಣಿಕವಾಗಿ ರಾಜ್ಯವು ಉನ್ನತ ಮಟ್ಟದಲ್ಲೇ ಇದ್ದರೂ ಸಂಶೋಧನೆಗೆ ಇನ್ನಷ್ಟು ಒತ್ತು ನೀಡಲೇಬೇಕು. ಕೊನೆಪಕ್ಷ 100 ಕೋಟಿ ರೂ.ಗಳಷ್ಟು ಮೊತ್ತವನ್ನಾದರೂ ಸಂಶೋಧನಾ ಕ್ಷೇತ್ರಕ್ಕೇ ಮೀಸಲಿಡಬೇಕು. ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಆರ್ಥಿಕ ಸಹಕಾರವನ್ನು ಒದಗಿಸಬೇಕು. ಆಗ ಮಾತ್ರ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ಬರುತ್ತದೆ ಹಾಗೂ ದೇಶದ ಅಭಿವೃದ್ಧಿಗೆ ವೇಗ ಬರುತ್ತದೆ. ಶಾಲೆ-ಕಾಲೇಜುಗಳಲ್ಲಿ ಕಲಿಯುವ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಉದಾರವಾಗಿ ಒದಗಿಸಬೇಕು. ಮೂಲಸೌಕರ್ಯಗಳನ್ನು ಪರಿಣಾಮಕಾರಿ ಒದಗಿಸಬೇಕು.
ಶಾಲೆಗೆ 30 ವರ್ಷ ನಡೆದ ಅಮ್ಮ
ನಮ್ಮ ದೇಶದಲ್ಲಿ ಜಾತಿ, ಮತ ಎಲ್ಲ ಕಷ್ಟಗಳ ಎಲ್ಲೆಯನ್ನು ದಾಟಿ ಮಕ್ಕಳು ಶಿಕ್ಷಣ ಪಡೆಯಬೇಕು. ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ದಿಕ್ಕಿನಲ್ಲಿ ದೊಡ್ಡ ಹೆಜ್ಜೆಗಳನ್ನೇ ಇಟ್ಟಿದ್ದಾರೆ. ಅದರ ಜತೆಗೆ, ಪ್ರತಿ ಮಗುವಿನ ಕಲಿಕೆಯಲ್ಲಿ ಆ ಮಗುವಿನ ತಾಯಿಯ ಅಪಾ ರ ತ್ಯಾಗ ಇರುತ್ತದೆ. ಈ ದಿಸೆಯಲ್ಲಿ ನಮ್ಮ ದೇಶದ ತಾಯಂದಿರ ತ್ಯಾಗವನ್ನು ಸ್ಮರಿಸಲೇಬೇಕು. ನನ್ನ ತಾಯಿ ಶಾಲಾ ಶಿಕ್ಷಕಿ ಆಗಿದ್ದರು. ಬಸ್ ಪ್ರಯಾಣ ದರವನ್ನು ಉಳಿಸಲು ನಮ್ಮ ತಾಯಿ 30 ವರ್ಷಗಳ ಕಾಲ ಶಾಲೆಗೆ ನಡೆದೇ ಹೋಗುತ್ತಿದ್ದರು. ಆ ಹಣವನ್ನು ಅವರು ನಮ್ಮ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದ್ದರು. ನನ್ನ ಮಗು ಕಲಿಯಲೇಬೇಕು ಎಂಬುದು ಪ್ರತಿ ತಾಯಿಯ ಹಂಬಲವಾಗಿರುತ್ತದೆ. ಹೀಗಾಗಿ ಪ್ರತಿ ಮಗು ಶಾಲೆಗೆ ಹೋಗಲೇಬೇಕು. ಕಲಿಯಲೇಬೇಕು.
ಕರ್ನಾಟಕ ಅತ್ಯಂತ ಶ್ರೀಮಂತ ರಾಜ್ಯ
ವೈಯಕ್ತಿಕ ಆದಾಯವನ್ನು ಪರಿಗಣನೆಗೆ ತೆಗೆದುಕೊಂಡು ನೋಡಿದರೆ ಇಡೀ ದೇಶದಲ್ಲಿ ಕರ್ನಾಟಕ ಎರಡನೇ ಅತ್ಯಂತ ಶ್ರೀಮಂತ ರಾಜ್ಯ. ನಮ್ಮ ರಾಜ್ಯದ ಒಟ್ಟು ಜಿಡಿಪಿ 17 ಲಕ್ಷ ಕೋಟಿ ರೂ., ನನಗೆ ತಿಳಿದ ಮಟ್ಟಿಗೆ ತಲಾದಾಯ 2,52,000 ರೂ ಇರಬಹುದು. (ತೆಲಂಗಾಣದಲ್ಲಿ ತಲಾದಾಯ 2,54,000 ರೂ. ಇದೆ). ಇನ್ನು ಬೆಂಗಳೂರು ಅತ್ಯಂತ ಶ್ರೀಮಂತ ನಗರ. ನಗರವಾಸಿಗಳ ತಲಾದಾಯ ಸರಾಸರಿ 10,000 ಡಾಲರ್ ಇದೆ. ಭಾರತದ ಒಟ್ಟಾರೆ ತಲಾದಾಯ 2,000 ಡಾಲರ್ ಮಾತ್ರ. ನಿಸ್ಸಂಶಯವಾಗಿ ಬೆಂಗಳೂರು ಅತ್ಯಂತ ಶ್ರೀಮಂತ ನಗರ. ದೇಶದಲ್ಲೇ ಅತಿಹೆಚ್ಚು ತೆರಿಗೆ ಕಟ್ಟುವ 2ನೇ ನಗರ ನಮ್ಮದು. ಜತೆಗೆ, ಐಟಿ-ಬಿಟಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ನಗರವೂ ಹೌದು.
***
ರಾಜಭವನದಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ವಜೂಭಾಯ್ ವಾಲ ಅವರು, ಪೈ ಅವರಿಗೆ ಈ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ; ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಮೋಹನ್‌ದಾಸ್ ಪೈ ಅವರು, ಇನ್ಫೋಸಿಸ್‌ನಂಥ ಪ್ರತಿಷ್ಠಿತ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಆ ಕಂಪನಿಗೆ ಆರ್ಥಿಕ ಸದೃಢತೆಯನ್ನು ತಂದುಕೊಟ್ಟವರು. ಅವರಿಗೆ ಗೌರವ ಡಾಕ್ಟರೇಟ್ ಪದವಿ ಸಲ್ಲುತ್ತಿರುವುದು ಸಂತೋಷ ಉಂಟು ಮಾಡಿದೆ ಎಂದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರ ಗೌಡ, ಕುಲಸಚಿವ ಪ್ರೊ.ಬಸವರಾಜ್ ಪದ್ಮಶಾಲಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.