ಬೆಂಗಳೂರು: ಇಡೀ ರಾಜ್ಯವೇ ಸ್ವಾಮಿ ವಿವೇಕಾನಂದರ ಸ್ಮರಣೆಯಲ್ಲಿದ್ದಾಗಲೇ ಮಂಗಳವಾರ ಬರಸಿಡಿಲಿನಂಥ ಸುದ್ದಿಯೊಂದು ಬಂದಿದೆ. ಬಸವನಗುಡಿಯ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ಮಹಾರಾಜ್ ಅವರು ಮಂಗಳವಾರ ಮಧ್ಯಾಹ್ನ 1.05ರ ಹೊತ್ತಿಗೆ ವಿಧಿವಶರಾಗಿದ್ದಾರೆ. ಅವರಿಗೆ 91 ವರ್ಷ ಆಗಿತ್ತು.
ಶ್ರೀ ರಾಮಕೃಷ್ಣ ಮಠದ ವಿದ್ಯಾರ್ಥಿ ಮಂದಿರದಲ್ಲಿ ಇಂದು ಸಂಜೆ 5ರಿಂದ ರಾತ್ರಿ 8 ಗಂಟೆಯವರೆಗೆ ಹಾಗೂ ನಾಳೆ, ಅಂದರೆ ಜನವರಿ 13 ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸ್ವಾಮಿ ಹರ್ಷಾನಂದ ಅವರು ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರಲ್ಲದೆ, ಬಾಲ್ಯದಿಂದಲೇ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಪ್ರಭಾವಕ್ಕೆ ಒಳಗಾದವರು. 1948ರಲ್ಲೇ ಅಂದರೆ, ಅವರಿಗೆ 15 ವರ್ಷ ತುಂಬಿದಾಗಲೇ ರಾಮಕೃಷ್ಣಾಶ್ರಮದ ಸಂಪರ್ಕಕ್ಕೆ ಬಂದರು. ಅಂದ ಹಾಗೆ, ಸ್ವಾಮಿ ಹರ್ಷಾನಂದರು ಮೂಲತಃ ಬೆಂಗಳೂರಿನ ಮಲ್ಲೇಶ್ವರದವರು. ಅವರು ಜನಿಸಿದ್ದು 1931ರಲ್ಲಿ.
ಜಿಜ್ಞಾಸೆಗಳಿಂದ ಅರಳಿದ ಅಧ್ಯಾತ್ಮ ಶಿಖರ
ಅಧ್ಯಾತ್ಮ ಜಗತ್ತಿನ ಮೇರು ಸದೃಶವಾಗಿದ್ದ ಸ್ವಾಮಿ ಹರ್ಷಾನಂದರ ಆರಂಭದ ದಿನಗಳಲ್ಲಿ ಧರ್ಮದ ಬಗ್ಗೆ ಸಾಕಷ್ಟು ಗೊಂದಲ ಅವರ ಮನಸ್ಸಿನಲ್ಲಿ ಮನೆ ಮಾಡಿತ್ತು. ಧರ್ಮದ ಎಲ್ಲಾ ಮಜಲುಗಳ ಬಗ್ಗೆ ಅರಿಯುವ ಉದ್ದೇಶ ಅವರಿಗೆ ಉತ್ಕಟವಾಗಿತ್ತು. ಅದೇ ಸಂದರ್ಭದಲ್ಲಿ ಅಲ್ಲಲ್ಲಿ ನಡೆಯುತ್ತಿದ್ದ ಸತ್ಸಂಗಗಳಿಗೆ ತಪ್ಪಿಸದೇ ತೆರಳುತ್ತಿದ್ದ ಅವರು ತಮ್ಮಲ್ಲಿದ್ದ ಧಾರ್ಮಿಕ ಜಿಜ್ಞಾಸೆಗಳಿಗೆ ಉತ್ತರ ಕಂಡುಕೊಳ್ಳುತ್ತಾ ಬಂದರು. ಮುಖ್ಯವಾಗಿ ಹಿಂದೂ ಧರ್ಮದ ಬಗ್ಗೆ ಅವರಿಗಿದ್ದ ಎಲ್ಲ ಜಿಜ್ಞಾಸೆಗಳು ಹೀಗೆ ಪರಿಹಾರವಾಗಿದ್ದವು.
ಇದೆಲ್ಲಾ ಆದ ಮೇಲೆ ಸ್ವಾಮಿ ಹರ್ಷಾನಂದರು 1954ರಲ್ಲಿ ರಾಮಕೃಷ್ಣಾಶ್ರಮಕ್ಕೆ ಸೇರಿದರು. ತಮ್ಮ ಇಡೀ ಬದುಕನ್ನು ಸಮಾಜದ ಸೇವೆಗೆ ಮುಡಿಪಿಟ್ಟರಲ್ಲದೆ, 1962ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ತಮ್ಮ ಸರಳತೆ, ತಾವು ನಂಬಿದ ವಿವೇಕಾನಂದರ ವಿಚಾರಗಳನ್ನು ಅತ್ಯಂತ, ಶ್ರದ್ಧೆ, ಭಕ್ತಿಯಿಂದ ಪ್ರಚಾರ ಮಾಡಿದರು.
ಕೊಲ್ಕತಾದ ಬೇಲೂರ್ ಮಠದಲ್ಲಿ ತರಬೇತಿಗೆಂದು ಸೇರಿಕೊಂಡು ಅಲ್ಲಿಯೇ ಅಧ್ಯಾಪಕರಾಗಿ ಕೆಲಸ ಮಾಡಿದರು. ದೇಶದ ಉದ್ದಗಲಕ್ಕೂ ಅನೇಕ ಸೇವಾ ಕಾರ್ಯಕ್ರಮಗಳಲ್ಲಿ ಅವಿರತವಾಗಿ ಪಾಲ್ಗೊಂಡಿದ್ದ ಹರ್ಷಾನಂದರು, ಆಂಧ್ರ ಪ್ರದೇಶದಲ್ಲಿ ಚಂಡಮಾರುತ ಬಂದಾಗ ಅವರು ಪರಿಹಾರ ಕೇಂದ್ರದಲ್ಲೂ ಹಗಲಿರಳು ಸೇವೆ ಮಾಡಿದ್ದರು. 1989ರಲ್ಲಿ ಬೆಂಗಳೂರಿನ ರಾಮಕೃಷ್ಣ ಆಶ್ರಮಕ್ಕೆ ಬಂದ ಅವರು, ಆಗಿನಿಂದ ತಮ್ಮ ಕೊನೆಕ್ಷಣದವರೆಗೂ ಅಲ್ಲಿಯೇ ಇದ್ದರು.
ಮಹಾನ್ ಜ್ಞಾನಿ
ಸ್ವಾಮಿ ಹರ್ಷಾನಂದರು ಅನೇಕ ಭಾಷೆಗಳಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಮಹಾನ್ ಜ್ಞಾನಿಯಾಗಿದ್ದರು. ಕನ್ನಡ, ಇಂಗ್ಲೀಷ್, ಸಂಸ್ಕೃತ ಸೇರಿದಂತೆ ಇನ್ನು ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರು, ಬರೆಯಬಲ್ಲವರೂ ಆಗಿದ್ದರು. ಅನೇಕ ಕೃತಿಗಳನ್ನು ಅವರು ರಚನೆ ಮಾಡಿದ್ದಾರೆ. ಹಿಂದೂ ಧರ್ಮ ಕುರಿತ ವಿಶ್ವಕೋಶವನ್ನು ಅವರು ಬರೆಯುತ್ತಿದ್ದರು. ಶಾಸ್ತ್ರೀಯ ಸಂಗೀತವನ್ನು ಬಹುವಾಗಿ ಇಷ್ಟಪಡುತ್ತಿದ್ದ ಸ್ವಾಮಿ ಹರ್ಷಾನಂದರು ಭಜನೆಗಳನ್ನು ಹಾಡುತ್ತಿದ್ದರು, ಅದರಲ್ಲೂ ಹಿಂದೂಸ್ತಾನಿ ಸಂಗೀತ ಶೈಲಿಯಲ್ಲಿ ಅಮೋಘವಾಗಿ ಹಾಡಿದ್ದಾರೆ.
ಸ್ವಾಮಿ ಹರ್ಷಾನಂದರ ದಿವ್ಯಜ್ಞಾನದ ಫಲವಾಗಿ ಮೂರು ಸಂಪುಟಗಳ ʼವಿವರಣಾತ್ಮಕ ಹಿಂದೂ ವಿಶ್ವಕೋಶʼ ಈಗಾಗಲೇ ಪ್ರಕಟವಾಗಿದೆ. ಹಿಂದೂ ಧರ್ಮ ಸಮಗ್ರ ವಿಚಾರಗಳನ್ನು ಈ ಮಹಾನ್ ಸಂಪುಟಗಳು ಒಳಗೊಂಡಿವೆ. ಪ್ರತಿ ಸಂಪುಟವೂ 700 ಪುಟಗಳಷ್ಟಿದೆ ಎಂದರೆ, ಮಹತ್ಕಾರ್ಯಕ್ಕಾಗಿ ಸ್ವಾಮೀಜಿ ಅವರ ಶ್ರಮ ಯಾವ ಮಟ್ಟದ್ದು ಎಂಬುದು ಅರ್ಥವಾಗುತ್ತದೆ.
ಮಹಾ ಜ್ಞಾನಿ, ಸಂತ ಲೋಕಕ್ಕೆ ತಮ್ಮ ಸರಳತೆ, ಸಜ್ಜನಿಕೆಯಿಂದ ಮುಗಿಲೆತ್ತರದ ಗೌರವ ತಂದುಕೊಟ್ಟಿದ್ದ ಸ್ವಾಮಿ ಹರ್ಷಾನಂದರು ಅಳಿದ ಮೇಲೂ ಉಳಿಯುವ ಸಂತರು.