ಚಿಕ್ಕಬಳ್ಳಾಪುರ: ಹಳ್ಳಿಗಳಲ್ಲೂ ಹೀಗೂ ಆಗುತ್ತಾ ಎಂದು ಹುಬ್ಬೇರಿಸಬೇಡಿ. ರಾಜಕೀಯ ವೈಷಮ್ಯ ಮತ್ತಿತರೆ ಕಾರಣಗಳಿಂದ ಕೆಲವರು ನಾನಾ ರೀತಿಯಲ್ಲಿ ಸೇಡು ತೀರಿಸಿಕೊಂಡು ವಿಕೃತಿ ಮೆರೆಯುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ.
ಗೌರಿಬಿದನೂರು ತಾಲ್ಲೂಕಿನ ಭಾಗವೇ ಆಗಿದ್ದ ಕೆಲ ದಿನಗಳ ಹಿಂದೆಯಷ್ಟೇ ಹೊಸ ತಾಲ್ಲೂಕಾಗಿ ರೂಪುಗೊಂಡ ಮಂಚೇನಹಳ್ಳಿ ಸಮೀಪದ ಹಳ್ಳಿಯಲ್ಲಿ ಇಂಥದೊಂದು ಘಟನೆ ನಡೆದಿದೆ. ಯಾರೋ ಕಿಡಿಗೇಡಿಗಳು ಬೆಳೆದು ನಿಂತಿದ್ದ ಬೀನ್ಸ್ (ಹುರುಳಿ ಕಾಯಿ) ಬೆಳೆಯನ್ನು ರಾತ್ರೀರಾತ್ರಿ ನಾಶ ಮಾಡಿ ವಿಕೃತಿ ಮೆರೆದಿದ್ದಾರೆ.
ಎಂ.ನಾಗೇನಹಳ್ಳಿ ಗ್ರಾಮದ ವೆಂಕಟರೆಡ್ಡಿ ಎಂಬುವವರ ತೋಟದಲ್ಲಿ ಉತ್ತಮ ಫಸಲು ತುಂಬಿಕೊಂಡಿದ್ದ ಬೀನ್ಸ್ ಬೆಳೆಯನ್ನು ರಾತ್ರೋರಾತ್ರಿ ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಇದರಿಂದ ಅವರಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿಯಷ್ಟು ನಷ್ಟವಾಗಿದೆ.
ಮಂಚೇನಹಳ್ಳಿ ಪೊಲೀಸರಿಗೆ ದೂರು ನೀಡಿರುವ ವೆಂಕಟರೆಡ್ಡಿ, ಬೆಳೆ ನಾಶವಾಗಿರುವ ಬಗ್ಗೆ ತೀವ್ರ ಆಘಾತಗೊಂಡಿದ್ದಾರೆ. ಕೈಗೆ ಬರಲಿದ್ದ ಫಸಲು ನಾಶವಾಗಿದ್ದು ತೀರಾ ನೋವುಂಟು ಮಾಡಿದೆ. ಕಿಡಿಗೇಡಿಗಳು ಮಾಡಿದ್ದು ಸರಿಯಲ್ಲ. ಇನ್ನು ಯಾವ ರೈತನಿಗೂ ಇಂಥ ಸ್ಥಿತಿ ಬರದಿರಲಿ ಎಂದು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬೆಳೆ ಹಾಳು ಮಾಡಿದ ಕಿಡಿಗೇಡಿಗಳಿಗೆ ಬಲೆ ಬೀಸಿದ್ದಾರೆ.