ಕೋಲಾರ: ಇತ್ತೀಚೆಗಷ್ಟೇ ವಿಸ್ತರಣೆಯ ಕಾರಣಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕಳೆದುಕೊಂಡ ಕೋಲಾರ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಮೊದಲ ಹಂತದ ವಿತರಣೆ ಯಶಸ್ವಿಯಾಗಿ, ಸುರಕ್ಷಿತವಾಗಿ ನಡೆಯಿತು.
ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆಯ ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಮಾಲೂರು ತಾಲ್ಲೂಕಿನ ದೊಡ್ಡಶಿವಾರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗಿದ್ದು, ಮೊದಲೇ ನೋಂದಣಿ ಮಾಡಿಕೊಂಡಿದ್ದ ೩೭೫ ಕೋವಿಡ್ ಯೋಧರಿಗೆ ಲಸಿಕೆ ಕೊಡಲಾಯಿತು.
ಜಿಲ್ಲೆಯಲ್ಲಿ ಶನಿವಾರ ಶುರುವಾದ ಲಸಿಕೆ ಅಭಿಯಾನದಲ್ಲಿ ಕೇಂದ್ರಗಳಲ್ಲಿ ಲಸಿಕೆ ವಿತರಣೆಯಾಯಿತು. ಯಾವುದೇ ಲೋಪಗಳಿಲ್ಲದೆ ನಡೆಯಿತಲ್ಲದೆ, ಲಸಿಕೆ ಪಡೆದವರಿಗೆ ಯಾವುದೇ ರೀತಿಯ ಅಡ್ಡ ಪರಿಣಾಮ ಆಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಜಯಕುಮಾರ್ ತಿಳಿಸಿದರು.
ಇವತ್ತು 593 ಜನರಿಗೆ ಲಸಿಕೆ ನೀಡುವ ಗುರಿ ಇತ್ತು. ಆದರೆ 375 ಜನರಿಗೆ ಮಾತ್ರ ಲಸಿಕೆ ನೀಡಲಾಯಿತು. ಶೇ.63ರಷ್ಟು ಯಶಸ್ಸು ಮೊದಲ ದಿನ ಸಿಕ್ಕಿದೆ ಎಂದು ಅವರು ಮಾಹಿತಿ ನೀಡಿದರು.
- ಕೋಲಾರದಲ್ಲಿ ಕೋವಿಡ್ ವ್ಯಾಕ್ಸಿನ್ ನೀಡಿದ ವೇಳೆ ಸಂಸದ ಮುನಿಸ್ವಾಮಿ,ಶಾಸಕ ಶ್ರೀನಿವಾಸ ಗೌಡ, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯಕುಮಾರ್ ಇದ್ದರು.
ಎಲ್ಲೆಲ್ಲಿ ಎಷ್ಟು ಜನರಿಗೆ ಲಸಿಕೆ?
ಜಿಲ್ಲಾ ಕೇಂದ್ರದಲ್ಲಿರುವ ಎಸ್ಎನ್ಆರ್ ಆಸ್ಪತ್ರೆಯಲ್ಲಿ 40, ಶ್ರೀನಿವಾಸಪುರ ತಾಲ್ಲೂಕು ಆಸ್ಪತ್ರೆಯಲ್ಲಿ 71, ಮಾಲೂರು ತಾಲ್ಲೂಕು 65, ಬಂಗಾರಪೇಟೆ ಆಸ್ಪತ್ರೆಯಲ್ಲಿ 59, ಮುಳಬಾಗಿಲು ಆಸ್ಪತ್ರೆಯಲ್ಲಿ 80, ಮತ್ತು ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 60 ಜನರಿಗೆ ಲಸಿಕೆ ವಿತರಣೆ ನೀಡಲಾಯಿತೆಂದು ಡಾ.ವಿಜಯಕುಮಾರ್ ವಿವರಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಅಭಿಯಾನಕ್ಕೆ ಸಂಸದ ಮುನಿಸ್ವಾಮಿ, ಶಾಸಕ ಶ್ರೀನಿವಾಸ ಗೌಡ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಬಂಗಾರಪೇಟೆಯಲ್ಲಿ 59 ಕೋವಿಡ್ ಯೋಧರಿಗೆ ಲಸಿಕೆ
- ಬಂಗಾರಪೇಟೆಯಲ್ಲಿ ಲಸಿಕೆ ನೀಡಿದ ಕ್ಷಣಕ್ಕೆ ಸಾಕ್ಷಿಯಾದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಆಸ್ಪತ್ರೆಯ ಸಿಬ್ಬಂದಿ.
ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಒಟ್ಟು 59 ಮಂದಿಗೆ ಲಸಿಕೆ ಹಾಕಲಾಗಿದ್ದು, ಲಸಿಕೆ ಪಡೆದ ಅಷ್ಟೂ ಕೋವಿಡ್ ಯೋಧರೂ ಕ್ಷೇಮವಾಗಿದ್ದಾರೆಂದು ತಾಲ್ಲೂಕು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಲಸಿಕೆ ನೀಡಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಬಲೂನು, ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಎಲ್ಲೆಲ್ಲೂ ಸಂಭ್ರಮ ಹರಡಿದ ಸಂಜೀವಿನಿಯೂ ಆಸ್ಪತ್ರೆ ಸಿಬ್ಬಂದಿಯ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಲಿಕೆ ವಿತರಣೆಗೆ ಚಾಲನೆ ನೀಡಿದರು.
- ಬಂಗಾರಪೇಟೆ ಆಸ್ಪತ್ರೆಯ ಸಿಬ್ಬಂದಿಯ ಸಂಭ್ರಮದ ಕ್ಷಣ.