ಬೆಂಗಳೂರು/ಚಿಕ್ಕಬಳ್ಳಾಪುರ: ಸೋಮವಾರದಿಂದ ರಾಜ್ಯಾದ್ಯಂತ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ನಡೆಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಭಾನುವಾರ ಲಸಿಕೆ ಅಭಿಯಾನ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲ ದಿನವೇ 62% ಮಂದಿಗೆ ಲಸಿಕೆ ನೀಡಿರುವುದು ಆಶಾದಾಯಕವಾಗಿದೆ. ಲಸಿಕೆ ಪಡೆದವರಲ್ಲಿ ಯಾರಿಗೂ ಅಡ್ಡ ಪರಿಣಾಮ ಉಂಟಾಗಿಲ್ಲ. ಡಾ.ಸುದರ್ಶನ್ ಬಲ್ಲಾಳ್ ಅವರು ಲಸಿಕೆ ಪಡೆದಿದ್ದು, ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಹೀಗಾಗಿ ಜನರು ಲಸಿಕೆಯ ಮೇಲೆ ವಿಶ್ವಾಸವಿಡಬೇಕು. ಲಸಿಕೆ ಪಡೆದರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎರಡನೇ ಡೋಸ್ ಪಡೆದ 10 ದಿನಗಳ ಬಳಿಕ ರೋಗ ನಿರೋಧಕ ಶಕ್ತಿ ಬರುತ್ತದೆ. ಅಲ್ಲಿಯವರೆಗೂ ಸುರಕ್ಷತಾ ಕ್ರಮ ಪಾಲಿಸಬೇಕು ಎಂದರು.
ಮಣಿಪಾಲ್ ಆಸ್ಪತ್ರೆಯಲ್ಲಿ 4,200 ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ. ಚುನಾವಣೆಯಲ್ಲಿ ಮಾಡುವಂತೆ ಬೂತ್ ಗಳನ್ನು ರೂಪಿಸಿ ವ್ಯವಸ್ಥಿತವಾಗಿ ಲಸಿಕೆ ನೀಡಲಾಗುತ್ತಿದೆ. ಶೇ.70ರಷ್ಟು ಮಂದಿಗೆ ಲಸಿಕೆ ನೀಡಲು ಸಾಧ್ಯವಿದೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಕಾರಣಾಂತರಗಳಿಂದ ಲಸಿಕೆ ಪಡೆಯದವರು ಮತ್ತೆ ಲಸಿಕೆ ಪಡೆಯಲು ಅವಕಾಶವಿದೆ ಎಂದರು ಸಚಿವರು.
ಬಿಜೆಪಿ ವರಿಷ್ಠರು ನಮ್ಮ ಸರ್ಕಾರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಮುಂದಿನ ಐದು ವರ್ಷವೂ ನಮ್ಮ ಸರ್ಕಾರ ಇರಲಿದೆ ಎಂದು ಅವರು ಹೇಳಿದ್ದಾರೆ. ವಿರೋಧ ಪಕ್ಷಗಳು ವಿರೋಧವಾಗಿ ಹೇಳಿದರೆ ಅವರಿಗೆ ಮಾರ್ಕೆಟ್ ದೊರೆಯುತ್ತದೆ. ಯಾರು ಏನು ಹೇಳಿದರೂ ಅದನ್ನು ಸಾಬೀತುಮಾಡಬೇಕು ಎಂದರು.
ಮೊಬೈಲ್ ಒಳ್ಳೆದಲ್ಲ ಎಂದ ಸುಧಾಕರ್
ಚಿಕ್ಕಬಳ್ಳಾಪುರದಲ್ಲಿ ‘ಹೊಳೆಯುವುದೆಲ್ಲಾ ಚಿನ್ನ’ ಪುಸ್ತಕ ಬಿಡುಗಡೆ ಮಾತನಾಡಿದ ಸಚಿವರು, ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುತ್ತೇವೆ. ಇದರಿಂದಾಗಿ ನಕಾರಾತ್ಮಕ ಚಿಂತನೆ ಹುಟ್ಟಿಕೊಳ್ಳುತ್ತದೆ. ಇದು ಜೀವನಶೈಲಿಗೆ ಮಾರಕವಾಗಿದೆ. ಮನುಷ್ಯನಿಗೆ ಯಾವುದರಲ್ಲೂ ಸಂತೃಪ್ತಿ ಸಿಗುವುದಿಲ್ಲ. ಅತಿ ಶ್ರೀಮಂತರಿಗೆ ಕೂಡ ತೃಪ್ತಿ ಸಿಗದೆ ಯಾವುದೋ ಒಂದು ಕೊರತೆಯಿಂದ ಬಳಲುತ್ತಿರುತ್ತಾರೆ. ಇದಕ್ಕಾಗಿ ಆಧ್ಯಾತ್ಮಿಕ ಜಗತ್ತಿನ ಸಲಹೆ ಪಡೆಯಬೇಕು ಎಂದರು.
***
- ಮೇಲಿನ ಚಿತ್ರ: ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಭಾನುವಾರ ಲಸಿಕೆ ಅಭಿಯಾನ ಪರಿಶೀಲಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಯಿತು.