ಬೆಂಗಳೂರು ಭಾರತದ ಬ್ರ್ಯಾಂಡ್ ಕ್ಯಾಪಿಟಲ್; ಇಲ್ಲಿಂದ ಗ್ಲೋಬಲ್ ಕನೆಕ್ಟಿವಿಟಿ ಸುಲಭ ಎಂದ ಡಾ.ಅಚ್ಯುತ ಸಮಂತ; ಲೋಕಾರ್ಪಣೆಯಾದ ʼಸಮಂತಾಸ್ʼ ಗ್ಲೋಬಲ್ ಬ್ರ್ಯಾಂಡ್
ಬೆಂಗಳೂರು: ಭಾರತದ ಸಿಲಿಕಾನ್ ವ್ಯಾಲಿಯೂ ಆಗಿರುವ ಬೆಂಗಳೂರು ನಗರ ನಮ್ಮ ದೇಶದ ಅತಿ ಪ್ರಮುಖ ಬ್ರ್ಯಾಂಡ್ ಕ್ಯಾಪಿಟಲ್ ಕೂಡ ಹೌದು. ಹೊಸ ತಲೆಮಾರಿನ ಫ್ಯಾಶನ್ ಜಗತ್ತಿಗೆ ಈ ಸಿಟಿ ಅವಕಾಶಗಳ ದೊಡ್ಡ ಗೇಟ್ ವೇ. ಇದು ಒಡಿಶಾದ ಕಂದಮಲ್ ಕ್ಷೇತ್ರದ ಲೋಕಸಭೆ ಸದಸ್ಯ ಹಾಗೂ ಶಿಕ್ಷಣತಜ್ಞ ಡಾ.ಅಚ್ಯುತ ಸಮಂತ ಅವರು ಹೇಳಿದ ಮಾತು.
ತಮ್ಮ ಮಹತ್ವಾಕಾಂಕ್ಷೆಯ ʼಸಮಂತಾಸ್ʼ ಬ್ರ್ಯಾಂಡ್ ಲಕ್ಷ್ಯುರಿ ಡಿಸೈನರ್ ವೇರ್ ಉತ್ಪನ್ನಗಳನ್ನು ದೇಶದಲ್ಲೇ ಮೊದಲಿಗೆ ಬೆಂಗಳೂರಿನಲ್ಲಿಯೇ ಲಾಂಚ್ ಮಾಡಿ ಪ್ರದರ್ಶಿಸಿದ ವೇಳೆ ಅವರು ತಮ್ಮ ಮಾತುಗಳನ್ನು ಹಂಚಿಕೊಂಡರು.
ಇಡೀ ದೇಶದಲ್ಲಿ ಬೆಂಗಳೂರಿಗೆ ವಿಭಿನ್ನ, ವಿಶೇಷ ಸ್ಥಾನವಿದೆ. ಹೊಸತನವನ್ನು ಬೇಗ ಅರಗಿಸಿಕೊಳ್ಳುವ, ಇನ್ನಷ್ಟು ಹೊಸತನಗಳಿಗೆ ವೇಗವಾಗಿ ತೆರೆದುಕೊಳ್ಳುವ ಸೃಜನಶೀಲತೆ ಹಾಗೂ ಕಲಾ ಶ್ರೀಮಂತಿಕೆ ಈ ನಗರದಲ್ಲಿದೆ. ಈ ಕಾರಣಕ್ಕೆ ನಾನು ʼಸಮಂತಾಸ್ʼ ಬ್ರ್ಯಾಂಡ್ ಅನಾವರಣಕ್ಕೆ ಬೆಂಗಳೂರು ನಗರವನ್ನೇ ಮೊದಲು ಆಯ್ಕೆ ಮಾಡಿಕೊಂಡೆ ಎಂದರು ಸಮಂತ.
ಲೋಕಲ್ ಟು ಗ್ಲೋಬಲ್ ಎನ್ನುವುದು ನಮ್ಮ ಮಂತ್ರ. ದೇಶಲ್ಲಿಯೇ ಈ ಪರಿಕಲ್ಪನೆಗೆ ಹೆಚ್ಚು ಪ್ರಾಮುಖ್ಯತೆ ಇದೆ. ಇದಕ್ಕೆ ಪೂರಕವಾಗಿ ಯಾವುದೇ ಉತ್ಪನ್ನವನ್ನು ಮೊದಲು ಬೆಂಗಳೂರಿನಲ್ಲಿಯೇ ಲಾಂಚ್ ಮಾಡಿದರೆ ಜಾಗತಿಕ ಮಟ್ಟಕ್ಕೆ ಕನೆಕ್ಟ್ ಆಗುವುದು ಸುಲಭ. ಬ್ರ್ಯಾಂಡ್ ಬೆಂಗಳೂರಿಗೆ ಆ ಮಟ್ಟದ ಶಕ್ತಿ ಇದೆ.
-ಡಾ.ಅಚ್ಯುತ ಸಮಂತ
ಡಿಸೈನರ್ ವೇರ್ ಸೀರೆಗಳ ಬಗ್ಗೆ ಮಾಹಿತಿ ನೀಡಿದ ಡಾ.ಅಚ್ಯುತ ಸಮಂತ.
ಈ ಸಂದರ್ಭದಲ್ಲಿ ʼಸಮಂತಾಸ್ʼ ಹುಟ್ಟು, ಬೆಳವಣಿಗೆ ಮತ್ತದರ ಹಿಂದಿನ ಕಥೆಯ ಕೆಲ ಮಹತ್ತ್ವದ ಅಂಶಗಳನ್ನು ಸಮಂತ ಶೇರ್ ಮಾಡಿಕೊಂಡರು. ಅವು ಹೀಗಿವೆ..
- ಬೆಂಗಳೂರು ಅತ್ಯಂತ ಸುಂದರ ನಗರ ಮಾತ್ರವಲ್ಲ, ಪ್ರತಿಯೊಬ್ಬರನ್ನು ಸೂಜಿಗಲ್ಲಿನಂತೆ ಸಳೆದುಕೊಳ್ಳುವ ಮೋಹಕ ನಗರ. ಯಾವುದೇ ಕ್ಷೇತ್ರವಿರಲಿ, ಯಾವುದೇ ಗುರಿ ಇರಲಿ.. ಎಲ್ಲರಿಗೂ ಬದುಕು ನೀಡುತ್ತದೆ. ಹೀಗಾಗಿ ಬೆಂಗಳೂರು ಎಂದರೆ ನನಗೆ ತುಂಬಾ ಇಷ್ಟ.
- 2000ರಿಂದ ನಾನು ಬೆಂಗಳೂರಿನಲ್ಲಿ ತಿರುಗುತ್ತಲೇ ಇದ್ದೇನೆ. ಅನೇಕ ಸಂದರ್ಭಗಳಲ್ಲಿ ಈ ನಗರಕ್ಕೆ ಮಾರುಹೋಗಿದ್ದೇನೆ. ಇವತ್ತು ನೀವು ನೋಡುತ್ತಿರುವ ʼಸಮಂತಾಸ್ʼ ಬ್ರ್ಯಾಂಡ್‌ಗೆ ಮೊದಲು ಜೀವ ಬಂದಿದ್ದೇ ಇಲ್ಲಿ.
- ಅದು ಹೇಗೆ ಎಂದರೆ, ನನ್ನ ಅಣ್ಣನ ಮಗಳು ಅಪರ್ಣಾ ಸಮಂತ ಬೆಂಗಳೂರಿನಲ್ಲಿ ಫ್ಯಾಶನ್ ಡಿಸೈನ್ ಕೋರ್ಸು ಕಲಿಯುತ್ತ, ಜತೆಗೆ ಎಂಬಿಎ ಓದುತ್ತ 11 ವರ್ಷ ಇದ್ದಳು. ಒಂದು ಮಾತಿನಲ್ಲಿ ಹೇಳುವುದಾದರೆ, ಈ ನಗರ ಅವಳನ್ನು ಹೊಸದೊಂದು ಮೈಲುಗಲ್ಲಿನ ಮುಂದೆ ನಿಲ್ಲಿಸಿ ಜಗತ್ತನ್ನು ನೋಡುವ ಶಕ್ತಿ ನೀಡಿತ್ತು.
- ಕಳೆದ ವರ್ಷ ಕೋವಿಡ್ ನಮ್ಮ ದೇಶವನ್ನಷ್ಟೇ ಮಾತ್ರವಲ್ಲ ಇಡೀ ಜಗತ್ತನ್ನು ಕಾಡಿದ್ದು ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನೇನು ದೇಶದಲ್ಲಿ ಲಾಕ್‌ಡೌನ್ ವಿಧಿಸಲು ಎರಡೇ ದಿನ ಬಾಕಿ ಇದ್ದಾಗ ಅಪರ್ಣಾ ಭುಬನೇಶ್ವರಕ್ಕೆ ವಾಪಸ್ ಬಂದಳು. ಒಂದು ವೇಳೆ ಆ ಎರಡು ದಿನ ಮಿಸ್ ಮಾಡಿದ್ದರೆ, ಲಾಕ್‌ಡೌನ್ ತೆರವಾಗುವ ತನಕ ಅವಳು ಇಲ್ಲಿಯೇ ಇರಬೇಕಾಗುತ್ತಿತ್ತು. ಅದೃಷ್ಟವಶಾತ್ ಹಾಗೆ ಆಗಲಿಲ್ಲ.
- ಭುಬನೇಶ್ವರದಲ್ಲಿ ನಾವೆಲ್ಲರೂ ಒಂದೇ ಮನೆಯಲ್ಲಿರುತ್ತೇವೆ. ಲಾಕ್‌ಡೌನ್ ಕಾಲದಲ್ಲಿ ಎಲ್ಲಿಯೂ ಹೊರಹೋಗುವಂತಿಲ್ಲ, ನನ್ನ ಕೆಲಸವೆಲ್ಲವೂ ಮನೆಯಲ್ಲೇ ಆಗುತ್ತಿತ್ತು. ಅಂಥ ಸಂದರ್ಭದಲ್ಲಿ ನಮ್ಮೆಲ್ಲರಿಗೂ ಮುಂದೇನು? ಎನ್ನುವ ಪ್ರಶ್ನೆ ಇತ್ತು. ಅದೇ ಪ್ರಶ್ನೆ ಅಪರ್ಣಾಗೂ ಇತ್ತು. ಆ ಸಮಯದಲ್ಲಿ ಹುಟ್ಟಿದ್ದೇ ʼಸಮಂತಾಸ್ʼ ಎಂಬ ಹೊಸ ಕನಸು. ನಾನು ಅವಳಿಗೆ ಹೇಳಿದೆ.. ʼನೀನು ಡಿಸೈನ್ ಮಾಡು. ನಾನು ಅದನ್ನು ಬ್ರ್ಯಾಂಡ್ ಆಗಿ ರೂಪಿಸಿ ಮಾರ್ಕೆಟಿಂಗ್ ಮಾಡುತ್ತೇನೆʼ ಎಂದೆ. ಕೂಡಲೇ ನಾವು ಒಡಿಶಾ ಸಾಂಪ್ರಾಯಿಕ ನೇಕಾರರನ್ನು ಸಂಪರ್ಕಿಸಿ ನಮ್ಮ ಪರಿಕಲ್ಪನೆಯನ್ನು ಹಂಚಿಕೊಂಡೆವು. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ದು ಮಾತ್ರವಲ್ಲದೆ, ನೇಕಾರರ ಮನೆಗಳಿಂದ ನೇರವಾಗಿ ಕೈಗಳಿಂದಲೇ ನೇಯ್ಗೆಯಾದ ಉತ್ಕೃಷ್ಟ ಸೀರೆಗಳು ನಮ್ಮ ಡಿಸೈನಿಂಗ್ ಹೌಸ್‌ಗೆ ಬಂದು ತಲುಪಿದವು. ಅಲ್ಲಿಂದ ʼಸಮಂತಾಸ್ʼನ ಇನ್ನೊಂದು ಜರ್ನಿ ಶುರುವಾಯಿತೆನ್ನಬಹುದು.
- ನಿಜಕ್ಕಾದರೆ, ನಾವು ನಮ್ಮ ನೇಕಾರರು ಸಿದ್ಧಪಡಿಸಿದ ಸೀರೆರೂಪದ ಕಚ್ಛಾ ಉತ್ಪನ್ನಗಳನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡೆವು. ಆಮೇಲಿನದ್ದೇ ದೊಡ್ಡ ಟಾಸ್ಕ್. ಪ್ರತಿ ಒಂದಕ್ಕೂ ಡಿಸೈನರ್‌ವೇರ್ ಸೀರೆ ರೂಪ ಕೊಡುವುದು. ಅನೇಕ ನಿಪುಣರಿಗೆ ನಾವು ಕೆಲಸ ಕೊಟ್ಟೆವು. ಇಲ್ಲಿ ಯಾವ ಹಂತದಲ್ಲೂ ಯಂತ್ರಗಳನ್ನು ಬಳಸುವುದಿಲ್ಲ. ಪ್ರತೀ ಸೂಕ್ಷ್ಮ ರಚನೆಯೂ ಕೈಯ್ಯಿಂದಲೇ ಅರಳುತ್ತದೆ. ನೀವು ನಂಬಲೇಬೇಕು; ಒಂದು ಸೀರೆಯನ್ನು ಸಿದ್ಧಪಡಿಸಿಲು ಕನಿಷ್ಠ ಒಂದು ತಿಂಗಳು ಸಮಯ ಬೇಕು. ಅಪರಿಮಿತ ತಾಳ್ಮೆ, ದೇಸಿತನ ಹಾಗೂ ಒಡಿಶಾದ ಪರಂಪರಾಗತ ನೇಕಾರಿಕೆ ಒಡಗೂಡಿ ʼಸಮಂತಾಸ್ʼ ಅದ್ಭುತವಾಗಿ ಹೊರಹೊಮ್ಮಿದೆ. ಒಂದು ಸೀರೆಯಂತೆ ಇನ್ನೊಂದು ಸೀರೆ ಇರುವುದಿಲ್ಲ. ಬೇರೆ ಕಡೆಯಾದರೆ ಒಂದು ಸೀರೆಯಂತೆ ನೂರು ಸೀರೆಗಳಿರುತ್ತವೆ. ಹೀಗಾಗಿ ʼಸಮಂತಾಸ್ʼನಲ್ಲಿ ಪ್ರತಿ ಸೀರೆಯೂ ವಿಭಿನ್ನ ಮತ್ತು ವಿಶೇಷ.
- ʼಸಮಂತಾಸ್ʼ ಇವತ್ತು ಒಡಿಶಾದ ಕುಗ್ರಾಮಗಳಲ್ಲಿ ನೆಲೆಸಿರುವ ಸಾವಿರಾರು ನೇಕಾರ ಕುಟುಂಬಗಳಿಗೆ ಕೆಲಸ ನೀಡುತ್ತಿದೆ. ಡಿಸೈನರ್‌ವೇರ್ ನಿಪುಣರಿಗೆ ಅವಕಾಶಗಳ ಹೆಬ್ಬಾಗಿಲಾಗಿದೆ. ಕುಸುರಿಕಾರರಿಗೆ ಕೈತುಂಬಾ ಕೆಲಸ- ಸಂಪಾದನೆ ಇದೆ. ಕಷ್ಟಪಟ್ಟು ತಾವು ನೇಯ್ದ ಉತ್ಪನ್ನಗಳಿಗೆ ಮಾರುಕಟ್ಟೆಯೂ ಇಲ್ಲದೆ, ಹಣವೂ ಸಿಗದೆ ಕಷ್ಟದ ಬದುಕು ಸವೆಸುತ್ತಿದ್ದವರಿಗೆ ʼಸಮಂತಾಸ್ʼ ಕೈ ಹಿಡಿದಿದೆ. ಈಗ ಅವರೆಲ್ಲರೂ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಭಿಗಳಾಗುತ್ತಿದ್ದಾರೆ.
- ಒಡಿಶಾದ ನೇಕಾರಿಕೆಯಲ್ಲಿ ದೊಡ್ಡದೊಂದು ಜಾಲವನ್ನು ರೂಪಿಸಿ, ಅದನ್ನು ವ್ಯವಸ್ಥಿತವಾಗಿ ಮುನ್ನಡೆಸುವುದು ನಮ್ಮ ಉದ್ದೇಶ. ಈ ಪ್ರಯತ್ನಕ್ಕೆ ಬೆಂಗಳೂರು ಸಾಕ್ಷಿಯಾಗಿ ಚಾಲನೆ ನೀಡಲಾಗಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಉನ್ನತ ಸಾಧನೆ ಮಾಡಿರುವ ಸಮಂತ ಅವರು ಇದೀಗ ಸಮಂತಾಸ್ ಬ್ರ್ಯಾಂಡ್ ಹೆಸರಿನಲ್ಲಿ ರಾಜ್ಯದಲ್ಲಿ ವಸ್ತ್ರ ಪ್ರದರ್ಶನ ಏರ್ಪಡಿಸಿರುವುದು ಖುಷಿಯ ಸಂಗತಿ. ಈ ಮೂಲಕ ಕರ್ನಾಟಕ ಮತ್ತು ಒಡಿಶಾ ನಡುವೆ ಸಾಂಸ್ಕೃತಿಕತೆಯ ವಿನಿಮಯ ಆಗುತ್ತಿದೆ. ಆ ರಾಜ್ಯದ ಸಾಂಸ್ಕೃತಿಕ ವೈಭವಕ್ಕೆ ನಾನು ಮಾರು ಹೋಗಿದ್ದೇನೆ.
–ಡಾ.ಸಿ.ಎನ್.ಅಶ್ವತ್ಥನಾರಾಯಣ / ಉಪ ಮುಖ್ಯಮಂತ್ರಿ
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಂಸದ ತೇಜಸ್ವಿ ಸೂರ್ಯ, ಶಿಕ್ಷಣ ತಜ್ಞ ಡಾ.ಹೂಡೆ ಕೃಷ್ಣ, ಚಲನಚಿತ್ರ ನಿರ್ದೇಶಕ ಶೇಷಾದ್ರಿ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.