ಗುಡಿಬಂಡೆ: ಕೋವಿಡ್ ನಿವಾರಣೆಗೆ ನೀಡಲಾಗುತ್ತಿರುವ ಎರಡು ಲಸಿಕೆಗಳ ಪೈಕಿ ಒಂದರ ಬಗ್ಗೆ ನಾನಾ ಅನುಮಾನಗಳು ಅಬ್ಬರಿಸುತ್ತಿರುವಾಗಲೇ ಆರೋಗ್ಯ ಖಾತೆ ಮಂತ್ರಿ ಡಾ.ಸುಧಾಕರ್ ಅವರ ತವರು ಜಿಲ್ಲೆಯಲ್ಲಿ ಆತಂಕದ ಸುದ್ದಿಯೊಂದು ಹೊರಬಿದ್ದಿದೆ.
ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನಲ್ಲಿ ಲಸಿಕೆ ಹಾಕಿಸಿಕೊಂಡ ಇಬ್ಬರು ಅಂಗನವಾಡಿ ಕಾರ್ಯಕರ್ತೆಯರು ದಿಢೀರನೆ ಅಸ್ವಸ್ಥಗೊಂಡ ಘಟನೆ ನಡೆದಿದ್ದು, ಈ ಭಾಗದಲ್ಲಿ ತೀವ್ರ ಆತಂಕ ಮನೆ ಮಾಡಿದೆ. ತಾಲ್ಲೂಕಿನ ಹಂಪಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಅಸ್ವಸ್ಥ ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ.
66 ಜನರಿಗೆ ಲಸಿಕೆ
ಸೋಮವಾರದಂದು ಹಂಪಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ವಾರಿಯರುಗಳಾದ 66 ಮಂದಿ ಅಂಗನವಾಡಿ ಕಾರ್ಯಕರ್ತೆಯರಿಗೆ ಲಸಿಕೆ ನೀಡಲಾಗಿದೆ. ಆದರೆ, ತಾಲ್ಲೂಕಿನ ಕೋರೇನಹಳ್ಳಿ ಮತ್ತು ಮಾಚಹಳ್ಳಿ ಅಂಗವಾಡಿ ಕಾರ್ಯಕರ್ತೆಯರಾದ ಗೋಪಮ್ಮ ಹಾಗೂ ಶಿವಮ್ಮ ಅವರು ಲಸಿಕೆ ಹಾಕಿಸಿಕೊಂಡ ಕೆಲ ಕ್ಷಣಗಳಲ್ಲಿಯೇ ತಲೆ ಸುತ್ತು ಬಂದಂತೆ ಆಗಿ ವಾಂತಿ ಮಾಡಿಕೊಂಡಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಕೂಡಲೇ ಆರೋಗ್ಯ ಕೇಂದ್ರದಲ್ಲಿದ್ದ ಸಿಬ್ಬಂದಿ ತೀವ್ರ ಆತಂಕಗೊಂಡಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಅಹರಾಹ್ನ 3 ಗಂಟೆವರೆಗೂ ಎಲ್ಲರಿಗೂ ಲಸಿಕೆ ನೀಡಲಾಗಿದೆ.
ಇಬ್ಬರು ಅಸ್ವಸ್ಥಗೊಂಡ ಕೂಡಲೇ ಆಸ್ಪತ್ರೆ ಸಿಬ್ಬಂದಿ, ಸಿಡಿಪಿಓ ಇಲಾಖೆ ಅಧಿಕಾರಿಗಳು ಇಬ್ಬರನ್ನೂ ಸಿಡಿಪಿಓ ಇಲಾಖೆಯ ಜೀಪಿನಲ್ಲಿಯೇ ಸಮೀಪದ ಬೀಚಗಾನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ. ಅಲ್ಲಿಂದ ಮತ್ತೆ ಗುಡಿಬಂಡೆ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಅವರಿಬ್ಬರಿಗೂ ವೈದ್ಯರು ತುರ್ತು ಚಿಕಿತ್ಸೆ ನೀಡಿದರಲ್ಲದೆ, ಮಾಧ್ಯಮದವರ ಕಣ್ತಪ್ಪಿಸಿ ಇಬ್ಬರನ್ನೂ ಅವರವರ ಮನೆಗಳಿಗೆ ಕಳಿಸಿ ಅಲ್ಲಿಯೇ ಚಿಕಿತ್ಸೆ ನೀಡಿದ್ದಾರೆಂಬ ಮಾಹಿತಿ ಸಿಕ್ಕಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯಂತೆ ಗೋಪಮ್ಮ, ಶಿವಮ್ಮ ಚೇತರಿಸಿಕೊಂಡಿದ್ದಾರೆ.
ಕೈ ನೋವು, ತಲೆ ನೋವು ಮತ್ತು ವಾಂತಿ
ಈ ಇಬ್ಬರು ಮಹಿಳೆಯರಿಗೆ ತೀವ್ರ ತಲೆಸುತ್ತಿನ ಜತೆಗೆ ವಾಂತಿಯೂ ಆಗಿದೆ. ಲಸಿಕೆ ಪಡೆದ ಉಳಿದವರಿಗೆ ಲಸಿಕೆ ಹಾಕಿದ ಕೈ ತೀವ್ರವಾಗಿ ನೋಯುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಕೋವಿಡ್ ವಾರಿಯರ್ ಒಬ್ಬರು ಹೇಳಿದ್ದಾರೆ.
ಘಟನೆ ನಡೆದ ಕೆಲ ಹೊತ್ತಿನಲ್ಲಿಯೇ ಜಿಲ್ಲಾಧಿಕಾರಿ ಆರ್.ಲತಾ ಅವರು ತಾಲೂಕು ಆರೋಗ್ಯಾಧಿಕಾರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಜತೆಗೆ, ಅಂಗನವಾಡಿ ಕಾರ್ಯಕರ್ತರಿಗೂ ಕರೆ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ತದ ನಂತರ ಸಚಿವ ಸುಧಾಕರ್ ಅವರು ಜಿಲ್ಲಾಧಿಕಾರಿ ಅವರಿಂದ ತುರ್ತು ಮಾಹಿತಿ ಪಡೆದಿದ್ದಾರೆಂದು ಮೂಲಗಳು ತಿಳಿಸಿವೆ.
ಊಟ ಮಾಡಿಲ್ಲ, ಅದಕ್ಕೆ ಹೀಗಾಗಿದೆ!
ಹಂಪಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು 66 ಜನರಿಗೆ ಲಸಿಕೆ ನೀಡಿದ್ದೇವೆ. ಈವರೆಗೂ ಯಾರಿಗೂ ಯಾವ ತೊಂದರೆ ಆಗಿಲ್ಲ. ಇವರಿಬ್ಬರೂ ಸಮಯಕ್ಕೆ ಸರಿಯಾಗಿ ಊಟ ಮಾಡದಿರುವ ಕಾರಣಕ್ಕೆ ತಲೆಸುತ್ತು ಬಂದಿದೆ. ಈಗ ಚಿಕಿತ್ಸೆ ನೀಡಲಾಗಿದ್ದು ಅವರು ಕ್ಷೇಮವಾಗಿದ್ದಾರೆ. ಯಾರಿಗೂ ಆತಂಕ ಬೇಡ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹ ಮೂರ್ತಿ ಅವರು ತಿಳಿಸಿದ್ದಾರೆ.