ಆದಿಚುಂಚನಗಿರಿ: ಯುವ ವೈದ್ಯರು ಹಳ್ಳಿಗಳಿಗೆ ಹೋಗಿ ಸೇವೆ ಸಲ್ಲಿಸದಿದ್ದರೆ ಎಷ್ಟೇ ಸಂಖ್ಯೆಯ ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಿದರೂ ಉಪಯೋಗವಿಲ್ಲ, ಹೀಗಾಗಿ ಯುವ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ಮುಂದಾಗಬೇಕು ಹಾಗೂ ಎಲ್ಲೆಡೆ ತುರ್ತು ಸೇವೆಗಳ ಸೌಲಭ್ಯ ಇರಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯ ಕರ್ನಾಟಕದ ಕನಸು ನನಸಾಗಿಸಲು ಪ್ರಾಥಮಿಕ ಹಂತದ ಆರೋಗ್ಯ ಸೌಲಭ್ಯ ಉತ್ತಮವಾಗಬೇಕು. 1 ಸಾವಿರ ಜನರಿಗೆ 2.2 ಹಾಸಿಗೆ ಸಿಗಬೇಕು. ಆದರೆ ನಮ್ಮಲ್ಲಿ ಒಂದು ಹಾಸಿಗೆ ಇದೆ. ಹೆಚ್ಚಿನ ಆಸ್ಪತ್ರೆಗಳು ನಗರಗಳಲ್ಲಿವೆ. ವೈದ್ಯರು ಹಳ್ಳಿಗಳಿಗೆ ಹೋಗಿ ಕಾರ್ಯನಿರ್ವಹಿಸದಿದ್ದರೆ ಎಷ್ಟೇ ಸಂಖ್ಯೆಯ ಮೆಡಿಕಲ್ ಕಾಲೇಜು ನಿರ್ಮಿಸಿದರೂ ಪ್ರಯೋಜನವಿಲ್ಲ ಎಂದರು.
ಗ್ರಾಮೀಣ ಸೇವೆ ಉತ್ತೇಜಿಸಲು ನೇಮಕಾತಿ ನಿಯಮಗಳಲ್ಲಿ ಕೆಲ ಬದಲಾವಣೆಗೆ ಯತ್ನಿಸಲಾಗಿದೆ. ಹಳ್ಳಿಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ವೇತನ, ಬಡ್ತಿಯಲ್ಲಿ ಆದ್ಯತೆ, ಮಕ್ಕಳಿಗೆ ಶಿಕ್ಷಣ ಮೊದಲಾದ ಸೌಲಭ್ಯ ನೀಡಲು ಯತ್ನಿಸಲಾಗುತ್ತಿದೆ ಎಂದರು ಸಚಿವರು.
ತಾಯಿಯನ್ನು ಸ್ಮರಿಸಿದ ಸಚಿವರು
ನನ್ನೂರು ಚಿಕ್ಕಬಳ್ಳಾಪುರದ ಹಳ್ಳಿ. ನಾನು ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾಗ ಹಳ್ಳಿಯಲ್ಲಿದ್ದ ನನ್ನ ತಾಯಿಗೆ ಆರೋಗ್ಯ ಹದಗೆಟ್ಟಿದೆ ಎಂಬ ಸುದ್ದಿ ಬಂತು. ನನ್ನೂರಿನಲ್ಲಿ ಆಂಬ್ಯುಲೆನ್ಸ್ ಸೌಲಭ್ಯ ಇರಲಿಲ್ಲ. ಇದರಿಂದಾಗಿ ನಾನು ತಾಯಿಯ ಬಳಿ ತಲುಪುವ ಹೊತ್ತಿಗೆ ಅವರು ನಿಧನರಾಗಿದ್ದರು. ಈ ರೀತಿ ಸರಿಯಾದ ಸಮಯಕ್ಕೆ ತುರ್ತು ಸೇವೆ ಸಿಗದೆ ಆತ್ಮೀಯರನ್ನು ಕಳೆದುಕೊಳ್ಳುವ ಘಟನೆ ನಡೆಯುತ್ತಲೇ ಇದೆ. ತುಂಬಾ ನೋವು ಉಂಟಾಗುತ್ತದೆ ಎಂದು ಗದ್ಗದಿತರಾದರು.
ಈಗ ನನಗೆ ಸಿಕ್ಕ ಅವಕಾಶದಲ್ಲಿ ಆಂಬ್ಯುಲೆನ್ಸ್ ಸೇವೆಯಲ್ಲಿ ಬದಲಾವಣೆ ತಂದಿದ್ದೇನೆ. 2 ಲಕ್ಷ ಜನಸಂಖ್ಯೆಗೆ ಒಂದು ಆಂಬ್ಯುಲೆನ್ಸ್ ಇದ್ದು, ಈಗ ಪ್ರತಿ ಪಿಎಚ್ʼಸಿಗೆ ಒಂದು ಆಂಬ್ಯುಲೆನ್ಸ್ ನೀಡಲಾಗುತ್ತಿದೆ. ಒಟ್ಟು 2,400 ಆಂಬ್ಯುಲೆನ್ಸ್ ದೊರೆಯಲಿದೆ ಎಂದು ತಿಳಿಸಿದರು ಅವರು.
ರಾಜ್ಯದಲ್ಲಿ 60 ಮೆಡಿಕಲ್ ಕಾಲೇಜುಗಳಿದ್ದು, ಹೊಸದಾಗಿ 4 ಕಾಲೇಜು ಆರಂಭಿಸಲಾಗಿದೆ. ಒಂದು ಹೊಸ ಕಾಲೇಜನ್ನು ಉದ್ಘಾಟನೆಯಾಗಿದೆ. ಇದು ಸೇರಿ ಒಟ್ಟು ಕಾಲೇಜುಗಳ ಸಂಖ್ಯೆ 65 ಕ್ಕೇರಿದೆ. ಆದಿಚುಂಚನಗಿರಿ ಕಾಲೇಜು ಗ್ರಾಮೀಣ ಪ್ರದೇಶದಲ್ಲಿ ನೆಲೆಯಾಗಿರುವುದು ವಿಶೇಷವಾಗಿದ್ದು, ಸ್ವಾಮೀಜಿಗಳ ನಿಸ್ವಾರ್ಥ ಸೇವೆ ಹಾಗೂ ಗ್ರಾಮೀಣ ಪ್ರದೇಶದ ಬಗೆಗಿನ ಕಾಳಜಿಗೆ ಸಾಕ್ಷಿ. ಕೋವಿಡ್ ಬಂದ ಬಳಿಕ ಹತ್ತು ತಿಂಗಳಲ್ಲಿ ಆದಿಚುಂಚನಗಿರಿ ಸಂಸ್ಥೆ 9 ಸಾವಿರ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದೆ ಎಂದರು.
ವೈದ್ಯ ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲೇ ಕಠಿಣವಾಗಿ ಅಧ್ಯಯನ ಮಾಡಬೇಕು. ಈಗಿನ ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಆವಿಷ್ಕಾರ ನಡೆಯುತ್ತಿದ್ದು, ಈ ಬಗ್ಗೆ ಗಮನಹರಿಸಿದರೆ ಉತ್ತಮ ವೈದ್ಯರಾಗಬಹುದು ಎಂದು ಸಲಹೆ ನೀಡಿದರು.