- ಕಳೆದ ಏಳು ದಶಕಗಳಿಂದ ಭಾರತವು ಬಾಹ್ಯಶಕ್ತಿಗಳಿಂದ ಅನೇಕ ಬೆದರಿಕೆ, ಆತಂಕಗಳನ್ನು ಎದುರಿಸುತ್ತಲೇ ಬಂದಿದೆ. ಈಗ ಬಾಹ್ಯಶಕ್ತಿಗಳು ಭಾರತವನ್ನು ಕಂಡರೆ ಹೆದರುತ್ತಿವೆ. ಕಾರಣ ಅಜಿತ್ ಡೋವಲ್ ಎಂಬ ಸೂಪರ್‌ಕಾಪ್, ರಿಯಲ್ ಲೈಫಿನ ಜೇಮ್ಸ್‌ಬಾಂಡ್. ಬುಧವಾರ ಅವರ ಜನ್ಮದಿನ. ಈ ನಿಮಿತ್ತವಾದರೂ ಅವರಿಗೊಂದು ಸೆಲ್ಯೂಟ್ ಮಾಡೋಣ. ಲೇಖಕ, ಉಪನ್ಯಾಸಕ ಡಾ.ಗುರುಪ್ರಸಾದ್ ಎಚ್.ಎಸ್ ಅವರು ಡೋವಲ್ ದರ್ಶನ ಮಾಡಿಸಿದ್ದಾರೆ.
ಭಾರತದ ಭದ್ರತೆಯ ವಿಷಯ ಬಂದಾಗ ಅತೀ ಹೆಚ್ಚು ಕೇಳಿಬರುವ ವ್ಯಕ್ತಿ ಎಂದರೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್.
ಭಾರತದ ಜೇಮ್ಸ್ ಬಾಂಡ್ ಎಂದು ಕರೆಯಲ್ಪಡುವ ವ್ಯಕ್ತಿ ಆಗಿದ್ದಾರೆ ಅಜಿತ್ ಡೋವಲ್. ಯುದ್ಧಕ್ಕಿಂತ ಮಿಗಿಲಾದ ಬುದ್ಧಿವಂತಿಕೆ, ಬರೀ ಕೌಶಲ್ಯಗಳಿಂದಲ್ಲೇ ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿಸಬಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಬುಧವಾರಕ್ಕೆ (ಜ. 20) 76ನೇ ಜನ್ಮದಿನ.
ನೆರೆಯ ರಾಷ್ಟ್ರಗಳಿಂದ ದೇಶಕ್ಕೆ ಆಪತ್ತು ಬಂದಾಗಲೂ, ಸಾಗರೋತ್ತರ ರಾಷ್ಟ್ರಗಳಲ್ಲಿ ಭಾರತೀಯರ ಸಂಕಷ್ಟದಲ್ಲಿ ಸಿಲುಕಿಕೊಂಡಾಗಲೂ ಡೋವಲ್ ತೆರೆಮರೆಯಲ್ಲಿ ನಿಂತು ಶ್ರಮಿಸುತ್ತಿದ್ದಾರೆ.
1945ರ ಜನವರಿ 20ರಂದು ಓರ್ವ ಮಿಲಿಟರಿ ಅಧಿಕಾರಿಯ ಮಗನಾಗಿ ಉತ್ತರಾಖಂಡದ ಡೋವಲ್ ಎಂಬಲ್ಲಿ ಜನಿಸಿದ್ದರು. 1968ರಲ್ಲಿ ಭಾರತೀಯ ಪೊಲೀಸ್ ಸೇವೆಯಲ್ಲಿ ಕೇರಳ ಕೇಡರ್ ಆಗಿ ಅಧಿಕಾರ ವಹಿಸಿಕೊಂಡರು.
ಸೈಲೆಂಟ್ ಕಿಲ್ಲರ್ ಎಂದೇ ಹೆಸರು ವಾಸಿಯಾದ ಡೋವಲ್ ಸರ್ಜಿಕಲ್ ಸ್ಟ್ರೈಕ್‍ನಲ್ಲಷ್ಟೇ ಅಲ್ಲದೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಬೇಹುಗಾರಿಕಾ ಮತ್ತು ರಾಜತಾಂತ್ರಿಕ ವಿದ್ಯಮಾನಗಳಲ್ಲಿ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. ಪಂಜಾಬ್, ಮಿಜೋರಂ ಹಾಗೂ ಜಮ್ಮು – ಕಾಶ್ಮೀರದಲ್ಲಿ ಭುಗಿಲೆದ್ದ ಆಂತರಿಕ ದಂಗೆಗಳನ್ನು ಶಮನ ಮಾಡುವಲ್ಲಿ ಇವರು ಮುಖ್ಯ ಪಾತ್ರವಹಿಸಿದ್ದರು.
ರಿಕ್ಷಾ ಚಾಲಕನ ಅವತಾರ
ಎಂಭತ್ತರ ದಶಕದಲ್ಲಿ ಖಾಲಿಸ್ತಾನ್ ಸ್ಥಾಪನೆಗಾಗಿ ಪಂಜಾಬ್‌ನಾದ್ಯಂತ ಭಾರೀ ಪ್ರಮಾಣದ ಹಿಂಸಾಚಾರ ನಡೆದಿತ್ತು. ಇದರ ಭಾಗವಾಗಿ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಉಗ್ರರು 9 ಮೇ 1988ರಂದು ದಾಳಿ ಮಾಡಿ ನೂರಾರು ಸಾರ್ವಜನಿಕರನ್ನ ಒತ್ತೆಯಾಳುಗಳಾಗಿ ಬಂಧಿಸುತ್ತಾರೆ. ಆ ಒತ್ತೆಯಾಳುಗಳಲ್ಲಿ ರೊಮಾನಿಯಾ ದೇಶದ ರಾಯಭಾರಿಯೂ ಇರುತ್ತಾರೆ. ವಿಷಯ ತಿಳಿದ ಕೂಡಲೆ ರಾಷ್ಟ್ರೀಯ ರಕ್ಷಣಾ ಪಡೆಗಳು, NSG (National Security Guard)ಕಮಾಂಡೊಗಳು ಸ್ಥಳಕ್ಕೆ ದಾವಿಸುತ್ತವೆ. 1984ರಲ್ಲಿ ಇಂತಹುದೆ ಸನ್ನಿವೇಶ ಸಂಭವಿಸಿದಾಗ ರಕ್ಷಣಾ ಪಡೆಗಳ ಅಸಮರ್ಪಕ ಕಾರ್ಯಾಚರಣೆಯಿಂದಾಗಿ ನರಮೇಧವೇ ಆಗಿರುತ್ತದೆ. ಆದ್ದರಿಂದ ಈ ಸಲ ಸಾರ್ವಜನಿಕರ ಪ್ರಾಣ ಹಾನಿ ಆಗದಂತೆ ಕಾರ್ಯಾಚರಣೆ ಮಾಡುವಂತೆ ಕೇಂದ್ರ ಸರ್ಕಾರದ ಆದೇಶ ಬಂದಿರುತ್ತದೆ.
ಈ ಆದೇಶ ಅಲ್ಲಿನ ಉನ್ನತ ರಕ್ಷಣಾಧಿಕಾರಿಗಳಿಗೆ ಇದ್ದ ಒತ್ತಡ ಇನ್ನಷ್ಟು ಹೆಚ್ಚಿಸುತ್ತದೆ. ಕಾರಣ ದೇವಸ್ಥಾನದಲ್ಲಿರುವ ಉಗ್ರರ ಸಂಖ್ಯೆ ಗೊತ್ತಿಲ್ಲ, ಉಗ್ರರು ಯಾವ ಯಾವ ಜಾಗದಲ್ಲಿದ್ದಾರೋ ಗೊತ್ತಿಲ್ಲ, ಉಗ್ರರ ಬಳಿ ಇರುವ ಆಯುಧಗಳ ಪ್ರಮಾಣ ಮತ್ತು ಅವುಗಳ ತೀವ್ರತೆಯ ಬಗ್ಗೆ ಮಾಹಿತಿ ಇಲ್ಲ. ಇವೆಲ್ಲದರ ಜೊತೆ ಗೃಹ ಇಲಾಖೆಯ ಆದೇಶ.
ಒಬ್ಬ ರಿಕ್ಷಾ ತುಳಿಯುವ ವ್ಯಕ್ತಿ ದೇವಸ್ಥಾನದ ಸುತ್ತಮುತ್ತ ಬೇಕಂತಲೇ ಓಡಾಡುತ್ತ, ಉಗ್ರರಿಗೆ ಸಂಜ್ಞೆಗಳನ್ನು ಮಾಡುತ್ತಾ ಅವರ ಗಮನ ಸೆಳೆಯಲು ಯತ್ನಿಸುತ್ತಿರುತ್ತಾನೆ. ಈ ವ್ಯಕ್ತಿ ಆ ಊರಿಗೆ ಹೊಸಬ. ಈತನ ಮೇಲೆ ಅನುಮಾನ ಬಂದು ಅವನನ್ನೆ ಹಿಂಬಾಲಿಸಿದ ಉಗ್ರರನ್ನು ಈ ವ್ಯಕ್ತಿಯೇ ಮಾತನಾಡಿಸುತ್ತಾನೆ. ತಾನು ಪಾಕಿಸ್ತಾನದ ISI ಏಜೆಂಟ್, ನಿಮಗೆ ನೆರವು ನೀಡಲೆಂದು ನನ್ನನ್ನು ಕಳುಹಿಸಿದ್ದಾರೆ ಎಂದು ಪರಿಚಯಿಸಿಕೊಳ್ಳುತ್ತಾನೆ.
ಉಗ್ರರು ಸಂತಸದಿಂದ ಈತನನ್ನು ದೇವಸ್ಥಾನದ ಒಳಗೆ ಕರೆದುಕೊಂಡು ಹೋಗಿ ಅವರ ಆಗಿನ ಪರಿಸ್ಥಿತಿ, ಮುಂದಿನ ಯೋಜನೆಗಳನ್ನು ತಿಳಿಸುತ್ತಾರೆ. ಮಾತುಕತೆಯ ನಂತರ ಆ ಉಗ್ರರಿಗೆ ಸ್ವಲ್ಪ ಹಣ ಕೊಟ್ಟು ಹೊರಬರುತ್ತಾರೆ. ದೇವಸ್ಥಾನದಿಂದ ಹೊರಬಂದ ರಿಕ್ಷಾ ಚಾಲಕ ನೇರವಾಗಿ NIA ಕಮಾಂಡೊಗಳಿದ್ದಲ್ಲಿಗೆ ಬಂದು ತಕ್ಷಣ ಎಲ್ಲರೂ ಒಂದು ಕಡೆ ಸೇರುವಂತೆ ತಿಳಿಸುತ್ತಾರೆ.
ಒಂದು ನಕ್ಷೆಯನ್ನು ಮುಂದಿಟ್ಟುಕೊಂಡು ಯಾವ ಯಾವ ಜಾಗದಲ್ಲಿ ಎಷ್ಟೆಷ್ಟು ಉಗ್ರರಿದ್ದಾರೆ, ಅವರ ಬಳಿ ಇರುವ ಶಸ್ತ್ರಾಸ್ತ್ರಗಳು, ಅವುಗಳ ತೀವ್ರತೆ, ಅವರ ಯೋಜನೆಗಳ ಜೊತೆ ಕಮಾಂಡೊಗಳು ಅನುಸರಿಸಬೇಕಾದ ಕಾರ್ಯತಂತ್ರವನ್ನೂ ವಿವರಿಸುತ್ತಾರೆ. ಎಲ್ಲವನ್ನು ಕೇಳಿಸಿಕೊಂಡ ಕಮಾಂಡೊಗಳಿಗೆ ಈತ ಯಾರು ಎಂಬ ಪ್ರಶ್ನೆಯಾದರೆ, ಇವರ ಪರಿಚಯ ಇರುವವರಿಗೆ ಇಷ್ಟೆಲ್ಲಾ ಮಾಹಿತಿ ಇವರಿಗೆ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆ. ಹತ್ತು ದಿನಗಳ ನಂತರ 18 ಮೇ 1988ರಂದು ಕೊನೆಗೂ ಆಪರೇಷನ್ ಬ್ಲ್ಯಾಕ್ ಥಂಡರ್ ಯಶಸ್ವಿಯಾಗಿ ಅಂತ್ಯಗೊಳಿಸಲಾಗುತ್ತೆ.
ಎರಡುನೂರು ಉಗ್ರರು ಶರಣಾಗುತ್ತಾರೆ. 41 ಉಗ್ರರ ಪ್ರಾಣ ಪಕ್ಷಿ ಗಾಳಿಯಲ್ಲಿ ಹಾರಿಹೋಗಿರುತ್ತದೆ. ಈ ಯಶಸ್ವಿ ಕಾರ್ಯಾಚರಣೆಯ ರುವಾರಿ ರಿಕ್ಷಾ ಚಾಲಕ ಭಾರತದ ಜೇಮ್ಸ್ ಬಾಂಡ್ ಅಜಿತ್ ಡೋವಲ್ ಅವರಿಗೆ ಭಾರತ ಸರ್ಕಾರ ಪ್ರತಿಷ್ಠಿತ ಕೀರ್ತಿಚಕ್ರ ಪ್ರಶಸ್ತಿ ಕೊಟ್ಟು ಗೌರವಿಸುತ್ತದೆ. ಜೇಮ್ಸ್ ಬಾಂಡ್ ಅಂತ ಅಜಿತ್ ಡೋವಲ್ ಅವರನ್ನು ಕರೆಯುವುದು ಏಕೆಂದರೆ ಡೋವಲ್ ಪಾಕಿಸ್ತಾನದ ಲಾಹೊರ್‌ನಲ್ಲಿ ಮುಸಲ್ಮಾನನಂತೆ ವೇಷ ಬದಲಿಸಿಸಿಕೊಂಡು ಬರೂಬ್ಬರಿ 7 ವರ್ಷ ಗೂಢಚಾರಿಯಾಗಿ ಕೆಲಸ ಮಾಡಿದ್ದಾರೆ.
ಆ ಸಮಯದಲ್ಲಿ ಪಾಕಿಸ್ತಾದ ಅಣ್ವಸ್ತ್ರದ ಕುರಿತಾದ ಮಹತ್ವದ ಸಂಗತಿಗಳನ್ನು ಭಾರತ ಸರಕಾರಕ್ಕೆ ರವಾನೆ ಮಾಡಿದ್ದಾರೆ. ಪಾಕಿಸ್ತಾನದ ವಿಪರ್ಯಾಸವೋ ಏನೋ ಗೂಢಚಾರಿಯಂತೆ ಕೆಲಸ ಮಾಡಿದ ನಂತರ ಅದೇ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಕಚೇರಿಯಲ್ಲಿ ಕೂಡ ಅಜಿತ್ ಡೋವಲ್ ಕಾರ್ಯ ನಿರ್ವಹಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸುವ ಜತೆಯಲ್ಲೆ, ಉಗ್ರರನ್ನು ಮನವೊಲಿಸಿ ಭಾರತದ ಪರವಾಗಿ ಪಾಕಿಸ್ತಾನದ ವಿರುದ್ಧ ಕೆಲಸ ಮಾಡುವ ಹಾಗೆ ಮಾಡಿರುವ ಕೀರ್ತಿ ಕೂಡ ಅಜಿತ್ ಡೋವಲ್ ಅವರಿಗೆ ಸಲ್ಲಬೇಕು. ರಕ್ಷಣಾ ವಿಶ್ಲೇಷಕರ ಅಂದಾಜಿನ ಪ್ರಕಾರ ದಕ್ಷಿಣ ಏಷಿಯಾಕ್ಕೆ ಸಂಬಂಧಿಸಿದಂತೆ ಭಯೋತ್ಪಾದನೆ, ಆಂತರಿಕ ರಕ್ಷಣೆ, ಗೂಢಚಾರಿಗಳ ಸಮೂಹಗಳ ಬಗ್ಗೆ ಇಂಟರ್ ಪೋಲ್ ಮತ್ತು ಚೀನಾಗಿಂತ ಹೆಚ್ಚಿನ ಮಾಹಿತಿ ಅಜಿತ್ ಡೋವಲ್ ಅವರ ಬಳಿ ಇದೆಯಂತೆ.
ದಾವೂದ್‌ಗೆ ಹಾಕಿದ್ದ ಸ್ಕೆಚ್ ಜಸ್ಟ್ ಮಿಸ್
ಅಜಿತ್ ದೊವಲ್ 2005ರಲ್ಲಿ ಇಂಟೆಲಿಜೆನ್ಸ್ ಬ್ಯೂರೊ ಮುಖ್ಯಸ್ಥರಾಗಿದ್ದಾಗ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ದುಬೈನಲ್ಲಿ ಮುಗಿಸಲು ರೂಪಿಸಿದ್ದ ಯೋಜನೆಯನ್ನು ಮುಂಬಯಿಯ ಪೊಲೀಸ್ ಇನಸ್ಪೆಕ್ಟರ್ ಅಸ್ಲಾಂ ಮೊಮಿನ್ ಶತ್ರುಗಳಿಗೆ ತಿಳಿಸದಿದ್ದಿದ್ದರೆ ಇಷ್ಟೊತ್ತಿಗಾಗಲೇ ದಾವೂದ್ ದಿವಂಗತನಾಗುತ್ತಿದ್ದ.
ನಿವೃತ್ತರಾದ ನಂತರ ದೇಶ ವಿದೇಶಗಳಲ್ಲಿ ಕೌಂಟರ್ ಟೆರರಿಸಮ್, ಇಂಟರ್ನಲ್ ಸೆಕ್ಯೂರಿಟಿ, ಫೇಕ್ ಕರೆನ್ಸಿ ಬಗ್ಗೆ ಹತ್ತಾರು ಉಪನ್ಯಾಸಗಳನ್ನು ನೀಡಿ 2009ರಲ್ಲಿ ವಿವೇಕಾನಂದ ಇಂಟರ್‌ನ್ಯಾಷನಲ್ ಫೌಂಡೇಷನ್ (ವಿಐಎಫ್)ನ ಸ್ಥಾಪನೆ ಮಾಡಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ಹೆಗ್ಗಳಿಕೆ ಅಜಿತ್ ಡೋವಲ್ ಅವರಿಗೆ ಸಲ್ಲಬೇಕು. ಇಂತಹ ದಕ್ಷ ಹಾಗೂ ಚಾಣಕ್ಷ ಭದ್ರತಾ ಸಲಹೆಗಾರ ನಮ್ಮ ದೇಶಕ್ಕೆ ದೊರೆತಿರುವುದು ಭಾರತೀಯರ ಹೆಮ್ಮೆ.
- ಲೇಖನ ಕೃಪೆ: www.gnews5.com / Lead photo courtesy: Wikipedia