ಬಾಗೇಪಲ್ಲಿ: ಹಳೆಯ ವೈಷಮ್ಯ, ರಾಜಕೀಯ ಸೇಡು, ಹೊಟ್ಟೆಕಿಚ್ಚಿಗೆ ಇಲ್ಲಿದೆ ನಿದರ್ಶನ. ಜೀವನೋಪಾಯಕ್ಕಾಗಿ ಬಡ ಮಹಿಳೆಯೊಬ್ಬರು ಸಾಕಿದ್ದ ಹಂದಿಗಳಿಗೆ ದುರುಳರು ವಿಷವುಣಿಸಿ ಕೊಂದು ಹಾಕಿ ಬಡ ಕುಟುಂಬ ಒಂದನ್ನು ಬೀದಿಪಾಲು ಮಾಡಿರುವ ಘಟನೆ ತಾಲ್ಲೂಕಿನ ತಿಮಾಕಲಪಲ್ಲಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಎಗ್‌ರೈಸ್‌ನಲ್ಲಿ ʼಟೀಮಿಟʼ ಕ್ರಿಮಿನಾಶಕವನ್ನು ಬೆರೆಸಿ ತಿನ್ನಿಸಿ ಆರು ಹಂದಿಗಳನ್ನು ಕೊಂದು ವಿಕೃತಿ ಮೆರೆದಿರುವ ದುರುಳರು, ಹಂದಿಗಳ ಸಾವಿನಲ್ಲೂ ದುಷ್ಟತನದ ರಣಕೇಕೆ ಹಾಕಿದ್ದಾರೆ.
ಏನಿದು ಘಟನೆ?
ತಿಮಾಕಲಪಲ್ಲಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನಾರಾಯಣಪ್ಪ ಎಂಬುವವರ ಪತ್ನಿ ರತ್ನಮ್ಮ, ತಮ್ಮ ಮನೆತನದ ಹಳೆಯ ಕಸುಬು ಆಗಿರುವ ಹಂದಿ ಸಾಕಾಣಿಕೆಯನ್ನು ಅನೇಕ ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಆದರೆ, ಇವರು ಹಂದಿ ಸಾಕಣೆ ಮಾಡುವುದು ಗ್ರಾಮದ ಕೆಲವರಿಗೆ ಅಸಹನೆ ಉಂಟು ಮಾಡಿತ್ತು. ಅದರಲ್ಲೂ ಕೋವಿಡ್-19 ಮಾರಿ ವಕ್ಕರಿಸಿದ ಮೇಲಂತೂ ಅವರ ಅಸಹನೆ ಮತ್ತೂ ಹೆಚ್ಚಾಗಿ ನಿರಂತರವಾಗಿ ರತ್ನಮ್ಮ ಅವರ ಕಾಲುಕೆರೆದು ಜಗಳಕ್ಕೆ ಹೋಗುವುದು, ಸಣ್ಣಪುಟ್ಟ ವಿಷಯಕ್ಕೂ ಅವರನ್ನು, ಅವರ ಕುಟುಂಬವನ್ನು ಟಾರ್ಗೆಟ್ ಮಾಡುವುದು ನಡೆಯುತ್ತಿತ್ತು. ಚೀನಾದ ಹಂದಿ ಮಾಂಸದ ಮಾರುಕಟ್ಟೆಯಲ್ಲಿ ಕೊರೊನ ವೈರಸ್ ಕಂಡದ್ದು, ಅದೇ ರೀತಿ ರತ್ನಮ್ಮ ಸಾಕುತ್ತಿರುವ ಹಂದಿಗಳಿಂದ ವೈರಸ್ ಸೋಂಕು ಹರಡಬಹುದು ಎಂಬ ಅಪನಂಬಿಕೆಯಿಂದ ಕೆಲವರಂತೂತೂ ವ್ಯವಸ್ಥಿತವಾಗಿ ಅವರಿಗೆ ನಿತ್ಯವೂ ಕಿರಿಕಿರಿ ಮಾಡುವುದು, ಮದ್ಯ ಸೇವಿಸಿ ಬಂದು ಮನೆ ಮುಂದೆ ಗಲಾಟೆ ಮಾಡುವುದು ನಡೆಯುತ್ತಿತ್ತು ಎಂದು ಸಿಕೆನ್ಯೂಸ್ ನೌಗೆ ಸಿಕ್ಕಿದ ಮಾಹಿತಿ.
ಪದೇಪದೆ ತೊಂದರೆ, ಜಗಳ
ಇಡೀ ಘಟನೆ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿ ತಮ್ಮ ಅಳಲು ತೋಡಿಕೊಂಡ ರತ್ನಮ್ಮ, ತಮ್ಮ ಕಥೆಯನ್ನು ವಿವರವಾಗಿ ಹೇಳಿಕೊಂಡರಲ್ಲದೆ, ತಮಗಾದ ಅನ್ಯಾಯಕ್ಕೆ ಕಣ್ಣೀರು ಹಾಕಿದರು. ಹಂದಿ ಸಾಕಣೆ ಮಾಡುವುದು ನಮ್ಮ ಮನೆಯ ಕಸುಬು. ಅದನ್ನೇ ಮಾಡುತ್ತಾ ನಾನು ಹತ್ತು ಜನರುಳ್ಳ ಕುಟುಂಬವನ್ನು ಮುನ್ನೆಡೆಸುತ್ತಿದ್ದೇನೆ. ಕುಡುಕ ಪತಿಯಿಂದ ಮನೆ ಕಷ್ಟಕ್ಕೆ ಸಿಲುಕಬಾರದು, ಮಕ್ಕಳು ಉಪವಾಸ ಬೀಳಬಾರದು ಎಂಬ ಉದ್ದೇಶದಿಂದ ಹಂದಿಗಳ ಸಾಕಣೆ ಮಾಡುತ್ತಿದ್ದೇನೆ ಎಂದರು.
ಹಿಂದೆ 20 ಹಂದಿಗಳಿಗೆ ವಿಷವುಣಿಸಿದ್ದರು
ಅಷ್ಟೇ ಅಲ್ಲ, ಆರು ತಿಂಗಳ ಹಿಂದೆ ನನ್ನ ಮೇಲೆ ಗಲಾಟೆಗೆ ಬಂದಿದ್ದರು. ಪರಗೋಡು ಗ್ರಾಮ ಪಂಚಾಯಿತಿಗೆ ದೂರು ನೀಡಿ ನನ್ನ ಕೆಲಸಕ್ಕೆ ಅಡ್ಡಿ ಮಾಡುವ ಪ್ರಯತ್ನ ಮಾಡಿದರು. ನಾನೂ ಪಂಚಾಯಿತಿಗೆ ಮನವಿ ಸಲ್ಲಿಸಿ ಮನೆಯ ಕಷ್ಟವನ್ನು, ನಮ್ಮ ಮನೆತನಕ್ಕೂ ಹಂದಿ ಸಾಕಾಣಿಗೂ ಇರುವ ನಂಟನ್ನು ಮನವರಿಕೆ ಮಾಡಿಕೊಟ್ಟಿದ್ದೆ. ಅದಕ್ಕೂ ಹಿಂದೆ, ಅಂದರೆ; ಮೂರು ವರ್ಷಗಳಿಂದಲೂ ಊರಿನ ಕೆಲವರು ನಮ್ಮ ಮೇಲೆ ಹಗೆತನವನ್ನು ಸಾಧಿಸುತ್ತಲೇ ಇದ್ದಾರೆ. ಆಗಲೇ ನಾನು ಸಾಕಿದ್ದ 20 ಹಂದಿಗಳಿಗೆ ವಿಷವುಣಿಸಿ ಕೊಲ್ಲಲಾಗಿತ್ತು. ಈಗ ಅದನ್ನೇ ಮುಂದುವರಿಸಿ ಊರಿನಿಂದ ನನ್ನ ಒಕ್ಕಲೆಬ್ಬಿಸುವ ಕೆಲಸವನ್ನು ಮಾಡುತ್ತಿದ್ದಾರೆಂದು ರತ್ಮಮ್ಮ ದೂರಿದರು.
ಚುನಾವಣೆ ಹೊತ್ತಿನಲ್ಲೂ ಹಲ್ಲೆ
ಗ್ರಾಮ ಚಂಚಾಯಿತಿ ಚುನಾವಣೆಯ ಹಿಂದೆ ಹಾಗೂ ನಂತರವೂ ನಮ್ಮ ಮೇಲೆ ನಿರಂತರವಾಗಿ ಹಲ್ಲೆ ನಡೆಸಲಾಗುತ್ತಿದೆ. ಮಾಂಸ ನೀಡಲಿಲ್ಲ, ವೋಟು ಹಾಕಲಿಲ್ಲ ಎಂಬ ಕಾರಣಕ್ಕೆ ಪಂಚಾಯಿತಿ ಚುನಾವಣೆಯಲ್ಲಿ ಸೋತಿದ್ದ ಮೂರು ಅಭ್ಯರ್ಥಿಗಳು ನನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆಂದು ರತ್ನಮ್ಮ ಹೇಳಿದರು.
ಆರ್ಥಿಕ ಸಂಕಷ್ಟದಲ್ಲಿದ್ದೇವೆ
ನಮ್ಮ ಮನೆ ಅತಿಯಾದ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದೆ. ನನ್ನ ಪತಿ ಮದ್ಯವ್ಯಸನಿ. ಆರು ತಿಂಗಳ ಹಿಂದೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 18 ವರ್ಷದ ಮಗನಿಗೆ ಸಾಲ ಮಾಡಿ 8 ಲಕ್ಷ ಖರ್ಚು ಮಾಡಿದ್ದೇನೆ. ಮದುವೆಯಾಗಿರುವ ಹಿರಿಮಗಳನ್ನು ನಾನೇ ಸಾಕುವಂಥ ಪರಿಸ್ಥಿತಿ ಇದೆ. ಒಟ್ಟು ಹತ್ತು ಜನರ ಕುಟುಂಬವನ್ನು ನಾನು ಸಲಹಬೇಕಿದೆ. ಇಷ್ಟೆಲ್ಲ ಸಮಸ್ಯೆಗಳಲ್ಲಿ ಸಿಲುಕಿರುವ ನಮ್ಮ ವಿರುದ್ಧ ಕೆಲವರು ಹಗೆ ಸಾಧಿಸುತ್ತಿರುವುದು ದು:ಖ ಉಂಟು ಮಾಡಿದೆ ಎಂದು ಕಣ್ಣೀರು ಹಾಕಿದರು ರತ್ನಮ್ಮ.
ಪೊಲೀಸರು ಬಂದಿದ್ದರು
ಆರು ಹಂದಿಗಳನ್ನು ಬಲಿತೆಗೆದುಕೊಂಡವರ ವಿರುದ್ಧ ರತ್ನಮ್ಮ ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೂಡ ಗ್ರಾಮಕ್ಕೆ ಭೇಟಿ ಪಂಚನಾಮೆ ನಡೆಸಿದ್ದಾರೆ. ವಿಷಕ್ಕೆ ಸಿಕ್ಕಿ ಸತ್ತ ಹಂದಿಗಳ ಮೌಲ್ಯ 75,000ಕ್ಕೂ ಹೆಚ್ಚು ಎಂದು ಆಕೆ ತಿಳಿಸಿದ್ದಾರೆ. ಪೊಲೀಸರು ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.