ಹುಬ್ಬಳ್ಳಿ/ಮೈಸೂರು: ಯಾರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುತ್ತಾರೋ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಹಾಕಬೇಕು ಎಂದು ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರಕಾರಕ್ಕೆ ಸಲಹೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು; ಅಕ್ರಮ ಗಣಿಗಾರಿಕೆ ಮತ್ತು ಅಧಿಕಾರಿಗಳ ನಡುವೆ ಅಕ್ರಮ ಸಂಬಂಧ ನಡೆದಿದೆ. ಹೀಗಾಗಿಯೇ ಇಂಥ ದುರ್ಘಟನೆಗಳು ಪದೇಪದೆ ಸಂಭವಿಸುತ್ತಿವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿದೆ. ಕೇವಲ ಅಲ್ಲಿರುವ ಅಧಿಕಾರಿಗಳ ಮೇಲೆ ಮಾತ್ರವಲ್ಲ, ರಾಜ್ಯದಲ್ಲಿ ಎಲ್ಲೆಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆಯೋ ಅವರ ಮೇಲೆ ಯಾವ ಮುಲಾಜು ಇಲ್ಲದೆ ಕ್ರಿಮಿನಲ್ ಕೇಸ್ ಹಾಕಬೇಕು ಎಂದು ಕೇಂದ್ರ ಸಚಿವರು ಹೇಳಿದರು.
ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣದ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯಾದ್ಯಂತ ಎಲ್ಲೆಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ಅದರ ವಿರುದ್ಧ ಗಂಭೀರ ತನಿಖೆಯನ್ನು ರಾಜ್ಯ ಸರಕಾರವೇ ಮಾಡಬೇಕು ಎಂದೂ ಅವರು ಸಲಹೆ ಮಾಡಿದರು.
ಶಿವಮೊಗ್ಗ ಘಟನೆ ಅತ್ಯಂತ ಘೋರವಾದದ್ದು, ಅಷ್ಟೊಂದು ಪ್ರಮಾಣದ ಸ್ಫೋಟಕ ವಸ್ತುಗಳನ್ನು ಶೇಖರಣೆ ಮಾಡಿದ್ದು ಯಾಕೆ? ಅದಕ್ಕೆಲ್ಲ ಪರವಾನಗಿ ಇತ್ತಾ? ಇದೆಲ್ಲದರ ಬಗ್ಗೆ ತನಿಖೆ ಮಾಡಲು ಗಣಿ ಸಚಿವರಿಗೆ ಸೂಚಿಸಿದ್ದೇನೆ. ಸಚಿವ ಮುರಗೇಶ ನಿರಾಣಿ ಜತೆ ಕೂಡ ಮಾತನಾಡಿದ್ದೇನೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಚಿವರು, ಕಲ್ಲು ಗಣಿಗಾರಿಕೆಯು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುವುದಿಲ್ಲ. ನಮಗೆ ಮೇಜರ್ ಮಿನರಲ್ಸ್ ಬರುತ್ತದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಜೆಲಿಟಿನ್ ಕಡ್ಡಿಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ಘಟನೆ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇಷ್ಟು ದಿನ ಅವರೆಲ್ಲ ಏನು ಮಾಡುತ್ತಿದ್ದರು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅಕ್ರಮ ಗಣಿಗಾರಿಕೆ ಸಕ್ರಮ ಎಂದ ಮುಖ್ಯಮಂತ್ರಿ
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ; ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರು ಅರ್ಜಿ ಹಾಕಿಕೊಂಡು ಅದನ್ನು ಸಕ್ರಮ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಅರ್ಜಿ ಹಾಕಿ ಗಣಿಗಾರಿಕೆ ಸಕ್ರಮ ಮಾಡಿಕೊಳ್ಳಲಿಲ್ಲ ಅಂದರೆ ಸ್ಥಳ ತನಿಖೆ ಮಾಡಿ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಎಂದು ಸಿಎಂ ಎಚ್ಚರಿಕೆ ನೀಡಿದರು.
ಈ ಬಾರಿಯ ಬಜೆಟ್ ಗಾತ್ರ ತಗ್ಗಿಸುತ್ತೇನೆ. ಸಂಪನ್ಮೂಲ ಕೊರತೆ ಕಾರಣ ಕಳೆದ ಬಾರಿಗಿಂತ ಈ ಬಾರಿ ಬಜೆಟ್ ಗಾತ್ರ ತಗ್ಗಿಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.