ಬೆಂಗಳೂರು: ಬಿಗ್ಬಾಸ್ ಸೀಸನ್ 3ರಲ್ಲಿ ಭಾಗಿಯಾಗಿದ್ದ ಹಾಗೂ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಮಾಗಡಿ ರಸ್ತೆಯ ಪ್ರಗತಿ ಲೇಔಟ್ʼನಲ್ಲಿರುವ ಸಂಧ್ಯಾಕಿರಣ ವೃದ್ದಾಶ್ರಮದಲ್ಲಿ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ಕುರಿತು ಹೆಚ್ಚಿನ ವಿವರ ತಿಳಿದುಬಂದಿಲ್ಲ. ಅವರು ʼಕನ್ನಡ್ ಗೊತ್ತಿಲ್ಲʼ, ʼಉಪ್ಪು ಹುಳಿ ಖಾರʼ ಚಿತ್ರಗಳಲ್ಲಿ ನಟಿಸಿದ್ದರು. ಅದಕ್ಕೂ ಮೊದಲು ಮಾಡೆಲಿಂಗ್ ಕ್ಷೇತದಲ್ಲೂ ತೊಡಗಿಕೊಂಡಿದ್ದರು.
ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು
ಕಳೆದ ವರ್ಷ ಜುಲೈ ತಿಂಗಳಲ್ಲಿ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಮ್ಮ ಫೇಸ್ಬುಕ್ನಲ್ಲಿ “ಖಿನ್ನತೆ ಮತ್ತು ಈ ಜಗತ್ತಿಗೆ ಗುಡ್ ಬೈ” ಎಂದು ಬರೆದುಕೊಂಡು ಎಲ್ಲರಿಗೂ ಆತಂಕ ಉಂಟು ಮಾಡಿದ್ದರು. ಈ ಪೋಸ್ಟ್ ಹಾಕಿದ ನಂತರ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಜಯಶ್ರೀ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಂತರ ಗುಣಮುಖರಾಗಿದ್ದರು. ಆ ಸಂದರ್ಭದಲ್ಲಿ ನಟ ಕಿಚ್ಚ ಸುದೀಪ್ ಸೇರಿದಂತೆ ಸ್ಯಾಂಡಲ್ವುಡ್ನ ಅನೇಕ ತಾರೆಯರು ಅವರು ಧೈರ್ಯ ತುಂಬಿದ್ದರು. ಇದಾದ ಮೇಲೆ ಒಮ್ಮೆ ದಯಾಮರಣ ಕೋರಿದ್ದರು.
ಜಯಶ್ರೀ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಚಿತ್ರರಂಗ ಹಾಗೂ ಕಿರುತೆರೆ ವಲಯಕ್ಕೆ ಶಾಕ್ ಆಗಿದೆ. ಅನೇಕರು ಅವರ ಸಾವಿನ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಸೋಮವಾರ ರಾತ್ರಿ ಮಾಗಡಿ ರಸ್ತೆ ಗೊಲ್ಲರಹಟ್ಟಿಯ ಪ್ರಗತಿ ಬಡಾವಣೆಯಲ್ಲಿರುವ ʼಸಂಧ್ಯಾ ಕಿರಣʼ ವೃದ್ಧಾಶ್ರಮದಲ್ಲಿ ನೇಣಿಗೆ ಶರಣಾಗಿದ್ದಾರೆ.