ಆಕಾಶದಿಂದ ಕೆಳಕ್ಕೆ ನೋಡಿದರೆ ಒಪ್ಪವಾಗಿ ಜೋಡಿಸಿಟ್ಟು ಪೂಜಿಸಲ್ಪಡುತ್ತಿರುವ ಶಿವಲಿಂಗಗಳಂತೆ ಕಾಣುವ ಪಂಚಗಿರಿಗಳ ಸಾಲು!! ಆ ಗಿರಿಶ್ರೇಣಿಯ ಎದುರಿಗೆ ಮಲಗಿದಂತೆ ಕಾಣುವ ಸಾಕ್ಷಾತ್ ನಂದಿ ಸ್ವರೂಪಿ ಏಕಶಿಲಾ ಬೆಟ್ಟಗಳು!!! ಮಹಾನ್ ಋಷಿ-ಮುನಿಗಳು ತಪಸ್ಸು ಮಾಡಿದ್ದ, ಸಪ್ತನದಿಗಳ ಬೀಡಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಈ ಅನನ್ಯ ಪ್ರಾಕೃತಿಕ ಸಂಪತ್ತು ಕಣ್ಣೆದುರಿನಲ್ಲೇ ಲೂಟಿಯಾಗುತ್ತಿದೆ. ರಾಜಕಾರಣಿ, ಅಧಿಕಾರಿಗಳು ಹಾಗೂ ಕಾರ್ಪೊರೇಟ್ ಕುಳ ಒಳಮೈತ್ರಿಯೊಂದಿಗೆ ಇಲ್ಲೊಂದು ಮಾನವ ನಿರ್ಮಿತ ಮರುಭೂಮಿ ಸೃಷ್ಟಿಯಾಗುತ್ತಿದೆ. ನಿರೀಕ್ಷಿಸಿ, ಕಲ್ಲು ಲೂಟಿಯ ಕುರಿತು ಮತ್ತಷ್ಟು ವರದಿಗಳು ಪ್ರಕಟವಾಗಲಿವೆ.
- ಚಿಕ್ಕಬಳ್ಳಾಪುರ ಹಿರೇನಾಗವೇಲಿ-ಚಿಕ್ಕನಾಗವೇಲಿ ಗ್ರಾಮಗಳ ಸಮೀಪ ಏಕಶಿಲಾ ಬೆಟ್ಟವು ಜಲ್ಲು ಗಣಿಗಾರಿಕೆಗೆ ಸಿಕ್ಕಿ ನೆಲಸಮವಾಗಿರುವ ಗೂಗಲ್ ನೋಟ. Courtesy: Google Maps
ಚಿಕ್ಕಬಳ್ಳಾಪುರ/ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಹೊಸಗೋಡು ಗ್ರಾಮದ ಕಲ್ಲುಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹಲವು ಕಾರ್ಮಿಕರು ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಉದ್ದಗಲಕ್ಕೂ ನಾಯಿಕೊಡೆಗಳಂತೆ ತಲೆ ಎತ್ತಿರುವ ಕಲ್ಲುಕ್ವಾರಿಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಪ್ರಶ್ನೆ ಎದ್ದಿದೆ.
ರಾಜಕೀಯ ಹಾಗೂ ಅಧಿಕಾರಶಾಹಿಯ ಕೃಪಾಕಟಾಕ್ಷದಲ್ಲೇ ನಡೆಯುತ್ತಿರುವ ಕಲ್ಲುಗಣಿಗಳಲ್ಲಿ ನಡೆಯುತ್ತಿರುವ ಅಕ್ರಮಗಳು, ನಿಯಮಗಳ ಉಲ್ಲಂಘನೆ ಹಾಗೂ ಪರಿಸರವನ್ನು ಮಾರಣಹೋಮ ಮಾಡುತ್ತಿರುವುದು ಎಗ್ಗಿಲ್ಲದೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಮೈಮರೆತು ಕೂತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಂತೂ ಸತ್ತ ಶವದಂತೆ ಆಗಿದೆ. ರಾಜಕೀಯ ಪ್ರಭಾವದ ಕಾರಣಕ್ಕೆ ಈ ಇಲಾಖೆ ಸಂಪೂರ್ಣವಾಗಿ ನಿರ್ವೀರ್ಯವಾಗಿದ್ದು, ಇದೆಲ್ಲವನ್ನು ಆಮೂಲಾಗ್ರವಾಗಿ ನಿಯಂತ್ರಣ ಮಾಡಬೇಕಾದ ಸಾಂವಿಧಾನಿಕ ಅಧಿಕಾರ ಹೊಂದಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರಾಜಕೀಯ ಕೆಸರಿನಲ್ಲಿ ಬಿದ್ದು ಹೊರಳಾಡುತ್ತಿದೆ.
ಮಾನವ ಸೃಷ್ಠಿಯ ಮರುಭೂಮಿ
ಅನನ್ಯ ವನ್ಯ ಸಂಪತ್ತು ಹಾಗೂ ಸೂಕ್ಷ್ಮಪರಿಸರ ಪ್ರಬೇಧಗಳನ್ನು ಹೊಂದಿರುವ ಪಂಚಗಿರಿಗಳ ಸಾಲು ಒಂದೆಡೆಯಾದರೆ, ಪ್ರಕೃತಿಯ ಸೃಜನಶೀಲತೆಗೆ ಅದ್ಭುತ ಸಾಕ್ಷಿಗಳಾಗಿರುವ ಅನೇಕ ಏಕಶಿಲಾ ಬೆಟ್ಟಗಳು ಇನ್ನೊಂದೆಡೆ. ಇವುಗಳ ಎದೆಬಗೆದು ಸೀಳಿ ನುಂಗುವ ರಾಕ್ಷಸಿ ಪ್ರವೃತ್ತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಾಕೃತಿಕ ಸಂಪತ್ತು ವಿನಾಶವಾಗುತ್ತಿದೆ. ನೋಡ ನೋಡುತ್ತ ಬೆಂಗಳೂರು ಕಾಂಕ್ರಿಟ್ ಜಂಗಲ್ಲಾಗಿ ಬೆಳೆಯುತ್ತಿದ್ದರೆ, ಚಿಕ್ಕಬಳ್ಳಾಪುರ ಜಿಲ್ಲೆ ಮಾನವ ಸೃಷ್ಠಿಯ ಮರುಭೂಮಿಯಾಗುತ್ತಿದೆ.
ರಾಜ್ಯದಲ್ಲಿ ಕ್ರಷರ್ ಮಾಫಿಯಾ ಯಾವ ಮಟ್ಟಿಗೆ ಬೆಳೆದು ನಿಂತಿದೆ ಎಂಬುದನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತ್ಯಕ್ಷವಾಗಿ ನೋಡಬಹುದು. ಕೋವಿಡ್ ಕಾಲದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭವನ್ನೇ ಕಾಯುತ್ತಿದ್ದ ರಾಜ್ಯದ ಬಿಜೆಪಿ ಸರಕಾರ ಜನರ ಕಣ್ತಪ್ಪಿಸಿ ಕ್ರಷರ್ ಮಸೂದೆಗೆ ತಿದ್ದುಪಡಿ ತಂದು ಎಗ್ಗಿಲ್ಲದೆ ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದೆ. ಲಜ್ಜೆಗೆಟ್ಟ ಈ ಕಾಯ್ದೆಗೆ ಚಿಕ್ಕಬಳ್ಳಾಪುರ ಜನ ಹಿಡಿಶಾಪ ಹಾಕುತ್ತಿದ್ದಾರೆ. ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವುದೇ ಈ ಜಿಲ್ಲೆಗೆ ಶಾಪವಾಗಿ ಪರಿಣಮಿಸಿದೆ. ಇದರ ನಡುವೆ ಅಕ್ರಮವಿದ್ದರೆ ಅರ್ಜಿ ಹಾಕಿ ಸಕ್ರಮ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಲ್ಲುಕಳ್ಳರಿಗೆ ನೀಡಿರುವ ಆಫರ್ ಜಿಲ್ಲೆಯ ಜನರನ್ನು ರೊಚ್ಚಿಗೆಬ್ಬಿಸಿದೆ.
ಚಿಂತಾಮಣಿ ತಾಲ್ಲೂಕಿನ ನರಸಾಪುರ ಸಮೀಪದ ಕ್ರಷರ್‌ನ ಒಂದು ದೃಶ್ಯ.
ಕಲ್ಲು ಗಣಿಗಾರಿಕೆ, ಪರಿಸರ ಸಂರಕ್ಷಣೆ, ವನ್ಯಜೀವಿ ರಕ್ಷಣೆ, ಜಲಮೂಲ, ಮಾಲಿನ್ಯ ನಿಯಂತ್ರಣ ಮುಂತಾದ ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಹೈಕೋರ್ಟ್ ಸ್ಪಷ್ಟ-ಖಡಕ್ಕಾದ ಆದೇಶಗಳನ್ನು ನೀಡಿದ್ದಾಗ್ಯೂ ಅವೆಲ್ಲವನ್ನೂ ಗಾಳಿಗೆ ತೂರಿ ಜಿಲ್ಲೆಯಲ್ಲಿ ಕಲ್ಲುಗಣಿಗಳನ್ನು ರನ್ ಮಾಡಲಾಗುತ್ತಿದೆ.
ಮುಖ್ಯವಾಗಿ ವಿಶ್ವವಿಖ್ಯಾತ ನಂದಿ ಗಿರಿಧಾಮದ ತಪ್ಪಲು, ಚಿಂತಾಮಣಿ ತಾಲ್ಲೂಕಿನ ನರಸಾಪುರ ಗ್ರಾಮ, ಬಾಗೇಪಲ್ಲಿ ತಾಲ್ಲೂಕಿನ ಕೆಲ ಭಾಗಗಳು, ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೇಸಂದ್ರ, ಗುಡಿಬಂಡೆ ತಾಲ್ಲೂಕಿನ ತೀಲಕುಂಟಹಳ್ಳಿ (ಈ ಗ್ರಾಮ ಗುಡಿಬಂಡೆ-ಚಿಕ್ಕಬಳ್ಳಾಪುರ ತಾಲ್ಲೂಕುಗಳ ಗಡಿ) ಸೇರಿದಂತೆ ಅನೇಕ ಕಡೆಗಳಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಎಲ್ಲಡೆ ನಿರ್ಲಜ್ಜವಾಗಿ ಕಾನೂನು-ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಎಲ್ಲೆಡೆ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಜನರು ದನಿಯತ್ತಲಾಗದೆ, ರಾಜಕೀಯ ಪ್ರಭಾವಕ್ಕೆ ಹೆದರಿ ಮೂಕಪ್ರಾಣಿಗಳತೆ ಆಗಿಬಿಟ್ಟಿದ್ದಾರೆ. ಕಲುಷಿತ ಗಾಳಿ, ಕಲ್ಲಿನ ಧೂಳು ಸೇವಿಸುತ್ತಲೇ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಯಾಕೆ ಹೀಗಾಗುತ್ತಿದೆ?
ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ೭ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಹಾದು ಹೋಗುತ್ತದೆ. ಹೆದ್ದಾರಿಯ ಉದ್ದಕ್ಕೂ ರಮಣೀಯವಾಗಿ ಕಾಣುವ ಪಂಚಗಿರಿಗಳ ಸಾಲು, ಏಕಶಿಲಾ ಬೆಟ್ಟಗಳು ಕಲ್ಲು ರಕ್ಕಸರ ಪಾಲಿಗೆ ಕಲ್ಪವೃಕ್ಷಗಳಂತೆ ಗೋಚರವಾಗುತ್ತಿವೆ. ಅಂಥ ಕಲ್ಲು ರಕ್ಕಸರು ಈಗಾಗಲೇ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಹುಟ್ಟೂರು ಪೇರೇಸಂದ್ರಕ್ಕೆ ಕೂಗಳತೆ ದೂರದಲ್ಲಿರುವ ಹಿರೇನಾಗವೇಲಿ, ಚಿಕ್ಕನಾಗವೇಲಿ, ತೀಲಕುಂಟಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡಿರುವ ಏಕಶಿಲಾ ಬೆಟ್ಟವನ್ನು ಈಗಾಗಲೇ ನೆಲಸಮ ಮಾಡಿ ಆಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ನಿಜವಾಗಿ ಬದುಕಿದ್ದರೆ ಹಿರೇನಾಗವೇಲಿ, ಆದೆಗಾರಹಳ್ಳಿ, ತೀಲಕುಂಟಹಳ್ಳಿ, ಕೆರೇಹಳ್ಳಿ ಮುಂತಾದ ಗ್ರಾಮಗಳಿಗೆ ಬಂದು ನೋಡಬೇಕು ಎನ್ನುತ್ತಾರೆ ಜನರು. ಅಂದಹಾಗೆ, ಇಲ್ಲಿ ನಡೆಯುತ್ತಿರುವ ಕಲ್ಲುಗಣಿಗಳ ಹಿಂದೆ ಸ್ಥಳೀಯ ಹಾಗೂ ಬೆಂಗಳೂರಿನಲ್ಲಿ ಕೂತಿರುವ ಪ್ರಭಾವೀ ರಾಜಕಾರಣಿಗಳೇ ಇರುವುದು ಗುಟ್ಟಾಗೇನೂ ಇಲ್ಲ. ಇದೇ ಕಾರಣಕ್ಕೆ ಅಕ್ಕಪಕ್ಕದ ಗ್ರಾಮಗಳ ಜನರು ದನಿಯೆತ್ತುತ್ತಿಲ್ಲ, ಮತ್ತೂ ಗಣಿ ಇಲಾಖೆ ಅಥವಾ ಪೊಲೀಸ್ ಇಲಾಖೆ ಅಧಿಕಾರಿಗಳು ಈ ಕಡೆ ತಲೆಹಾಕುವುದೇ ಇಲ್ಲ. ಲೈಸೆನ್ಸ್ ಪಡೆದ ಕ್ವಾರಿಗಳೇ ಇದ್ದರೂ ನ್ಯಾಯಾಲಯಗಳ ಆದೇಶಗಳನ್ನು ಸಂಪೂರ್ಣವಾಗಿ ಗಾಳಿ ತೂರಲಾಗಿದೆ ಎನ್ನುತ್ತಾರೆ ಎಂದು ಜಿಲ್ಲೆಯಲ್ಲಿ ಕಲ್ಲುಗಣಿಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಆರ್.ಆಂಜನೇಯ ರೆಡ್ಡಿ.
ವಿನಾಶಕಾರಿ ಎಂ ಸ್ಯಾಂಡ್
ಕಳೆದ ಒಂದು ದಶಕದಲ್ಲಿ ಬೆಂಗಳೂರು ನಗರ ರಾಕ್ಷಸೀ ರೂಪದಲ್ಲಿ ಬೆಳೆಯುತ್ತಿದೆ. ಈ ಬೆಳವಣಿಗೆ ಪಕ್ಕದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಪವಾಗಿದೆ. ಈಗಾಗಲೇ ಇಷ್ಟೂ ಜಿಲ್ಲೆಗಳ ಮರಳನ್ನು ಬೆಂಗಳೂರು ನುಂಗಿಹಾಕಿದೆ. ಮರಳು ಎಗ್ಗಿಲ್ಲದೆ ತೆಗೆದ ಪರಿಣಾಮ ಈ ಜಿಲ್ಲೆಗಳಲ್ಲಿ ಅಂತರ್ಜಲ ಪಾತಾಳ ಮುಟ್ಟಿದೆ. ನೈಜ ಜಲಮೂಲಗಳು ನಿರ್ನಾಮವಾದವು, ಅಳಿದುಳಿದ ನದಿಪಾತ್ರಗಳು ಕಾಣೆಯಾದವು. ಕೊನೆಗೆ ಮರಳು ಗಣಿಗಾರಿಕೆಗೆ ನಿಷೇಧ ಹೇರಲಾಯಿತು. ಆಗ ಬಂದಿದ್ದೇ ವಿನಾಶಕಾರಿ ಎಂ ಸ್ಯಾಂಡ್. ಇದಕ್ಕೆ ಗುಣಮಟ್ಟದ ಪ್ರಮೇಯವಿಲ್ಲ, ಕಲ್ಲು ಎಂತಾದರೆ ಸಾಕು. ಅದರ ಪರಿಣಾಣವೇ ಜಿಲ್ಲೆಯ ದಶದಿಕ್ಕುಗಳಲ್ಲೂ ಕಲ್ಲು ಗಣಿಗಾರಿಕೆಗೆ ಎಗ್ಗಿಲ್ಲದೆ ಅನುಮತಿ ನೀಡಲಾಯಿತು. ಹಿಂದಿನ ಕಾಂಗ್ರೆಸ್ ಸರಕಾರವಿದ್ದಾಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೇಕಾಬಿಟ್ಟಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕ್ರಷರುಗಳಿಗೆ, ಕ್ವಾರಿಗಳಿಗೆ ಅನುಮತಿ ಕೊಡಲಾಯಿತು. (ಕಳೆದ ಐದಾರು ವರ್ಷಗಳಲ್ಲಿ ಹೆಚ್ಚೆಚ್ಚು ಅನುಮತಿ ಕೊಡಿಸಲಾಗಿದೆ) ಅದರ ಫಲವಾಗಿ ಆ ಪಕ್ಷ ಈ ಪಕ್ಷ ಎಂಬ ಬೇಧವಿಲ್ಲದೆ ಪ್ರಭಾವಿಗಳು ಬಂದು ನಂದಿ ತಪ್ಪಲು, ಪೇರೇಸಂದ್ರ, ನಾಗವೇಲಿ, ಬಾಗೇಪಲ್ಲಿ ತಾಲ್ಲೂಕಿನ ಗ್ರಾಮಗಳಿಗೆ ವಕ್ಕರಿಸಿದರು ಎನ್ನುತ್ತಾರೆ ಆಂಜನೇಯ ರೆಡ್ಡಿ.
- ಆರ್.ಆಂಜನೇಯ ರೆಡ್ಡಿ
ಸರಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ
ಇಡೀ ರಾಜ್ಯ ಕೋವಿಡ್ ಸಂಕಷ್ಟದಲ್ಲಿ ಸಿಲುಕಿದ್ದರೆ ಬಿಜೆಪಿ ಸರಕಾರ ಮಾತ್ರ ಸುಗ್ರೀವಾಜ್ಞೆಗಳನ್ನು ಜಾರಿ ಮಾಡುವುದು, ಕಾಯ್ದೆಗಳಿಗೆ ತಿದ್ದುಪಡಿ ತರುವಲ್ಲಿ ಮಗ್ನವಾಗಿತ್ತು. ಹೆಸರಿನಲ್ಲಿ ಜನರನ್ನು ಮನೆಯಲ್ಲಿ ಕೂಡಿ ಹಾಕಿ, ಅವರು ಸಾವು-ಬದುಕಿನ ಸ್ಥಿತಿಯಲ್ಲಿದ್ದಾಗ ಸರಕಾರ ಮಾಡಿದ ಘನ ಕೆಲಸವೆಂದರೆ ಕಾಯ್ದೆಗಳಿಗೆ ತಿದ್ದುಪಡಿ ಮಾಡಿಕೊಂಡು ಸುಗ್ರೀವಾಜ್ಞೆಗಳನ್ನು ಮಾಡಿದ್ದು. ಇದರಲ್ಲಿ ಕ್ರಷರ್ ತಿದ್ದುಪಡಿ ಕಾಯ್ದೆ-2020 ಕೂಡ ಒಂದು. ಅಂಥ ಕಷ್ಟಕಾಲದಲ್ಲೂ ಇವರಿಗೆ ಕ್ರಷರ್‌ಗಳ ಮಾಲೀಕರ ಹಿತರಕ್ಷಿಸುವ ತವಕ. ಅದಕ್ಕೆ ನಾನು ರಾಜ್ಯ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುತ್ತಿದ್ದೇನೆ. ನ್ಯಾಯಾಲಯದಿಂದ ಪರಿಸರಕ್ಕೆ, ಜಿಲ್ಲೆಯ ಜನತೆಗೆ ನ್ಯಾಯ ಸಿಗುವ ನಿರೀಕ್ಷೆ ನನ್ನದು ಎನ್ನುವ ಆಂಜನೇಯ ರೆಡ್ಡಿ; ನಮ್ಮ ಜಿಲ್ಲೆಯಲ್ಲಿ ಈ ಅಕ್ರಮ ಕಲ್ಲು ಗಣಿಗಾರಿಕೆ ದಂಧೆಯ ಹಿಂದೆ ಯಾರೆಲ್ಲ ನಾಯಕರು ಇದ್ದಾರೆ? ಹಿಂದೆ ಯಾರೆಲ್ಲ ಅಧಿಕಾರಿಗಳು ಶಾಮೀಲಾಗಿದ್ದರು? ಈಗ ಇರುವ ಅಧಿಕಾರಿಗಳು ಏನೇನು ಮಾಡುತ್ತಿದ್ದಾರೆ? ಎಂಬುದೆಲ್ಲ ಹೊರಗೆ ಬರುತ್ತದೆ ಎನ್ನುತ್ತಾರೆ.
ಹಿಂದಿನ ಬಿಜೆಪಿ ಸರಕಾರ ಮಾಡಿದ ಪಾಪ
2008ರಿಂದ 2011ರವರೆಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಚಿಕ್ಕಬಳ್ಳಾಪುರಕ್ಕೆ ಕಲ್ಲು ಗಣಿಗಾರಿಕೆ ಎಂಬ ವಿನಾಶ ಕಾಲಿಟ್ಟಿದ್ದು. ಆಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದವರು, ಆಗ ಜಿಲ್ಲೆಯಲ್ಲಿದ್ದ ಜಿಲ್ಲಾಧಿಕಾರಿ ಈ ನೆಲದಲ್ಲಿದ್ದ ಏಕಶಿಲಾ ಬೆಟ್ಟಗಳ ಮೇಲೆ ಕಲ್ಲು ರಕ್ಕಸರಿಗೆ ರಹದಾರಿ ಮಾಡಿಕೊಟ್ಟರು. ಪೇರೇಸಂದ್ರ ಸಮೀಪದ ಹಿರೇನಾಗವೇಲಿ ಏಕಶಿಲಾ ಬೆಟ್ಟವನ್ನು ಬಗೆಯಲು ಅನುಮತಿ ನೀಡಿದ್ದೇ ಆಗ. ಆ ಬೆಟ್ಟವು ಜಿಂಕೆ, ನವಿಲು, ಅಪರೂಪ ಜೈವವೈವಿಧ್ಯವನ್ನು ಒಡಲಲ್ಲಿ ತುಂಬಿಕೊಂಡಿತ್ತು. ಅದಕ್ಕೆ ಅನತಿ ದೂರದ ವರ್ಲಕೊಂಡೆ ಬೆಟ್ಟದ ನಡುವಿನ ಅರಣ್ಯದಲ್ಲಿ ವಿರಳ ವನ್ಯ ಸಂಪತ್ತು, ಕಾಡು ಪ್ರಾಣಿಗಳು ಇತ್ತು. ಅದೆಲ್ಲವೂ ಈ ನಿರ್ನಾಮವಾಗಿದೆ ಎಂದು ಮಾಹಿತಿ ನೀಡುತ್ತಾರೆ ಗುಡಿಬಂಡೆ ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಸಿ.ಮಂಜುನಾಥ್.
ನಾಗವೇಲಿ ಬೆಟ್ಟ ಬಹಳ ವಿಶೇಷವಾಗಿತ್ತು. ಅಕ್ಕಪಕ್ಕದ ಗ್ರಾಮಗಳಿಗೆ ಆ ಬೆಟ್ವವೆಂದರೆ ಪೂಜ್ಯ ಭಾವನೆ ಇತ್ತು. ವರ್ಷಕ್ಕೊಮ್ಮೆ ಜಾತ್ರೆಯೂ ನಡೆಯುತ್ತಿತ್ತು. ಆದರೆ, ಇದ್ದಕ್ಕಿದ್ದ ಹಾಗೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಬೆಟ್ಟ ಹೊಡೆಯಲು ಜಿಲ್ಲಾಡಳಿತ ಅನುಮತಿ ನೀಡಿತು. ಆದರೂ ಅದನ್ನು ವಿರೋಧಿಸುವ ಕೆಲಸ ಮಾಡಿದೆವು. ಸ್ಥಳೀಯ ಜನರಿಗೆ ತಿಳಿಹೇಳುವ ಪ್ರಯತ್ನ ಮಾಡಿದೆವು. ಆದರೆ, ಆಗಿನ ಜಿಲ್ಲಾಧಿಕಾರಿ ಹಠಕ್ಕೆ ಬಿದ್ದು ಕ್ವಾರಿಗೆ ಅನುಮತಿ ನೀಡಿದರು. ಪರಿಸರಕ್ಕೆ ಆಗುವ ಹಾನಿಯ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ. ಜನರನ್ನು ಕೇಳಿದರೆ, ರೆಡ್ಡಿಗಳು ಬಂದು ಬೈಯ್ಯುತ್ತಾರೆ, ಹೊಡೆಯುತ್ತಾರೆ ಎಂಬ ಭೀತಿಗೆ ಹೊರಬರಲಿಲ್ಲ. ಈಗ ಆ ಬೆಟ್ಟ ಖಾಲಿಯಾಗುತ್ತಿದೆ. ಮುಂದೆ ಅಕ್ಕಪಕ್ಕದ ಬೆಟ್ಟಗಳಿಗೂ ಅಪಾಯವಿದೆ. ವಿಪರೀತ ಧೂಳು, ಕಲುಷಿತ ಗಾಳಿ, ಕಲುಷಿತ ನೀರಿನಿಂದ ಹಿರೇನಾಗವೇಲಿ, ಚಿಕ್ಕನಾಗವೇಲಿ, ಆದೆಗಾರಹಳ್ಳಿ, ತೀಲಕುಂಟಹಳ್ಳಿ ಗ್ರಾಮಗಳ ಜನರು ಬೆಲೆ ತೆರುತ್ತಿದ್ದಾರೆ. ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎನ್ನುತ್ತಾರೆ ಪಿ.ಸಿ.ಮಂಜುನಾಥ್.
ಜನ, ಜಾನುವಾರು, ಕೃಷಿಗೆ ಮರಣಶಾಸನ
ಹೆಚ್ಚು ಆವರ್ತಕದಲ್ಲಿ ಸ್ಫೋಟಕಗಳನ್ನು ಸಿಡಿಸುತ್ತಿದ್ದು ಊರಿನಲ್ಲಿರುವ ಮನೆಗಳಲ್ಲಿ ಬಿರುಕು ಬೀಳುತ್ತಿದೆ. ಹಾಗೂ ಶಬ್ದ ಮಾಲಿನ್ಯ ಹೆಚ್ಚುತ್ತಿದೆ. ಬೆಟ್ಟದಲ್ಲಿರುವ ಜಿಂಕೆ, ನವಿಲುಗಳು ಸೇರಿ ಹಲವು ಪ್ರಾಣಿ ಪಕ್ಷಿಗಳು ಸತ್ತುಹೋಗಿವೆ. ಉಳಿದ ಇನ್ನಷ್ಟು ಪ್ರಾಣಿಗಳು ಅಕ್ಕಪಕ್ಕದ ಗ್ರಾಮಗಳತ್ತ ವಲಸೆ ಹೋಗಿವೆ. ಈ ಕ್ರಷರ್ʼಗಳ ಟಿಪ್ಪರ್ ಲಾರಿಗಳಿಂದ ರಸ್ತೆಗಳೆಲ್ಲ ಹಾಳಾಗಿವೆ. ಧೂಳೆಲ್ಲ ಮನೆಗಳಲ್ಲಿ ಬಂದು ಸೇರುತ್ತಿದೆ. ಅಕ್ಕಪಕ್ಕ ಇರುವ ಕೆರೆಗಳೆಲ್ಲ ಕಲುಷಿತವಾಗಿದೆ. ಕಲ್ಲಿನ ತುಂಬಾ ಆಳಕ್ಕೆ ಕೊರೆದು ಸ್ಫೋಟಿಸುತ್ತಿರುವ ಕಾರಣ ಭೂಕಂಪನ ಆಗುವ ಸಂಭವ ಹೆಚ್ಚಾಗಿದೆ. ಸುತ್ತಲೂ ಇರುವ ವ್ಯವಸಾಯ ಭೂಮಿಗಳಲ್ಲಿ ಬೆಳೆ ಆಗುತ್ತಿಲ್ಲ. ವಿಷಕಾರಿ ಅನಿಲಗಳಿಂದ ಜನ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎನ್ನುವ ಅವರು; ಇದೆಲ್ಲವೂ ಜಿಲ್ಲಾಡಳಿತಕ್ಕೆ ಗೊತ್ತಿದೆ. ಆದರೆ, ಅದರ ಕೈಗಳನ್ನು ಯಾರೋ ಕಟ್ಟಿಹಾಕಿದ್ದಾರೆ. ಇದು ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರು ಬೇರೆ ರೀತಿಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎನ್ನುತ್ತಾರೆ ಸಂತ್ರಸ್ತ ಗ್ರಾಮದ ರೈತರೊಬ್ಬರು. ನಾಗವೇಲಿ ಬೆಟ್ಟದಲ್ಲಿ ಕ್ವಾರಿ ಆರಂಭವಾದಾಗಿನಿಂದ ಅವರಿಗೆ ಒಂದು ಬೆಳೆಯನ್ನು ತೆಗೆಯಲು ಸಾಧ್ಯವಾಗಿಲ್ಲ.
ದೊಡ್ಡ ಪ್ರಮಾಣದ ಸ್ಫೋಟ
ಹಿರೇನಾಗವೇಲಿ ಕ್ವಾರಿಗಳಲ್ಲಿ ಭಾರೀ ಸ್ಫೋಟಗಳನ್ನು ನಡೆಸಲಾಗುತ್ತಿದೆ. ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದವರೊಬ್ಬರಿಗೆ ಸೇರಿದೆ ಎನ್ನಲಾದ ಕ್ವಾರಿಯಲ್ಲಿ ಬೋರ್‌ವೆಲ್‌ನಂಥ ದೊಡ್ಡ ರಿಗ್‌ಗಳಲ್ಲಿ ಸುರಂಗವನ್ನು ಕೊರೆದು, ಅದರಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ತುಂಬಿ ಸ್ಸ್ಫೋಟಿಸಲಾಗುತ್ತಿದೆ. ಸುಮಾರು ೪೦-೫೦ ಅಡಿ ಆಳದಲ್ಲಿ ಸ್ಫೋಟಗಳನ್ನು ನಡೆಸಲಾಗುತ್ತಿದೆ. ಅದೂ ರಾತ್ರಿಹೊತ್ತು ಜನರು ಮಲಗಿದ್ದಾಗ ಸ್ಫೋಟಗಳನ್ನು ನಡೆಸಲಾಗುತ್ತಿದೆ. ಇದರಿಂದ ವೃದ್ಧರು, ಮಕ್ಕಳು, ಜಾನುವಾರು, ವನ್ಯಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೆಚ್ಚು ಆವರ್ತಕದ ಸ್ಫೋಟಕಗಳಿಂದ ಅಕ್ಕಪಕ್ಕದ ಊರುಗಳಲ್ಲಿನ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಹಳೆ ಮನೆಗಳ ಗೋಡೆಗಳು ಶಿಥಿಲವಾಗಿವೆ ಎಂದು ಮಾಹಿತಿ ನೀಡುತ್ತಾರೆ ಪಿ.ಸಿ.ಮಂಜುನಾಥ್.
- ಪಿ.ಸಿ.ಮಂಜುನಾಥ್
ಸ್ಫೋಟಕಗಳು ಎಲ್ಲಿಂದ ಬರುತ್ತವೆ?
ಈ ಪ್ರಶ್ನೆ ಯಕ್ಷಪ್ರಶ್ನೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕ್ವಾರಿಗಳಲ್ಲಿ ನಡೆಯುತ್ತಿರುವ ಸ್ಫೋಟಗಳಿಗೆ ಸ್ಫೋಟಕಗಳು ಎಲ್ಲಿಂದ ಬರುತ್ತವೆ? ಎಷ್ಟು ಪ್ರಮಾಣದಲ್ಲಿ ಬರುತ್ತಿದೆ? ಒಪೆನ್ ಮಾರುಕಟ್ಟೆಯಿಂದ ತರಲಾಗುತ್ತಿದೆಯಾ? ಅಥವಾ ಬ್ಲ್ಯಾಕ್ ಮಾರುಕಟ್ಟೆಯಿಂದ ತರಲಾಗುತ್ತಿದೆಯಾ? ಅದನ್ನು ತಂದು ಸ್ಫೋಟಿಸುವವರು ಯಾರು? ಅದಕ್ಕಾಗಿ ಕ್ರಷರ್‌ಗಳಲ್ಲಿ ತಜ್ಞರು ಇದ್ದಾರಾ? ಅದರಲ್ಲೂ ಕಲ್ಲಿನ ಗುಣಮಟ್ಟಕ್ಕೆ (ಗಟ್ಟಿ-ಮೆದು) ತಕ್ಕಂತೆ ಸ್ಫೋಟಿಸುವ ನೈಪುಣ್ಯತೆ ಹೊಂದಿರುವ ಪರಿಣಿತರು ಇದ್ದಾರಾ? ಕ್ರಷರ್‌ಗಳಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಸ್ಫೋಟಗಳನ್ನು ಗಮನಿಸಿದರೆ ಅಂತಹ ಪರಿಣಿತರು ಕ್ರಷರ್‌ಗಳಲ್ಲಿ ಇಲ್ಲವೆನಿಸುತ್ತದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಕೊನೆಯ ಪಕ್ಷ ಕ್ರಷರ್‌ಗಳ ಬಳಿ ಸೂಚನಾ ಫಲಕಗಳನ್ನೂ ಹಾಕಿಲ್ಲ. ಈ ಬಗ್ಗೆ ಸಮರ್ಪಕ ತನಿಖೆಯಾಗಬೇಕು ಎಂದು ಆರ್.ಆಂಜನೇಯ ರೆಡ್ಡಿ ಒತ್ತಾಯ ಮಾಡಿದ್ದಾರೆ.