ಈವರೆಗೆ 1.87 ಲಕ್ಷ ಜನರಿಗೆ ಲಸಿಕೆ; ಒಬ್ಬರಿಗೂ ಅಡ್ಡ ಪರಿಣಾಮ ಆಗಿಲ್ಲ
ಬೆಂಗಳೂರು: ಎರಡನೇ ಹಂತದಲ್ಲಿ ಮುಖ್ಯಮಂತ್ರಿ, ಮಂತ್ರಿಗಳಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸಚಿವರು ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜನಸಾಮಾನ್ಯರಿಗೆ ನೈತಿಕ ಸ್ಥೈರ್ಯ ತುಂಬಲು ಅದೇ ರೀತಿ ರಾಜ್ಯದಲ್ಲಿ ಸುಮಾರು 500ರಷ್ಟು ಜನಪ್ರಿಯ ವ್ಯಕ್ತಿಗಳಿಗೆ ಲಸಿಕೆ ನೀಡುವಂತೆ ಕ್ರಮ ವಹಿಸಲು ಪ್ರಧಾನಿಗಳಿಗೆ ಕೋರಲಾಗಿದೆ ಎಂದರು.
ಲಸಿಕೆಯಿಂದ ಈವರೆಗೆ ಯಾವುದೇ ದೊಡ್ಡ ಮಟ್ಟದ ಅಡ್ಡ ಪರಿಣಾಮ ಆಗಿಲ್ಲ. ಇದು ಅತ್ಯಂತ ಸುರಕ್ಷಿತ ಲಸಿಕೆಯಾಗಿದ್ದು, ಹೆಚ್ಚು ಜನರು ಇದನ್ನು ಪಡೆಯಬೇಕು. ಕೊರೊನಾ ಲಸಿಕೆ ಅಭಿಯಾನದಡಿ, ಈವರೆಗೆ 1,87,211 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
7,94,500 ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದೆ. ಕೋವ್ಯಾಕ್ಸಿಕ್ ಲಸಿಕೆ ಮೊದಲಿಗೆ 20,000 ಡೋಸ್ ಬಂದಿತ್ತು. ನಂತರ ಮತ್ತೆ 1,46,240 ಡೋಸ್ ಬಂದಿದೆ. ಒಟ್ಟು 1,87,211 ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಇದು ಅತಿ ಹೆಚ್ಚು ಎಂದು ತಿಳಿಸಿದರು.
ಎರಡೂ ಒಬ್ಬರಲ್ಲೇ ಇದ್ದರೆ ನಿರ್ವಹಣೆ ಸುಲಭ
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಬ್ಬರ ಬಳಿ ಇದ್ದರೆ ನಿರ್ವಹಣೆ ಸುಲಭ. ಕೋವಿಡ್ ಲಸಿಕೆ ಬಂದಿರುವ ಈ ಸಮಯದಲ್ಲಿ ಎರಡೂ ಇಲಾಖೆ ಸಮನ್ವಯದಿಂದ ಕೆಲಸ ಮಾಡಬೇಕು. ಯಾರಿಗೇ ಆದರೂ ಕೊಡಲಿ, ಆದರೆ ಒಬ್ಬರಿಗೇ ಖಾತೆ ನೀಡಲಿ. ಕೊರೊನಾ ತಾರ್ಕಿಕ ಅಂತ್ಯ ಕಾಣಲು ಇದು ಶಾಶ್ವತವಾಗಿ ಒಂದಾಗಬೇಕು. ಮುಂದೆ ಯಾವುದೇ ಸರ್ಕಾರ ಬಂದರೂ ಹೀಗೆಯೇ ಇರಬೇಕು ಎಂದರು ಸುಧಾಕರ್.
ಮುಖ್ಯಮಂತ್ರಿಗಳಿಗೆ ಕಠಿಣ ಸವಾಲಿದೆ. ಲಭ್ಯವಿರುವ ಖಾತೆಯನ್ನು ಹಂಚುವುದು ಸಾಹಸದ ಕೆಲಸ. ಈಗ ನಮ್ಮ ಮುಂದೆ ಅತಿ ಹೆಚ್ಚು ಜನರಿಗೆ ಲಸಿಕೆ ನೀಡುವ ಸವಾಲಿದೆ ಎಂದು ಡಾ. ಸುಧಾಕರ್ ಹೇಳಿದರು.