ಚಿಕ್ಕಬಳ್ಳಾಪುರದಲ್ಲಿ 72ನೇ ಗಣರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ, ಕೋವಿಡ್ ಕಾರಣಕ್ಕೆ ಸೊರಗಿದ ಸಂಭ್ರಮ
M Krishnappa Chikkaballapur
ಚಿಕ್ಕಬಳ್ಳಾಪುರ: ರಾಷ್ಟ್ರ ಹಾಗೂ ರಾಜ್ಯದ ಮಟ್ಟದಲ್ಲಿ ರೈತರು ನಡೆಸುತ್ತಿರುವ ಹೋರಾಟ, ಪ್ರತಿಭಟನೆ ಅನಗತ್ಯ. ಇವತ್ತು ರೈತ ನಾಯಕರು ಕರೆ ನೀಡಿರುವ ಟ್ರ್ಯಾಕ್ಟರ್ ಚಳವಳಿಯೂ ಅರ್ಥಹೀನ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರಿಗೆ ಎಲ್ಲವನ್ನೂ ಒಳ್ಳೆಯದೆ ಮಾಡುತ್ತಿವೆ ಎಂದು ಆರೋಗ್ಯ-ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಯೊಗದಲ್ಲಿ ಏರ್ಪಡಿಸಲಾಗಿದ್ದ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರೈತರ ಸೋಗಿನಲ್ಲಿ ದಲ್ಲಾಳಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ನಿಜವಾದ ರೈತರನ್ನು ತಪ್ಪುದಾರಿಗೆ ಎಳೆಯುತಿದ್ದಾರೆ. ಸರಕಾರ ಇಂಥವರ ಬೆದರಿಕೆಗಳಿಗೆ ಮಣಿಯುವುದಿಲ್ಲ ಎಂದರು.
ಒಂದು ರೈತ ಕುಟುಂಬಕ್ಕೆ 10,000 ರೂ.
ಮುಖ್ಯಮಂತ್ರಿ ಯಡಿಯೂರಪ್ಪ ರೈತ ನಾಯಕರು. ರೈತರ ಕಷ್ಟ-ಸುಖಗಳಿಗೆ ಅವರೂ ಸ್ಪಂದಿಸುತ್ತಿದ್ದಾರೆ. ಹೀಗಾಗಿ ಕೇಂದ್ರ ಸರಕಾರ ರಾಜ್ಯದ ರೈತರಿಗೆ ನೀಡುವ 6,000 ರೂ. ಪರಿಹಾರದ ಜತೆಗೆ ರಾಜ್ಯ ಸರಕಾರವೂ 4,000 ರೂ.ಗಳನ್ನು ಒಟ್ಟುಗೂಡಿಸಿ ಒಂದು ರೈತ ಕುಟುಂಬಕ್ಕೆ 10,000 ರೂ. ನೆರವು ನೀಡಲಾಗುತ್ತಿದೆ ಎಂದರು ಸಚಿವರು.
ನಮ್ಮದು ಶ್ರೇಷ್ಠ ಸಂವಿಧಾನ
ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ಭಾರತ ಹೊಂದಿದೆ. ಜ್ಯಾತ್ಯತೀತ ತತ್ತ್ವದ ತಳಹದಿಯ ಮೇಲೆ ರೂಪುಗೊಂಡಿರುವ ನಮ್ಮ ಸಂವಿಧಾನವು ಎಲ್ಲರಿಗೂ ಸಮಬಾಳು ಮತ್ತು ಸಮಪಾಲನ್ನು ನೀಡಿದೆ. ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದ ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ನೀಡಿದರು. ಅತ್ಯಂತ ಹೆಮ್ಮೆ ಸಂಗತಿ ಎಂದರೆ, ಕರ್ನಾಟಕದ ಬೆನಗಲ್ ನರಸಿಂಗರಾಯರು ಸಹ ಸಂವಿಧಾನ ರಚನೆಗೆ ತಮ್ಮ ಅಪೂರ್ವ ಸೇವೆ ಸಲ್ಲಿಸಿದ್ದಾರೆ ಎಂದು ಅವರು ನುಡಿದರು.
ಕೊರೊನ ಕಂಟ್ರೋಲ್‌ನಲ್ಲಿದೆ
ರಾಜ್ಯದಲ್ಲಿ ಕೈಗೊಂಡ ತ್ವರಿತ ಕ್ರಮಗಳಿಂದ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಅತಿ ಶೀಘ್ರದಲ್ಲಿ ಕೊರೊನಾ ಲಸಿಕೆ ದೊರೆತಿದ್ದು, ಬೇರೆ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಬ್ರೆಜಿಲ್ ದೇಶದ ಅಧ್ಯಕ್ಷರು ಲಸಿಕೆ ನೀಡಿರುವುದಕ್ಕೆ ಭಾರತಕ್ಕೆ ಧನ್ಯವಾದ ಹೇಳಿದ್ದಾರೆ. ಈ ರೀತಿ ಬೇರೆ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಕಾರ್ಯವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಜಗತ್ತಿನ ಮುಂದೆ ತಲೆಎತ್ತಿ ನಡೆಯುವಂತೆ ಭಾರತ ಬೆಳೆದಿದೆ ಎಂದರು ಸಚಿವರು.
ಭಾರತದಲ್ಲಿ ಅತಿ ಹೆಚ್ಚು ಯುವಜನರಿದ್ದಾರೆ. ದೇಶದಲ್ಲಿ ಉತ್ತಮ ಮಾನವ ಸಂಪನ್ಮೂಲವಿದ್ದು, ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಮೂಲಭೂತ ಹಕ್ಕುಗಳಂತೆ, ಮೂಲಭೂತ ಕರ್ತವ್ಯಗಳಿವೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ನಾಗರಿಕರಾಗಿ ದೇಶವನ್ನು ಉನ್ನತಿಗೆ ಕೊಂಡೊಯ್ಯಲು ಕರ್ತವ್ಯ ಪಾಲಿಸಬೇಕು ಎಂದರು ಅವರು.
ಜೈ ಇನ್ಸಾನ್
ರೈತರು, ಯೋಧರನ್ನು ಸ್ಮರಿಸಲು ಜೈ ಜವಾನ್ ಜೈ ಕಿಸಾನ್ ಎಂದು ಲಾಲ್ ಬಹಾದ್ದೂರ್ ಶಾಸ್ತ್ರಿ ಹೇಳಿದ್ದರು. ವಿಜ್ಞಾನಿಗಳನ್ನು ಸ್ಮರಿಸಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಜೈ ವಿಜ್ಞಾನ್ ಎಂದು ಹೇಳಿದ್ದರು. ಅದೇ ರೀತಿ ಕವಿ ಕುವೆಂಪು ವಿಶ್ವಮಾನವ ಸಂದೇಶ ಸಾರಲು ಜೈ ಇನ್ಸಾನ್ ಎಂಬ ಸಂದೇಶ ಸಾರಬೇಕಿದೆ ಎಂದು ಡಾ.ಸುಧಾಕರ್ ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅದ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಜಿಲ್ಲಾಧಿಕಾರಿ ಆರ್.ಲತಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಸೊರಗಿದ ಸಂಭ್ರಮ
ಗಣರಾಜ್ಯೋತ್ಸವ ಸಮಾರಂಭಕ್ಕೆ ಕೊರೊನ ಕರಿನೆರಳು ಕಾಡಿತು. ವೈರಸ್ ಕಾರಣದಿಂದ ಶಾಲಾ ವಿದ್ಯಾರ್ಥಿಗಳ ಮನರಂಜನೆ ಕಾಣದಾಗಿತ್ತು. ಮಕ್ಕಳ ಮನರಂಜನಾತ್ಮಕ ಚಟುವಟಿಕೆಗಳು ಇಲ್ಲದೆ ಇಡೀ ಕ್ರೀಡಾಂಗಣ ಬಿಕೋ ಎನ್ನುತ್ತಿತ್ತು. ನಾಗರೀಕರೂ ಸಹ ಅತ್ತ ಸುಳಿಯದ ಹಿನ್ನಲೆಯಲ್ಲಿ ಕೇವಲ ಪರೇಡ್‌ಗೆ ಬಂದಿದ್ದ ಪೊಲೀಸ್, ಗೃಹರಕ್ಷಕ, ಎನ್.ಎಸ್.ಎಸ್., ಎನ್.ಸಿ.ಸಿ. ಸೇರಿದಂತೆ ಇನ್ನಿತರೆ ಸೀಮಿತ ತುಕಡಿಗಳು ಮಾತ್ರ ಕ್ರೀಡಾಂಗಣದಲ್ಲಿ ಧ್ವಜ ವಂದನೆಗೆ ಆಗಮಿಸಿದ್ದವರು ಮಾತ್ರ ಕಂಡುಬಂದರು. ಸಾರ್ವಜನಿಕರಿಗಾಗಿ ಮೀಸಲಿರಿಸಿದ್ದ ಆಸನಗಳು ಖಾಲಿ ಬಿದ್ದಿದ್ದವು. ಜಿಲ್ಲಾಡಳಿತ ಸಹ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆಕರ್ಷಿಸುವಲ್ಲಿ ಯಾವುದೇ ರೀತಿಯ ಕಾರ್ಯಯೊಜನೆ ರೂಪಿಸಿರಲಿಲ್ಲ. ಕೇವಲ ಸರಕಾರಿ ಸಾಧನೆಯನ್ನು ಗಣರಾಜ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸುವುದಕ್ಕಷ್ಟೆ ಸಚಿವರ ಭಾಷಣ ಸೀಮಿತವಾಯಿತು.
ಹಲವೆಡೆ ಗಣರಾಜ್ಯೋತ್ಸವ
ನಗರಸಭೆಯಲ್ಲಿ ನೂತನವಾಗಿ ಅಧ್ಯಕ್ಷರಾಗಿ ಚುನಾಯಿತರಾದ ಡಿ.ಎಸ್.ಆನಂದರೆಡ್ಡಿ ಬಾಬು ಪ್ರಪ್ರಥಮ ಬಾರಿಗೆ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಧ್ವಜಾರೋಹಣ ನೆರವೇರಿಸಿದರು. ನಗರದ ಹೊರ ಹೊಲಯದ ಕೆ.ವಿ.ಕ್ಯಾಂಪಸ್‌ನಲ್ಲಿ ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಧ್ವಜಾರೋಹಣ ಮಾಡಿದರು. ಮಾದರಿ ಸರಕಾರಿ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಪತ್ರಕರ್ತ ಎಂ.ಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕ ಮರಿಯಪ್ಪ ಇನ್ನಿತರೆ ಶಿಕ್ಷಕರು ಹಾಜರಿದ್ದರು.
ಜಿಲ್ಲಾ ಕೇಂದ್ರವೂ ಸೇರಿ ವಿವಿಧೆಡೆ ಕೊರೊನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಗಣರಾಜ್ಯೋತ್ಸವ ಕಾರ್ಯಕ್ರಮಗಳು ನಡೆದವು.