ಬೆಂಗಳೂರು/ಕೋಲಾರ: ಖಾತೆ ಹಂಚಿಕೆಯ ಬಿಕ್ಕಟ್ಟು ಮುಗಿಯುತ್ತಿದ್ದಂತೆಯೇ ಇದೀಗ ಉಸ್ತುವಾರಿ ಜಿಲ್ಲೆಗಳ ಹಂಚಿಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದೆ ಬಿಗ್ ಅಜೆಂಡಾ ಆಗಿದ್ದು, ಕೋಲಾರ ಜಿಲ್ಲೆಯ ಉಸ್ತುವಾರಿ ಯಾರಿಗೆ ದಕ್ಕಲಿದೆ ಎಂಬ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಿದೆ.
ಜನವರಿ ೨೬ರಂದು ಗಣರಾಜ್ಯೋತ್ಸವ ದಿನದಂದು ಆಯಾ ಜಿಲ್ಲೆಗಳಲ್ಲಿ ಆಯಾ ಉಸ್ತುವಾರಿ ಸಚಿವರೇ ಧ್ವಜಾರೋಹಣ ಮಾಡಿದ್ದು, ಸಚಿವರ ಉಸ್ತುವಾರಿ ಇಲ್ಲದ ಜಿಲ್ಲೆಗಳಿಗೆ ಕೆಲ ಸಚಿವರನ್ನು ಮುಖ್ಯಮಂತ್ರಿಗಳು ನಿಯೋಜನೆ ಮಾಡಿದ್ದರು. ಅದರಂತೆ ಕೋಲಾರ ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಖಾತೆಗಳ ಸಚಿವ ಸಿ.ಪಿ.ಯೋಗೇಶ್ವರ್ ಧ್ವಜಾರೋಹಣ ಮಾಡಿದ್ದರು.
ಈ ಹಿಂದೆ ಸಚಿವರಾಗಿದ್ದ, ಜಿಲ್ಲೆಯ ಉಸ್ತುವಾರಿಯನ್ನೂ ಹೊಂದಿದ್ದ ಮುಳಬಾಗಿಲು ಶಾಸಕ ನಾಗೇಶ್ ಅವರನ್ನು ಸಂಪುಟದಿಂದ ಹೊರಗಿಟ್ಟು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಜಿಲ್ಲೆಗೆ ಕ್ಯಾಬಿನೆಟ್ಟಿನಲ್ಲಿ ಪ್ರಾತಿನಿಧ್ಯ ಇಲ್ಲದಂತಾಗಿದೆ. ಈ ಕಾರಣಕ್ಕೆ ಚನ್ನಪಟ್ಟಣದ ಮಾಜಿ ಶಾಸಕ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾಗಿ ಸಚಿವರಾಗಿರುವ ಯೋಗೀಶ್ವರ್‌ಗೆ ಜಿಲ್ಲಾ ಉಸ್ತುವಾರಿ ಕೊಡುವುದು ಖಚಿತವಾಗಿದೆ.
ರಾಮನಗರ ಸಿಗುವುದು ಕಷ್ಟ
ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಸಿ.ಪಿ.ಯೋಗೀಶ್ವರ್ ಸಹಜವಾಗಿಯೇ ತಮ್ಮ ತವರು ಜಿಲ್ಲೆಯ ಉಸ್ತುವಾರಿಯ ಮೇಲೆ ಕಣ್ಣಿಟ್ಟಿದ್ದರು. ಜಿಲ್ಲೆಯಲ್ಲಿ ಪ್ರಬಲರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿಹಾಕಲು ನನಗೆ ರಾಮನಗರ ಉಸ್ತುವಾರಿಯೇ ಬೇಕು ಎಂದು ಮುಖ್ಯಮಂತ್ರಿಗಳನ್ನು ಕೇಳಿದ್ದರು.
ಆದರೆ, ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಬರುತ್ತಿದ್ದಂತೆಯೇ ಉಪ ಮುಖ್ಯಮಂತ್ರಿಯಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ರಾಮನಗರ ಜಿಲ್ಲೆ ಉಸ್ತುವಾರಿ ನೀಡಿದ್ದರು. ಮಲ್ಲೇಶ್ವರದ ಶಾಸಕರೂ, ಮೂಲತಃ ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ಹುಟ್ಟಿರುವ ಡಿಸಿಎಂ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಮನಗರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಪರ್ಯಾಯ ರಾಜಕೀಯ ಶಕ್ತಿಯನ್ನಾಗಿ ಹೊರಹೊಮ್ಮಿಸುವಲ್ಲಿ ಯಶಸ್ವಿಯಾಗಿದ್ದರು.
ಕೋವಿಡ್ ಕಾಲದಲ್ಲಿ ಬೆಂಗಳೂರು ನಗರದ ಕೋವಿಡ್ ಉಸ್ತುವಾರಿ ಇದ್ದರೂ ರಾಮನಗರವನ್ನು ಮರೆಯದ ಅಶ್ವತ್ತನಾರಾಯಣ, ಅತ್ಯುತ್ತಮವಾಗಿ ಕೆಲಸ ಮಾಡಿದ್ದರು. ಜಿಲ್ಲೆಯಲ್ಲಿ ಪಕ್ಷದ ಮುಖಂಡರೂ ಕಾರ್ಯಕರ್ತರೆಲ್ಲರನ್ನೂ ಒಳಗೊಳ್ಳುವುದರ ಜತೆಗೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕನಕಪುರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಸ್ಕೋರ್ ಮಾಡಿದ ಹಿಂದೆ ಅಶ್ವತ್ಥನಾರಾಯಣ ಅವರ ಶ್ರಮವಿತ್ತು.
“ಬಹುಮುಖ್ಯವಾಗಿ ಅಶ್ವತ್ಥನಾರಾಯಣ ಎಂದರೆ ಬೇಡ ಎನ್ನುವವರೇ ಇಲ್ಲ ನಮ್ಮ ಜಿಲ್ಲೆಯಲ್ಲಿ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಮುಂದೆ ಹೋಗುವ, ವೈಯಕ್ತಿಕವಾಗಿ ಯಾವ ಅಜೆಂಡಾವನ್ನೂ ಹೊಂದಿರದ, ಪಕ್ಷ ಮತ್ತು ಸರಕಾರದ ಕೆಲಸಗಳ ಬಗ್ಗೆ ಕರಾರುವಕ್ಕಾದ ನಿಲವುಳ್ಳ ಅವರು ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅತ್ಯಂತ ಡಿಗ್ನಿಫೈಡ್ ಆಗಿ ಕೆಲಸ ಮಾಡಿದವರು. ಹೀಗಾಗಿ ನಮ್ಮ ಜಿಲ್ಲೆಯ ಉಸ್ತುವಾರಿ ಡಿಸಿಎಂ ಅವರಿದ್ದರೆ ಮಾತ್ರ ಜಿಲ್ಲೆಗೆ ಲಾಭವಿದೆ” ಎನ್ನುತ್ತಾರೆ ರಾಮನಗರ ಜಿಲ್ಲೆಯ ಹಿರಿಯ ಮುಖಂಡರೊಬ್ಬರು.
ವೈಯಕ್ತಿಕ ತಿಕ್ಕಾಟ ಇಲ್ಲ
ಯೋಗೀಶ್ವರ್ ಕೇವಲ ರಾಜಕಾರಣದ ಉದ್ದೇಶಕ್ಕಾಗಿ ರಾಮನಗರ ಜಿಲ್ಲಾ ಉಸ್ತುವಾರಿ ಕೇಳುತ್ತಿದ್ದಾರೆಂಬ ಮಾತಿದೆ. ಮುಖ್ಯವಾಗಿ ತಮ್ಮ ರಾಜಕೀಯ ವಿರೋಧಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರೆದುರು ತೊಡೆ ತಟ್ಟಲು ಅವರು ಉಸ್ತುವಾರಿ ಕೇಳುತ್ತಿದ್ದಾರೆ. ಆದರೆ, ಅಶ್ವತ್ಥನಾರಾಯಣ ಈ ರೀತಿಯ ಜಾಯಮಾನದವರಲ್ಲ. ಈಗಾಗಲೇ ಜಿಲ್ಲೆಯಲ್ಲಿ ಬಲಾಢ್ಯರಾಗಿರುವ ಡಿಕೆ ಬ್ರದರ್ಸ್ ಅಥವಾ ಎಚ್‌ಡಿಕೆ ಅವರನ್ನು ವೈಯಕ್ತಿಕ ರಾಜಕೀಯದ ನೆಲೆಯಲ್ಲಿ ಎದುರಿಸದೆ ಅಭಿವೃದ್ಧಿ ಮತ್ತು ಕಾರ್ಯನಿರ್ವಹಣೆ ಮೂಲಕ ಎದುರಿಸಿದರು. ಪರಿಣಾಮವಾಗಿಯೇ ಪಂಚಾಯಿತಿ ಚುನಾವಣೆಯಲ್ಲಿ ಚನ್ನಪಟ್ಟಣದಂಥ ತಾಲ್ಲೂಕಿನಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿಯಿತು. ಜಿಲ್ಲೆಯಲ್ಲಿ ಸುಮಾರು 234 ಕಡೆಗಳಲ್ಲಿ ಬಿಜೆಪಿ ಗೆದ್ದು, ಕನಕಪುರ ತಾಲ್ಲೂಕಿನಲ್ಲೇ 52 ಕಡೆ ಗೆಲುವು ಸಾಧಿಸಿತ್ತು. ಇದು ಡಿಸಿಎಂ ಅವರಿಗೆ ದೊಡ್ಡ ಪ್ಲಸ್ ಆಗಿದೆ.
ಯೋಗೀಶ್ವರ್ ಏನ್ ಹೇಳ್ತಾರೆ?
ಕೋಲಾರದಲ್ಲಿ ಬುಧವಾರ ಮಾತನಾಡಿದ್ದ ಸಚಿವ ಯೋಗಿಶ್ವರ್, ಕೋಲಾರ ಜಿಲ್ಲೆಯ ಉಸ್ತುವಾರಿ ಕೊಟ್ಟರೆ ಮಾಡುವೆ ಎಂದು ಹೇಳಿದ್ದರು.
“ಆ ಜಿಲ್ಲೆ, ಈ ಜಿಲ್ಲೆ ಎಂಬ ಮಾತೇನೂ ಇಲ್ಲ. ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಸಂತೋಷವಿದೆ. ಇನ್ನು ಯಾವುದೇ ಜಿಲ್ಲೆ ಉಸ್ತುವಾರಿ ನೀಡುದರೂ ಸರಿ, ಕೆಲಸ ಮಾಡುತ್ತೇನೆ. ನನಗೆ ಕೋಲಾರ ಜಿಲ್ಲೆ ಆದರೇನು? ರಾಮನಗರ ಆದರೇನು? ಇವೆರಡೂ ಜಿಲ್ಲೆಗಳು ಕರ್ನಾಟಕದಲ್ಲೇ ಇವೆಯಲ್ಲವೆ? ಒಂದು ವೇಳೆ ಕೋಲಾರ ಜಿಲ್ಲೆಯ ಹೊಣೆಗಾರಿಕೆ ವಹಿಸಿದರೆ ಸಂತೋಷವಾಗಿ ಕೆಲಸ ಮಾಡುತ್ತೇನೆ. ಕೋಲಾರ ಉತ್ತಮ ಜಿಲ್ಲೆ. ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ. ಅನೇಕ ಪ್ರವಾಸಿ ತಾಣಗಳು ಇಲ್ಲಿವೆ. ಅವುಗಳ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತೇನೆ” ಎಂದಿದ್ದರು.
ಇನ್ನು ತುಮಕೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ್ದ ಡಿಸಿಎಂ ಅಶ್ವತ್ಥನಾರಾಯಣ; “ಖಾತೆಗಳ ಬಗ್ಗೆ ಏನನ್ನೂ ಹೇಳಲಾರೆ. ಮುಖ್ಯಮಂತ್ರಿಗಳು ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದು ನಮ್ಮ ಕರ್ತವ್ಯ. ಅದೇ ರೀತಿ ರಾಮನಗರ ಜಿಲ್ಲೆ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದೇನೆ. ಇದಕ್ಕಿಂತ ಹೆಚ್ಚೇನನ್ನೂ ಹೇಳಲಾರೆ” ಎಂದಿದ್ದರು.
ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಮನಗರ ಜಿಲ್ಲಾ ಉಸ್ತುವಾರಿ ಡಿಸಿಎಂ ಅವರಲ್ಲೇ ಇದ್ದು, ಯೋಗೀಶ್ವರ್ ಅವರು ಕೋಲಾರಕ್ಕೆ ಬರುವುದು ಪಕ್ಕಾ ಆಗಿದೆ. ಸರಕಾರ ಮತ್ತು ಪಕ್ಷದಲ್ಲಿ ಇದೇ ಮಾತು ಕೇಳಿಬರುತ್ತಿದೆ.