ಕೃಷಿ ಉಳಿದರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳು ಉಳಿಯುತ್ತವೆ. ಜಗತ್ತಿನ ಯಾವ ದೇಶಗಳಿಗೂ ಕಡಿಮೆ ಆಗದಂತೆ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದ ಈ ಜಿಲ್ಲೆಗಳ ಕೃಷಿ ಇಂದು ವಿನಾಶದತ್ತ ಸಾಗುತ್ತಿದೆ. ಒಂದೆಡೆ ಜಲಮೂಲಗಳ ನಾಶ, ಮತ್ತೊಂದೆಡೆ ಪ್ರಾಕೃತಿಕ ಸಂಪತ್ತಿನ ಲೂಟಿಯಿಂದ ಬೆಂಗಳೂರಿಗೆ ಅನತಿ ದೂರದಲ್ಲಿಯೇ ಮರುಭೂಮಿ ಸೃಷ್ಟಿಯಾಗುತ್ತಿದೆಯಾ ಎಂಬ ಭೀತಿ ಇದೆ. ಹಿರಿಯ ಭೂ ವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಅವರು ಕೋಲಾರದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (27/28 ಜನವರಿ, 2021) ಮಂಡಿಸಿದ ವಿಚಾರಗಳು ಎಲ್ಲರ ಕಣ್ತೆರೆಸುವಂತಿವೆ.
ಹಿಂದಿನ ಕೃಷಿ ಪದ್ದತಿಗಳನ್ನು ನಾವು ಮುಂದುವರಿಸುವುದು ತುಂಬಾ ಕಷ್ಟ. ಯಾಕಂದರೆ ನಾವು ಬಹಳ ದೂರ ಬಂದುಬಿಟ್ಟಿದ್ದೇವೆ. ಬದುಕ ಬಹಳ ವೇಗವನ್ನು ಪಡೆದುಕೊಂಡುಬಿಟ್ಟಿದೆ. ಮೊದಲಿನಂತೆ ಮನುಷ್ಯ ರಾಗಿಮುದ್ದೆ ತಿಂದುಕೊಂಡು ಹೊಲದಲ್ಲಿ ಕೆಲಸ ಮಾಡಿಕೊಂಡು ಇರುವುದು ಕಷ್ಟ. ಹಳ್ಳಿ ಜನರು ಹೆಚ್ಚೆಂದರೆ ಹಬ್ಬಗಳು ಮತ್ತು ಜಾತ್ರೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇಲ್ಲ ಹರಿಕತೆ, ಕೇಳಿಕೆಗಳನ್ನು ಆಡುತ್ತಿದ್ದರು. ಸಮಯ ಸಿಕ್ಕಾಗ ಒಂದಷ್ಟು ಆಟಗಳನ್ನು ಆಡುತ್ತಿದ್ದರು. ಸೈಕಲ್‌ಗಳು ಇಲ್ಲದ ಕಾಲ ಅದಾಗಿತ್ತು. ಆದರೆ ಈ ಹೊತ್ತೆ ನಮಗೆ ಎಲ್ಲಾ ಬೇಕು. ತಿನ್ನುವುದಕ್ಕಿಂತ ಸುಖ ಪಡೆಯುವುದೆ ಹೆಚ್ಚು ಮುಖ್ಯ ಆಗಿದೆ. ಸ್ಕೂಟರ್/ಕಾರುಗಳು, ವೈವಿದ್ಯಮಯ ಆಹಾರ ತಿನ್ನುವುದು, ಕುಡಿಯುವುದು, ಟಿವಿ/ಮೊಬೈಲ್‌ಗಳಲ್ಲಿ ಆಡುವುದು, ವಿಮಾನಗಳಲ್ಲಿ ಓಡಾಡುವುದು ಒಂದೇ ಎರಡೇ? ಹಾಗಾಗಿ ನಾವು ಹೆಚ್ಚೆಚ್ಚು ಬೆಳೆಗಳನ್ನು ಬೆಳೆಯಬೇಕು. ಹಣ ಮಾಡಬೇಕು, ಲಾಭ ಮಾಡಿಕೊಳ್ಳಬೇಕು.
ತೀರಾ ಇತ್ತೀಚಿನವರೆಗೂ ಹಳ್ಳಿಗಳಲ್ಲಿ ಜನರು ತಮಗೆ ಎಷ್ಟು ಬೇಕೊ ಅಷ್ಟು ಮಾತ್ರ ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದೆವು. ಹೆಚ್ಚೆಂದರೆ ರಾಗಿಯನ್ನು ಖಣಿಜಗಳು, ಗಾದಿಗಳಲ್ಲಿ ತುಂಬಿಕೊಂಡು ಒಂದೆರಡು ವರ್ಷಗಳು ಮಳೆ ಬರದೆ ಇದ್ದರೂ ಕಾಲ ಕಳೆಯುತ್ತಿದ್ದೆವು. ರಾಗಿ ಜೊತೆಗೆ ಜೋಳ, ತೊಗರಿ, ಜೋಳ, ಹುರುಳಿ, ಆರಕ, ಸಾಮೆ ಕರ‍್ರ ಇತ್ಯಾದಿಗಳನ್ನ ಬೆಳೆದುಕೊಂಡು ಬದುಕು ನಡೆಸುತ್ತಿದ್ದೆವು. ಆದರೆ ಅದು ಆಹ್ಲಾದರವಾಗೆ ಇತ್ತು. ನಿಧಾನವಾಗಿ ಬದುಕು ಬದಲಾಗುತ್ತಾ ಹೋಯಿತು. ಆಧುನಿಕತೆ ಎಂಬ ಮಾಯೆ ಜಗತ್ತನ್ನು ಆವರಿಸಿಕೊಳ್ಳುತ್ತಾ ಹೋಯಿತು. ಕೊಳ್ಳುಬಾಕುತನ ಮಿತಿಮೀರಿ ಮನುಷ್ಯನಿಗೆ ಕಣ್ಣುಗಳಲ್ಲಿ ನೋಡಿದ್ದನ್ನೆಲ್ಲ ಬೇಕೆನಿಸಿತು. ಎಲ್ಲಾ ಸಂಪೂನ್ಮೂಲಗಳನ್ನು ಭೂಮಿಯಿಂದ ಕೊಳ್ಳೆ ಹೊಡೆಯಲು ಪ್ರಾರಂಭವಾಯಿತು.
- ಕೋಲಾರ ಜಿಲ್ಲೆಯ ಟೊಮ್ಯಾಟೋ ಬೆಳೆ. /@ckphotographi
ಆದರೆ, ನಮ್ಮ ಕೃಷಿ ಸಂಸ್ಕೃತಿ ಬಗ್ಗೆ ಮಾತನಾಡುವಾಗ ಎರಡು ವಿಷಯಗಳನ್ನು ಮಾತ್ರ ನಾವು ನಮ್ಮ ಹಿರಿಯರನ್ನು ಅನುಸರಿಸಲೇಬೇಕು. ಇಲ್ಲ ಅಂದರೆ ನಾವು ಖಂಡಿತ ಉಳಿಯುವುದಿಲ್ಲ. ಒಂದು; ಮಣ್ಣನ್ನು ನಿರಂತರವಾಗಿ ಸಕ್ರಿಯವಾಗಿ ಇಟ್ಟುಕೊಳ್ಳವುದು ಅಥವಾ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು. ಎರಡು; ನೀರನ್ನು ಸರಿಯಾಗಿ ನಿರ್ವಹಣೆ ಮಾಡಿಕೊಂಡು ಅಂತರ್ಜಲವನ್ನು ಕಾಪಾಡಿಕೊಳ್ಳುವುದು. ಯಾವ ದೇಶ ಮಣ್ಣನ್ನು ಮಣ್ಣಿನ ಫಲವತ್ತತೆಯನ್ನ ಉಳಿಸಿಕೊಳ್ಳುವುದಿಲ್ಲವೊ ಆ ದೇಶ ಖಂಡಿತಾ ಉಳಿಯುವುದಿಲ್ಲ. ಯುರೋಪ್‌ನಲ್ಲಿ ಮಣ್ಣನ್ನು ಈಗ ಯಾರೂ ಕೈಗಳಲ್ಲಿ ಮುಟ್ಟುವುದಿಲ್ಲ. ಎಲ್ಲವೂ ಯಂತ್ರಗಳೇ. ಈಗ ನಾವೂ ಕೂಡ ಅದನ್ನೇ ಮಾಡುತ್ತಿದ್ದೇವೆ. ರಾಗಿ ಬೆಳೆಯನ್ನು ಕೊಯ್ಯುವುದು, ಧಾನ್ಯ ಮಾಡುವುದಕ್ಕೂ ಯಂತ್ರಗಳು ಬಂದುಬಿಟ್ಟಿವೆ. ಅಂದರೆ ನಾವೂ ಕೂಡ ಮಣ್ಣಿನಿಂದ ನಿಧಾನವಾಗಿ ದೂರ ಆಗ್ತಾ ಇದ್ದೀವಿ. ಯಾರು ಮಣ್ಣಿನಿಂದ ದೂರ ಆಗ್ತಾರೊ ಅವರು ಇಮ್ಯೂನಿಟಿ ಕಳೆದುಕೊಳ್ಳುತ್ತಾರೆ. ಅಂತವರನ್ನು ವೈರಸ್‌ಗಳು ಮುತ್ತಿಗೆ ಹಾಕಿದರೆ ತಡೆದುಕೊಳ್ಳಲು ಆಗುವುದಿಲ್ಲ. ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಹೆಚ್ಚು ಜನರು ಸಾಯುತ್ತಿರುವುದಕ್ಕೆ ಇದೂ ಒಂದು ಕಾರಣವಾಗಿದೆ! ಮಣ್ಣಿನ ಬಗ್ಗೆ ನಮ್ಮ ಹಿರಿಯರಿಗಿದ್ದ ಗೌರವವನ್ನು ಮಹಾಭಾರತದಲ್ಲಿ ನೋಡಬಹುದು. ಕೃಷ್ಣ ಮಗುವಾಗಿದ್ದಾಗ ಮಣ್ಣು ತಿನ್ನುತ್ತಿರುತ್ತಾನೆ. ಅವನ ತಾಯಿ ಕೇಳಿದರೆ ಸುಳ್ಳು ಹೇಳುತ್ತಾನೆ. ಬಾಯಿ ತೆಗಿ ಎಂದು ಕೇಳಿದಾಗ ಬಾಯಿ ತೆರೆಯುತ್ತಾನೆ. ಅವನ ಬಾಯಲ್ಲಿ ಬ್ರಹ್ಮಾಂಡವೇ ಕಾಣಿಸುತ್ತದೆ. ಇದು ಮಣ್ಣಿನ ಬಗ್ಗೆ ಇದ್ದ ಗೌರವವನ್ನು ತೋರಿಸುತ್ತದೆ.
ಕೋಲಾರ ಜಿಲ್ಲೆ ಮರಳುಗಾಡಾಗುತ್ತದೆ
ಇನ್ನು ಮಳೆ ನೀರನ್ನು ಸರಿಯಾಗಿ ನಿರ್ವಹಣೆ ಮಾಡದೆ, ಅಂತರ್ಜಲ ಕಾಪಾಡಿಕೊಳ್ಳದೆ ನೀರಿಗೆ ಬರ ಬಂದರೆ ಖಂಡಿತಾ ಕೋಲಾರ ಜಿಲ್ಲೆ ಮರಳುಗಾಡಾಗುತ್ತದೆ. ಅಂತಹ ಪರಿಸ್ಥಿತಿ ಬಂದಾಗ ಜನರು ಆ ಪ್ರದೇಶವನ್ನು ಬಿಟ್ಟು ವಲಸೆ ಹೋಗಲೇಬೇಕಾಗುತ್ತದೆ. ಕೋಲಾರ ಜಿಲ್ಲೆಯಲ್ಲಿ ಅಂತಹ ದಿನಗಳು ಹತ್ತಿರ ಬರುತ್ತಿವೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಕಳೆದು ಮೂರು ವರ್ಷಗಳಿಂದ ಏನೋ ನಮ್ಮ ಅದೃಷ್ಟಕ್ಕೆ ಒಳ್ಳೇ ಮಳೆ ಬೀಳುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರನ್ನು ಮಾತ್ರ ನಾವು ದೆವ್ವದಂತೆ ಬೆಳೆಸಿಕೊಂಡಿದ್ದೇವೆ. ಅದರ ಪರಿಣಾಮ ಸುತ್ತಲಿನ ಗ್ರಾಮೀಣ ಪ್ರದೇಶಗಳ ಮೇಲೆ ಬೀಳುತ್ತಿದೆ. ಅಂದರೆ ನೀರಿನ ಸಂಪನ್ಮೂಲಗಳು, ಗ್ರಾನೈಟ್ ಗುಡ್ಡಗಳು ಖಾಲಿಯಾಗುತ್ತಿವೆ. ಜಲ ಮಾಲಿನ್ಯ, ವಾಯುಮಾಲಿನ್ಯವಾಗುತ್ತಿದ್ದು ನೀರು ಕಲುಷಿತಗೊಳ್ಳುತ್ತಿದೆ. ಆದರೆ ಒಂದು ದಿನ ಬೆಂಗಳೂರು ಪತೇಪುರ್‌ಸಿಕ್ರಿ ಆಗುವುದರಲ್ಲಿ ಯಾವ ಅನುಮಾನವೂ ಇಲ್ಲ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ನಗರದ ಜನರು ಕಳೆದ ಕೆಲವು ವರ್ಷಗಳ ಹಿಂದೆಯೆ ವಲಸೆ ಹೋದರು.
ನಮ್ಮ ಜಿಲ್ಲೆಯ ಅದೃಷ್ಟವೊ ದುರಾದೃಷ್ಟವೊ ನಮಗೆ ಸರಿಯಾಗಿ ಒಂದು ನದಿಯೂ ಇಲ್ಲ. ಹಾಗಾಗಿ ನಮ್ಮ ಹಿರಿಯರಿಗೆ ಉಳಿದಿದ್ದು ಒಂದೆ ದಾರಿ. ಮಳೆ ನೀರನ್ನು ಜೋಪಾನವಾಗಿ ಸಂಗ್ರಹಿಸಿ ಬಳಸಿಕೊಳ್ಳುವುದು. ಅದನ್ನು ನಮ್ಮ ಹಿರಿಯರು ತಲತಲಾಂತರದಿದ ಕೆರೆ, ಕುಂಟೆ-ಗೋಕುಂಟೆ, ಕಲ್ಯಾಣಿ, ತೋಡುಬಾವಿಗಳನ್ನು ಮಾಡಿ ಬದುಕು ಕಟ್ಟಿಕೊಂಡಿದ್ದರು. ನೀರು ಅಂದರೆ ಬದುಕು. ಬದುಕು ಅಂದರೆ ನೀರು. ಮನುಷ್ಯ-ಪ್ರಾಣಿಗಳು ಬದುಕಬೇಕಾದರೆ, ಪರಿಸರ ಉಳಿಯಬೇಕಾದರು ನೀರು ಬೇಕೆಬೇಕು. ಒಂದು ಲೆಕ್ಕದ ಪ್ರಕಾರ ಕೋಲಾರ ಜಿಲ್ಲೆಯಲ್ಲಿ 4,000 ಕೆರೆಗಳು ಇದ್ದವು ಎನ್ನಲಾಗಿದೆ. ರಾಜರು, ಪಾಳೇಗಾರರು, ಆಡಳಿತಗಾರರು, ಭೂ ಮಾಲೀಕರು ಮತ್ತು ಸಮುದಾಯಗಳು ಕೆರಗಳನ್ನು ನಿರ್ಮಿಸಿ ನೀರನ್ನು ಸಮರ್ಥವಾಗಿ ನಿರ್ವಹಣೆ ಮಾಡಲಾಗುತ್ತಿತ್ತು. ಹಳ್ಳಿ ಸಮುದಾಯಗಳೆ ಅದನ್ನು ನಿರ್ವಹಿಸುತ್ತಿದ್ದವು. ಭೂ ಮೇಲ್ಮೈನಲ್ಲಿ ನೀರು ಸಂಗ್ರಹಣೆ ಮಾಡುವುದರಿಂದ ಅಂತರ್ಜಲ ಮರುಪೂರಣೆಗೊಳ್ಳುತ್ತಿತ್ತು. ಭೂಮಿ ತಂಪಾಗಿ ಪರಿಸರ ಆಹ್ಲಾದಯಕರವಾಗಿರುತ್ತಿತ್ತು. ಗಿಡಮರಗಳು ನಳನಳಿಸುತ್ತಿದ್ದವು.
ಜನಸಂಖ್ಯೆ ಹೆಚ್ಚಿತು, ಆಧುನಿಕತೆ ಜನರನ್ನು ಆವರಿಸಿಕೊಂಡಿತು. ಕೊಳವೆ ಬಾವಿಗಳು ಬಂದವು. ೨,೦೦೦ ಅಡಿಗಳವರೆಗೂ ಭೂಮಿಯನ್ನು ಕೊರೆದು ಅಂತರ್ಜಲ ಬರಿದು ಮಾಡಲಾಯಿತು. ಆ ನಂತರ ಏನೆಲ್ಲ ಆಯಿತು ಎನ್ನುವುದು ನಮ್ಮ ಕಣ್ಣುಗಳ ಮುಂದೆಯೇ ಇದೆ. ಕೆರೆಗಳನ್ನ ತಿಪ್ಪೆಗುಂಡಿಗಳಾಗಿ ಪರಿವರ್ತಿಸಿಬಿಟ್ಟೆವು. ಮೈಟ್ ಇಸ್ ರೈಟ್… ಯಾರು ಬಲಶಾಲಿಯೋ ಅವರು ಕರೆಗಳನ್ನು ಒತ್ತುವರಿ ಮಾಡಿಕೊಂಡುಬಿಟ್ಟರು. ಉಳಿದಿದ್ದನ್ನು ಹಾಳು ಮಾಡಿ ಎಷ್ಟೇ ಮಳೆ ಬಂದರೂ ಕೆರೆಗಳಲ್ಲಿ ನೀರು ನಿಲ್ಲದಾಯಿತು. ಪ್ರಸ್ತುತ ಜಗತ್ತು ಒಂದು ಜಾಗತಿಕ ಹಳ್ಳಿಯಾಗಿ ಮಾರ್ಪಟ್ಟು ನಮ್ಮ ಬದುಕು ಸಂಪೂರ್ಣವಾಗಿ ಆಧುನಿಕತೆಗೆ ತೆರೆದುಕೊಂಡುಬಿಟ್ಟಿತು. ಜೊತೆಗೆ ಜನಸಂಖ್ಯೆ ಹೆಚ್ಚುತ್ತಾ ಹೋಯಿತು. ಇಲ್ಲಿ ಕೃಷಿ ಮತ್ತು ನೀರಿನ ಸಂರಕ್ಷಣೆಯ ಬಗ್ಗೆ ಎರಡು ಉದಾಹರಣೆಗಳನ್ನು ನಿಮ್ಮ ಮುಂದು ಹೇಳುತ್ತೇನೆ.
ಇಸ್ರೇಲ್ ಮತ್ತು ಕೋಲಾರ
ಒಂದು ಇಸ್ರೇಲ್; ಎರಡು ರೀತಿಯಲ್ಲಿ ಜಗತ್ತಿನಲ್ಲೆ ಪ್ರಸಿದ್ಧಿ ಪಡೆದಿದೆ. ಒಂದು, ಮಿಲಿಟರಿ ಪಡೆಯ ಕೌಶಲ್ಯ. ಎರಡು ಮಳೆ ನೀರು ನಿರ್ವಹಣೆ ಮತ್ತು ಆಧುನಿಕ ಕೃಷಿ ಅಭಿವೃದ್ಧಿಯ ಬೆಳವಣಿಗೆ. ಈ ಪುಟ್ಟ ದೇಶದ ವಿಸ್ತೀರ್ಣ ಕೇವಲ 22,145 ಚ.ಕಿ.ಮೀ. (ಕೋಲಾರ ಜಿಲ್ಲೆ 4,000 ಚ.ಕಿ.ಮೀ) ಜನಸಂಖ್ಯೆ ಕೇವಲ ಒಂದು ಕೋಟಿ. ಈ 22,145 ಚ.ಕಿ.ಮೀ.ಗಳಲ್ಲಿ ಕೇವಲ 5,000 ಚ.ಕಿ.ಮೀ. ಪ್ರದೇಶ ಮಾತ್ರ ವ್ಯವಸಾಯ ಮಾಡಲು ಯೋಗ್ಯ. ಉಳಿದದ್ದು ಬೆಟ್ಟಗುಡ್ಡ ಮರಳುಗಾಡು. ಅದರಲ್ಲೇ ತನ್ನ ದೇಶದ ಜನರಿಗೆ ಬೇಕಾದ ಎಲ್ಲಾ ರೀತಿಯ ಹಣ್ಣು, ತರಕಾರಿ, ದವಸ ಧಾನ್ಯಗಳನ್ನು ಬೆಳೆದುಕೊಂಡು ಉಳಿದ ಪದಾರ್ಥಗಳನ್ನು 2,280 ಮಿಲಿಯನ್ ಡಾಲರ್ ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತದೆ. ಇದರಲ್ಲಿ ಕೃಷಿ ತಂತ್ರಗಾರಿಕೆ ಯಂತ್ರಗಳು, ಅತ್ಯುತ್ತಮ ಬೀಜಗಳು ಸೇರಿವೆ.
- ಇಸ್ರೇಲ್‌ನಲ್ಲಿ ನೀರು ನಿರ್ವಹಣೆ ಮತ್ತು ಕೃಷಿ. / courtesy: Wikipedia
420 ಕಿ.ಮೀ. ಉದ್ದ ಹೆಚ್ಚೆಂದರೆ 115 ಕಿ.ಮೀ.ಗಳ ಅಗಲವಿರುವ ಇಸ್ರೇಲ್‌ನ ಉತ್ತರ ಭಾಗದಲ್ಲಿ ವಾರ್ಷಿಕ 700 ಮಿ.ಮೀ, ಮಧ್ಯಭಾಗದಲ್ಲಿ 400 ಮಿ.ಮೀ ಮತ್ತು ದಕ್ಷಿಣ ಭಾಗದಲ್ಲಿ ಕೇವಲ 25 ಮಿ.ಮೀ ಮಳೆ ಬೀಳುತ್ತದೆ. ಅಂದರೆ ಇಡೀ ದೇಶದಲ್ಲಿ ವಾರ್ಷಿಕ ಸರಾಸರಿ ಮಳೆ 375 ಮಿ.ಮೀ. ಮಾತ್ರ. ಕರ್ನಾಟಕದ ಬಹಳಷ್ಟು ಜಿಲ್ಲೆಗಳಲ್ಲಿ ಇಸ್ರೇಲ್‌ಗಿಂತ ಸರಾಸರಿ ಹೆಚ್ಚು ಮಳೆ ಬೀಳುತ್ತದೆ. ಕೋಲಾರ ಜಿಲ್ಲೆಯಲ್ಲಿ ಸರಾಸರಿ 500 ರಿಂದ 700 ಮಿ.ಮೀ. ಮಳೆ ಬೀಳುತ್ತದೆ.
ಮಳೆ ನೀರನ್ನು ದೇಶದ ಉತ್ತರದಿಂದ ದಕ್ಷಿಣಕ್ಕೆ ರಾಷ್ಟ್ರೀಯ ಜಲ ಕಾಲುವೆಗಳ ಮೂಲಕ ಹರಿಸಲಾಗುತ್ತದೆ. ಜೊತೆಗೆ ಅಂತರ್ಜಲ, ಬಿಸಿ ನೀರು ಬುಗ್ಗೆಗಳು ಮತ್ತು 80% ನೀರನ್ನು ಮರು ಬಳಕೆ ಮಾಡಲಾಗುತ್ತದೆ. ಸಮುದ್ರ ನೀರಿನಿಂದ ಸಂಸ್ಕರಿಸಿದ ನೀರನ್ನು ಸಂಗ್ರಹಿಸಿ ಬೇಕಾದ ಹಾಗೆ ಬಳಸಿಕೊಳ್ಳುಲಾಗುತ್ತಿದೆ. ಮೋಡಗಳ ಮೇಲೆ ಐಯೊಡಿನ್ ನೈಟ್ರೇಟ್ ಚೆಲ್ಲಿ ಮಳೆಯನ್ನು ಸುರಿಸಲಾಗುತ್ತದೆ. ಮಳೆ ನೀರನ್ನು ಸ್ವಲ್ಪವೂ ಪೋಲಾಗಾದಂತೆ ಕಾಂಟೋರ್ ಮೂಲಕ ಹರಿಸಿ ಕೃಷಿ ಕೊಳಗಳು, ಕೆರೆ-ಸರೋವರಗಳು, ಇಂಗು ಗುಂಡಿಗಳಲ್ಲಿ ಸಂಗ್ರಹಿಸಲಾಗುತ್ತದೆ.
ಕೃಷಿಗೂ ಕೂಡ ನೀರನ್ನು ಶುದ್ಧಗೊಳಿಸಿ ಉಪಯೋಗಿಸುತ್ತಾರೆ. ಡ್ರಿಪ್ ನೀರಾವರಿ ಮತ್ತು ಹಸಿರು ಮನೆಗಳ ಒಳಗೆ ಬೆಳೆಸುತ್ತಾರೆ. ಸಾಲುಸಾಲು ಪ್ಲ್ಯಾಸ್ಟಿಕ್ ಪೈಪ್‌ಗಳು ಮತ್ತು ಸಿಮೆಂಟ್ ತೊಟ್ಟಿಗಳನ್ನು ನೆಲದಲ್ಲಿ ಹೂಳಿ ಅವುಗಳಲ್ಲಿ ಗಿಡಗಳನ್ನ ಬೆಳೆಸುತ್ತಾರೆ. ಆ ಗಿಡಗಳಿಗೆ ನೀರು, ಗಾಳಿ ಮತ್ತು ಪೋಷಕಾಂಶಗಳನ್ನ ನೇರವಾಗಿ ಬೇರುಗಳಿಗೆ ತಲುಪುವಂತೆ ಪೈಪುಗಳ ಮೂಲಕ ನೀಡುತ್ತಾರೆ. ಅಂದರೆ ನೀರು, ಗಾಳಿ ಮತ್ತು ಪೋಷಕಾಂಶಗಳು ನೆಲೆದ ಒಳಗೆ ಮತ್ತು ನೆಲದ ಮೇಲೆ ಸ್ವಲ್ಪವೂ ಪೋಲಾಗದಂತೆ ನೋಡಿಕೊಳ್ಳುತ್ತಾರೆ. ಕೆಲವು ಸಂರಕ್ಷಣಾ ದ್ರವಗಳಿದ್ದು ಅದನ್ನ ಸೊಪ್ಪಿಗೆ ತಡವಿದರೆ ಸಾಕು ತಿಂಗಳಾದರೂ ಸೊಪ್ಪು ಬಾಡದೆ ಇರುತ್ತವೆ.
ಇಸ್ರೇಲ್ ವಿಜ್ಞಾನಿಗಳು ಅತ್ಯುತ್ತಮ ಬೀಜ ಪ್ರಭೇದಗನ್ನು ಅಭಿವೃದ್ಧಿಪಡಿಸಿದ್ದಾರೆ. ಅವು ರೋಗ ನಿರೋಧಕ ಮತ್ತು ಹೆಚ್ಚು ತಾಪಮಾನ ಇರುವ ವಾತಾವರಣದಲ್ಲೂ ಕಡಿಮೆ ನೀರಿನಿಂದ ಹೆಚ್ಚು ಗುಣಮಟ್ಟ ಮತ್ತು ಇಳುವರಿಯನ್ನು ಕೊಡುತ್ತವೆ. ಸ್ವಚ್ಚ ನೀರು, ಕಡಿಮೆ ಹಾನಿಕಾರಕ ರಾಸಾಯನಿಕ ಗೊಬ್ಬರಗಳು ಮತ್ತು ಕ್ರಿಮಿನಾಶಕಗಳನ್ನ ಬಳಸುವುದರಿಂದ ಹಣ್ಣು, ತರಕಾರಿ ಮತ್ತು ದವಸ ಧಾನ್ಯಗಳು ಆರೋಗ್ಯ ಪೂರ್ಣವಾಗಿರುತ್ತವೆ. ಇದರಿಂದ ಜನರು ಮತ್ತು ಜಾನುವಾರಗಳ ಆರೋಗ್ಯವೂ ಚೆನ್ನಾಗಿರುತ್ತದೆ. ರೈತರು ಉಪ್ಪು ನೀರಿನಿಂದ ಕೆಲವು ಸಿಹಿ ಹಣ್ಣುಗಳನ್ನು ಬೆಳೆಯುವುದನ್ನು ಕಂಡುಹಿಡಿದಿದ್ದಾರೆ.
ಇಸ್ರೇಲ್ ಕಂಪನಿ ʼಪಿಮಿ ಆಗ್ರೋʼ ಹಣ್ಣು, ತರಕಾರಿಗಳು ಹೆಚ್ಚು ದಿನಗಳು ಕಾಲ ಉಳಿದುಕೊಳ್ಳುವ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಹಣ್ಣು, ತರಕಾರಿ ಗಿಡದಿಂದ ಕಿತ್ತ ಮೇಲೆ 10 ವಾರಗಳ ಕಾಲ ಹಣ್ಣಾಗಿಯೇ ಉಳಿದುಕೊಳ್ಳುವ ವಿಧಾನವನ್ನು ಈಗಾಗಲೇ ಅಭಿವೃದ್ಧಿಪಡಿಸಿದೆ. ಸಂಶೋಧನೆಗಳಿಂದ ಸಮರ್ಥನೀಯ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಬೆಳೆಗಳ ನಷ್ಟ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಇಸ್ರೇಲ್ ಕೃಷಿ ತಂತ್ರಜ್ಞಾನವಂತೂ ಜಗತ್ತಿನಲ್ಲೇ ಅತ್ಯುತ್ತಮ.
- ಇಸ್ರೇಲ್‌ನ ಗೋಧಿ ಬೆಳೆ / courtesy: Wikipedia
ಇನ್ನೊಂದು ಉದಾಹರಣೆಯಂದರೆ ಚೀನಾ ದೇಶದ ಸಾಮೂಹಿಕ ಕೃಷಿ. ನಾನು ಒಂದು ತಿಂಗಳು ಕಾಲ ಕೇಂದ್ರ ಸರಕಾರದ ಮೂಲಕ ಚೀನಾದಲ್ಲಿದ್ದೆ. ಬಹಳಷ್ಟು ಹಳ್ಳಿಗಳನ್ನು ನೋಡಿ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದೆ. ಅಲ್ಲಿ ಸಾಮೂಹಿಕ ಕೃಷಿಯನ್ನು ಮಾಡುತ್ತಾರೆ. ಒಂದು ಪಂಚಾಯಿತಿಯಲ್ಲಿ 50 ಹಳ್ಳಿಗಳು ಇದ್ದರೆ ಅದಕ್ಕೊಂದು ಸಮಿತಿ ಇರುತ್ತದೆ. ಅದರಲ್ಲಿ ಕೃಷಿ ಅಧಿಕಾರಿಗಳು, ಆಡಳಿತ ಅಧಿಕಾರಿಗಳು ಮತ್ತು ರೈತರ ಪ್ರತಿನಿಧಿಗಳಿರುತ್ತಾರೆ. ಒಂದು ಮನೆಗಿಷ್ಟು ಎಂದು ನೆಲವನ್ನು ವಿತರಣೆ ಮಾಡಿರುತ್ತಾರೆ. ಆ ಸಮಿತಿ ಪ್ರತಿವರ್ಷ ಎಷ್ಟು ನೆಲ ಇದೆ, ಎಷ್ಟು ನೀರು ದೊರಕುತ್ತದೆ ಎಂದು ಲೆಕ್ಕ ಹಾಕಿಕೊಳ್ಳುತ್ತದೆ. ಜೊತೆಗೆ ಯಾವ ಯಾವ ಬೆಳೆಗಳನ್ನು ಎಷ್ಟೆಷ್ಟು ಬೆಳೆಯಬೇಕು ಎಂದು ನಿರ್ಧಾರ ಮಾಡುತ್ತದೆ. ಅಂದರೆ ಯಾವೊದೋ ಒಂದು ಬೆಳೆಯನ್ನು ಹೆಚ್ಚೆಚ್ಚು ಬೆಳೆದು ನಷ್ಟ ಮಾಡಿಕೊಳ್ಳುವುದಲ್ಲ. ಮಾರುಕಟ್ಟೆಯಲ್ಲಿ ಅಥವಾ ಪಡಿತರದ ಮೂಲಕ ಮಾರುವಾಗ ಬೇಡಿಕೆ ಇರಬೇಕು. ಅಥವಾ ಯಾವುದೇ ಧಾನ್ಯ ಕಡಿಮೆಯಾಗಿ ಕೃತಕ ಅಭಾವ ಕೂಡ ಸೃಷ್ಟಿಯಾಗಬಾರದು. ಸರಕಾರ ರೈತರಿಗೆ ಉಚಿತವಾಗಿ ಗೊಬ್ಬರ, ಬೀಜಗಳನ್ನು ಕೊಟ್ಟು ನೀರು ಹರಿಸುತ್ತದೆ. ಬೆಳೆ ಬಂದ ಮೇಲೆ ಆ ರೈತನಿಗೆ ಎಷ್ಟು ಬೇಕೊ ಅಷ್ಟನ್ನು ಬಿಟ್ಟು ಉಳಿದಿದ್ದನ್ನು ಸರಕಾರ ಪಡೆದುಕೊಂಡು ಅದಕ್ಕೆ ಸರಕಾರವೇ ಬೆಲೆಯನ್ನು ನಿಗದಿಪಡಿಸಿ ಪಡಿತರ ಮೂಲಕ ಮಾರುತ್ತದೆ. ಬೆಳೆಗಳು ನಷ್ಟವಾದರೂ ರೈತನಿಗೆ ಯಾವುದೇ ಸಮಸ್ಯೆ ಇಲ್ಲ. ಇದು ಚೀನಾದಲ್ಲಿರುವ ಪದ್ದತಿ. ಇದೇ ಪದ್ಧತಿ ಅನೇಕ ದೇಶಗಳಲ್ಲಿ ಇದೆ.
ಕೆ.ಸಿ.ವ್ಯಾಲಿಯಲ್ಲಿ ಕೊಳಕು ನೀರು
ಇನ್ನು ಕೆ.ಸಿ.ವ್ಯಾಲಿ ಬಗ್ಗೆ ಕೆಲವು ವಿಷಯಗಳನ್ನು ಹೇಳುತ್ತೇನೆ. ಕೋರಮಂಗಲ-ಚೆಲಘಟ್ಟ ಜಲಾನಯನ ಯೋಜನೆ. ಬೆಂಗಳೂರಿನಲ್ಲಿ ಕೆರೆಗಳ ಮೂಲಕ ಸಂಗ್ರಹವಾಗುತ್ತಿರುವ ಕೊಳಚೆ ನೀರನ್ನು ಶುದ್ಧೀಕರಿಸಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಸರಬರಾಜು ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. 1,342 ಕೋಟಿ ರೂಪಾಯಿಗಳ ಈ ಯೋಜನೆಯನ್ನು 2016ರಲ್ಲಿ ಪ್ರಾರಂಭಿಸಲಾಯಿತು. 124 ಕಿ.ಮೀ ದೂರ ನೀರು ಹರಿಯುವ ಈ ಯೋಜನೆಯಡಿ 137 ಕೆರಗಳಿಗೆ ನೀರನ್ನು ಹರಿಸಲಾಗುತ್ತಿದೆ. ಪ್ರಸ್ತುತ ಕೋಲಾರ ಜಿಲ್ಲೆಯ 71 ಕೆರೆಗಳು ಮತ್ತು ಚಿಕ್ಕಬಳ್ಳಾಪುರದ 10 ಕೆರೆಗಳಿಗೆ ನೀರನ್ನು ಹರಿಸಲಾಗಿದೆ. ಈ 81 ಕೆರೆಗಳ 50% ಸಾಮರ್ಥ್ಯದಷ್ಟು ಮಾತ್ರ ನೀರನ್ನು ತುಂಬಲಾಗಿದೆ. ದಿನಕ್ಕೆ 440 ದಶಲಕ್ಷ ಲೀಟರುಗಳ ನೀರನ್ನು 6 ಪಂಪ್ ಮನೆಗಳಲ್ಲಿ ಎರಡು ಹಂತಗಳಲ್ಲಿ ಶುದ್ಧೀಕರಿಸಿ ಹರಿಸಲಾಗುತ್ತಿದೆ.
ಇಲ್ಲಿನ ಸಮಸ್ಯೆಯಂದರೆ, ಬೆಂಗಳೂರಿನ ಕೆರೆಗಳಲ್ಲಿ ಸಂಗ್ರಹವಾಗುತ್ತಿರುವ ಈ ನೀರು ಸಂಪೂರ್ಣವಾಗಿ ಶುದ್ಧೀಕರಿಸಿದ ನೀರಲ್ಲ. ಬೆಂಗಳೂರಿನ 40% ಮನೆಗಳಿಗೆ ಸೇಪ್ಟಿ ಟ್ಯಾಂಕ್‌ಗಳೇ ಇಲ್ಲ ಎನ್ನುವುದು ನಿಜವಾದ ಆತಂಕ. ಆ ನೀರೆಲ್ಲ ಚರಂಡಿಗಳ ಮೂಲಕ ಬೆಂಗಳೂರಿನ ಕರೆಗಳಿಗೆ ಹರಿದುಬರುತ್ತದೆ. ಇದನ್ನು ಸಂಪೂರ್ಣವಾಗಿ ಅಂತರರಾಷ್ಟ್ರೀಯ ಪ್ರಮಾಣಿತ ಮಟ್ಟದಲ್ಲಿ ಮೂರು ಹಂತಗಳಲ್ಲಿ ಶುದ್ಧೀಕರಣ ಮಾಡಿದರೆ ಚೆನ್ನಾಗಿತ್ತು. ಆದರೆ ಸದ್ಯಕ್ಕೆ ಎರಡು ಹಂತಗಳಲ್ಲಿ ಮಾತ್ರ ಶುದ್ಧೀಕರಣ ಮಾಡಲಾಗುತ್ತಿದೆ. ಬಹಳಷ್ಟು ದೇಶಗಳಲ್ಲಿ ಚರಂಡಿ ನೀರನ್ನು ಅಂತರರಾಷ್ಟ್ರೀಯ ಪ್ರಮಾಣಿತ ಮಟ್ಟದಲ್ಲಿ ಶುದ್ಧೀಕರಣ ಮಾಡಿ ಉಪಯೋಗುತ್ತಿದ್ದಾರೆ. ಆಸ್ಟ್ರೇಲಿಯ, ಆಫ್ರಿಕಾದ ಕೆಲ ದೇಶಗಳು, ಸಿಂಗಾಪುರ, ದುಬೈ ಇನ್ನೂ ಅನೇಕ ದೇಶಗಳಲ್ಲಿ ಶುದ್ಧೀಕರಿಸಿ ಉಪಯೋಗಸಲಾಗುತ್ತಿದೆ.
ಕೆ.ಸಿ. ಕಣಿವೆಯ ಕಲುಷಿತ ನೀರನ್ನು ಎರಡು ಹಂತಗಳಲ್ಲಿ ಮಾತ್ರ ಶುದ್ಧೀಕರಣ ಮಾಡಿ ಸರಬರಾಜು ಮಾಡುತ್ತಾ ಹೋದರೆ ಮುಂದೆ ಏನಾಗಬಹುದು? ಎನ್ನುವ ಪ್ರಶ್ನೆಗಳು ಕಾಡುತ್ತಿವೆ. ಸದ್ಯಕ್ಕೆ ಕೆಲವು ಹಳ್ಳಿಗಳ ರೈತರಿಗೆ ಲಾಭ ಆಗುತ್ತಿರಬಹುದು? ಆದರೆ, ಇದರ ಬಗ್ಗೆ ನಾವು ಸ್ವಲ್ಪ ಗಂಭೀರವಾಗಿ ಆಲೋಚನೆ ಮಾಡಬೇಕಿದೆ. ನಮ್ಮ ಜಿಲ್ಲೆ ಮಳೆ ನೀರಿನ ಮೇಲೆ ಆಧಾರಪಟ್ಟಿದ್ದು ಮಳೆ ನೀರು ಕೆರಗಳಿಗೆ ಹರಿದು ನೆಲದಲ್ಲಿ ಇಂಗಿ ಅಂತರ್ಜಲ ತಲುಪುತ್ತದೆ. ಜಿಲ್ಲೆಯ ಕೆಲವು ಭಾಗಗಳ ಅಂತರ್ಜಲ ಈಗ ಬೆಂಗಳೂರಿನ ಕೊಳಚೆ ನೀರಿನಿಂದ ನಿಧಾನವಾಗಿ ಮಿಶ್ರಣಗೊಳ್ಳುತ್ತಿದೆ. ಈ ಕೊಳಚೆ ನೀರಿನಲ್ಲಿ ಕೈಗಾರಿಕೆಗಳು ಹರಿಸುವ ರಾಸಾಯನಿಕಗಳು, ಸೇಪ್ಟಿ ಟ್ಯಾಂಕ್‌ಗಳಿಲ್ಲದ ಮನೆಗಳಿಂದ ಹರಿದುಬರುವ ಚರಂಡಿ ನೀರು ನೈಟ್ರೇಟ್ಸ್, ಬ್ಯಾಕ್ಟೀರಿಯಾ-ವೈರಸ್‌ಗಳು ತುಂಬಿಕೊಂಡಿವೆ. ಜೊತೆಗೆ ಈ ನೀರಿನಲ್ಲಿ ಕಾರ್ಖಾನೆಗಳು ಬಿಡುಗಡೆ ಮಾಡುವ ಬಣ್ಣಗಳು, ಜವಳಿ, ಉಡುಪು, ಡಿಸ್ಟಿಲರಿ, ಆಸ್ಪತ್ರೆ ತ್ಯಾಜ್ಯ, ಆಟೋಮೊಬೈಲ್ ಮತ್ತು ಪ್ಲಾಸ್ಟಿಕ್ ವಿಷವಸ್ತುಗಳು ಸೇರಿವೆ.
ಬೆಂಗಳೂರಿನ ಕೊಳಚೆ ನೀರನ್ನು ಸರಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೂರು ಅಂತಗಳಲ್ಲಿ ಶುದ್ಧೀಕರಣ ಮಾಡಿ ಹರಿಸಿದರೆ ಸ್ವಲ್ಪ ಮಟ್ಟಗೆ ಸುರಿಕ್ಷಿತ ಎನ್ನಬಹುದು. ಅದನ್ನು ನಿರಂತರಾಗಿ ವೈಜ್ಞಾನಿಕವಾಗಿ ಮಾನಿಟರ್ ಮಾಡಬೇಕಿದೆ. ಆದರೆ ನಮ್ಮ ವ್ಯವಸ್ಥೆಯಲ್ಲಿ ಎಷ್ಟರ ಮಟ್ಟಗೆ ಸಾಧ್ಯ ಎನ್ನುವ ಪ್ರಶ್ನೆ ಏಳುತ್ತದೆ. ಇದೇ ರೀತಿ ನೀರನ್ನು ಹರಿಸಿದರೆ ಮುಂದಿನ ದಿನಗಳಲ್ಲಿ ಜನರೂ ಜಾನುವಾರಗಳಿಗೂ ಮತ್ತು ಬೆಳೆಗಳಿಗೂ ತೊಂದರೆಯಾಗುತ್ತದೆ ಅನ್ನುವುದಂತೂ ಗ್ಯಾರಂಟಿ. ಇದೊಂದು ರೀತಿಯಲ್ಲಿ ಸ್ಲೊ ಪಾಯಿಸನ್ ಇದ್ದಂತೆ.
ಚಿನ್ನದ ಗಣಿಗಳಲ್ಲಿರುವ ನೀರೇ ವಾಸಿ
ಬೆಂಗಳೂರಿನ ಕೊಳಚೆ ನೀರಿಗಿಂತ ಕೋಲಾರ ಚಿನ್ನದ ಗಣಿಗಳಲ್ಲಿರುವ ನೀರು ಎಷ್ಟೋ ವಾಸಿ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆ ನೀರನ್ನು ಒಂದು ಹಂತದಲ್ಲಿ ಮಾತ್ರ ಶುದ್ಧೀಕರಣ ಮಾಡಿದರೂ ಸಾಕು, ಕೃಷಿಗೆ ಮತ್ತು ಜಾನುವಾರುಗಳಿಗೆ ಉಪಯೋಗಿಸಬಹುದು. ಎರಡು ಹಂತಗಳಲ್ಲಿ ಶುದ್ಧೀಕರಣ ಮಾಡಿದರೆ ಮನುಷ್ಯರೂ ಕುಡಿಯಬಹುದು. ಬೇರೆ ಯೋಜನಗಳಂತೆ ಇದಕ್ಕೆ ಹೆಚ್ಚು ಹಣ ಖರ್ಚಾಗುವುದಿಲ್ಲ. ಆದರೆ ನಮ್ಮವರು ಅದರ ಬಗ್ಗೆ ನಿರ್ಲಕ್ಷೆ ತೋರಿಸುತ್ತಿದ್ದಾರೆ. ಈಗಾಗಲೇ ಈ ನೀರನ್ನು ಬಿಇಎಮ್‌ಲ್ ನಗರದ ಕಾಲೋನಿಗಳಲ್ಲಿ ಕುಡಿಯಲು ಉಪಯೋಗಿಸಲಾಗುತ್ತಿದೆ ಎಂದು ಕೇಳಿದ್ದೇನೆ.
ಕೊನೆಮಾತು:
ನಾವು ಮಾತ್ರ ಸ್ವಚ್ಛ ನೀರು ಕಡಿದರೆ ಸಾಕಾಗುವುದಿಲ್ಲ. ನಮ್ಮ ಸುತ್ತಲಿನ ಪರಿಸರದಲ್ಲೂ ನೀರು ಸ್ವಚ್ಛವಾಗಿರಬೇಕು. ಮರಗಿಡ, ಪಕ್ಷಿ-ಪ್ರಾಣಿಗಳಿಗೂ ಸ್ವಚ್ಛ ನೀರು ದೊರಕಬೇಕು. ನಮಗೆ ಆಹಾರ ಕೊಡುವ ಭತ್ತ, ರಾಗಿ, ತೊಗರಿ ಯಾವುದೇ ಬೆಳೆಗಳಾಗಿಲಿ; ಹಣ್ಣ-ತರಕಾರಿ ಕೊಡುವ ಗಿಡಗಳಿಗೂ ಸ್ವಚ್ಛ ನೀರು ದೊರಕಬೇಕು. ಯಾಕೆಂದರೆ ಅವು ತಯಾರು ಮಾಡಿಕೊಡುವುದನ್ನು ನಾವು ತಿನ್ನಬೇಕಲ್ಲವೆ? ಅವು ಅಶುದ್ಧ, ಕಲ್ಮಷ ನೀರು ಕುಡಿದು ನಮಗೆ ಪರಿಶುದ್ಧ ಆಹಾರ ಕೊಡಲು ಸಾಧ್ಯವಿಲ್ಲ. ಇದೆಲ್ಲವನ್ನೂ ನಾವು ಆಲೋಚನೆ ಮಾಡಬೇಕಿದೆ. ಇಸ್ರೇಲ್‌ನಲ್ಲಿ ಬೆಳೆಯುವ ಎಲ್ಲಾ ಬೆಳೆಗಳಿಗೂ ಶುದ್ಧ ನೀರನ್ನೆ ಉಣಿಸುತ್ತಾರೆ. ಆದರೆ ನಾವು ಕೆ.ಸಿ.ಕಣವೆಯ ಕೊಳಚೆ ನೀರನ್ನು ನಮ್ಮ ಕೆರೆಗಳಿಗೆ ತುಂಬಿಸಿಕೊಳ್ಳುತ್ತಿದ್ದೇವೆ.