ಟ್ಯೂಷನ್ ಫಿಸ್ ಹೊರತಾಗಿ ಇತರೆ ಯಾವುದೇ ವಂತಿಗೆ, ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ
ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಒಳ್ಳೆಯ ಸುದ್ದಿ ನೀಡಿದ್ದು, 2019-20ನೇ ಸಾಲಿನಲ್ಲಿ ಶೇ.70ರಷ್ಟು ಬೋಧನಾ ಶುಲ್ಕವನ್ನು ಮಾತ್ರ ಪಡೆಯಬೇಕು ಎಂದು ಹೇಳಿದ್ದಾರೆ.
ಈ ಮೂಲಕ ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ಫುಲ್ ಫೀಸ್ ವಸೂಲಿ ಮಾಡುವ ಖಾಸಗಿ ಶಾಲೆಗಳ ವರಸೆಗೆ ಸರಕಾರ ಕಡಿವಾಣ ಹಾಕಿದ್ದು, ಪೋಷಕರು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಬಿಎಸ್‌ಸಿ, ಐಸಿಎಸ್ಸಿ ಹಾಗೂ ಸ್ಟೇಟ್ ಸಿಲೆಬಸ್ ಪಠ್ಯವನ್ನು ಬೋಧಿಸುವ ಎಲ್ಲ ಖಾಸಗಿ ಶಾಲೆಗಳು 2019-20ನೇ ಸಾಲಿನಲ್ಲಿ ಶೇ.70ರಷ್ಟು ಬೋಧನಾ ಶುಲ್ಕ ಪಡೆಯಬೇಕು. ಇದರ ಹೊರತಾಗಿ ಉಳಿದ ಯಾವುದೇ ಅಭಿವೃದ್ಧಿ ಶುಲ್ಕ, ವಂತಿಗೆ ಪಡೆಯುವಂತಿಲ್ಲ ಎಂದು ಆದೇಶಿಸಿದರು.
ಕಂತುಗಳಲ್ಲಿ ಪಾವತಿ
ಸದ್ಯಕ್ಕೆ ನಿಗದಿಪಡಿಸಿರುವ ಶುಲ್ಕವನ್ನು ಎರಡು ಇಲ್ಲವೇ ಮೂರು ಕಂತುಗಳಲ್ಲಿ ಪಾವತಿಸಲು ಪೋಷಕರಿಗೆ ಅವಕಾಶ ನೀಡಬೇಕು. ಈ ಆದೇಶವನ್ನು ಸರಕಾರ ಮೀರುವಂತಿಲ್ಲ. ಜತೆಗೆ; ಶಾಲೆಗಳು ಮತ್ತು ಪೋಷಕರಿಂದ ಬರುವ ದೂರುಗಳ ನಿರ್ವಹಣೆಗೆ ಪ್ರತಿ ಜಿಲ್ಲೆ, ರಾಜ್ಯದ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಸಮಾಲೋಚನೆ ನಡೆಸಿದ ನಂತರ ನಿರ್ಧಾರ ಕೈಗೊಳ್ಳಲಾಗಿದೆ. ಕೋವಿಡ್ ಸಂಕಷ್ಟದಿಂದ ಪೋಷಕರು, ಶಾಲೆಗಳ ಆಡಳಿತ ಮಂಡಳಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನ ನೀಡುವುದಕ್ಕೂ ಕಷ್ಟವಾದ ಪರಿಸ್ಥಿತಿ ಇದೆ ಎಂದು ಸುರೇಶ್ ಕುಮಾರ್ ಹೇಳಿದರು.
ಪೂರ್ಣ ಶುಲ್ಕ ಪಾವತಿಸಿದ್ದರೆ ಮುಂದಿನ ವರ್ಷ ಡಿಸ್ಕೌಂಟ್
ಈಗಾಗಲೇ ಪೂರ್ಣ ಪ್ರಮಾಣದ ಬೋಧನಾ ಶುಲ್ಕವನ್ನು ಪಾವತಿಸಿದ್ದರೆ ಯೋಚನೆ ಮಾಡಬೇಕಿಲ್ಲ. ಅಂಥ ವಿದ್ಯಾರ್ಥಿಗಳು ಮುಂದಿನ ವರ್ಷ ಒಟ್ಟಾರೆ ಬೋಧನಾ ಶುಲ್ಕದಲ್ಲಿ ಶೇ.೩೦ರಷ್ಟು ರಿಯಾಯಿತಿ ಕೊಟ್ಟು ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಈ ಬಗ್ಗೆ ಎಲ್ಲ ಖಾಸಗಿ ಶಾಲೆಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು ಸುರೇಶ್ ಕುಮಾರ್.