ಬೆಂಗಳೂರು: “ಕಾಣೆಯಾದವರ ಬಗ್ಗೆ ಪ್ರಕಟಣೆ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು;. ಬೆಂಗಳೂರು, ಮೈಸೂರು ಹಾಗೂ ಬ್ಯಾಂಕಾಕ್ನಲ್ಲಿ ಸುಮಾರು 60 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರದ ವಿಶೇಷ ಪಾತ್ರದಲ್ಲಿ ಗ್ಲಾಮರ್ ಬೆಡಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ.
ಯಾರ ಸ್ವಭಾವವನ್ನು ಅವರ ವೇಷಭೂಷಣದಿಂದ ನಿರ್ಧರಿಸಲು ಸಾಧ್ಯವಿಲ್ಲ. ಅವರ ವೇಷಭೂಷಣವೇ ಬೇರೆ. ಸ್ವಭಾವವೇ ಬೇರೆ ಎಂಬುದನ್ನು ನಿರ್ದೇಶಕರು ಆಶಿಕಾ ರಂಗನಾಥ್ ಅವರ ಪಾತ್ರದ ಮೂಲಕ ಈ ಚಿತ್ರದಲ್ಲಿ ತೋರಿಸುತ್ತಿದ್ದಾರೆ.
ರಂಗಾಯಣ ರಘು, ರವಿಶಂಕರ್, ತಬಲ ನಾಣಿ, ಚಿಕ್ಕಣ್ಣ, ತಿಲಕ್ ಮುಂತಾದ ಅನುಭವಿ ಕಲಾವಿದರ ತಾರಾಬಳಗ ಈ ಚಿತ್ರದಲ್ಲಿದೆ. ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದಿರುವ ದಿಲ್ ವಾಲ, ಶಕ್ತಿ, ರಾಂಬೋ ೨ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಅನಿಲ್ ಕುಮಾರ್ ನಿರ್ದೇಶನದ ಏಳನೇ ಚಿತ್ರವಿದು.
ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಭಾಷಣೆ ಬರೆದಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಶಿವಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಏ.ಜೆ ಟಾಕೀಸ್ ಹಾಗೂ ಬಿಲ್ವ ಎಂಟರ್ಟೇನ್ಮೆಂಟ್ ವತಿಯಿಂದ ಈ ಚಿತ್ರ ನಿರ್ಮಾಣವಾಗಿದೆ.
ಕೌಟುಂಬಿಕ ಕಥಾಹಂದರದೊಂದಿಗೆ, ಮನೋರಂಜನೆಯ ಮಹಾಪೂರವನ್ನೇ ಹರಿಸಲು “ಕಾಣೆಯಾದವರ ಬಗ್ಗೆ ಪ್ರಕಟಣೆ” ಮುಂಬರುವ ಮೇ ತಿಂಗಳಲ್ಲಿ ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರಕಟವಾಗಲಿದೆ.
Lead photo: @AshikaRanganath