exclusive
M Krishnappa Chikkaballapur
ಚಿಕ್ಕಬಳ್ಳಾಪುರ: ಅಂಕೆ ಮೀರಿದ ಆಕಾಂಕ್ಷಿಗಳ ಕಾರಣಕ್ಕೆ ಅಳೆದು ತೂಗಿ, ತೂಗಿ ಅಳೆದು ಕೊನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಪ್ರೊ.ಕೋಡಿ ರಂಗಪ್ಪ ಅವರನ್ನು ಬೆಂಬಲಿಸಲು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ.
ಚುನಾವಣೆಯೇ ಇಲ್ಲದೆ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರನ್ನು ಅವಿರೋಧ ಆಯ್ಕೆ ಮಾಡಬೇಕೆಂಬ ಉದ್ದೇಶದಿಂದ ನಡೆದ ಸಾಹಿತ್ಯಾಸಕ್ತರ ಸಭೆಯ ಆಶಯಕ್ಕೆ ಕೊಂಚ ಬಲ ಬಂದಿದ್ದು, ರಾಜ್ಯದಲ್ಲಿಯೇ ಮಾದರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಗಬೇಕೆಂಬ ಉದ್ದೇಶ ಸಾಕಾರವಾಗುವ ಸಾಧ್ಯತೆ ಬಹುತೇಕ ಗೋಚರಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಕನ್ನಡ ಮನಸ್ಸಿನ ವ್ಯಕ್ತಿಗಳೆಲ್ಲ ಸೇರಿ ಈವರೆಗೂ ನಾಲ್ಕೈದು ಸಭೆಗಳನ್ನು ನಡೆಸಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯನ್ನೇ ಎತ್ತಿಹಿಡಿಯಬೇಕು ಎಂಬ ಅಭಿಪ್ರಾಯಕ್ಕೆ ಈ ಹಿಂದಿನಂತೆ ಈ ಬಾರಿಯೂ ಬಂದಿದ್ದಾರೆ.
ಒಟ್ಟು 14 ಜನರು ಅಧ್ಯಕ್ಷ ಪದವಿಯ ಆಕಾಂಕ್ಷಿಗಳಿದ್ದು, ಈ ಪೈಕಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಗೊಂದಲ ಏರ್ಪಟ್ಟಿತ್ತು. ಇಷ್ಟೆಲ್ಲ ಆಕಾಕ್ಷಿಗಳ ಪೈಕಿ ಓರ್ವ ಸಮರ್ಥರನ್ನು ಆಯ್ಕೆ ಮಾಡಿ ಬೆಂಬಲಿಸುವ ನಿರ್ಧಾರ ಸಭೆಯಿಂದ ಹೊರಹೊಮ್ಮಿದ್ದು, ಸಾಹಿತ್ಯಾಸಕ್ತರಿಗೆ ಸಂತಸ ಉಂಟು ಮಾಡಿದೆ.
ಸಮಾನ ಮನಸ್ಕರ ಸಮಿತಿ
ವಿಶ್ರಾಂತ ಪ್ರಾಂಶುಪಾಲ ಪ್ರೊ.ನಿಂಗಪ್ಪ, ಹಿರಿಯ ಪತ್ರಕರ್ತ ಶಿವರಾಮು, ಹಿರಿಯ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಸೇರಿದಂತೆ ಇನ್ನಷ್ಟು ಬಹುತೇಕ ಸಾಹಿತಿಗಳು, ಹಿರಿಯರು ಕಟ್ಟಿ ಬೆಳೆಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಇನ್ನಷ್ಟು ಬಲಪಡಿಸಿ ಅದನ್ನು ರಾಜ್ಯದಲ್ಲಿಯೇ ಮಾದರಿ ಪರಿಷತ್ತನ್ನಾಗಿ ರೂಪಿಸುವ ಪ್ರಯತ್ನಗಳ ನಡುವೆಯೇ ಕೇಂದ್ರ ಸಾಹಿತ್ಯ ಪರಿಷತ್ತಿನ ಚುನಾವಣೆಯ ಪ್ರಕ್ರಿಯೆಗಳು ಪ್ರಾರಂಭಿಸಲು ಹಸಿರು ನಿಶಾನೆ ಸಿಕ್ಕ ಬೆನ್ನಲ್ಲೆ ಇದೀಗ ಚಿಕ್ಕಬಳ್ಳಾಪುರ ಕಸಾಪ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲು ಸಮಾನ ಮನಸ್ಕರ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಗೆ ಕೋಡಿ ರಂಗಪ್ಪ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.
ಶನಿವಾರದಂದು ಚಿಕ್ಕಬಳ್ಳಾಪುರದಲ್ಲಿ ಸಭೆ ಸೇರಿದ ಈ ಸಮಿತಿಯು, ಬೆಳಗ್ಗೆ ಸಭೆ ನಡೆಸಿ ಸಮಗ್ರವಾಗಿ 14 ಜನ ಆಕಾಂಕ್ಷಿಗಳ ಬಗ್ಗೆ ಸಮಾಲೋಚನೆ ನಡೆಸಿತು. ಗಮನಾರ್ಹವೆಂದರೆ; ಸಮಿತಿ ಸಭೆಯ ನಂತರ ಆಕಾಂಕ್ಷಿಗಳೊಂದಿಗೆ ಒಂದು ಸಭೆಯನ್ನು ಆಯೋಜಿಸಿತ್ತು. ಸುದೀರ್ಘವಾಗಿ ನಡೆದ ಚರ್ಚೆಯ ನಂತರ ಮಧ್ಯಾಹ್ನ ನಡೆದ 14 ಮಂದಿಯ ಆಕಾಂಕ್ಷಿಗಳಲ್ಲಿ ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಬೇಕು? ಯಾರನ್ನು ಬಿಡಬೇಕು? ಎನ್ನುವ ಕೌತುಕಗಳೇ ಬೆಳಗ್ಗೆ ನಡೆದ ಸಮಿತಿ ಸಭೆಯ ಸದಸ್ಯರಲ್ಲಿ ಹೆಚ್ಚಾಗತೊಡಗಿದ್ದವು. ಮಧ್ಯಾಹ್ನದ ಹೊತ್ತಿಗೆ ಆಕಾಂಕ್ಷಿಗಳ ಸಮ್ಮುಖದಲ್ಲಿ ಕೊನೆಗೆ ಸಮಿತಿ ಅಧ್ಯಕ್ಷ ಕೋಡಿ ರಂಗಪ್ಪ ಅವರನ್ನೇ ಮುಂದಿನ ಜಿಲ್ಲಾ ಕಸಾಪ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯನ್ನಾಗಿಸಿ ಅವರನ್ನೇ ಬೆಂಬಲಿಸಲು ಅಚ್ಚರಿಯ ನಿರ್ಧಾರ ಕೈಗೊಳ್ಳಲಾಯಿತು.
ಈ ಸಮಿತಿಯಲ್ಲಿ ಕೋಡಿ ರಂಗಪ್ಪ, ವೈ.ಎಲ್.ಹನುಮಂತರಾವ್, ವಿ.ಕೃಷ್ಣ, ರೂಪಸಿ ರಮೇಶ್, ಎಸ್.ವಿ.ನಾಗರಾಜರಾವ್, ಗೋಪಾಲಗೌಡ ಕಲ್ವಮಂಜಲಿ, ದ್ವಾರಕಾನಾಥ ನಾಯ್ಡು, ಪ್ರೇಮಲೀಲಾ ವೆಂಕಟೇಶ್, ಸರಸಮ್ಮ, ಬಿ.ಆರ್.ಕೃಷ್ಣ, ಸುಧಾ ವೆಂಕಟೇಶ್, ಮಂಜುನಾಥ್, ಕುಂಟಗಡ್ಡೆ ಲಕ್ಷ್ಮಣ್ ಸೇರಿದಂತೆ ಇನ್ನಿತರರು ಇದ್ದರು.
ಕೋಡಿ ರಂಗಪ್ಪ ಅವರೇ ಏಕೆ?
ಸದ್ಯಕ್ಕೆ ಜಿಲ್ಲೆಯಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಗಡಿ ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಕನ್ನಡದ ಚಟುವಟಿಕೆಗಳಿಗೆ ಕಸುವು ತುಂಬುವುದು ಎಲ್ಲ ತಾಲ್ಲೂಕುಗಳ ಕಸಾಪ ಘಟಕಗಳ ಮುಖ್ಯಸ್ಥರು, ಸಾಹಿತಿಗಳ ಉದ್ದೇಶವಾಗಿದೆ. ಜೊತೆಗೆ, ಹಾವೇರಿಯಲ್ಲಿ ಫೆಬ್ರವರಿ 26ರಿಂದ 28ರವರೆಗೆ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯಲ್ಲೇ ಆತಿಥ್ಯ ನೀಡುವ ಆಲೋಚನೆಯೂ ಇರುವ ಹಿನ್ನೆಲೆಯಲ್ಲಿ ಕೋಡಿ ರಂಗಪ್ಪ ಅವರೇ ಇದಕ್ಕೆಲ್ಲ ಸಮರ್ಥ ವ್ಯಕ್ತಿ ಎಂಬ ಅಭಿಪ್ರಾಯ ಸಮಾನ ಮನಸ್ಕರ ಸಭೆಯಲ್ಲಿ ಬಲವಾಗಿ ವ್ಯಕ್ತವಾಯಿತು. ಅದರಂತೆ ಕೋಡಿ ರಂಗಪ್ಪ ಅವರು ಜಿಲ್ಲಾ ಸಚಿವರು, ಜಿಲ್ಲೆಯ ಹಿರಿಯ ಅಧಿಕಾರಿಗಳ ಹಾಗೂ ಪರಿಷತ್ತಿನ ಕೇಂದ್ರ ಸಮಿತಿ ಜತೆ ಸಮರ್ಥವಾಗಿ ವ್ಯವಹರಿಸುವ ಚಾಕಚಕ್ಯತೆಯನ್ನು ಹೊಂದಿದ್ದು, ಅವರ ನೇತೃತ್ವದಲ್ಲೇ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಸಭೆ ವ್ಯಕ್ತಪಡಿಸಿದೆ. ಇದಕ್ಕೆ ಕೋಡಿ ರಂಗಪ್ಪ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಒಮ್ಮತವಾದರೆ ಇರಲಿ ಎಂದ ಪ್ರೊಫೆಸರ್
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿಯಲು ಸಿದ್ಧ ಎಂದಿರುವ ಕೋಡಿ ರಂಗಪ್ಪ ಅವರು, ಅದಕ್ಕೊಂದು ಷರತ್ತು ಹಾಕಿದ್ದಾರೆ. ಅವಿರೋಧವಾಗಿ ಆಯ್ಕೆ ಮಾಡುವುದಾದರೆ ಆಗಲಿ, ಇಲ್ಲವಾದರೆ ಬೇಡ ಎಂದು ಕಡ್ಡಿತುಂಡು ಮಾಡಿದ ಹಾಗೆ ಹೇಳಿದರಾದರೂ ಸಭೆಯ ನಿರ್ಧಾರಕ್ಕೆ ತಲೆಬಾಗುವ ಇಂಗಿತವನ್ನೂ ವ್ಯಕ್ತಪಡಿಸಿದರು.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಅಭಿಪ್ರಾಯ ಹಂಚಿಕೊಂಡ ಅವರು;
“ಒಮ್ಮತವಾಗಿ ಆಯ್ಕೆಯಾದರೆ ಕೆಲಸ ಮಾಡಲು ಖುಷಿ ಇರುತ್ತದೆ. ಎಲ್ಲರ ಬೆಂಬಲವೂ ಇರುತ್ತದೆ. ಇಲ್ಲವಾದರೆ ಅನಗತ್ಯವಾಗಿ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಅಂತಹ ಅಧ್ಯಕ್ಷ ಪಟ್ಟ ಖಂಡಿತಾ ಬೇಡ. ಕನ್ನಡದ ಕೆಲಸ ಮಾಡಬೇಕಾದರೆ ಎಲ್ಲ ಕೈಗಳು ಒಟ್ಟಾಗಬೇಕು. ಎಲ್ಲರೊಳಗೊಂದಾಗಿ ನಾನು ಇರುವೆ” ಎಂದಿದ್ದಾರೆ.
ಆಕಾಂಕ್ಷಿಗಳು ಯಾರು ಯಾರು?
ಮಂಚನಬಲೆ ಶ್ರೀನಿವಾಸ್, ಎಂ.ಕೆಂಪಣ್ಣ, ದೇವತಾ ದೇವರಾಜು, ಕುಂದಲಗುರ್ಕಿ ಮಂಜುನಾಥ್, ಕೆ.ವಿ.ಪ್ರಕಾಶ್, ಎ.ಎಂ.ತ್ಯಾಗರಾಜ್, ವೈ.ಎನ್.ರಾಮಚಂದ್ರ ರೆಡ್ಡಿ, ಟಿ.ವಿ.ಚಂದ್ರಶೇಖರ್, ಪಿ.ಎಂ.ಚಲಪತಿಗೌಡ, ಬಿ.ವಿ.ಶ್ರೀರಾಮಯ್ಯ, ಯಲುವಹಳ್ಳಿ ಸೊಣ್ಣೇಗೌಡ, ಸಿ.ಮಲ್ಲಿಕಾರ್ಜುನಯ್ಯ, ಮುಂತಾದವರು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆಂಬ ಮಾಹಿತಿ ಇದೆ. ಒಟ್ಟಾರೆಯಾಗಿ ಚಿಕ್ಕಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ವಿಚಾರದಲ್ಲಿ ರಾಜ್ಯಕ್ಕೆ ಮಾದರಿಯಾಗುವ ಹಾಗೂ ಗುಣಾತ್ಮಕವಾದ ಸಂದೇಶ ಸಾರುವ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.
ಯಾರಾದರೂ ಸ್ಪರ್ಧಿಸಲು ಬಯಸಿದರೆ..
ಒಂದು ವೇಳೆ ಮುಂದಿನ ದಿನಗಳಲ್ಲಿ ಜಿಲ್ಲಾ ಕಸಾಪ ಆಧ್ಯಕ್ಷ ಗಾದಿಗೆ ಯಾರಾದರೂ ಸ್ಪರ್ಧೆ ಮಾಡಲು ಬಯಸಿದರೆ ಅವರ ಮನವೊಲಿಸುವ ಕೆಲಸ ನಾವೆಲ್ಲರೂ ಮಾಡೊಣ. ಆದಾಗ್ಯೂ ಸ್ಪರ್ಧೆಯೇ ಎದುರಾದರೆ ನಾವೆಲ್ಲಾ ಒಟ್ಟಾಗಿ ಮತದಾರರ ಮನೆಮನೆಗೂ ಹೋಗಿ ಕೋಡಿ ರಂಗಪ್ಪ ಅವರ ಪರವಾಗಿಯೇ ಮತ ಕೇಳುವ ನಿರ್ಧಾರವನ್ನೂ ಶನಿವಾರದ ಸಭೆಯಲ್ಲಿ ಕೈಗೊಳ್ಳಲಾಯಿತು.
ಕನ್ನಡ ಕೆಲಸ ಮಾಡುವ ವಿಚಾರದಲ್ಲಿ ವಿರೋಧ -ಪ್ರತಿರೋಧ ಎನ್ನುವುದು ಇರಬಾರದು. ಎಲ್ಲರೂ ಒಟ್ಟಿಗೆ ಸೇರಿದರೆ ಜಿಲ್ಲೆಯಲ್ಲಿ ಒಂದಿಷ್ಟು ಕೆಲಸಗಳನ್ನು ಮಾಡಬಹುದು. ಈ ವಿಷಯ ಎಲ್ಲರಿಗೂ ಗೊತ್ತಿದೆ. ಸಮಿತಿಯಲ್ಲಿದ್ದ ಪ್ರತಿಯೊಬ್ಬರೂ ನನ್ನನ್ನು ಬೆಂಬಲಿಸಿದ್ದಾರೆ.
-ಪ್ರೊ.ಕೋಡಿ ರಂಗಪ್ಪ