ಮೈಸೂರು: ಕನ್ನಡ ರಂಗಭೂಮಿ ಇನ್ನೊಂದು ಎತ್ರರದತ್ತ ಹೊರಟಿದೆ. ಕುವೆಂಪು ಅವರ ʼಮಲೆಗಳಲ್ಲಿ ಮದುಮಗಳುʼ ಕಾದಂಬರಿಯ ರಂಗ ಪ್ರಯೋಗವಾದ ಮೇಲೆ ಕನ್ನಡದ ಶ್ರೇಷ್ಟ ಕೃತಿಗಳಲ್ಲಿ ಒಂದಾದ, ಪ್ರಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ಬರೆದಿರುವ ʼಪರ್ವʼ ಬೃಹತ್ ಕಾದಂಬರಿ ನಾಟಕವಾಗಿ ಮೂಡಿಬರುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು, ಪರ್ವ ಕಾದಂಬರಿಯ ರಂಗ ಪ್ರಯೋಗವು ಮಹತ್ತ್ವಪೂರ್ಣವಾದದ್ದು ಎಂದರು.
ಕನ್ನಡದ ಮಹಾನ್ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪನವರ ಪರ್ವ ಬೃಹತ್ ಕಾದಂಬರಿಯನ್ನು ಖ್ಯಾತ ನಿರ್ದೇಶಕ ಪ್ರಕಾಶ್ ಬೆಳವಾಡಿಯವರು ರಂಗಪಠ್ಯವನ್ನಾಗಿಸಿದ್ದಾರೆ. ನಿರ್ದೇಶನದಲ್ಲಿ ಏಳೂವರೆ ಗಂಟೆಗಳ ನಾಟಕವಾಗಿ ಪರ್ವ ಪ್ರದರ್ಶನಕ್ಕೆ ಸಿದ್ಧವಾಗುತ್ತಿದೆ. 40ಕ್ಕೂ ಹೆಚ್ಚು ಕಲಾವಿದರು ವಿವಿಧ ಪಾತ್ರಗಳನ್ನು ಮಾಡುತ್ತಿದ್ದು, ಎಲ್ಲರೂ ಅಭ್ಯಾಸದಲ್ಲಿ ನಿರತರಾಗಿದ್ದಾರೆ ಎಂದು ಅವರು ಹೇಳಿದರು.
ಈ ರಂಗಪಠ್ಯದ ಪೂರ್ವರಂಗವಾಗಿ ಮತ್ತು ಪರ್ವ ರಂಗ ಪ್ರಸ್ತುತಿಯ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪರ್ವ ಕಾದಂಬರಿ ಮತ್ತು ರಂಗಪಠ್ಯದ ವಿಚಾರ ಸಂಕಿರಣವನ್ನು ನಡೆಸಲಾಗುತ್ತಿದೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ಇದೇ ಫೆ. 21ರಂದು ನಗರದ ಕಲಾಮಂದಿರದಲ್ಲಿ ಪರ್ವ ವಿರಾಟ್ ದರ್ಶನ ಶೀರ್ಷಿಕೆಯಡಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದ ಅವರು; 21ರಂದು ಬೆಳಗ್ಗೆ 10ಕ್ಕೆ ವಿಚಾರ ಸಂಕಿರಣ ಉದ್ಘಾಟನೆ ನಡೆಯಲಿದ್ದು, ಶತಾವಧಾನಿ ಆರ್. ಗಣೇಶ್ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 2.15ರಿಂದ ಪರ್ವ ರಂಗರೂಪದ ಬೀಜ ಚಿಗುರೊಡೆದ ಬಗೆ ಕುರಿತು ನಾಟಕ ನಿರ್ದೇಶಕ ಪ್ರಕಾಶ್ ಬೆಳವಾಡಿ ಮಾತನಾಡಲಿದ್ದಾರೆ. 3.15ಕ್ಕೆ ಪರ್ವ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪ ಮಾತನಾಡಲಿದ್ದಾರೆಂದು ತಿಳಿಸಿದರು.
ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಗಿರಿಜನ ಉಪಯೋಜನೆಯಡಿಯಲ್ಲಿ ರಂಗಾಯಣ ಮೈಸೂರು ಪ.ಪಂಗಡ ಜನಾಂಗಗಳು ವಾಸವಿರುವ ಹಾಡಿಗಳಲ್ಲಿ ಸಾಮಾಜಿಕ ಅರಿವು ಮೂಡಿಸಲು ಗಿರಿಪಯಣ, ನಮ್ಮ ಜನ ನಮ್ಮ ಸಂಸ್ಕೃತಿ ಗಿರಿಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೊಡಗು ಜಿಲ್ಲೆಯ ನಾಗರಹೊಳೆ ಸಮೀಪ ಬೊಮ್ಮಾಡು ಹಾಡಿಯಲ್ಲಿನ ಗಿರಿಜನ ವಸತಿ ಶಾಲೆಯಲ್ಲಿ 12 ಜನರನ್ನು ಆಯ್ಕೆ ಮಾಡಿದ ಗಿರಿಜನ ಶಿಬಿರಾರ್ಥಿಗಳಿಗೆ 10 ದಿನಗಳ ಅರಿವಿನೆಡೆಗೆ ಆದಿವಾಸಿ ಎಂಬ ಸಾಮಾಜಿಕ ಅರಿವು ಮೂಡಿಸುವ ಬೀದಿನಾಟಕ ನಿರ್ದೇಶನ ಮಾಡಲಾಗಿದೆ. ಬುಧವಾರ ಸಂಜೆ 6 ಗಂಟೆಗೆ ಬೊಮ್ಮಾಡಿ ಹಾಡಿಯಲ್ಲಿ ಉದ್ಘಾಟನಾ ಪ್ರದರ್ಶನವಿದೆ ಎಂದವರು ತಿಳಿಸಿದರು.
ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಕಾರ್ಮಾಡು ಎಂಬ ಹಳ್ಳಿಯಲ್ಲಿ ಬುಡಕಟ್ಟು ಜನರ ಸಾಂಸ್ಕೃತಿಕ ಜನಪದ ಕಲೆ ಬಿಂಬಿಸುವ ಕಾರ್ಯಕ್ರಮ ನಮ್ಮ ಜನ ನಮ್ಮ ಸಂಸ್ಕೃತಿ- ಗಿರಿಜನೋತ್ಸವ ರಾಜ್ಯದ ವಿವಿಧೆಡೆಗಳಿಂದ ಆಹ್ವಾನಿತ ಬುಡಕಟ್ಟು ತಂಡಗಳ ಜನಪದ ಕಲೆಗಳ ಪ್ರದರ್ಶನವನ್ನು ಫೆ. 23ರ ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 6ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಈ ಉತ್ಸವದಲ್ಲಿ ವನವಾಸಿ ಕಲ್ಯಾಣಕ್ಕಾಗಿ ದುಡಿಯುತ್ತಿರುವ ರಾಜ್ಯ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಸ್ಥಳೀಯ ಶಾಸಕ ಕೆ.ಜಿ.ಬೋಪಯ್ಯ ಮತ್ತು ಕೊಡಗಿನ ಬುಡಕಟ್ಟು ಜನಾಂಗದ ಜನಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ. ವನವಾಸಿ ಕಲ್ಯಾಣ ಕೇಂದ್ರದ ದಕ್ಷಿಣ ಪ್ರಾಂತ್ಯ ರಾಜ್ಯ ಅಧ್ಯಕ್ಷ ಕೃಷ್ಣಮೂರ್ತಿ ವಿಚಾರ ಸಂಕಿರಣ ನಡೆಸಿಕೊಡುತ್ತಾರೆಂದು ಅವರು ಹೇಳಿದರು.
ಎಸ್ ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಜಿ.ಎಲ್.ಶೇಖರ್, ಪರ್ವ ನಾಟಕದ ನಿರ್ದೇಶಕ ಪ್ರಕಾಶ್ ಬೆಳವಾಡಿ, ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
sl bhyrappa photo courtesy: wikipedia