ಬಾಗೇಪಲ್ಲಿ: ಉದ್ಯೋಗ ರಹಿತ ಆರ್ಥಿಕ ವ್ಯವಸ್ಥೆ ಹಾಗೂ ಸರಕು ರಹಿತ ಕೈಗಾರಿಕಾ ವ್ಯವಸ್ಥೆಗಳೂ ಬಾಳೆಗಿಡ ಇದ್ದಂತೆ. ಅದು ಒಂದು ದೇಶವನ್ನು ಹೆಚ್ಚು ಕಾಲ ಭದ್ರವಾಗಿ ಉಳಿಸುವುದಿಲ್ಲ. ಈ ಬಾರಿಯ ಬಜೆಟ್ ಪೂರ್ವದಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಮೂಡಿದ್ದ ಸಾಮಾನ್ಯ ಜನರ ಭರವಸೆಗಳು ನೀರಿನ ಮೇಲಿನ ಗುಳ್ಳೆಯಂತೆ ಒಡೆದು ಹೋಗಿವೆ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ವಿಶ್ಲೇಷಿಸಿದರು.
ಗುರುವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಹಾಗೂ ಐಕ್ಯುಎಸಿ ಜಂಟಿಯಾಗಿ ಹಮ್ಮಿಕೊಂಡಿದ್ದ ‘ಭಾತರದ ಬಜೆಟ್ 2021-22 ಒಂದು ಅವಲೋಕನ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ನಿರೀಕ್ಷೆಗಳೆ ಎಲ್ಲವೂ ಹುಸಿಯಾಗಿ ದೇಶದ ಸಾಮಾನ್ಯ ನಾಗರೀಕ ಭ್ರಮನಿರಸಗೊಂಡಿದ್ದಾನೆ ಎಂದು ಎಂದರು.
ಕೊರೋನಾದಂತಹ ಅತ್ಯಂತ ಸಂಕಷ್ಟದ ಕಾಲಘಟ್ಟದಲ್ಲಿ ದೇಶದಲ್ಲಿ ಲಕ್ಷಾಂತರ ಜನರು, ಕಾರ್ಮಿಕರು, ದುಡಿಯುವ ಕೈಗಳು ಉದ್ಯೋಗವನ್ನು ಕಳೆದುಕೊಂಡರು. ಅವರಿಗೆ ಪರ್ಯಾಯವಾಗಿ ಉದ್ಯೋಗಗಳನ್ನು ಸೃಷ್ಟಿ ಮಾಡಿ ಬದುಕನ್ನು ರೂಪಿಸಿಕೊಳ್ಳುವ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಬೇಕಿತ್ತು. ಈ ಕಾರ್ಯ ಪ್ರಾಮಾಣಿಕವಾಗಿಯೇ ಆಗಬೇಕಿತ್ತು. ಆದರೆ ಅದು ಆಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಭಾರತದಲ್ಲಿ ಶೇ.32ರಷ್ಟು ನಿರುದ್ಯೋಗ
ಜಾಗತಿಕ ಮಟ್ಟದಲ್ಲಿ ಹೋಲಿಸಿಕೊಂಡರೆ ಈ ದೇಶದಲ್ಲಿ ಶೇ.32ರಷ್ಟು ನಿರುದ್ಯೋಗ ಸಮಸ್ಯೆಯಿದೆ. ವಿದೇಶಿ ಕಂಪನಿಗಳೂ ಭಾರತಕ್ಕೆ ಬಂದು ಕಾರ್ಖಾನೆಗಳನ್ನು ಸ್ಥಾಪನೆ ಮಾಡುತ್ತಿದ್ದಾರೆ. ಆದರೂ ಇಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಅಂದರೆ ಈ ಕಂಪನಿಗಳು ಸರಕು ರಹಿತ ವ್ಯವಸ್ಥೆಯನ್ನು ಹೊಂದಿವೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಅಭಿವೃದ್ಧಿಯಾದರೂ ಉದ್ಯೋಗ ರಹಿತದ ಕಾರಣದಿಂದ ಈ ಚೇತರಿಕೆಗೆ ಬೆಲೆಯಿಲ್ಲ ಎಂದು ಪ್ರತಿಪಾದಿಸಿದರು.
ದೇಶದ ಸಂಪತ್ತು ಕೆಲವೇ ಕೆಲವರು ಜನರ ಬಳಿ ಸೇರುವುದು ಯಾವುದೇ ದೇಶಕ್ಕೆ ಅಪಾಯಕಾರಿ ಬೆಳವಣಿಗೆ. ಇದರಿಂಧ ಜನಸಾಮಾನ್ಯರ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಬಹುಸಂಖ್ಯಾತ ಜನರ ಬಳಿ ಹಣಕಾಸಿನ ವ್ಯವಹಾರ ಕ್ಷೀಣವಾಗುತ್ತದೆ. ಇದರಿಂದಾಗಿಯೇ ಒಂದು ದೇಶದ ಕರೆನ್ಸಿ ಮೌಲ್ಯ ಕುಸಿಯತೊಡಗುತ್ತದೆ. ಈ ದೇಶದ ಆರ್ಥಿಕ ವ್ಯವಸ್ಥೆಯೂ ಅದೇ ರೀತಿ ಆಗುತ್ತಿದೆ.
-ಜಿ.ವಿ.ಶ್ರೀರಾಮರೆಡ್ಡಿ
ಜನಸಂಖ್ಯೆಗೆ ತಕ್ಕ ಬಜೆಟ್ ಅಲ್ಲ
ದೇಶದಲ್ಲಿ ಇಂದಿನ ಜನಸಂಖ್ಯೆ 130 ರೂ. ಕೋಟಿ ಇದೆ. ಆದರೆ ಅಷ್ಟು ಪ್ರಮಾಣದ ಜನಸಂಖ್ಯೆಯ ಅಭಿವೃದ್ಧಿಗೆ ಅತ್ಯಂತ ಪ್ರಾಮಾಣಿಕವಾಗಿ ಬೇಕಿದ್ದ ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಕೈಗಾರಿಕೆಗಳಿಗೆ ಹೆಚ್ಚು ಅನುದಾನ ನೀಡಬೇಕಿತ್ತು. ಈ ರಂಗಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಆಧರೆ ಶಿಕ್ಷಣಕ್ಕೆ ಕೇವಲ ಶೇ.2.5, ಆರೋಗ್ಯ ಕ್ಷೇತ್ರಕ್ಕೆ ಶೇ.3.22, ಕೃಷಿ ಹಾಗೂ ಕೈಗಾರಿಕೆಗಳಿಗೆ ಶೇ.4ರಷ್ಟು ನೀಡಿದೆ ಎಂದರು ಶ್ರೀರಾಮರೆಡ್ಡಿ.
ಇಷ್ಟು ಕಡಿಮೆ ಶೇಕಡಾವಾರು ಹಣದಲ್ಲಿ ದೇಶದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಕೈಗಾರಿಕೆಗಳ ಆಮೂಲಾಗ್ರ ಬದಲಾವಣೆಗಳು ಅಸಾಧ್ಯ. ಯಾವುದೇ ನೂತನ ಯೋಜನೆಗಳು ಪ್ರಾರಂಭ ಮಾಡಲು ಆಗುವುದಿಲ್ಲ. ಬದಲಿಗೆ ಹಿಂದಿನ ವರ್ಷಗಳಲ್ಲಿ ನಡೆದಿರಬಹುದಾದ ಕಾಮಗಾರಿಗಳಿಗೆ ಅಲ್ಪ ಪ್ರಮಾಣದಲ್ಲಿ ಸಾಲ ತೀರಿಸಬಹುದು ಎಂದು ಬಜೆಟ್ ಕುರಿತ ನೈಜ ಚಿತ್ರಣವನ್ನು ಬಿಡಿಸಿಟ್ಟರು ಅವರು.
ಶೇ.13ರಷ್ಟು ಮಾತ್ರ ನೀರು ಮಾತ್ರ ಬಳಕೆ
ದೇಶದಲ್ಲಿ ಶೇ.13ರಷ್ಟು ಮಾತ್ರ ನೀರು ಮಾತ್ರ ಸಮರ್ಥವಾಗಿ ಬಳಕೆಯಾಗುತ್ತಿದೆ. ಉಳಿದ ಶೇ.87ರಷ್ಟು ನೀರನ್ನು ವ್ಯರ್ಥವಾಘಿ ಸಮುದ್ರ ಸೇರುತ್ತಿದೆ. ಈ ನೀರನ್ನು ಬಳೆಸಿಕೊಂಡು ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಿ ಶೇ. 70ರಷ್ಟು ಜನರ ಜೀವನಾಡಿಯಾಗಿರುವ ಕೃಷಿ ರಂಗವನ್ನು ಅಭಿವೃದ್ಧಿ ಮಾಡಲು ಸರ್ಕಾರಗಳಿಗೆ ಮನಸ್ಸಿಲ್ಲ. ರಾಜ್ಯದಲ್ಲಿನ ಶಾಶ್ವತ ನೀರಾವರಿ ವ್ಯವಸ್ಥೆಗಳ ಸ್ಥಿತಿಯೂ ಇದೇ ರೀತಿ ಆಗಿದೆ. ಪಶ್ಚಿಮ ಘಟ್ಟಗಳ ಮಳೆ ನೀರನ್ನು ಗಾರ್ಲೆಂಡ್ ಕೆನಾಲ್‌ಗಳ ಮೂಲಕ ಬಯಲು ಸಿಮೆಯ ಜಿಲ್ಲೆಗಳಿಗೆ ತರುವುದು ಬಿಟ್ಟು, ಎತ್ತಿನಹೊಳೆ ಎಂಬ ಭ್ರಮೆಯನ್ನು ಭಿತ್ತಲಾಗುತ್ತಿದೆ. ಎತ್ತಿನಹೊಳೆಯಲ್ಲಿ ನೀರೂ ಇಲ್ಲ, ಅದು ಇಲ್ಲಿಗೆ ಬರುವುದೂ ಇಲ್ಲ ಎಂದರು ಶ್ರೀರಾಮರೆಡ್ಡಿ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ನಾರಾಯಣ ಮಾತನಾಡಿ; ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಗ್ರಾಮೀಣ ಭಾಗದ ಈ ಕಾಲೇಜಿನ ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಇಂದು ಉನ್ನತ ಸ್ಥಾನಮಾನ ಪಡೆದುಕೊಂಡಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹ್ಮದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಗ್ರಂಥಪಾಲಕ ಡಾ.ಸಿ.ಎಸ್.ವೆಂಕಟರಾಮರೆಡ್ಡಿ, ಪ್ರಾಧ್ಯಾಪಕರಾದ ಡಾ.ಬಿ.ಎನ್.ಪ್ರಭಾಕರ್, ಡಾ.ಸಿ.ಈರಣ್ಣ, ಎಲ್.ಶ್ರೀನಿವಾಸ್, ನಂದನಾ, ಪೂರ್ಣಂ ಕುವರ್, ಮನೋರಂಜನ್, ಅನಿಲ್, ಮೋಹನ್, ಅನಿತಾ ಹಾಜರಿದ್ದರು.