ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎಲ್ಲಿಯಾದರೂ ಪರವಾನಗಿ ಇಲ್ಲದೆ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದರೆ ಅಂಥವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ (ಗಣಿ) ಸಮಿತಿ ಸಭೆಯಲ್ಲಿ ಮಾತನಾಡಿದ ಅವರು; ಜಿಲ್ಲೆಯಲ್ಲಿ ಎಲ್ಲೂ ಕೂಡ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಬಾರದು. ಒಂದು ವೇಳೆ ಅಂತಹ ಅಕ್ರಮ ಗಣಿಗಾರಿಕೆ ಕಂಡುಬಂದಲ್ಲಿ ಕೂಡಲೇ ಅದನ್ನು ಸ್ಥಗಿತಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕ್ವಾರಿಗಳಿಂದ ಸರಕಾರಕ್ಕೆ ಬರಬೇಕಾದ ಬಾಕಿ ರಾಜಧನವನ್ನು ಕೂಡಲೇ ವಸೂಲಿ ಮಾಡಬೇಕು. ರಾಜಧನ ಬಾಕಿ ಉಳಿಸಿಕೊಂಡ ಕ್ವಾರಿಗಳಿಗೆ ನೋಟೀಸ್ ನೀಡಿ, ಪರವಾನಗಿಯನ್ನು ರದ್ದು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.
ಜಿಲ್ಲೆಯಲ್ಲಿರುವ ಕ್ವಾರಿಗಳ ಬಗ್ಗೆ ಮರು ಸರ್ವೇ ಮಾಡಲು ಸರಕಾರದಿಂದ ಸೂಚನೆ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕ್ವಾರಿಗಳಲ್ಲಿ ಬಾರೀ ಮಟ್ಟದ ಸ್ಫೋಟಕ ವಸ್ತುಗಳು ಕಂಡು ಬಂದರೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ದಂಡ ವಸೂಲಿ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ನಂಜುಂಡಸ್ವಾಮಿ ಅವರು ಮಾತನಾಡಿ, ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ವಾರ್ಷಿಕ 65 ಕೋಟಿ ರುಪಾಯಿ ರಾಜಧನ ಗುರಿ ಹೊಂದಲಾಗಿತ್ತು. ಈ ಪೈಕಿ 2021ರ ಜನವರಿ ಅಂತ್ಯದವರೆಗೆ ನಿಗಧಿಯಾಗಿದ್ದ 52 ಕೋಟಿ ರೂಪಾಯಿಗಳ ಗುರಿಯಲ್ಲಿ 37 ಕೋಟಿ ರೂ. ವಸೂಲಿ ಮಾಡುವ ಮೂಲಕ ಶೇ.71.50ರಷ್ಟು ಸಾಧನೆ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಅನಧಿಕೃತ ಉಪ ಖನಿಜ ಗಣಿಗಾರಿಕೆ/ ಸಾಗಾಣಿಕೆ ಮತ್ತು ದಾಸ್ತಾನುಗಳ ವಿರುದ್ಧ 2020-21ರ ಜನವರಿ ಅಂತ್ಯದವರೆಗೆ ಒಟ್ಟು 11 ಪ್ರಕರಣ ದಾಖಲಿಸಿ, ಒಟ್ಟಾರೆ 80.67 ಲಕ್ಷ ರೂ. ದಂಡ ಹಾಕಲಾಗಿದೆ ಎಂದು
ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಜಿ.ಕೆ.ಮಿಥುನ್ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.