ಚಿಕ್ಕಬಳ್ಳಾಪುರ: ಮನುಷ್ಯನ ನೆಮ್ಮದಿಗೆ ಅಧ್ಯಾತ್ಮ ಅತಿ ಮುಖ್ಯ. ನಮ್ಮ ಚಿಂತೆ ದೂರವಿರಿಸಿ ನೆಮ್ಮದಿಯನ್ನು ಕಂಡುಕೊಂಡಾಗ ಬದುಕು ಸುಂದರವಾಗಿ ಕಾಣಲಿದೆ ಎಂದು ಅಧ್ಯಾತ್ಮ ಚಿಂತಕ ಹಾಗೂ ಸಾಹಿತಿ ಸ.ರಘುನಾಥ ತಿಳಿಸಿದರು.
ಗುರುವಾರ ನಗರದ ವಾಪಸಂದ್ರ ಬಡಾವಣೆಯ ಜಚನಿ ಮಠದಲ್ಲಿ ನಡೆದ ಸತ್ಸಂಗದಲ್ಲಿ ಮಾತನಾಡಿದ ಅವರು; ಅಧ್ಯಾತ್ಮ ಭಾವನೆಯಿಂದ ಮನಸ್ಸಿಗೆ ನೆಮ್ಮದಿಯ ಜೊತೆ ಜೊತೆಗೆ ಆನಂದ, ಶಾಂತಿ ಸಿಗುವುದಲ್ಲದೆ ಉತ್ತಮ ಭಾವನೆಯಿಂದ ಎಲ್ಲರೊಂದಿಗಿನ ಭಾವುಕತೆ ಹೊರಹೊಮ್ಮಲಿದೆ. ಮಾತ್ರವಲ್ಲದೆ ನಿತ್ಯ ಮಾಡುವ ಪ್ರಾರ್ಥನೆಯಿಂದ ದಿನವಿಡೀ ನವೋಲ್ಲಾಸದಿಂದ ಇರಲು ಸಾದ್ಯವಾಗಲಿದೆ ಎಂದರು.
ಶ್ರೀ ಜಚನಿ ಮಠದ ವ್ಯವಸ್ಥಾಪಕರಾದ ಡಾ.ಶಿವಜ್ಯೋತಿ ಮಾತನಾಡಿ, ದೇವಿಯ ಆರಾಧನೆಯಿಂದ ಮಾನಸಿಕ ತಮುಲಗಳು ದೂರವಾಗಲಿವೆ ಹಾಗೂ ನಮ್ಮ ದಿನನಿತ್ಯದ ಜಂಜಾಟದಲ್ಲಿ ಸಮಾಧಾನಕರ ವಾತಾವರಣ ಉಂಟಾಗಲಿದೆ. ಸತ್ಸಂಗದಲ್ಲಿ ಪಾಲ್ಗೊಳ್ಳುವ ಪರಿಪಾಠವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.
ಈ ವೇಳೆ ಶ್ರೀ ಮಠದ ಸಿಬ್ಬಂದಿ ಹಾಗೂ ವಾಪಸಂದ್ರ ಮತ್ತಿತರ ಕಡೆಯಿಂದ ಆಗಮಿಸಿದ ಭಕ್ತರು ಇದ್ದರು.